Header Ads Widget

ಸರ್ಚ್ ಕೂರ್ಗ್ ಮೀಡಿಯ

“ಹರ್ ಘರ್ ಜಲ್’ ಗುರಿ ತಲುಪಲು ಕೇಂದ್ರ ಸರ್ಕಾರದ ಬೆಂಬಲ

“ಹರ್ ಘರ್ ಜಲ್’ ಗುರಿ ತಲುಪಲು ಕೇಂದ್ರ ಸರ್ಕಾರದ ಬೆಂಬಲ

ಜಲ ಜೀವನ ಅಭಿಯಾನದ ಅಡಿಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ 5,009 ಕೋಟಿ ರೂ. ಅನುದಾನ ಹಂಚಿಕೆ

ಪ್ರತಿ ಮನೆಗೂ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸಲು, ಭಾರತ ಸರ್ಕಾರವು 2021-22ನೇ ಸಾಲಿನಲ್ಲಿ ಜಲ ಜೀವನ ಅಭಿಯಾನದ ಅಡಿಯಲ್ಲಿ ಕರ್ನಾಟಕಕ್ಕೆ ಕೇಂದ್ರದ ಅನುದಾನವನ್ನು 5,008.79 ಕೋಟಿ ರೂ.ಗೆ ಹೆಚ್ಚಳ ಮಾಡಿದೆ, ಇದು 2020-21ರ ಸಾಲಿನಲ್ಲಿ 1,189.40 ಕೋಟಿ ರೂ. ಆಗಿತ್ತು. ಕೇಂದ್ರ ಜಲ ಶಕ್ತಿ ಸಚಿವ, ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ನಾಲ್ಕು ಪಟ್ಟು ಹೆಚ್ಚಳದ ಹಂಚಿಕೆಯನ್ನು ಅಂಗೀಕರಿಸಿ, 2023ರ ವೇಳೆಗೆ ಕರ್ನಾಟಕದ ಪ್ರತಿ ಗ್ರಾಮೀಣ ವಸತಿಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡಲು ರಾಜ್ಯಕ್ಕೆ ಸಂಪೂರ್ಣ ನೆರವು ನೀಡುವ ಭರವಸೆ ನೀಡಿದ್ದಾರೆ.

2019ರಲ್ಲಿ ಅಭಿಯಾನವನ್ನು ಆರಂಭಿಸಿದಾಗ, ದೇಶದ ಗ್ರಾಮೀಣ ಭಾಗದ 19.20 ವಸತಿಗಳ ಪೈಕಿ 3.23 ಕೋಟಿ (ಶೇ.17) ವಸತಿಗಳಿಗೆ ಮಾತ್ರವೇ ನಲ್ಲಿ ಮೂಲಕ ನೀರು ಪೂರೈಕೆಯಾಗುತ್ತಿತ್ತು. ಜಲ್ ಜೀವನ ಅಭಿಯಾನ ಕಳೆದ 22 ತಿಂಗಳುಗಳಲ್ಲಿ, ಕೋವಿಡ್ -19 ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಅಡೆತಡೆಗಳ ನಡುವೆಯೂ ತ್ವರಿತಗತಿಯಲ್ಲಿ ಕಾರ್ಯಾನುಷ್ಠಾನವಾಗುತ್ತಿದ್ದು, 4.42 ವಸತಿಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದೆ. ಇದರೊಂದಿಗೆ ವ್ಯಾಪ್ತಿ 23.36ಕ್ಕೆ ಹೆಚ್ಚಳವಾಗಿದ್ದು, ಪ್ರಸ್ತುತ ದೇಶಾದ್ಯಂತ 7.66 ಕೋಟಿ (ಶೇ.40.5) ಗ್ರಾಮೀಣ ವಸತಿಗಳು ಕೊಳಾಯಿ ನೀರು ಪೂರೈಕೆ ಹೊಂದಿವೆ. ಗೋವಾ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಪುದುಚೇರಿ ಗ್ರಾಮೀಣ ಪ್ರದೇಶಗಳಲ್ಲಿ ಶೇ.100ರಷ್ಟು ಕೊಳಾಯಿ ನೀರು ಪೂರೈಕೆ ಸಾಧನೆ ಮಾಡಿದ್ದು “ಹರ್ ಘರ್ ಜಲ್’ (ಪ್ರತಿ ಮನೆಗೂ ನೀರು) ಆಗಿ ಪರಿವರ್ತನೆಯಾಗಿವೆ. ಪ್ರಧಾನಮಂತ್ರಿಯವರ ಸಬ್ ಕ ಸಾತ್ ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ್ (ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ) ಮಂತ್ರದೊಂದಿಗೆ, ಅಭಿಯಾನವು ಯಾರೊಬ್ಬರೂ ಹೊರಗುಳಿಯದಂತೆ ಮತ್ತು ಪ್ರತಿಯೊಂದು ಗ್ರಾಮೀಣ ವಸತಿಗೂ ಕೊಳಾಯಿ ನೀರು ಸಂಪರ್ಕ ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ಪ್ರಸ್ತುತ 69 ಜಿಲ್ಲೆಗಳು ಮತ್ತು 98 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರತಿ ಮನೆಯೂ ಕೊಳಾಯಿ ನೀರು ಪೂರೈಕೆ ಹೊಂದಿವೆ.

ಕರ್ನಾಟಕದಲ್ಲಿ 91.19 ಲಕ್ಷ ವಸತಿಗಳ ಪೈಕಿ 29.96 ಲಕ್ಷ ವಸತಿ (ಶೇ.32.86)ಗಳಿಗೆ ಕೊಳಾಯಿ ನೀರು ಸಂಪರ್ಕ ಕಲ್ಪಿಸಲಾಗಿದೆ. 2019ರ ಆಗಸ್ಟ್ 15ರಂದು ಜಲ್ ಜೀವನ ಅಭಿಯಾನ ಆರಂಭಿಸಿದಾಗ 24.51 ಲಕ್ಷ (ಶೇ.26.88) ವಸತಿಗಳು ಮಾತ್ರವೇ ನಲ್ಲಿ ನೀರು ಪೂರೈಕೆ ಹೊಂದಿದ್ದವು. 22 ತಿಂಗಳುಗಳಲ್ಲಿ ರಾಜ್ಯದ 5.44 ಲಕ್ಷ ವಸತಿಗಳಿಗೆ ಕೊಳಾಯಿ ನೀರು ಸಂಪರ್ಕ ಕಲ್ಪಿಸಲಾಗಿದೆ.   ರಾಜ್ಯ ಸರ್ಕಾರ ಎಲ್ಲ ಗ್ರಾಮೀಣ ವಸತಿಗಳಿಗೆ ಕೊಳಾಯಿ ನೀರು ಪೂರೈಕೆಯ ಸಾಧನೆ ಮಾಡಲು 2021-22ರಲ್ಲಿ 25.17 ಲಕ್ಷ, 2022-23ರಲ್ಲಿ 17.93 ಲಕ್ಷ ಮತ್ತು 2023-24ರಲ್ಲಿ ಉಳಿದ 19.93 ಲಕ್ಷ ವಸತಿಗಳಿಗೆ ಕೊಳಾಯಿ ನೀರು ಸಂಪರ್ಕ ಕಲ್ಪಿಸುವ ಯೋಜನೆ ಹೊಂದಿದೆ. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಬರೆದಿರುವ ಪತ್ರದಲ್ಲಿ 2023ರ ಹೊತ್ತಿಗೆ ಶೇ.100ರಷ್ಟು ರಾಜ್ಯದ ಪ್ರತಿಯೊಂದು ವಸತಿಯನ್ನು ಕೊಳಾಯಿ ನೀರು ಪೂರೈಕೆ ವ್ಯಾಪ್ತಿಗೆ ತರುವ ಭರವಸೆ ನೀಡಿದ್ದಾರೆ.

ಪ್ರತಿಯೊಂದು ಮನೆಗೂ ಕೊಳಾಯಿ ಮೂಲಕ ಕುಡಿಯುವ ನೀರು ಪೂರೈಸುವ  ಭರವಸೆ ನೀಡಿರುವ ರಾಜ್ಯ ಸರ್ಕಾರದ ದೃಢ ನಿಶ್ಚಯವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು 5,008.79 ಕೋಟಿ ರೂ.ಗಳನ್ನು ಜಲ ಜೀವನ ಅಭಿಯಾನದ ಅಡಿಯಲ್ಲಿ ಕೇಂದ್ರದ ಅನುದಾನವಾಗಿ ಅನುಮೋದಿಸಿದ್ದು, ಹಿಂದಿನ ವರ್ಷದ ಕೇಂದ್ರದ ಹಂಚಿಕೆಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಾಗಿದೆ. ಕೇಂದ್ರದ ಈ ಹೆಚ್ಚಿನ ಹಂಚಿಕೆಯೊಂದಿಗೆ, 2021-22ರ ಸಾಲಿನಲ್ಲಿ ರಾಜ್ಯದಲ್ಲಿ ನೀರು ಪೂರೈಕೆ ಕಾಮಗಾರಿಗೆ ಜಲ ಜೀವನ ಅಭಿಯಾನದ ಅಡಿಯಲ್ಲಿ ಆರಂಭಿಕ ಶಿಲ್ಕು 177.16 ಕೋಟಿ ಮತ್ತು ರಾಜ್ಯದ ಹೊಂದಾಣಿಕೆಯ ಪಾಲು 5,215.93 ಕೋಟಿ ಸೇರಿ ಒಟ್ಟು 10,401.88 ಕೋಟಿ ರೂ. ಲಭ್ಯವಿದೆ. ಹೀಗಾಗಿ ಅನುಷ್ಠಾನದ ವೇಗವನ್ನು ಹೆಚ್ಚಿಸಲು ಸಾಕಷ್ಟು ಪ್ರಮಾಣದ ಹಣದ ಲಭ್ಯತೆಯನ್ನು ಖಾತ್ರಿಪಡಿಸಲಾಗಿದೆ.

2021-22ರಲ್ಲಿ ಕರ್ನಾಟಕಕ್ಕೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳು/ಪಿ.ಆರ್‌.ಐ.ಗಳಿಗೆ ನೀರು ಮತ್ತು ನೈರ್ಮಲ್ಯಕ್ಕಾಗಿ 15ನೇ ಎಫ್‌ಸಿ ಬಂಧಿತ ಅನುದಾನವಾಗಿ 1,426 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಮುಂದಿನ ಐದು ವರ್ಷಗಳವರೆಗೆ ಅಂದರೆ 2025-26 ರವರೆಗೆ 7,524 ಕೋಟಿ ರೂ.ಗಳ ಹಣ ಖಾತ್ರಿಪಡಿಸಲಾಗಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಈ ಬೃಹತ್ ಹೂಡಿಕೆ ಆರ್ಥಿಕ ಚಟುವಟಿಕೆಗಳನ್ನು ವೇಗಗೊಳಿಸುತ್ತದೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಇದು ಹಳ್ಳಿಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ದೇಶದಲ್ಲಿರುವ ಶಾಲೆಗಳು, ಆಶ್ರಮ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಕೊಳಾಯಿ ನೀರು ಖಚಿತಪಡಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 100 ದಿನಗಳ ಪ್ರಚಾರಾಂದೋಲನವನ್ನು ಪ್ರಕಟಿಸಿದ್ದು, ಇದಕ್ಕೆ 2020ರ ಅಕ್ಟೋಬರ್ 2ರಂದು ಕೇಂದ್ರ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಚಾಲನೆ ನೀಡಿದ್ದಾರೆ. ಇದರ ಫಲವಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಂದರೆ ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ಆಂಧ್ರಪ್ರದೇಶ, ಗೋವಾ, ತಮಿಳುನಾಡು, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಶಾಲೆಗಳು, ಆಶ್ರಮ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ನಲ್ಲಿ ನೀರಿನ ಅವಕಾಶ ಕಲ್ಪಿಸಿವೆ. ಕರ್ನಾಟಕದಲ್ಲಿ 41,636 ಶಾಲೆಗಳು (ಶೇ.99) ಮತ್ತು 51,563 ಅಂಗನವಾಡಿ ಕೇಂದ್ರಗಳು (ಶೇ.95) ಕೊಳಾಯಿ ನೀರು ಸಂಪರ್ಕ ಪಡೆದಿವೆ. ಮಕ್ಕಳ ಉತ್ತಮ ಆರೋಗ್ಯ, ಸುಧಾರಿತ ನೈರ್ಮಲ್ಯ ಮತ್ತು ಸ್ವಚ್ಛತೆಗಾಗಿ ಶಾಲೆಗಳು, ಆಶ್ರಮ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ನೀರಿಗೆ ತತ್ವಾರ ಇರುವ, ನೀರಿನ ಗುಣಮಟ್ಟ ಬಾಧಿತ ಗ್ರಾಮಗಳು, ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಎಸ್‌.ಸಿ./ಎಸ್‌.ಟಿ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳು ಮತ್ತು ಸಂಸದರ ಆದರ್ಶ ಗ್ರಾಮ ಯೋಜನೆ (ಎಸ್‌.ಎ.ಜಿ.ವೈ) ಗ್ರಾಮಗಳಲ್ಲಿನ ಮನೆಗಳಿಗೆ ಕೊಳಾಯಿ ನೀರು ಸರಬರಾಜು ಮಾಡುವಲ್ಲಿ ರಾಜ್ಯವು ಆದ್ಯತೆ ನೀಡಬೇಕಾಗುತ್ತದೆ.

ನೀರಿನ ಗುಣಮಟ್ಟದ ನಿಗಾ ಮತ್ತು ಕಣ್ಗಾವಲು ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸ್ವ-ಸಹಾಯ ಗುಂಪುಗಳ ಸದಸ್ಯರು, ಪಿ.ಆರ್‌.ಐ ಸದಸ್ಯರು, ಶಾಲಾ ಶಿಕ್ಷಕರು ಮೊದಲಾದವರು; ಕ್ಷೇತ್ರ ಪರೀಕ್ಷಾ ಕಿಟ್ ಗಳನ್ನು (ಎಫ್‌.ಟಿ.ಕೆ.ಗಳು) ಬಳಸುವ ಮೂಲಕ ಮಾಲಿನ್ಯ ಪತ್ತೆಗೆ ನೀರಿನ ಮಾದರಿಗಳನ್ನು ಪರೀಕ್ಷಿಸಲು ಅವರಿಗೆ ತರಬೇತಿ ನೀಡಲಾಗುತ್ತದೆ. ಒಟ್ಟು 78 ಪ್ರಯೋಗಾಲಯಗಳಲ್ಲಿ ಕೇವಲ 1 ಪ್ರಯೋಗಾಲಯ ಮಾತ್ರ ಎನ್‌.ಎ.ಬಿ.ಎಲ್. ಮಾನ್ಯತೆ ಪಡೆದಿದೆ. ಈ ನೀರಿನ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯಗಳ ನವೀಕರಣ ಮತ್ತು ಎನ್‌.ಎ.ಬಿ.ಎಲ್. ಮಾನ್ಯತೆಯನ್ನು ರಾಜ್ಯವು ತ್ವರಿತಗೊಳಿಸಬೇಕಾಗಿದೆ. ಈ ಪ್ರಯೋಗಾಲಯಗಳು ಸಾರ್ವಜನಿಕರಿಗೆ ಮುಕ್ತವಾಗಿರಬೇಕು ಇದರಿಂದಾಗಿ ಅವರು ತಮ್ಮ ನೀರಿನ ಮಾದರಿಗಳನ್ನು ಅತ್ಯಲ್ಪ ವೆಚ್ಚದಲ್ಲಿ ಪರೀಕ್ಷೆ ಮಾಡಿಸಬಹುದಾಗಿರುತ್ತದೆ.

ಜಲ್ ಜೀವನ್ ಅಭಿಯಾನ ಕೆಳಗಿನಿಂದ ಮೇಲೆ ದೃಷ್ಟಿಕೋನದ್ದಾಗಿದ್ದು, ಇಲ್ಲಿ ಸಮುದಾಯಗಳು ಯೋಜನೆಯ ರೂಪುರೇಷೆಯಿಂದ, ಅನುಷ್ಠಾನದವರೆಗೆ,  ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಇದರ ಸಾಧನೆಗಾಗಿ ರಾಜ್ಯ ಸರ್ಕಾರ ಗ್ರಾಮ ಜಲ ಮತ್ತು ನೈರ್ಮಲ್ಯ ಸಮಿತಿ (ವಿ.ಡಬ್ಲ್ಯು.ಎಸ್.ಸಿ)/ಜಲ ಸಮಿತಿ ಬಲವರ್ಧನೆ, ಮುಂದಿನ ಐದು ವರ್ಷಗಳಿಗೆ ಗ್ರಾಮ ಕ್ರಿಯಾ ಯೋಜನೆ ಅಭಿವೃದ್ಧಿ, ಗ್ರಾಮ ಸಮುದಾಯಗಳನ್ನು ಬೆಂಬಲಿಸಲು ಮತ್ತು ಕೈಹಿಡಿಯಲು ರಾಜ್ಯ ಸರ್ಕಾರಗಳ ಅನುಷ್ಠಾನ ಸಮಿತಿ ನಿಯೋಜನೆ, ಜನರಲ್ಲಿ ಜಾಗೃತಿ ಮೂಡಿಸುವಂತಹ ಪೂರಕ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಬೆಂಬಲ ನೀಡಬೇಕು. ಈವರೆಗೆ ಕರ್ನಾಟಕ 28,883 ಗ್ರಾಮಗಳಲ್ಲಿ 22,203 ವಿ.ಡಬ್ಲ್ಯು.ಎಸ್.ಸಿ.ಗಳು ಅಥವಾ ಜಲ ಸಮಿತಿಗಳನ್ನು ಹೊಂದಿದ್ದು, 19,446 ಗ್ರಾಮ ಕ್ರಿಯಾ ಯೋಜನೆ (ವಿ.ಎ.ಪಿ.ಗಳು)ಗಳನ್ನು ರೂಪಿಸಿದೆ. 2021-22ನೇ ಸಾಲಿನಲ್ಲಿ ರಾಜ್ಯವು, 30 ಅನುಷ್ಠಾನ ರಾಜ್ಯ ಸಂಸ್ಥೆಗಳನ್ನು (ಐ.ಎಸ್.ಎ.ಗಳು) ನಿಯೋಜಿಸಲು ಯೋಜಿಸಿದೆ. ಕರ್ನಾಟಕವು ಪ್ರತಿ ಮನೆಗೂ ಖಾತ್ರಿಯ ನೀರು ಪೂರೈಕೆಗಾಗಿ, ದೀರ್ಘಕಾಲದವರೆಗೆ ನೀರು ಪೂರೈಕೆಯ ಮೂಲಸೌಕರ್ಯದ ಸುಸ್ಥಿರ ಮತ್ತು ಕಾರ್ಯಚರಣೆ ಹಾಗೂ ನಿರ್ವಹಣೆಯ ಖಾತ್ರಿಗೆ ಗ್ರಾಮೀಣ ಪ್ರದೇಶದಲ್ಲಿ ಸುಮಾರು 2 ಲಕ್ಷ ಜನರಿಗೆ ತರಬೇತಿ ನೀಡುವ ಅಗತ್ಯವಿದೆ. 

ಪ್ರಧಾನಮಂತ್ರಿಯವರು 2019ರ ಆಗಸ್ಟ್ 15ರಂದು ಕೆಂಪುಕೋಟೆಯಿಂದ ಪ್ರಕಟಿಸಿದ ಜಲ ಜೀವನ ಅಭಿಯಾನವು 2024ರೊಳಗೆ ದೇಶದ ಎಲ್ಲ ಗ್ರಾಮೀಣ ವಸತಿಗಳಿಗೆ  ನೀರು ಪೂರೈಕೆ ಮಾಡಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ಜಾರಿಯಾಗುತ್ತಿದೆ. ಜಲ ಜೀವನ ಅಭಿಯಾನಕ್ಕೆ 2021-22ನೇ ಸಾಲಿನ ಒಟ್ಟು ಆಯವ್ಯಯ 50,011 ಕೋಟಿ ರೂ.ಗಳಾಗಿದೆ. ರಾಜ್ಯಗಳ ಸ್ವಂತ ಸಂಪನ್ಮೂಲದೊಂದಿಗೆ 26,940 ಕೋಟಿ ರೂ.ಗಳನ್ನು 15ನೇ ಹಣಕಾಸು ಆಯೋಗವು  ನೀರು ಮತ್ತು ಒಳಚರಂಡಿಗಾಗಿ  ಅನುದಾನವಾಗಿ ಆರ್.ಎಲ್.ಬಿಗಳು/ಪಿಆರ್.ಐಗಳಿಗೆ ನೀಡುತ್ತಿದ್ದು, ಈ ವರ್ಷ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು  ಗ್ರಾಮೀಣ ಕುಡಿಯುವ ನೀರು ಪೂರೈಕೆ ವಲಯದಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದು, ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. 


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,