Header Ads Widget

Responsive Advertisement

ವೀರಾಜಪೇಟೆ ರೂ.4 ಕೋಟಿ ವೆಚ್ಚದ ಬ್ಯಾಡ್‌ಮಿಂಟನ್ ಒಳಾಂಗಣ ಕ್ರೀಡಾಂಗಣ ಕಾಮಗಾರಿ 11 ವರ್ಷ ನೆನೆಗುದಿಗೆ

ವೀರಾಜಪೇಟೆ ರೂ.4 ಕೋಟಿ ವೆಚ್ಚದ ಬ್ಯಾಡ್‌ಮಿಂಟನ್ ಒಳಾಂಗಣ ಕ್ರೀಡಾಂಗಣ ಕಾಮಗಾರಿ 11 ವರ್ಷ ನೆನೆಗುದಿಗೆ

ಹೈಕೋರ್ಟ್ ಹಿರಿಯ ವಕೀಲ ಪೊನ್ನಣ್ಣ ಭೇಟಿ


ವೀರಾಜಪೇಟೆ,ಆ.01: ಸುಮಾರು 11 ವರ್ಷಗಳಿಂದ ಸಮರ್ಪಕ ಕಾಮಗಾರಿ ನಡೆಯದೆ ನೆನೆಗುದಿಗೆ ಬಿದ್ದಿರುವ ಸುಮಾರು ರೂ.4 ಕೋಟಿ ವೆಚ್ಚದ ವೀರಾಜಪೇಟೆ ಬ್ಯಾಡ್‌ಮಿಂಟನ್ ಒಳಾಂಗಣ ಕ್ರೀಡಾಂಗಣ ಹಾಗೂ ವ್ಯಾಯಾಮ ಶಾಲೆ(ಜಿಮ್) ಅಪೂರ್ಣ ಕಾಮಗಾರಿಯನ್ನು ಇಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ಹಿರಿಯ ವಕೀಲ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ವಕ್ತಾರ, ಕೆಪಿಸಿಸಿ ಕಾನೂನು, ಮಾನವ ಹಕ್ಕು, ಆರ್.ಟಿ.ಐ ವಿಭಾಗದ ಅಧ್ಯಕ್ಷರಾದ ಎ.ಎಸ್.ಪೊನ್ನಣ್ಣ ಅವರು ವೀಕ್ಷಣೆ ಮಾಡಿ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭ ವೀರಾಜಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ಪೊನ್ನಣ್ಣ ಅವರಿಗೆ ವೀರಾಜಪೇಟೆ ತಾಲ್ಲೂಕು ಬ್ಯಾಡ್‌ಮಿಂಟನ್ ಅಸೋಸಿಯೇಷನ್‌ನ ಅಧ್ಯಕ್ಷ ಚೇಂದ್ರಿಮಾಡ ಮಧು ಗಣಪತಿ, ಉಪಾಧ್ಯಕ್ಷ ಮಾಳೇಟಿರ ಮಂದಣ್ಣ, ಪ್ರಧಾನ ಕಾರ್ಯದರ್ಶಿ ಪಿ.ಸೋಮೇಶ್, ಆಡಳಿತ ಮಂಡಳಿ ನಿರ್ದೇಶಕರಾದ ಸಿಬಿ ಕುರಿಯನ್, ರಾಜೇಶ್ ಪದ್ಮನಾಭ, ಮಾಜಿ ಪ.ಪಂ.ಅಧ್ಯಕ್ಷ ಸತೀಶ್‌ಕುಮಾರ್ ಮತ್ತು ಸದಸ್ಯರು ಕೊಡಗು ಜಿಲ್ಲೆಯ ಬ್ಯಾಡ್‌ಮಿಂಟನ್ ಪ್ರತಿಭೆಗಳಿಗೆ ಅತ್ಯಗತ್ಯವಾಗಿರುವ ಬಹುಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣ ದುಸ್ಥಿತಿ ಬಗ್ಗೆ ಮನವಿ ಪತ್ರ ನೀಡಿ ಮನವರಿಕೆ ಮಾಡಿದರು.

ಖುದ್ದು ವೀಕ್ಷಣೆ ಮಾಡಿದ ಎ.ಎಸ್.ಪೊನ್ನಣ್ಣ ಅವರು ಸಂಬಂಧಿಸಿದ ಅಧಿಕಾರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ಬಯಸಿದ ಸಂದರ್ಭ, ಗುತ್ತಿಗೆದಾರರಿಗೆ ಪೂರ್ಣ ಹಣ ಪಾವತಿಸದೆ ಇರುವದು, ಇನ್ನೂ ರೂ.70 ಲಕ್ಷ ಮೊತ್ತವನ್ನು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಳಿಸಿಕೊಂಡಿರುವದು, ಒಳಾಂಗಣ ಕ್ರೀಡಾಂಗಣದ ಶೌಚಾಲಯ, ಜಿಮ್ ಕೊಠಡಿ, ಬಣ್ಣ ಬಳಿಯುವ ಕೆಲಸ ಇತ್ಯಾದಿ ಬಾಕಿ ಉಳಿದಿರುವದಾಗಿ ತಿಳಿದುಬಂದಿದೆ. ಉದ್ಧೇಶಿತ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ರೂ.90 ಲಕ್ಷ ಅಗತ್ಯವಿದೆ ಎನ್ನಲಾಗಿದೆ.

2009 ರಲ್ಲಿ ವೀರಾಜಪೇಟೆ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರೂ.3.80 ಕೋಟಿ ವೆಚ್ಚದ ಒಳಾಂಗಣ ಬ್ಯಾಡ್‌ಮಿಂಟನ್ ಕೋರ್ಟ್‌ಗೆ ಭೂಮಿ ಪೂಜೆ ನೆರವೇರಿಸಲಾಯಿತು. 2010 ರಲ್ಲಿ ಕಾಮಗಾರಿ ಆರಂಭಿಸಿದ ನಂತರ ಇದೀಗ ಸುಮಾರು 11 ವರ್ಷ ಕಳೆದರೂ ಕ್ರೀಡಾಂಗಣ ಉದ್ಘಾಟನೆಯ ಭಾಗ್ಯ ಕಂಡಿರುವದಿಲ್ಲ ಎಂದು ಬ್ಯಾಡ್‌ಮಿಂಟನ್ ಸಂಸ್ಥೆಯ ಕಾರ್ಯದರ್ಶಿ ಪಿ.ಸೋಮೇಶ್ ಹಾಗೂ ನಿರ್ದೇಶಕ ಸಿಬಿ ಕುರಿಯನ್ ಅವರು ವಿವರಿಸಿದರು.

ಕಾಮಗಾರಿ ಪೂರ್ಣಗೊಳ್ಳಲು ಗುತ್ತಿಗೆದಾರರಿಗೆ ನೀಡಲಾದ ಅವಧಿ, ಹಣ ಬಿಡುಗಡೆ ವಿಳಂಬವಾಗಲು ಕಾರಣ, ರೂ.70 ಲಕ್ಷ ತಡೆ ಹಿಡಿಯಲು ಇರುವ ತಾಂತ್ರಿಕ ಕಾರಣದ ಬಗ್ಗೆ ಮಾಹಿತಿ ಹಕ್ಕು ಕಾಯ್ಧೆ ಮೂಲಕ ಬಹಿರಂಗಗೊಳಿಸಿ ಹೋರಾಟ ಮಾಡುವ ಬಗ್ಗೆಯೂ ಹಲವರು ಇದೇ ಸಂದರ್ಭ ಸಲಹೆ ನೀಡಿದರು.

ಕ್ರೀಡಾಪ್ರಿಯರನ್ನು ಉದ್ಧೇಶಿಸಿ ಮಾತನಾಡಿದ ಪೊನ್ನಣ್ಣ ಅವರು, ಕಾಮಗಾರಿ ವಿಳಂಬ ಗತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವದು. ಶೀಘ್ರವೇ ಉಳಿಕೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಸ್ವಾಮಿಯೊಂದಿಗೆ ಚರ್ಚಿಸಿ, ಒತ್ತಡ ಹಾಕಲಾಗುವದು ಎಂದು ಕ್ರೀಡಾ ಪಟುಗಳಿಗೆ ಭರವಸೆ ನೀಡಿದರು.

ಪೊನ್ನಣ್ಣ ಅವರೊಂದಿಗೆ ಜಿಲ್ಲಾ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಕಿಶಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗೋಪಾಲಕೃಷ್ಣ, ಕೊಡಗು ಜಿಲ್ಲಾ ಕಾಂಗ್ರೆಸ್ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ಉಪಾಧ್ಯಕ್ಷೆ ಕುಸುಮಾ ಜೋಯಪ್ಪ,ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಜಿ.ಪಂ.ಸದಸ್ಯ ಬಿ.ಎನ್.ಪ್ರಥ್ಯು,ಜಿಲ್ಲಾ ಸೇವಾದಳ ಕಾರ್ಯದರ್ಶಿ ತೆರೆಸಾ ವಿಕ್ಟರ್, ಮಾಜಿ ಪ.ಪಂ.ಅಧ್ಯಕ್ಷ ಸತೀಶ್‌ಕುಮಾರ್, ಪ.ಪಂ.ಸದಸ್ಯ ರಾಜೇಶ್ ಪದ್ಮನಾಭ, ಕಾಂಗ್ರೆಸ್ ಪ್ರಮುಖರಾದ ಎ.ಎಸ್.ನರೇನ್ ಕಾರ್ಯಪ್ಪ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಬ್ಯಾಡ್‌ಮಿಂಟನ್ ಕೋರ್ಟ್‌ಗೆ ತೆರಳುವ ರಸ್ತೆಯನ್ನು ಕಾಂಕ್ರೀಟ್ ರಸ್ತೆ ಹಾಗೂ ಇಂಟರ್‌ಲಾಕ್ ಅಭಿವ್ರದ್ಧಿ ಪಡಿಸಲು ಪ.ಪಂ.ಯಲ್ಲಿ ರೂ.15 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ ಎಂದು ಸದಸ್ಯ ರಾಜೇಶ್ ಪದ್ಮನಾಭ ಮಾಹಿತಿ ನೀಡಿದರು.

                                                                                                                   ✍️....ಟಿ.ಎಲ್.‌ ಶ್ರೀನಿವಾಸ್‌

         ( ಪತ್ರಕರ್ತರು )

         ಸುದ್ದಿ ಸಂಸ್ಥೆ, ಗೋಣಿಕೊಪ್ಪಲು.

( ಟಿ.ಎಲ್.‌ ಶ್ರೀನಿವಾಸ್‌ )
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,