Header Ads Widget

Responsive Advertisement

ಕೊಡಗಿನ ಸಾಂಪ್ರದಾಯಕ "ಕಕ್ಕಡ ಪದಿನೆಟ್ಟ್‌ ನಮ್ಮೆ"


( ಆಗಸ್ಟ್‌ -3 ಕಕ್ಕಡ 18 ರ ವಿಶೇಷ ಲೇಖನ )

ಕೊಡಗಿನ ಸಾಂಪ್ರದಾಯಕ "ಕಕ್ಕಡ ಪದಿನೆಟ್ಟ್‌ ನಮ್ಮೆ"


ಕಕ್ಕಡ ಅಂದರೆ ಆಷಾಢ ಮಾಸದ ಹದಿನೆಂಟರಂದು ಕೊಡಗಿನ ಮಂದಿಗೆ ವಿಶೇಷ ದಿನವಾಗಿದೆ. ಆಷಾಢ ತಿಂಗಳ ಹದಿನೆಂಟರಂದು ಕೊಡಗಿನಲ್ಲಿ "ಕಕ್ಕಡ 18" ವಿಶೇಷ ಹಬ್ಬದ ಆಚರಣೆ ನಡೆಯುತ್ತಿದ್ದು, ಈ ದಿನ ಔಷಧ ಗುಣವುಳ್ಳ ಗಿಡದ ರಸದಿಂದ ವಿಶೇಷ ಖಾದ್ಯ ತಯಾರಿಸುತ್ತಾರೆ. ಅಂದು 18 ಬಗೆಯ ಔಷಧಿ ಗುಣಗಳುಳ್ಳ ಮದ್ದು ಸೊಪ್ಪಿನಿಂದ ತಯಾರಿಸಿದ ಪಾಯಸ ಹಾಗೂ ಖಾದ್ಯ ಸೇವಿಸುವುದು ವಿಶೇಷ. 

ಸದಾ ತುಂತುರು ಮಳೆ ಹನಿಗಳ ಸಿಂಚನ.. ಕೊರೆಯುವ ಚಳಿ. ಮೈಚಳಿ ಬಿಟ್ಟು  ಮುಂಜಾನೆಯಿಂದ ಸಂಜೆಯವರೆಗೂ ತುಂತುರು ಹನಿಗಳ ನರ್ತನದ ನಡುವೆಯೂ  ನೀರು ತುಂಬಿದ ಕೆಸರು ಗದ್ದೆಯಲ್ಲಿ ಮೈಬಗ್ಗಿಸಿ ದುಡಿಯುವ ಜನತೆ. ಇದು ಕೊಡಗಿನಲ್ಲಿ ಕಕ್ಕಡ ಮಾಸದಲ್ಲಿ ನಡೆಯುವ ಕೃಷಿಚಟುವಟಿಕೆ. ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗಿನ ಕಕ್ಕಡ ಮಾಸ. ಈ ಸಮಯದಲ್ಲಿ ಶುಭ ಕಾರ್ಯಗಳು ನಿಷಿದ್ಧವಾಗಿದ್ದು, ಕೃಷಿ ಕೆಲಸಗಳಿಗೆ ಜನ ಹೆಚ್ಚಿನ ಆದ್ಯತೆ ನೀಡುವುದರಿಂದ ಇತರೆ ಎಲ್ಲ ವ್ಯಾಪಾರಗಳು ಕಡಿಮೆಯಾಗುತ್ತವೆ. ಈ ದಿನ ಮಾತ್ರ 'ಮದ್ದ್‌ ತೊಪ್ಪು' ಅಂದರೆ ಮದ್ದಿನ ಸೊಪ್ಪುವಿನ ವಿಶೇಷವಾದ ಗಿಡವನ್ನು ಕಾಡಿನಿಂದ ಆರಿಸಿ ತರುತ್ತಾರೆ. ಕಕ್ಕಡ 18ರಂದು ಇದರಲ್ಲಿ 18 ವಿಧದ ಔಷಧ ಗುಣಗಳಿರುತ್ತವೆ ಎನ್ನುವುದು ಪ್ರತೀತಿ. ಇದು ಆರೋಗ್ಯಕ್ಕೆ ಪೂರಕವಾದುದು ಹಾಗೂ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. 

ಕಾಡಿನಿಂದ ತಂದ ಸೊಪ್ಪನ್ನು ಒಂದು ದಿನ ಮುನ್ನ ಜಜ್ಜಿ ನೀರಿನಲ್ಲಿ ನೆನೆ ಹಾಕುತ್ತಾರೆ. ಇಲ್ಲವೇ ಆ ಸೊಪ್ಪನ್ನು ಬೇಯಿಸಿ ಅದರ ರಸವನ್ನು ತೆಗೆಯುತ್ತಾರೆ. ಈ ನೀರಿನಲ್ಲಿ ಅಕ್ಕಿ ಪಾಯಸ, ವಿವಿಧ ಬಗೆಯ ತಿಂಡಿಗಳನ್ನು ಮಾಡಿ ಸೇವಿಸುತ್ತಾರೆ. ಕಕ್ಕಡ 18 ಹತ್ತಿರ ಬರುತ್ತಿದ್ದಂತೆ ಒಂದು ರೀತಿಯ ವಿಶೇಷವಾದ ಸುವಾಸನೆ ಈ ಮದ್ದಿನ ಸೊಪ್ಪುವಿನ ಗಿಡದಿಂದ ಬರಲು ಆರಂಭವಾಗುತ್ತದೆ. ಇದರಿಂದ ಇದನ್ನು ಸುಲಭವಾಗಿ ಹುಡುಕಿ ತರಬಹುದು. ವೈಜ್ಞಾನಿಕವಾಗಿ ಜಸ್ಟೀಸಿಯ ವೈನಾಡೆನ್ನಿಸ್ ಎಂದು ಕರೆಯುವ ಈ ಸಸ್ಯ ಕೊಡಗು ಜಿಲ್ಲೆಯ ಕಾಡುಗಳು ಮಾತ್ರವಲ್ಲದೇ ಕಾಫಿ ತೋಟದಲ್ಲೂ ಹೇರಳವಾಗಿ ಕಾಣಸಿಗುತ್ತದೆ. 18ರ ನಂತರ ಇದರ ಸುವಾಸನೆ ಹಾಗೂ ಜೌಷಧ ಗುಣಗಳು ಕಡಿಮೆಯಾಗುತ್ತ ಹೋಗುತ್ತದೆ ಎನ್ನುವ ನಂಬಿಕೆ ಇದೆ. ಇದರಿಂದ ನಮ್ಮ ದೇಹದಲ್ಲಿರುವ ಕಲ್ಮಶಗಳು ಹೊರ ಹೋಗುತ್ತವೆಯಲ್ಲದೆ ಹಲವು ಬಗೆಯ ರೋಗಗಳಿಗೆ ಔಷಧವಾಗಿದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಪ್ರತಿಯೊಬ್ಬರೂ ಕೂಡ ಕಕ್ಕಡ 18ರಂದು ಮದ್ದು ಸೊಪ್ಪಿನಿಂದ ತಯಾರಿಸಿದ ಪಾಯಸ ಹಾಗೂ ಖಾದ್ಯವನ್ನು ಸೇವಿಸುತ್ತಾರೆ. 

ಕಕ್ಕಡ 18ಕ್ಕೆ ಜಾನಪದ ಹಾಗೂ ಆಯುರ್ವೇದ ಸ್ಪರ್ಶವಿದೆ. ಈ ದಿನ ಸಂಪ್ರದಾಯದಂತೆ ಸಾಮೂಹಿಕವಾಗಿ ಮನೆಯವರೆಲ್ಲ ಸೇರಿ ಗದ್ದೆಯಲ್ಲಿ ನಾಟಿ ಮಾಡಿ ಆನಂತರ ಮದ್ದು ಸೊಪ್ಪಿನ ಪಾಯಸ ಸೇವಿಸುತ್ತಾರೆ. ಆಟಿ (ಮದ್ದು) ಸೊಪ್ಪು ಎಂದು ಕರೆಯಲ್ಪಡುವ ಔಷಧೀಯ ಗುಣವುಳ್ಳ, ಮೂರಡಿಯಷ್ಟು ಎತ್ತರ ಬೆಳೆಯುವ ಈ ಗಿಡಕ್ಕೆ ಕಕ್ಕಡ ಆರಂಭವಾದ ದಿನದಿಂದ 18 ದಿನಗಳವರೆಗೆ ಪ್ರತಿದಿನ ಒಂದೊಂದು ಔಷಧಿಯಂತೆ ಒಟ್ಟು 18 ಔಷಧಿಗಳು ಈ ಗಿಡದ ಸೊಪ್ಪಿನಲ್ಲಿ ಅಡಕವಾಗುತ್ತದೆ ಎನ್ನುವ ನಂಬಿಕೆ ಇದೆ. 18 ಔಷಧಿಗಳು ಸಂಪೂರ್ಣವಾಗಿ ಸೇರಿ ಕೊಂಡ ನಂತರವಷ್ಟೇ ಸೊಪ್ಪಿಗೆ ಪರಿಪೂರ್ಣ ಔಷಧೀಯ ಗುಣ ಬರುತ್ತದೆ ಎನ್ನುವ ಕಾರಣಕ್ಕೆ ಕಕ್ಕಡ 18 ರಂದೇ ಮದ್ದು ಸೊಪ್ಪನ್ನು ಕೊಯ್ದು ಖಾದ್ಯವನ್ನು ತಯಾರಿಸಲಾಗುತ್ತದೆ. ಈ ಸೊಪ್ಪನ್ನು ಮಧು ಬನ ಎಂದು ಕೂಡ ಕರೆಯುತ್ತಾರೆ.

ಕೊಡಗಿನಲ್ಲಿ ಯಥೇಚ್ಛವಾಗಿ ಸಿಗುವ ಈ ಸೊಪ್ಪನ್ನು ಅಥವಾ ಈ ಸೊಪ್ಪಿನಿಂದ ತೆಗೆದ ರಸವನ್ನು ಜಿಲ್ಲೆಯಿಂದ ಹೊರಭಾಗದಲ್ಲಿರುವ ಕೊಡಗಿನ ಜನ ಕಕ್ಕಡ 18 ರಂದು ತಮ್ಮ ನೆಂಟರಿಸ್ಟರ ಮೂಲಕ ತರಿಸಿಕೊಂಡು ಸೇವಿಸುವಷ್ಟು ಜನಪ್ರಿಯ ಈ ಮದ್ದಿನ ಸೊಪ್ಪಿನದಾಗಿದೆ. ವಿಶಿಷ್ಟವಾದ ಸುವಾಸನೆಯನ್ನು ಹೊಂದಿರುವ ಸೊಪ್ಪಿನಿಂದ ತಯಾರಾದ ಪಾಯಸ, ತಟ್ಟೆ ಹಿಟ್ಟು, ಹಲ್ವ ಹೀಗೆ ಯಾವುದೇ ಖಾದ್ಯವಿದ್ದರೂ ಕೊಡಗಿನ ಜೇನು ಮತ್ತು ತುಪ್ಪದೊಂದಿಗೆ ಸೇವಿಸಿದರೆ ಇವುಗಳ ರುಚಿ ದುಪ್ಪಟ್ಟಾಗಿರುತ್ತದೆ. 

ಪ್ರಮುಖವಾಗಿ ಮದ್ದು ಸೊಪ್ಪಿನ ಗಿಡದ ರಸದಿಂದ ಪಾಯಸ ತಯಾರಿಸುತ್ತಾರೆ. ಅಕ್ಕಿಯಿಂದ ತಯಾರಿಸುವ ಪಾಯಸಕ್ಕೆ ಈ ರಸ ಬೆರೆಸುತ್ತಾರೆ. ಸಿದ್ಧವಾದ ಪಾಯಸಕ್ಕೆ ತೆಂಗಿನ ತುರಿ, ತುಪ್ಪ, ಜೇನು ಬೆರೆಸಿ ತಿನ್ನುತ್ತಾರೆ. ಈ ಪಾಯಸ ಸೇವಿಸಿದ ಬಳಿಕ ಮೂತ್ರ ಕೂಡ ಕೆಂಬಣ್ಣಕ್ಕೆ ತಿರುಗುತ್ತದೆ. ಅದು ಎಷ್ಟು ಕೆಂಪಾಗಿರುತ್ತದೋ ಅಷ್ಟು ಔಷಧೀಯ ಗುಣ ಗಿಡಕ್ಕೆ ಸೇರಿದೆ ಎಂದು ಅರ್ಥ. ಸಾಮಾನ್ಯವಾಗಿ ಆಟಿ ಸೊಪ್ಪಿನ ರಸದಿಂದ ಕೊಡಗಿನಲ್ಲಿ ಪಾಯಸ ಮಾಡುತ್ತಾರೆ. ಆದರೆ ಇತ್ತಿಚೇಗೆ ಅದರಿಂದ ಹಲ್ವ, ಇಡ್ಲಿ, ತಟ್ಟೆ ಇಡ್ಲಿ ಮುಂತಾದ ಖಾದ್ಯವನ್ನೂ ತಯಾರಿಸುತ್ತಾರೆ. ಕೆಲವರು ಅನ್ನವನ್ನು ಕೂಡ ಈ ರಸದಿಂದ ಮಾಡುತ್ತಾರೆ. ರಸವನ್ನು ಜ್ಯೂಸ್ ರೀತಿಯಲ್ಲೂ ಸೇವಿಸುತ್ತಾರೆ. ಅಷ್ಟಕ್ಕೂ ಈ ರಸ ಸಿಹಿಯಾಗಿ ಇರುವುದಿಲ್ಲ. ಹಾಗಾಗಿ ಬಿಳಿ ಬೆಲ್ಲ ಸಕ್ಕರೆ ಸೇರಿಸಿ ಸವಿಯುತ್ತಾರೆ. 


ಕೊಡಗಿನಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಹಸಿರ ಗಿಡಗಳಿಗೇನು ಕೊರತೆ ಇಲ್ಲ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಯಥೇಚ್ಛವಾಗಿ ಸಿಗುವ ಮರ ಕೆಸ, ಕಣಿಲೆ, ಅಣಬೆ, ಮದ್ದು ಸೊಪ್ಪು ಮಳೆ ಚಳಿ ಗಾಳಿಗೆ ಮಾನವನ ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ. ಮಾತ್ರವಲ್ಲ ಇವುಗಳಲ್ಲಿ ಔಷಧೀಯ ಗುಣಗಳಿವೆ ಎನ್ನುವುದು ಹಿರಿಯರ ನಂಬಿಕೆ. ನಾಟಿ ಕೋಳಿ, ಏಡಿ, ಹೊಳೆ ಮೀನು ಕೂಡ ಕಕ್ಕಡ ತಿಂಗಳಿನಲ್ಲಿ ಮಾಂಸಹಾರಿಗಳ ಹೊಟ್ಟೆಯನ್ನು ಸೇರಿ ದೇಹವನ್ನು ಬೆಚ್ಚಗಿಡಲು ಹಾಗೂ ಆರೋಗ್ಯ ವರ್ಧಕವಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಪಾಯಸ ಸೇವಿಸಿದ ಮಾರನೇ ದಿನ ಆಟಿ ಕೋಳಿ ಭಕ್ಷ್ಯ ಮಾಡುತ್ತಾರೆ. ಸಾಮಾನ್ಯವಾಗಿ ನಾಟಿ ಕೋಳಿಯನ್ನೇ ಬಳಸಲಾಗುತ್ತಿದ್ದರೂ ಪಟ್ಟಣ ಪ್ರದೇಶದಲ್ಲಿ ಅವು ಸಿಗುವುದು ಕಡಿಮೆಯಾದ ಹಿನ್ನಲೆಯಲ್ಲಿ ಫಾರಂ ಕೋಳಿಯನ್ನೇ ಬಳಸುತ್ತಾರೆ. ನಾಟಿ ಕೋಳಿ ಕೂಡ ಔಷಧ ಗುಣಗಳುಳ್ಳ ಆಹಾರ ತಿಂದಿರುವುದರಿಂದ ಕೋಳಿ ಮಾಂಸದಲ್ಲೂ ಔಷಧ ಗುಣ ಸೇರಿರುತ್ತದೆ ಎಂಬ ನಂಬಿಕೆಯಿದೆ. ಜತೆಗೆ ಏಡಿ ಕೂಡ ಆಟಿ ಹಬ್ಬದ ಪ್ರಮುಖ ಖಾದ್ಯ. ಇದರೊಂದಿಗೆ ಗದ್ದೆಯಲ್ಲಿ ಬೆಳೆದ ಅಣಬೆಯನ್ನು ಕೂಡ ಇದೇ ಸಮಯದಲ್ಲಿ ಸೇವಿಸಲಾಗುತ್ತದೆ. 

ತಿಂಗಳಾನುಗಟ್ಟಲೆ ಮಳೆ ಸುರಿದು ಹೊರ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಳ್ಳುತ್ತಿದ್ದ ಅವತ್ತಿನ ಕಾಲದಲ್ಲಿ ತಮ್ಮ ಸುತ್ತಮುತ್ತ ಸಿಗುವ ಸಸ್ಯಗಳಿಂದಲೇ ವಿವಿಧ ಔಷಧಗಳನ್ನು ಕಂಡುಕೊಂಡು ಅದನ್ನು ಸಂಪ್ರದಾಯವಾಗಿ ರೂಢಿಸಿಕೊಂಡು ಬಂದಿದ್ದು, ಇವತ್ತಿಗೂ ಕೊಡಗಿನವರು ಅದನ್ನೇ ಉಳಿಸಿಕೊಂಡು ಹೋಗುತ್ತಿದ್ದಾರೆ.  ಬೇರೆ ಕಡೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಭತ್ತದ ಕೃಷಿ ಮಾಡುವುದೇ ಮಳೆಗಾಲದಲ್ಲಿ. ಮಳೆ ಸುರಿದು ಭೂಮಿಯಡಿಯಿಂದ ಜಲ ಹುಟ್ಟಿ ಹರಿದರೆ ಅದರ ನೀರಲ್ಲಿ ಕೃಷಿ ಮಾಡುವುದು ಇಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಹೀಗಾಗಿ ಮಳೆಗಾಲದಲ್ಲಿ ಭತ್ತದ ಪೈರು ಹಾಕಿ ಅದನ್ನು ನಾಟಿ ನೆಡುತ್ತಾರೆ. ಮಳೆ ಕಡಿಮೆಯಾಗಿ ಬಿಸಿಲು ಬರುತ್ತಿದ್ದಂತೆಯೇ ಅಂದರೆ ನವೆಂಬರ್ ಡಿಸೆಂಬರ್ ವೇಳೆಗೆ ಭೂಮಿಯಿಂದ ಉಕ್ಕಿ ಹರಿಯುವ ನೀರು ಕಡಿಮೆಯಾಗುತ್ತದೆ.

ಒಂದಷ್ಟು ಆಧುನಿಕತೆಯಲ್ಲಿ ಕೊಡಗಿನ ಜನರ ಬದುಕಿನಲ್ಲಿ ಒಂದಷ್ಟು ವ್ಯತ್ಯಾಸ ಕಾಣುತ್ತಿದ್ದರೂ ಕೊಡಗಿನ ಜನ ಸಂಪ್ರದಾಯವನ್ನು ಬಿಟ್ಟು ಬದುಕುತ್ತಿಲ್ಲ. ಹೀಗಾಗಿಯೇ "ಕಕ್ಕಡ ಪದಿನೆಟ್ಟ್" ಆಚರಣೆಯನ್ನು ಸಂಭ್ರಮದಿಂದಲೇ ಆಚರಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.


ಲೇಖಕರು: ✍️.... ಕಾನತ್ತಿಲ್‌ ರಾಣಿಅರುಣ್

                                   (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,