Header Ads Widget

Responsive Advertisement

ಸಹಕಾರ ಇಲಾಖೆ ಮೂಲಕ ಕೃಷಿಕರ ಶ್ರೇಯೋಭಿವೃದ್ಧಿಗೆ ಶ್ರಮ; ಎಸ್.ಟಿ.ಸೋಮಶೇಖರ್

ಸಹಕಾರ ಇಲಾಖೆ ಮೂಲಕ ಕೃಷಿಕರ ಶ್ರೇಯೋಭಿವೃದ್ಧಿಗೆ ಶ್ರಮ; ಎಸ್.ಟಿ.ಸೋಮಶೇಖರ್

ಮಡಿಕೇರಿ ಜು.07: ಕಳೆದ ಸಾಲಿನಲ್ಲಿ ರೈತರಿಗೆ 15,300 ಕೋಟಿ ರೂ. ಗುರಿ ನಿಗಧಿಪಡಿಸಲಾಗಿತ್ತು, ರಾಜ್ಯದ 21 ಡಿಸಿಸಿ ಬ್ಯಾಂಕುಗಳು 16,795 ಕೋಟಿ ರೂ. ರೈತರಿಗೆ ಎಲ್ಲಾ ಡಿಸಿಸಿ ಬ್ಯಾಂಕುಗಳು ಸಾಲವನ್ನು ನೀಡಿವೆ. ಹಾಗೂ ರೈತರಿಗೆ ಶೇ.95 ರಷ್ಟು ಸಾಲವನ್ನು ವಸೂಲಾತಿ ಮಾಡಿದೆ. ಈ ಸಾಲಿನಲ್ಲಿ 20,810 ಕೋಟಿ ರೂ. ರೈತರಿಗೆ ಸಾಲ ನೀಡಲು ಗುರಿ ಹೊಂದಲಾಗಿದೆ ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು. 

ಡಿ.ಸಿ.ಸಿ. ಬ್ಯಾಂಕ್ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸಾಲದ ಪ್ರಯೋಜನ ಪಡೆಯುತ್ತಿರುವ ಜಿಲ್ಲೆಯ ಫಲಾನುಭವಿ ರೈತರಿಗೆ ಸಾಂಕೇತಿಕವಾಗಿ ಬುಧವಾರ ನಗರದ ಜಿ.ಪಂ.ಸಭಾಂಗಣದಲ್ಲಿ ಸಾಲ ವಿತರಣೆ ಮಾಡಿ ಅವರು ಮಾತನಾಡಿದರು. 

ರಾಜ್ಯ ಸರ್ಕಾರದ ವಿವಿಧ ರಿಯಾಯಿತಿ ಬಡ್ಡಿ ದರದ ಸಾಲ ಯೋಜನೆಗಳನ್ನು ಸಹಕಾರ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಿದೆ. ರಾಜ್ಯದ 21  ಡಿಸಿಸಿ ಬ್ಯಾಂಕ್‍ಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ನೂತನವಾಗಿ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಹಕಾರ ಸಚಿವರನ್ನು ರಚನೆ ಮಾಡಿರುವುದರಿಂದ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನೇರವಾಗಿ ಸಹಕಾರ ಸಚಿವಾಲಯಕ್ಕೆ ವರದಿ ಸಲ್ಲಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು. 

ರಾಜ್ಯದ 21 ಡಿಸಿಸಿ ಬ್ಯಾಂಕ್‍ಗಳ ಪೈಕಿ ಕೊಡಗು ಜಿಲ್ಲೆಯ ಡಿಸಿಸಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ರೈತರಿಗೆ ಸಾಲ ಸೌಲಭ್ಯ ಮತ್ತಿತರ ಸೌಲಭ್ಯಗಳನ್ನು ಒದಗಿಸುವಲ್ಲಿ ಡಿಸಿಸಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು. 

ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸಿದಲ್ಲಿ ಆ ಆದೇಶದಲ್ಲಿ ರೈತರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಚಿಕ್ಕಪುಟ್ಟ ದೋಷಗಳಿದ್ದಲ್ಲಿ ಸ್ಥಳೀಯ ಶಾಸಕರು ಸರ್ಕಾರದ ಗಮನಕ್ಕೆ ತಂದು ರೈತರಿಗೆ ಅನ್ಯಾಯವಾಗದಂತೆ ಆದೇಶಗಳನ್ನು ರೂಪಿಸಬೇಕು ಎಂದು ತಿಳಿಸುತ್ತಾ, ಇದು ಅವರ ರೈತರ ಬಗೆಗಿನ ಹಾಗೂ ಸಹಕಾರ ಕ್ಷೇತ್ರದ ಬಗೆಗಿನ ಕಾಳಜಿ ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದರು. 

2021 ರ ಆಗಸ್ಟ್, 20 ಕ್ಕೆ ಜಿಲ್ಲೆಯ ಡಿಸಿಸಿ ಬ್ಯಾಂಕ್ 100 ವರ್ಷ ಪೂರ್ಣಗೊಳಿಸಿ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಬ್ಯಾಂಕಿನ ಆಡಳಿತ ವರ್ಗ, ಸ್ಥಳೀಯ ಪ್ರತಿನಿಧಿಗಳ ಸಹಕಾರದಿಂದ ಪಾರದರ್ಶಕವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. 

ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ಡಿಸಿಸಿ ಬ್ಯಾಂಕಿಗೆ ಸಂಬಂಧಿಸಿದಂತೆ ಮನವಿಯನ್ನು ಸಲ್ಲಿಸಿದ್ದು, ಈ ಮನವಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದರು. 

ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ರೈತರಿಗೆ 3 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಬೇಕು. ಹಾಗೂ ರೈತರಿಗೆ ಕನಿಷ್ಠ 10 ಲಕ್ಷ ರೂ.ವರೆಗೆ ಸಾಲ ನೀಡಲು ವಿಸ್ತರಣೆ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಜಿಲ್ಲೆಯ ಡಿಸಿಸಿ ಬ್ಯಾಂಕ್ ರಾಷ್ಟ್ರೀಯ ಬ್ಯಾಂಕುಗಳ ಜೊತೆಯಲ್ಲಿ ಸ್ಪರ್ಧೆಯೊಡ್ಡುವ ಪರಿಸ್ಥಿತಿ ಉಂಟಾಗಿದ್ದು, ರಾಷ್ಟ್ರೀಯ ಬ್ಯಾಂಕ್‍ಗಳ ರೀತಿಯಲ್ಲಿ ಡಿಸಿಸಿ ಬ್ಯಾಂಕ್‍ಗಳಲ್ಲಿಯೂ ಸಾಲ ನೀಡಲು ಕ್ರಮವಹಿಸಬೇಕಾಗಿದೆ ಎಂದು ಅವರು ಹೇಳಿದರು. 

ಡಿಸಿಸಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ಸಾಲವನ್ನು ತಕ್ಷಣವೇ ನೀಡುವ ವ್ಯವಸ್ಥೆಯಾಗಿರುವುದರಿಂದ ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಶಾಸಕರು ತಿಳಿಸಿದರು.

ಜಿಲ್ಲೆಯ ಡಿಸಿಸಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 1081 ಕೋಟಿ ರೂ. ಠೇವಣಿ ಹೊಂದಿದ್ದು, ಸುಮಾರು 871  ಕೋಟಿ ರೂ. ರೈತರಿಗೆ ಸಾಲ ನೀಡಿದ್ದಾರೆ ಎಂದು ಅವರು ಹೇಳಿದರು. 

ಜಿಲ್ಲೆಯ ಡಿಸಿಸಿ ಬ್ಯಾಂಕ್‍ಗೆ ಸರ್ಕಾರದಿಂದ ಬರಬೇಕಾದ ಬಡ್ಡಿಯನ್ನು ಆದಷ್ಟು ಬೇಗನೆ ಬಿಡುಗಡೆ ಮಾಡಬೇಕಾಗಿ ಸಚಿವರಲ್ಲಿ ಮನವಿ ಮಾಡಿಕೊಂಡರು. 

       ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ಮಾತನಾಡಿ ದಿನಾಂಕ 31.03.2021ರ ವರ್ಷಾಂತ್ಯಕ್ಕೆ ಬ್ಯಾಂಕು 26.44 ಕೋಟಿ ಷೇರು ಬಂಡವಾಳ, ಮತ್ತು ರೂ.1081 ಕೋಟಿ ಠೇವಣಾತಿಯನ್ನು ಸಂಗ್ರಹಿಸಿದ್ದು, ರೂ.100 ಕೋಟಿ ಸ್ವಂತ ಬಂಡವಾಳ ಹೊಂದಿದ್ದು, ರೂ.893 ಕೋಟಿ ಸಾಲದ ಹೊರಬಾಕಿ ಇರುತ್ತದೆ ಎಂದರು. 

      ರೈತರಿಗೆ ಕೆಸಿಸಿ ಕಾರ್ಡು, ಎಟಿಎಂ ಕಾರ್ಡು ಸೌಲಭ್ಯ, ಆರ್‍ಟಿಜಿಎಸ್, ನೆಪ್ಟ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ಸೌಲಭ್ಯ ನೀಡುವುದರೊಂದಿಗೆ ತ್ವರಿತವಾಗಿ ಸಾಲ ನೀಡುವ ಯೋಜನೆಯನ್ನು ಸದಾ ಅಳವಡಿಸಿಕೊಂಡು ಬಂದಿರುತ್ತೇವೆ ಎಂದು ಹೇಳಿದರು.

ಬ್ಯಾಂಕಿನ ಶತಮಾನೋತ್ಸವ ಅಂಗವಾಗಿ ಸುಸಜ್ಜಿತ ಕೇಂದ್ರ ಕಚೇರಿ ಕಟ್ಟಡದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ರೂ.7 ಕೋಟಿ ವೆಚ್ಚದ ಕಟ್ಟಡ ನಿರ್ಮಿಸುವ ಯೋಜನೆಗೆ 2021ರ ಆಗಸ್ಟ್ 20 ರಂದು ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಶುಭ ಸಂದರ್ಭವನ್ನು ಮಾನ್ಯ ಸಹಕಾರ ಸಚಿವರುಗಳು, ಜಿಲ್ಲೆಯ ಉಸ್ತುವಾರಿ ಸಚಿವರು, ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರು, ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರುಗಳು, ಹಿರಿಯ ಸಹಕಾರಿಗಳ ಸಮ್ಮುಖದಲ್ಲಿ  ನೆರವೇರಿಸಲು ಉದ್ದೇಶಿಸಲಾಗಿದೆ ಎಂದರು.

      2017ರ ರೂ.50000 ಬೆಳೆ ಸಾಲ ಮನ್ನಾ ಯೋಜನೆಯಡಿ ಬಾಕಿ ಮೊತ್ತ ಬಿಡುಗಡೆಗೊಳಿಸಬೇಕು. 2018ರ ರೂ.1 ಲಕ್ಷ ಬೆಳೆ ಸಾಲ ಮನ್ನಾ ಯೋಜನೆಯಡಿ ಬಾಕಿ ಮೊತ್ತ ಬಿಡುಗಡೆಗೊಳಿಸಬೇಕು. ಪಶುಭಾಗ್ಯ ಯೋಜನೆಯಡಿ ಬಿಡುಗಡೆಗೆ ಬಾಕಿ ಇರುವ ಬಡ್ಡಿ ಸಹಾಯಧನ ಬಿಡುಗಡೆ ಮಾಡಿಕೊಡುವಂತೆ ಹಾಗೂ 2021-22ನೇ ಸಾಲಿನಲ್ಲಿ ಪತ್ತಿನ ಸಹಕಾರಿ ಸಂಸ್ಥೆಗಳು ರಿಯಾಯಿತಿ ಬಡ್ಡಿ ದರದಲ್ಲಿ ವಿತರಿಸಬೇಕಾದ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲವನ್ನು ನೀಡುವ ಸಂಬಂಧ ಹೊರಡಿಸಲಿರುವ ಆದೇಶದಲ್ಲಿನ ಷರತ್ತುಗಳನ್ನು ಮಾರ್ಪಾಡುಗೊಳಿಸಬೇಕೆಂದು ಕೋರಿದರು. 

       ಶೂನ್ಯ ಬಡ್ಡಿ ದರದ ಅಲ್ಪಾವಧಿ ಬೆಳೆ ಸಾಲ ಯೋಜನೆಯ ರೂ.3 ಲಕ್ಷ ಮಿತಿಯನ್ನು ರೂ.10 ಲಕ್ಷಗಳಿಗೆ ಹೆಚ್ಚಿಸುವ ಬಗ್ಗೆ ಕೋರಿದರು. ಸ್ವಸಹಾಯ ಗುಂಪುಗಳ ಬಡ್ಡಿ ರಿಯಾಯಿತಿ ಯೋಜನೆಯಡಿ ಕೇಂದ್ರ ಸರ್ಕಾರದ ಎನ್.ಆರ್.ಎಲ್.ಎಂ. ರಿಯಾಯಿತಿ ಬಾಪ್ತು ಬಾರದಿರುವ ಬಗ್ಗೆ  ಸಚಿವರ ಗಮನಕ್ಕೆ ತಂದರು.

 ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ ಅವರು ಮಾತನಾಡಿ ರೈತರಿಗೆ ಸಾಲದ ಅಂತರವನ್ನು ಹೆಚ್ಚಳ ಮಾಡಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕಾಗಿ ಸಚಿವರಲ್ಲಿ ಮನವಿ ಮಾಡಿಕೊಂಡರು. 

       ಡಿಸಿಸಿ ಬ್ಯಾಂಕ್‍ನ ಉಪಾಧ್ಯಕ್ಷರಾದ ಹರೀಶ್, ಸಹಕಾರ ಸಂಘಗಳ ಒಕ್ಕೂಟದ ಅದ್ಯಕ್ಷರಾದ ಮನು ಮುತ್ತಪ್ಪ, ಮೈಸೂರು ವಿಭಾಗದ ಜಿಂಟಿ ನಿಬಂಧಕರಾದ ಪ್ರಕಾಶ್, ಉಪ ನಿಬಂಧಕರಾದ ಸಲೀಂ, ಡಿಸಿಸಿ ಬ್ಯಾಂಕ್‍ನ ನಿರ್ದೇಶಕರು, ಸಹಕಾರ ಕ್ಷೇತ್ರದ ಪ್ರಮುಖರು, ಇತರರು ಇದ್ದರು.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,