Header Ads Widget

ಸರ್ಚ್ ಕೂರ್ಗ್ ಮೀಡಿಯ

ಬಡವರ ಕಲ್ಪವೃಕ್ಷವೆಂಬ ಹಲಸು; ಈ ನಿರ್ಲಕ್ಷಿತ ಹಣ್ಣಿಗೆ ಬೇಕಿದೆ ಉತ್ತೇಜನ

ಬಡವರ ಕಲ್ಪವೃಕ್ಷವೆಂಬ ಹಲಸು; ಈ ನಿರ್ಲಕ್ಷಿತ ಹಣ್ಣಿಗೆ ಬೇಕಿದೆ ಉತ್ತೇಜನ



(ಪ್ರತಿ ವರ್ಷ ಜುಲೈ 4 ರಂದು ಹಲಸಿನ ಹಣ್ಣಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಣ್ಣಿನ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ ಈ ಕುರಿತು ವಿಶೇಷ ಲೇಖನ)

ತುತ್ತಿಗೂ ತತ್ವಾರವಾದ ಕಾಲಟ್ಟದಲ್ಲಿ ಹಲಸು ಬಡವರ ಕಲ್ಪವೃಕ್ಷ. ಹಲಸಿನ ಕಾಯಿ ತೊಳೆಯ ಖಾದ್ಯ ಬೆಳಗ್ಗಿನ ಉಪಾಹಾರಕ್ಕೂ, ಮಧ್ಯಾಹ್ನದ ಭೋಜನಕ್ಕೂ. ಇದನ್ನೇ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡು ದುಡಿದ ಜೀವಗಳು ನಮ್ಮ ಮಧ್ಯೆ ಇದ್ದಾರೆ. ಹಲಸು ನಿರ್ಲಕ್ಷಿತ ಹಣ್ಣು. ಹಿತ್ತಲಲ್ಲಿ ಕೊಳೆತು ನಾರಿ ಮಣ್ಣಾಗಿ ಹೋದಿತೆ ವಿನಾ, ಅದು ಅಂಗಳಕ್ಕೆ ಬರುವುದಿಲ್ಲ! ಹಲಸಿನ ಕಾಯಿ ಇತ್ತೀಚೆಗೆ ಹೊರದೇಶಗಳಲ್ಲಿ ಜನಪ್ರಿಯವಾಗುತ್ತಿದೆ. ಆದರೆ ಭಾರತದಲ್ಲಿ ಇದನ್ನು ಕಡೆಗಣಿಸಲಾಗುತ್ತಿದೆ.

ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಸಾಕು ಹಸಿವಿಗೆ ಹಲಸು ಎಂಬಂತೆ ಎಷ್ಟೋ ಜನರ ಮನೆಯಲ್ಲಿ ಹಲಸೆ ಮಹಾರಾಜ. ಹಲಸಿನ ದೋಸೆ, ಹಲಸಿನ ಸಾಂಬಾರ್, ಹಲಸಿನ ಚಿಪ್ಸ್, ಹಲಸಿನ ಹಪ್ಪಳ, ಹಲಸಿನ ಬೀಜದ ಸಿಹಿ ಆಯಗ್ರ ಹೀಗೆ ಎಲ್ಲವೂ ಹಲಸುಮಯವಾಗಿರುತ್ತದೆ. ಹಲಸು ಬರೀ ಹಳ್ಳಿಗಳಿಗೆ, ಮಲೆನಾಡಿಗಷ್ಟೆ ಸೀಮಿತ ರಾಜನಲ್ಲ. ಪಟ್ಟಣ ಪ್ರದೇಶಗಳಲ್ಲೂ ಕೂಡ ಹಲಸಿನ ಋತುವಿನಲ್ಲಿ ಮಹಾರಾಜನೆ.

ಹಣ್ಣುಗಳ ರಾಜ ಮಾವು ಎಂಬುದು ಸಾರ್ವತ್ರಿಕ. ಆದರೆ ನಿಜವಾಗಿ ಗಾತ್ರ, ವಿನ್ಯಾಸ, ಮರ, ರುಚಿ, ಅಡುಗೆ ಹೀಗೆ ಒಂದಲ್ಲ ಒಂದು ಬಳಕೆಗೆ ಸಿಗುವ ಹಲಸು ನಿಜವಾದ ಮಹಾರಾಜ. ಇತ್ತೀಚಿನ ವರ್ಷಗಳಲ್ಲಿ ಹಲಸಿನ ಹಣ್ಣಿಗೆ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. 

ಹಲಸಿನ ಹಣ್ಣನ್ನು ಸಂಸ್ಕ್ರತದಲ್ಲಿ ‘ಪನಸ’ ಎಂದು ಕರೆಯುತ್ತಾರೆ. ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರು. ಇಂಗ್ಲಿಷ್‌ನಲ್ಲಿ “ಜಾಕ್ ಫ‍್ರೂಟ್” ಎಂದು ಕರೆಯಲಾಗುವ ಹಲಸಿನ ಹಣ್ಣು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳ ಗೊಂಡಿದೆ. ಹತ್ತರಿಂದ ಹನ್ನೆರಡು ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವ ಹಲಸಿನ ಮರ, ಹಸಿರು ಎಲೆಗಳಿಂದ ಆವ್ರತವಾಗಿದೆ. ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮನ್‌ಗಳು, ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್, ಕ್ಯಾಲ್ಶಿಯಮ್, ಪೊಟಾಶಿಯಂ ಅಂಶಗಳಿವೆ.

ಆಟಿ ತಿಂಗಳು ಬಂತೆಂದರೆ ಮನೆಯಿಂದ ಹೊರಗೆ ತಲೆಯಿಡಲಾರದಷ್ಟು ಜಡಿ ಮಳೆ. ಅಪರೂಪಕ್ಕೆ ಮಾತ್ರ ಸೂರ್ಯ ದರ್ಶನವೀಯುತ್ತಿದ್ದ. ಮಧ್ಯಮ ವರ್ಗಗಳ ಜೀವನ ಹೇಗೋ ಸಾಗುತ್ತಿತ್ತು. ಆದರೆ ದಿನಗೂಲಿ ಕೃಷಿ ಕಾರ್ಮಿಕರ ಪಾಡು ಆ ದೇವರಿಗೇ ಪ್ರೀತಿ. ಕೆಲಸ ಮಾಡಲು ಮಳೆ ಬಿಡುತ್ತಿಲ್ಲ, ಮಾಡದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಅಂತಹ ಅನೇಕ ಸಂದರ್ಭಗಳಲ್ಲಿ ಅವರ ಹಸಿವನ್ನು ನೀಗಿಸುತ್ತಿದ್ದುದು ಈ ಕಾಡುಜನ್ಯ ಹಣ್ಣುಗಳೇ! ಹಲಸಿನ ತೊಳೆಗಳೇ ಅವರ ಪಾಲಿಗೆ ಅಮೃತ. ಹಲಸಿನ ಬೀಜಗಳನ್ನು ಸುಟ್ಟು ಜೀವನ ಸಾಗಿಸುತ್ತಿದ್ದ ದಿನಗಳು ಅದೆಷ್ಟೋ. ಹಲಸು ಬಡವರ ಹಣ್ಣು ಎಂಬುವುದು ಈ ಕಾರಣಕ್ಕೇ ಆಗಿರಬೇಕು.

ಮುಳ್ಳಿನ ಕವಚಗಳ ನಡುವೆ ಅಡಗಿ ಕುಳಿತ ಹಳದಿ ಬಣ್ಣದ ತೊಳೆಗಳು, ನೋಡುತ್ತಿದ್ದಂತೆಯೇ ಹಲಸು ಪ್ರಿಯರ ಮನದಲ್ಲಿ ಹಲವು ಖಾದ್ಯಗಳ ತಯಾರಿಯ ನೆನೆದು ಬಾಯಲ್ಲಿ ನೀರೂರುವಂತೆ ಮಾಡಿಬಿಡುತ್ತದೆ. ಹಲಸಿನ ಹಣ್ಣಿನ ಸೀಸನ್ ಶುರುವಾಯಿತೆಂದರೆ ಸಾಕು ಹಳ್ಳಿ ಮನೆಗಳ ಜನರಿಗೆ ಬಿಡುವಿಲ್ಲದ ಕೆಲಸ. ಹಲಸಿನ ಗುಜ್ಜೆ ಪಲ್ಯ, ತರಹೇವಾರು ಹಪ್ಪಳ-ಸಂಡಿಗೆಗೆಳು, ಚಿಪ್ಸ್ ಅಥವಾ ಆಡು ಭಾಷೆಯ ಸೋಂಟೆ, ಜಾಮ್, ಜೆಲ್ಲಿ, ಪಾನಕ. ಉಪ್ಪಿನಕಾಯಿ, ಸುಟ್ಟ ಹಲಸಿನ ಬೀಜ, ಸಾಂಬಾರ್ ಇವೆಲ್ಲವುಗಳೊಂದಿಗೆ ಹಲಸಿನಕಾಯಿ ದೋಸೆ, ಹಣ್ಣಿನ ಕಡುಬು ಅದೂ ಹಲವು ವಿಧಗಳಲ್ಲಿ. ಹಲಸಿನಕಾಯಿ ತೊಳೆಗಳನ್ನು ಉಪ್ಪು ನೀರಿನಲ್ಲಿ ಹಾಕಿಟ್ಟಲ್ಲಿ ಹಲವು ಸಮಯಗಳವರೆಗೂ ಅದನ್ನು ವಿವಿಧ ಖಾದ್ಯಗಳಿಗಾಗಿ ಬಳಸ ಬಹುದಾಗಿದೆ. ಉಪ್ಪುತೊಳೆ ರೊಟ್ಟಿ, ಹಣ್ಣಿನ ಮುಳ್ಕ, ಅಪ್ಪ ಕಜ್ಜಾಯ, ವಡೆ, ಉಂಡ್ಲಿಕಾಳು, ಪಲ್ಯ ಇತ್ಯಾದಿ ಇತ್ಯಾದಿಗಳನ್ನು ವರ್ಷಕೊಮ್ಮೆಯಾದರೂ ಸವಿಯದ್ದರೆ ಅದೇನೋ ಕಳೆದುಕೊಂಡ ಭಾವ.

 ಮಳೆಗಾಲದಲ್ಲಿ ಶಾಲೆಯಿಂದ ಹಿಂತಿರುಗಿ ಬರುವ ಸಂದರ್ಭದಲ್ಲಿ ಈ ಖಾದ್ಯಗಳೇನಾದರೂ ಸಿಕ್ಕಿಬಿಟ್ಟರೆ, ಮಕ್ಕಳಿಗೆ ಬೇರೇನೂ ಬೇಕಾವುದಿಲ್ಲ. ಬಿಸಿ ಬಿಸಿ ಹಪ್ಪಳ, ಸೋಂಟೆ ಮೊದಲಾದವುಗಳನ್ನು ಸವಿಯುತ್ತಾ, ಹೊರಗಡೆ ಧಾರಾಕಾರವಾಗಿ ಸುರಿಯುವ ಮಳೆಯನ್ನು ಆನಂದಿಸುವ ಖುಷಿ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅದೆಷ್ಟೇ ಒತ್ತಡಗಳಿರಲಿ ಆ ಕ್ಷಣ ಅವೆಲ್ಲವುಗಳೂ ಮರೆತು ಹೋಗುತ್ತದೆ. ಇದರ ಉತ್ಪನ್ನಗಳ ಕುರಿತು ಮತ್ತಷ್ಟು ಸಂಶೋಧನೆಗಳಾಗುತ್ತಿವೆ ಎಂಬುದು ಹಲಸು ಪ್ರಿಯರಿಗೆ ಸಂತಸದ ವಿಚಾರ. ಹಲಸಿನ ಐಸ್‍ಕ್ರೀಂ, ಮಿಲ್ಕ್ ಶೇಖ್ ಮೊದಲಾದ ಬೇಕರಿ ಉತ್ಪನ್ನಗಳೊಂದಿಗೆ ಲಾಲಿಪಪ್ ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಹಲಸಿನ ಹಣ್ಣು ತಿನ್ನಲು ಎಷ್ಟು ರುಚಿಯೋ ಹಾಗೇ ಈ ಹಣ್ಣು  ಹಲವು ರೋಗಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಈ ಹಣ್ಣನ್ನು ತಿನ್ನುವುದರಿಂದ ಮನುಷ್ಯನ ಆರೋಗ್ಯಕ್ಕೆ ಎಷ್ಟೋ ಲಾಭಗಳಿವೆ. 100 ಗ್ರಾಂ. ಹಲಸಿನ ಹಣ್ಣಿನಲ್ಲಿ 303 ಮಿ. ಗ್ರಾಂ. ಪೊಟ್ಯಾಶಯಂ ಇದೆ. ಪೊಟ್ಯಾಶಯಂ ಸೇವಿಸಿದರೆ ಅದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ರಕ್ತದ ಏರೊತ್ತಡದಿಂದ ಬಳಲುತ್ತಿರುವವರಿಗೆ ಹಲಸಿನ ಹಣ್ಣು ತಿಂದರೆ ಆರೋಗ್ಯಕ್ಕೆ ಲಾಭ ಸಿಕ್ಕೀತು ಎನ್ನುತ್ತೆವೆ. ಈ ಕೂತುಹಲ ವಿಚಾರದ ಬಗ್ಗೆ ಹೆಚ್ಚಿನ ವೈಜ್ಞಾನಿಕ ಅಧ್ಯಯನ ಆಗಬೇಕಿದೆ. ಇನ್ನೂ ಆಳ ಅಧ್ಯಯನ ಆಗಿಲ್ಲದ ಅದೆಷ್ಟೋ ಔಷದೀಯ ಗುಣಗಳು ಈ ನಿರ್ಲಕ್ಷಿತ ಹಣ್ಣಿಗೆ ಇರುವ ಸಾಧ್ಯತೆಗಳಿವೆ. 

ಇದಲ್ಲದೆ ಹಲಸಿನ ಗಿಡದ ಬೇರನ್ನು ಕಷಾಯಕ್ಕಾಗಿ ತೊಗಟೆಯ ಬಿಳಿ ರಸ ಅಂಟು ಔಷಧ ಗುಣ ಹೊಂದಿದೆ. ಪಿತ್ತ ಶಮನಕ್ಕೆ ಎಳೆಯ ಹಲಸಿನ ಕಾಯಿ ಉತ್ತಮ. ಹಲಸಿನ ಬೀಜಗಳ ಪಲ್ಯ ಬಲವರ್ಧಕ ಮತ್ತು ವೀರ್ಯವರ್ಧಕವೆಂದು ಹೇಳಲಾಗುತ್ತಿದೆ. ಹಲಸಿನ ತೊಳೆಗಳಿಗೆ ಬಾಳೆಹಣ್ಣಿನ ತಿರುಳು, ಹಸಿ ಕೊಬ್ಬರಿ ತುರಿ, ಜೇನು ತುಪ್ಪ, ಏಲಕ್ಕಿ ಸೇರಿಸಿ ಮಿಶ್ರಣ ಮಾಡಿ ಸೇವಿಸುವುದರಿಂದ ದುರ್ಬಲ ನರಗಳಿಗೆ ಬಲ ಬರುತ್ತದೆ ಎಂಬುದು ನಂಬಿಕೆ. ವಿಶ್ವದಲ್ಲೇ ಹಲಸಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿ ಭಾರತವಿದೆ. ಆದರೆ ಉತ್ಪಾದನೆಯ ಪಟ್ಟಿಯಲ್ಲಿ ಹೆಸರೇ ಕಾಣದ ಹಲವು ದೇಶಗಳು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವಲ್ಲಿ ಬಹಳ ಮುಂದಿವೆ.

ಪರಿಸ್ಥಿತಿ ಬದಲಾಗಿದೆ. ಹಲಸು ವಾಣಿಜ್ಯ ಬೆಳೆಯಾಗಿ ಬದಲಾಗುತ್ತಿದೆ. ನಂಬಿ ನೆಟ್ಟ ಒಡೆಯನಿಗೆ ಆದಾಯದ ಮೂಲವಾಗಿದೆ. ಒಂದು ಹಲಸಿನ ಹಣ್ಣು ಸುಮಾರು ಐದು ಕಿಲೋಗ್ರಾಂಗಳಿಂದ ಮೂವತ್ತೈದು ನಲುವತ್ತು ಕಿಲೋಗ್ರಾಂಗಳ ವರೆಗೂ ತೂಗುತ್ತದೆ. ಇತ್ತೀಚೆಗೆ ಕೊಡಗು ಜಿಲ್ಲೆಯ ಚೆಟ್ಟಳ್ಳಿ ಸಮೀಪವಿರುವ ಅಭ್ಯಾಲದ ಮುರ್ಕಿನ್ ತೋಟದಲ್ಲಿ ಬೆಳೆದ 55 ಕೆ.ಜಿ. ತೂಕದ ಹಲಸಿನ ಹಣ್ಣು ಅತಿ ಹೆಚ್ಚು ತೂಕದ ಹಲಸಿನ ಹಣ್ಣು ಎಂಬ ಸಾಧನೆಯ ಮೂಲಕ ಗಿನ್ನಿಸ್ ದಾಖಲೆಯ ಪುಟದಲ್ಲಿ ಸ್ಥಾನ ಪಡೆಯಲಿದೆ. ಈಗಾಗಲೇ 42.73 ಕೆ.ಜಿ. ತೂಕ ಹಾಗೂ 57.15 ಸೆ.ಮೀ. ಉದ್ದದ ಹಲಸಿನಹಣ್ಣು ಗಿನ್ನಿಸ್ ದಾಖಲೆಯ ಪುಸ್ತಕದಲ್ಲಿ ಸ್ಥಾನ ಪಡೆದಿದೆ. 

ಜನವರಿ ತಿಂಗಳ ಆರಂಭದಲ್ಲಿ ಎಳಸು ಹಲಸು ಅಥವಾ ಹಲಸಿನ ಗುಜ್ಜೆ ಉತ್ತಮ ದರಕ್ಕೆ ಮಾರಾಟವಾಗುತ್ತದೆ. ಬಿಡಿಸಿದ ತೊಳೆಗಳಿಗೆ ಕಿಲೋಗ್ರಾಂಗಳಿಗೆ ಸಾಮಾನ್ಯವಾಗಿ 100-120 ರೂಪಾಯಿಗಳಿರುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಹಲಸಿನ ಬೀಜಗಳು ಒಂದು ಕೆ.ಜಿ.ಗೆ 1000/- ರೂಪಾಯಿಗಳ ಮಾರುಕಟ್ಟೆ ದರವನ್ನು ಪಡೆದುಕೊಂಡಿರುವುದು ನೋಡಿದರೆ, ಹಲಸಿಗೆ ಹೆಚ್ಚುತ್ತಿರುವ ಮಹತ್ವವನ್ನು ತೋರಿಸುತ್ತದೆ.

ಹಲಸು ಭವಿಷ್ಯದ ಬೆಳೆ ಆಗಬೇಕಾದರೆ, ಹಲಸಿನ ಕೃಷಿ ಬಗ್ಗೆ ಕೊಡಗಿನ ಕೃಷಿಕರು ತಮ್ಮ ಧೋರಣೆಯನ್ನೇ ಬದಲಾಯಿಸ ಬೇಕಾಗಿದೆ. ಹಲಸಿನ ಗಿಡ ನೆಟ್ಟರಾಯಿತು, ಅದರ ಪಾಡಿಗೆ ಅದು ಬೆಳೆಯುತ್ತದೆ ಎಂಬ ಧೋರಣೆ ಸಲ್ಲದು. ಅದನ್ನು ಕಾಫಿ ತೋಟಗಳಂತೆ ವೈಜ್ಞಾನಿಕವಾಗಿ ಬೆಳೆಸಬೇಕಾಗಿದೆ. ಹಲಸಿನ ಮರಗಳು ೧೫ ಅಡಿಗಳಿಗಿಂತ ಹೆಚ್ಚು ಎತ್ತರಕ್ಕೆ ಬೆಳೆಯಲು ಬಿಡಲೆ ಬಾರದು. ಹಲಸಿನ ಗಿಡಗಳ ಪ್ರೂನಿಂಗ್ (ವರುಷಕ್ಕೆ ಎರಡು ಸಲ) ಕಡ್ಡಾಯ ಮಾಡ ಬೇಕಿದೆ. ಹಲಸಿನ ಕಾಯಿಗಳ ಥಿನ್ನಿಂಗ್ ಕೂಡ ಅತ್ಯಗತ್ಯವಾಗಿದೆ.

ಗ್ರಾಮೀಣ ಆರ್ಥಿಕತೆಗೆ ದೊಡ್ದ ಕೊಡುಗೆ ಕೊಡುತ್ತಿರುವ ಹಲಸನ್ನು ತರಕಾರಿಯಾಗಿ, ಹಣ್ಣಾಗಿ, ಸಂರಕ್ಷಿಸುತ್ತಾ ಸ್ಥಳಿಯ ಆಹಾರ ಸುರಕ್ಷತೆ ಒದಗಿಸಬಲ್ಲ ಅದ್ಬುತ ಆಹಾರ ಬೆಳೆಯನ್ನು ಬೆಳೆಸುವ, ಆಹಾರ ವಸ್ತುವಾಗಿ ಬಳಸುವ ಅಭ್ಯಾಸ ಹೆಚ್ಚಬೇಕು. ಕಾಡುಬೆಳೆಯಾಗಿದ್ದ ಹಲಸನ್ನು ಲಾಭದಾಯಕವಾದ ನಾಡಬೆಳೆಯಾಗಿ ಮಾಡಿಕೊಂಡು ರೈತರು ಜನರಿಗೆ ಉತ್ತಮ ಹಣ್ಣುಗಳನ್ನು ನೀಡುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬಹುದು. ಕಾಣದ ಬೆಳೆ ಬೆಳೆಯಲು ಹೋಗಿ ಕೈಸುಟ್ಟುಕೊಳ್ಳುವ ಬದಲು, ಕೈ ತುಂಬಾ ಫಲ ನೀಡುವ ಹಲಸು ಬೆಳೆದು ಕೊಡಗಿನ ರೈತರು ಯಶಸ್ವೀ ಕೃಷಿಕರೆನೆಸಿಕೊಳ್ಳವ ಕಾಲ ಸನ್ನಿಹಿತದಲ್ಲಿದೆ. ಹಲಸು ಬೆಳೆಯುವ ಆಯ್ಕೆ ನಮ್ಮ ಕೈಯಲ್ಲಿದೆ.

ಹಳ್ಳಿಯ ಮೂಲೆ ಮೂಲೆಗಳಿಂದ ಎಳೆ ಹಲಸು, ಹಲಸಿನ ಹಣ್ಣನ್ನು ಎಚ್ಚರದಿಂದ ಕೊಯ್ದು ತಂದು ಸಂಗ್ರಹಿಸಿ ಪೂರೈಸುವ ಹಾಲಿನ ಸಂಘದ ತರಹದ ಸಂಗ್ರಹಣಾ ಕೇಂದ್ರಗಳನ್ನು ಸರಕಾರ ರೂಪಿಸಬೇಕಿದೆ. ಹಲಸಿನ ಹಣ್ಣಿನ ಸಿಪ್ಪೆ ಕೆತ್ತಲು ತುಂಡು ಮಾಡಲು, ಕೊಚ್ಚಲು ಉಪಕರಣಗಳನ್ನು ಅಭಿವೃದ್ಧಿಪಡಿಸಬೇಕಿದೆ. ಹಲಸಿನ ಹಣ್ಣಿನ ಪಲ್ಪ್ ಮಾಡುವ ವಿಧಾನವನ್ನು ಹಳ್ಳಿಗಳ ರೈತರಿಗೂ ಕಲಿಸಬೇಕಿದೆ. ತಾಜಾ ಹಲಸಿನ ಹಣ್ಣಿನ ತೊಳೆಗಳನ್ನು ಹಾಳಾಗದಂತೆ ಸಾಗಾಟ ಮಾಡಿ ಮಾರಲು ಅನುಕೂಲವಾಗುವಂತೆ ಹದಿನೈದು ದಿನ ತಾಜಾ ಆಗಿಯೇ ಉಳಿಸುವಂಥ ಕನಿಷ್ಠ ಸಂಸ್ಕರಣೆ ವಿಧಾನವನ್ನು ಸಮಾರೋಪಾವದಿಯಲ್ಲಿ ಅಭಿವೃದ್ದಿಗೊಳಿಸಬೇಕಾಗಿದೆ. ರೆಡಿಟು ಕುಕ್ ಎಳೆ ಹಲಸು ಅಥವಾ ಹಲಸು ತಯಾರಿಯ ವಿದ್ಯೆಯನ್ನು ದೊಡ್ಡ ರೀತಿಯಲ್ಲಿ ಹಲಸು ಬೆಳೆಸುವ, ಮಾರುವ ಕೇಂದ್ರಗಳಲ್ಲಿ ತೆರೆಯಬೇಕಿದೆ. ಹಲಸಿನ ಕಸಿ ವೃತ್ತಿಯಲ್ಲಿ ಹೆಚ್ಚು ಹೆಚ್ಚು ಜನ ತೊಡಗುವಂತೆ ಪ್ರೇರೇಪಿಸಿ, ತರಬೇತಿ ಕೊಟ್ಟು ನಮ್ಮ ಅತ್ಯುತ್ತಮ ತಳಿಗಳನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮಲ್ಲರ ಜವಾಬ್ದಾರಿಯಾಗಬೇಕಿದೆ.

ನಮ್ಮೂರಲ್ಲೂ ಹಲಸಿನ ತೋಟ ಹೆಚ್ಚಿಸಬೇಕು. ಎಂದಿರುವ ಹಲಸು ಪ್ರಿಯ ಕೃಷಿಕರ ಸಂಖ್ಯೆ ಇಂದು ಬೆಳೆಯುತ್ತಿದೆ. ಎಳೆ ಗುಜ್ಜೆಯಿಂದ ಹಣ್ಣಿನ ತನಕ ಮಾರಾಟದ ಅವಕಾಶ ಇದಕ್ಕೆ ಕಾರಣ. ಮಾರುಕಟ್ಟೆಯಲ್ಲೂ ಕೂಡಾ ಬೇಡಿಕೆ ಕುದುರಿದೆ. ಹಲಸಿನ ಹಣ್ಣಿಗೆ ಬೆಲೆಯಿದೆ, ಕೊಳ್ಳುವವರಿದ್ದಾರೆ. ಆದರೆ ವ್ಯವಸ್ಥಿತ ಮಾರುಕಟ್ಟೆ ಇಲ್ಲದಿರುವುದದು ಪ್ರಪಂಚದ ಅತಿ ದೊಡ್ಡ ಹಣ್ಣಿಗೆ ಒದಗಿ ಬಂದಿರುವ ಹೀನ ಸ್ಥಿತಿಯಾಗಿದೆ.

ಇಂದು ಹಲಸನ್ನು ಲಾಭದಾಯಕ ಬೆಳೆಯಾಗಿ ನೋಡುವ ಕಾಲ ಬಂದಿದೆ. ಹಲಸಿನ ಹಣ್ಣು ಹಾಗೂ ಇತರ ಉತ್ಪನ್ನಗಳಿಗೆ ಬೇಡಿಕೆ ಹೇಚ್ಚುತ್ತಿದೆ. ಇದು ಮಹಿಳೆಯರ ಆರ್ಥಿಕ ಶಕ್ತಿಯ ಮೂಲವಾಗಿದೆ. ಹಲಸನ್ನು, ಹಲಸಿನ ಪದಾರ್ಥಗಳನ್ನು ಜನಪ್ರಿಯಗೊಳಿಸಲು ಕೆಲವು ಕಡೆ ಹಲಸಿನ ಮೇಳಗಳು ನಡೆದಿವೆ.  ಹೆಚ್ಚು ಬಗೆಯ ಹಲಸಿನ ಅಡುಗೆ ವಿಧಾನಗಳು.  ಹೆಚ್ಚು ಮರಗಳನ್ನು ಹೊಂದಿದವರು, ಉತ್ತಮ ತಳಿಗಳನ್ನು ಹೊಂದಿದವರು ಹೀಗೆ ಅಲ್ಲಿ-ಇಲ್ಲಿ ಏನೆಲ್ಲಾ ದಾಖಲೆ ಮಾಡಲಾಗಿದೆ.

ಹಲಸನ್ನು ಈಗ ಉಪೇಕ್ಷಿಸುಂವತಿಲ್ಲ. ಈಗ ಎಲ್ಲೆಲ್ಲೂ ಹಲಸಿನ ಹಣ್ಣಿನದೇ ದರ್ಬಾರು. ಹಿತ್ತಲಿನಲ್ಲಿ ತೋಟದ ಬದುಗಳಲ್ಲಿ ಬಿದ್ದು ಕೊಳೆಯುತಿದ್ದ ಹಣ್ಣುಗಳಿಗೆ ಬೆಲೆ ಬಂದಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳ ಜನರು ಹಲಸಿನ ಹಣ್ಣು ಇತರ ಉತ್ಪನ್ನಗಳನ್ನು ಇಷ್ಟಪಟ್ಟು ತಿನ್ನುತಿದ್ದಾರೆ. ಭವಿಷ್ಯದ ದಿನಗಳಲ್ಲಿ ಹಲಸಿಗೆ ಇನ್ನೂ ಹೆಚ್ಚಿನ ಬೇಡಿಕೆ ಬರಬಹುದು. ನಮ್ಮ ಹಲಸು ನೋಡಲು ಒರಟಾದರೂ, ಜನರಿಗೆ ಸಿಹಿಯ ಜೊತೆಗೆ ಆರೋಗ್ಯವನ್ನು ಕೊಡುವ ಸುಂದರವಾದ ಗುಣವನ್ನು ಹೊಂದಿದೆ.

ಲೇಖಕರು: ✍️.... ಕಾನತ್ತಿಲ್‌ ರಾಣಿಅರುಣ್

                                   (ಪತ್ರಕರ್ತರು)


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,