Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಂಘ ಮುಸ್ಲಿಂ ವಿರೋಧಿ, ಮುಸ್ಲಿಮರು ಭಾರತದಲ್ಲಿ ಅಪಾಯದಲ್ಲಿದ್ದಾರೆ ಎಂಬೆಲ್ಲ ಪ್ರಚಾರಕ್ಕೆ ಬಲಿಬೀಳದಿರಿ: ಮೋಹನ್ ಭಾಗ್ವತ್

ಸಂಘ ಮುಸ್ಲಿಂ ವಿರೋಧಿ, ಮುಸ್ಲಿಮರು ಭಾರತದಲ್ಲಿ ಅಪಾಯದಲ್ಲಿದ್ದಾರೆ ಎಂಬೆಲ್ಲ ಪ್ರಚಾರಕ್ಕೆ ಬಲಿಬೀಳದಿರಿ: ಮೋಹನ್ ಭಾಗ್ವತ್ 




ಹೊಸ ದಿಗಂತ ಆನ್ ಲೈನ್ ಡೆಸ್ಕ್:

‘ಭಾರತದಲ್ಲಿ ಇಸ್ಲಾಮ್ ಅಪಾಯದಲ್ಲಿದೆ’ ಎಂಬ ಪ್ರಚಾರಕ್ಕೆ ಬಲಿಯಾಗದಿರಿ ಎಂದು ಮುಸ್ಲಿಮರನ್ನು ಆಗ್ರಹಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗ್ವತ್ ಅವರು, ಇಲ್ಲಿರುವ ಎಲ್ಲ ಭಾರತೀಯರ ಡಿಎನ್‌ಎಯೂ ಒಂದೇ. ಜನರ ಪೂಜಾ ಪದ್ಧತಿ, ಮತಾಚಾರಗಳನ್ನು ಆಧರಿಸಿ ಇಲ್ಲಿ ಜನರನ್ನು ಪ್ರತ್ಯೇಕವಾಗಿ ಕಾಣಲಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ದೇಶದಲ್ಲಿರುವ ಎಲ್ಲರೂ ಹಿಂದುಗಳೇ ಎಂದ ಅವರು, ಹಿಂದು ಎನ್ನಲು ಬಯಸುವುದಿಲ್ಲ ಎಂದಾದರೆ ಭಾರತೀಯ ಎನ್ನಿ.ಯಾವುದೇ ಸಮಸ್ಯೆ ಇಲ್ಲ. ಆದರೆ ಎಲ್ಲರೂ ಒಂದಾಗಿ ದೇಶಕ್ಕಾಗಿ ಕೆಲಸ ಮಾಡಬೇಕು ಎಂಬುದೇ ಮುಖ್ಯ ಎಂದು ಒತ್ತಿ ಹೇಳಿದರು .ಅವರು ಗಾಜಿಯಾಬಾದ್‌ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ‘ಹಿಂದುಸ್ತಾನಿ ಫಸ್ಟ್, ಹಿಂದುಸ್ತಾನ ಫಸ್ಟ್ ’ಎಂಬ ಧ್ಯೇಯದಡಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, ಖ್ವಾಜಾ ಇಫ್ತಿಕಾರ್ ಅಹಮ್ಮದ್ ಬರೆದ ‘ದ ಮೀಟಿಂಗ್ ಆಫ್ ಮೈಂಡ್ಸ್’ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಸಂಘ ಮುಸ್ಲಿಂ ವಿರೋಧಿ, ಮುಸ್ಲಿಮರು ಭಾರತದಲ್ಲಿ ಅಪಾಯದಲ್ಲಿದ್ದಾರೆ ಎಂಬೆಲ್ಲ ಪ್ರಚಾರಕ್ಕೆ ಬಲಿಬೀಳದಿರಿ. ಭಾರತದಲ್ಲಿನ ಎಲ್ಲ ಮತಾಚಾರಗಳ ಅನುಯಾಯಿಗಳ ಡಿಎನ್‌ಎಯೂ ಒಂದೇ ಎಂಬುದರಲ್ಲಿ ಸಂಘ ನಂಬಿಕೆ ಹೊಂದಿದೆ . ಹಿಂದು -ಮುಸ್ಲಿಂ ಏಕತೆಯ ಅಗತ್ಯ ದೇಶಕ್ಕೆ ಇದೆ. ಭಾರತೀಯರು ಒಂದಾಗಿದ್ದರೆ ದೇಶದ ಅಭಿವೃದ್ಧಿ ಸಾಂಗವಾಗಿ ನಡೆಯಲು ಸಾಧ್ಯ . ಈ ನಿಟ್ಟಿನಲ್ಲೇ ಆರೆಸ್ಸೆಸ್ ವಿಭಿನ್ನ ನಂಬಿಕೆಗಳನ್ನು ಹೊಂದಿರುವ ಜನರಲ್ಲಿ ಏಕತೆ ಮೂಡಿಸಲು ಕೆಲಸ ಮಾಡುತ್ತಿದೆ . ಆದರೆ ಇದು ಯಾವುದೇ ರಾಜಕೀಯ ಅಥವಾ ವೋಟ್‌ಬ್ಯಾಂಕ್ ರಾಜಕೀಯ ಅಲ್ಲ. ಬದಲಿಗೆ ರಾಷ್ಟ್ರೋನ್ನತಿಗಾಗಿ ಸಂಘ ಮಾಡುವ ಪ್ರಯತ್ನ ಎಂದರು.

ಭಾರತದಲ್ಲಿ ಬಹುಸಂಖ್ಯಾತವಾದ ಇದೆ ಎಂಬ ವಿರೋಧಿಗಳ ಆರೋಪನ್ನು ತಳ್ಳಿಹಾಕಿದ ಅವರು, ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ನಡೆದಾಗ ಬಹುಸಂಖ್ಯಾತ ಸಮುದಾಯದಿಂದಲೇ ಪ್ರತಿಭಟನೆ ಧ್ವನಿ ಹೊರಹೊಮ್ಮುತ್ತಿರುವುದನ್ನು ಅವರು ಉಲ್ಲೇಖಿಸಿದರು. ಇಲ್ಲಿ ಯಾವುದೇ ಒಂದು ಸಮುದಾಯದ ಮೇಲ್ಮೆ ಪ್ರಶ್ನೆ ಇಲ್ಲ. ಬದಲಿಗೆ ಭಾರತೀಯರಾಗಿ ಮೇಲ್ಮೆ ಹೊಂದಿರುವುದೇ ಮುಖ್ಯ.ಮುಸ್ಲಿಮರು ದೇಶದಲ್ಲಿ ಇರಬಾರದು ಎಂದು ಯಾವನೇ ಒಬ್ಬ ಹಿಂದು ಹೇಳಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ಗೋ ರಕ್ಷಕರಿಂದ ಅಲ್ಪಸಂಖ್ಯಾತರ ಮೇಲೆ ಹಿಂಸೆ ನಡೆದಿದೆ ಎಂಬ ಆರೋಪದ ಬಗ್ಗೆ ಪ್ರಸ್ತಾವಿಸಿದ ಅವರು, ಗೋವು ಭಾರತೀಯರಿಗೆ ಪೂಜ್ಯವಾದುದು. ಹಾಗೆಂದು ಗೋವಿನ ಹೆಸರಿನಲ್ಲಿ ಹಿಂಸೆ ನಡೆಸುವುದನ್ನು ಸಮರ್ಥಿಸಲಾಗದು. ಕಾನೂನು ತನ್ನದೇ ಕ್ರಮ ಕೈಗೊಳ್ಳಲಿ.ತನಿಖೆ ನಡೆದು ಅಪರಾಧಿಗಳಿಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.ಆದರೆ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು.ಇದೇ ವೇಳೆ ಅಲ್ಪಸಂಖ್ಯಾತರ ಮೇಲೆ ಹಲ್ಲೆಯ ಅನೇಕ ಪ್ರಕರಣಗಳು ನಕಲಿ ಎಂಬುದನ್ನೂ ಅವರು ಬೊಟ್ಟು ಮಾಡಿದರು.

ಈ ಕಾರ್ಯಕ್ರಮಕ್ಕೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಥಳಕು ಹಾಕಬೇಡಿ ಎಂದೇ ಮಾತು ಆರಂಭಿಸಿದ ಮೋಹನ್ ಭಾಗ್ವತ್, ಇದನ್ನು ಇಂತಹ ಒಂದು ಪ್ರಯತ್ನ ಎಂದೆಲ್ಲ ವ್ಯಾಖ್ಯಾನಿಸುವುದು ಬೇಡ.ಸಂಘಕ್ಕೆ ಇಂತಹ ಯಾವುದೇ ಅಗತ್ಯವಿಲ್ಲ.ಸಂಘ ದೇಶದ ಪರ ಯಾರು ಮಾತನಾಡುತ್ತಾರೋ ಅವರನ್ನು ಬೆಂಬಲಿಸುತ್ತದೆ. ನಾವು ದೇಶದ ಪರವಾಗಿರುವವರು. ಸಂಘ ಎಂದೂ ಯಾರ ವಿರುದ್ಧವೂ ಇಲ್ಲ. ಬದಲಿಗೆ ಎಲ್ಲರ ಒಳಿತಿಗಾಗಿ ಕೆಲಸ ಮಾಡುತ್ತದೆ. ಇತರರು ಏನು ಹೇಳುತ್ತಾರೆ ಎಂಬ ಬಗ್ಗೆ ಸಂಘ ತಲೆಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಕೃಪೆ: ಹೊಸ ದಿಗಂತ ಆನ್ ಲೈನ್ ಡೆಸ್ಕ್

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,