Header Ads Widget

Responsive Advertisement

"ನಾಡು ನನ್ನದು ಎನ್ನದ ಎದೆ ಸುಡುಗಾಡು" ಒಗ್ಗಟ್ಟಿನಿಂದ ಜೀವಿಸುವುದೆ ನಿಜವಾದ ಸ್ವತಂತ್ರ ಎನ್ನಬಹುದು

"ನಾಡು ನನ್ನದು ಎನ್ನದ ಎದೆ ಸುಡುಗಾಡು"

ಒಗ್ಗಟ್ಟಿನಿಂದ ಜೀವಿಸುವುದೆ ನಿಜವಾದ ಸ್ವತಂತ್ರ ಎನ್ನಬಹುದು


ಆಗಸ್ಟ್ ತಿಂಗಳೆಂದರೆ ಭಾರತೀಯರಿಗೆ ವಿಶೇಷವಾದ ತಿಂಗಳು. ಪರಕೀಯರ ಆಳ್ವಿಕೆಯಿಂದ, ದಾಸ್ಯದ ಸಂಕೋಲೆಯಿಂದ ದೇಶ ಬಿಡುಗಡೆಗೊಂಡ ತಿಂಗಳಿದು. ಆದರೆ ಆ ಸ್ವಾತಂತ್ರ್ಯ ಅಷ್ಟು ಸುಲಭಕ್ಕೆ ದಕ್ಕಿದ್ದಲ್ಲ. ಅದರ ಹಿಂದೆ ಲಕ್ಷಾಂತರ ಜನರ ತ್ಯಾಗ ಬಲಿದಾನಗಳಿವೆ. ಸ್ವಾತಂತ್ರ್ಯ ಬಂದ 75 ವರ್ಷದಲ್ಲಿ ನಾವು ಅವರೆಲ್ಲರನ್ನೂ ಮರೆತೇಬಿಟ್ಟಿದ್ದೇವೆ. ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರನ್ನು ನೆನೆಯಬೇಕಾದ್ದು ನಮ್ಮೆಲ್ಲರ ಕರ್ತವ್ಯ ಅಲ್ವಾ?

‘ಸ್ವಾತಂತ್ರ್ಯೋತ್ಸವ’ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ಸಣ್ಣವರಿದ್ದಾಗ ಕಾತರದಿಂದ ಕಾಯುತ್ತಿದ್ದ ದಿನವದು. ಏನೋ ಸಂಭ್ರಮ, ಏನೋ ಖುಷಿ! ತ್ರಿವರ್ಣ ಧ್ವಜವನ್ನು ಹಿಡಿದು ಓಡಾಡುವುದೆಂದರೆ ಏನೋ ಹೆಮ್ಮೆ. ಎದೆಯುಬ್ಬಿಸಿ ‘ಜನಗಣಮನ’ ಹಾಡುತ್ತಿದ್ದ ಠೀವಿಯೇ ಬೇರೆ! ಆದ್ರೆ ಬೆಳೆಯುತ್ತಾ ಆ ಸಂಭ್ರಮವೆಲ್ಲೋ ಕಳೆದು ಹೋಯಿತು.

ಸ್ವಾತಂತ್ರ್ಯೋತ್ಸವ ಕೆವಲ ಸಿಹಿ ಹಂಚುವುದಕ್ಕಷ್ಟೇ ಸೀಮಿತವಾಗುತ್ತಿದೆ. ಸ್ವಾತಂತ್ರ್ಯೋತ್ಸವ ಸಂಭ್ರಮದ ಹಿಂದೆ ಎಷ್ಟೋ ಮಹಾನ್ ವ್ಯಕ್ತಿತ್ವಗಳ ತ್ಯಾಗ ಬಲಿದಾನಗಳು ನಮ್ಮ ಹೃದಯದಲ್ಲಿ ಅವಿತುಕೊಂಡಿದೆ. ಸ್ವಾತಂತ್ರ್ಯೋತ್ಸವದಂದು ಮೋಜು ಮಸ್ತಿ ಮಾಡದೇ ರಾಷ್ಟ್ರಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರನ್ನೂ, ನಮ್ಮ ಭವಿಷ್ಯಕ್ಕಾಗಿ ತಮ್ಮ ಭವಿಷ್ಯವನ್ನು ಬಲಿಕೊಟ್ಟು ಹುತಾತ್ಮರಾದ ಎಲ್ಲಾ ರಾಷ್ಟ್ರಭಕ್ತರನ್ನು ಒಂದು ದಿನವಾದರೂ ಸರಿಯಾಗಿ ನೆನಪಿಸಿಕೊಂಡು ಗೌರವ ಸೂಚಿಸುವಂತಾಗಬೇಕಿದೆ. ಒಂದೆರಡು ಹನಿ ಕಣ್ಣೀರು ಬಂದರೂ ನಾಚಿಕೆ ಪಡದೇ ರಾಷ್ಟ್ರಕ್ಕಾಗಿ ತ್ಯಾಗ ಮಾಡಿದವರಿಗೆ ಅಶ್ರುತರ್ಪಣವನ್ನು ಸಲ್ಲಿಸಬೇಕಿದೆ. 

ಯುವಜನತೆಯಲ್ಲಿ ಸ್ವಾತಂತ್ರ್ಯೋತ್ಸವದ ಹುರುಪು, ಹುಮ್ಮಸ್ಸು ಚೈತನ್ಯ ಕಡಿಮೆಯಾಗುತ್ತಿದೆ. ನಮಗೆ ಸ್ವಾತಂತ್ರ್ಯ ಹೇಗೆ ಬಂತು ಎಂದು ತಿಳಿಯುವ ವ್ಯವಧಾನವೂ ಅವರಿಗಿಲ್ಲವಾಗಿದೆ ಸ್ವಾತಂತ್ರ್ಯ ಹೋರಾಟಗಾರರು ಯಾರು ಅಂತ ಕೇಳಿದ್ರೆ ಅದೇ ಗಾಂಧಿ, ಅದೇ ನೆಹರು ಹೆಸರು ಕೇಳಿ ಬರುತ್ತದೆ. ಮಹಾತ್ಮರ ಬಗ್ಗೆ ನನಗೆ ಅಪಾರ ಗೌರವ ಇದೆ. ಸಮಗ್ರ ಭಾರತೀಯರನ್ನು ಒಂದುಗೂಡಿಸಿದ ಮಹಾನ್ ನಾಯಕ ಅವರು. ಅವರ ಅಹಿಂಸಾತ್ಮಕ ಹೋರಾಟದಿಂದಲೇ ನಮ್ಮ ಸ್ವಾತಂತ್ರ್ಯ ಹೋರಾಟ ಇತರೆಲ್ಲ ದೇಶಗಳ ಹೋರಾಟಗಳಿಗಿಂತ ಭಿನ್ನ ಹಾಗೂ ವಿಶಿಷ್ಟ!! ಆದ್ರೂ ಸ್ವಾತಂತ್ರ್ಯ ಹೋರಾಟವನ್ನೇ ತಮ್ಮ ಜೀವನದ ಧ್ಯೇಯವನ್ನಾಗಿಸಿ, ಪ್ರಾಣಾರ್ಪಣೆಗೈದ ಇನ್ನೂ ಅನೇಕ ಮಹಾನ್ ವೀರರಿದ್ದಾರೆ. 

ಗಾಂಧಿ, ನೆಹರುಗಳ ಮಧ್ಯೆ ಇವರು ಮೂಲೆಗುಂಪಾಗಿರುವುದು ಬೇಸರದ ಸಂಗತಿಯೇ ಸರಿ!!! ಸ್ವಾತಂತ್ರ್ಯವೀರ ಸಾವರ್ಕರ್, ಚಂದ್ರಶೇಖರ ಆಝಾದ್, ಮದನ್ ಲಾಲ್ ಧೀಂಗ್ರ, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಕ್ ಉಲ್ಲಾ ಖಾನ್, ಖುದೀರಾಮ್ ಬೋಸ್, ಸುಭಾಷ್ ಚಂದ್ರ ಬೋಸ್ ಹೀಗೆ ಲೆಕ್ಕವಿಲ್ಲದಷ್ಟು ವೀರ ಸೇನಾನಿಗಳು ಕಾಲಚಕ್ರದೊಂದಿಗೆ ಕಳೆದು ಹೋಗಿದ್ದಾರೆ. ಪಠ್ಯಪುಸ್ತಕಗಳಲ್ಲಿ ಇವರ ಹೆಸರನ್ನು ಹುಡುಕುವುದು ವ್ಯರ್ಥ. ಮತ್ತೆ ಇಂದಿನ ಮಕ್ಕಳಿಂದ ಈ ವೀರರ ಹೆಸರುಗಳನ್ನು ನಿರೀಕ್ಷಿಸುವುದಾದರೂ ಹೇಗೆ? ಅಷ್ಟೇ ಯಾಕೆ ಸ್ವತ: ನನಗೇ ಗೊತ್ತಿರಲಿಲ್ಲ!!! ರುಧಿರಾಭಿಷೇಕ, ಯುಗಾವತಾರ, ಅಜೇಯ, ಆತ್ಮಾಹುತಿಯಂತಹ ಪುಸ್ತಕಗಳು ನನ್ನ ಕೈಗೆ ಸಿಕ್ಕಿರದಿದ್ದರೆ ನಾನೂ ಅಜ್ಞಾನಿಯಾಗಿಯೇ ಇರುತ್ತಿದ್ದೆ ಎಂದು.

ನಾವು ಚಿಕ್ಕವರಿದ್ದಾಗ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡವರ ಮಾತುಗಳನ್ನು ಕೇಳುವ ಭಾಗ್ಯ ನಮಗಿತ್ತು. ಆದರೆ ಇಂದಿನ ಮಕ್ಕಳಿಗೆ ಆ ಭಾಗ್ಯ ದೊರೆತಿಲ್ಲ. ನಮಗೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಬಹಳ ಬೆಲೆ ತೆತ್ತು ಪಡೆದಿದ್ದೇವೆ. ಇದನ್ನು ಮಕ್ಕಳು ಅರಿಯಬೇಕು. ಇಂತಹ ಸ್ವಾತಂತ್ರ್ಯವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ಚಿಂತಿಸಬೇಕು. ಭಾರತ ಇಂದು ವಿಶ್ವವೇ ತನ್ನತ್ತ ತಿರುಗಿ ನೋಡುವ ಸಾಧನೆ ಮಾಡಿದ್ದರೂ ಸಹ, ಬಡತನ, ಅನಕ್ಷರತೆ, ನಿರುದ್ಯೋಗದಂತಹ ಪಿಡುಗುಗಳು ಇಂದಿಗೂ ದೇಶವನ್ನು ಕಾಡುತ್ತಿವೆ. ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ತಂದು ಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಂಡು ದೇಶವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲು ಪ್ರತಿಯೊಬ್ಬರೂ ಶ್ರಮಿಸಬೇಕಿದೆ.

ಭಾರತ ದೇಶಕ್ಕೆ ಪ್ರತಿದಿನವೂ ಕೂಡ ನೈಜವಾದ ಸ್ವತಂತ್ರ ದೊರೆಯುವಂತೆ ಕಾಪಾಡಿಕೊಳ್ಳಬೇಕು. ಭಾರತ ಸ್ವಾತಂತ್ರ್ಯ ನಾವು ಬರಿ ಸ್ವಾತಂತ್ರ್ಯ ದಿವಸವೆಂದು ಆಚರಿಸಬಾರದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ದೇಶಭಕ್ತರನ್ನು ನೆನೆಸುತ್ತಾ ಅವರ ತ್ಯಾಗಕ್ಕೆ ಶಿರಬಾಗಿ ಅವರನ್ನು ಸ್ಮರಿಸುತ್ತಾ ನಾವು ಈ ಸ್ವಾತಂತ್ರ್ಯವನ್ನು ಆಚರಿಸಬೇಕು. ಜಾತಿ ಧರ್ಮಗಳನ್ನು ನೋಡದೆ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳಿ ಬದುಕಲು ಮೊದಲು ಕಲಿಯಬೇಕು. ಒಗ್ಗಟ್ಟಿನಿಂದ ಜೀವಿಸುವುದೆ ನಿಜವಾದ ಸ್ವತಂತ್ರ ಎನ್ನಬಹುದು. ಜಗತ್ತಿನಾದ್ಯಂತ ದುಷ್ಟ ಶಕ್ತಿಗಳು, ಮತಾಂಧ ಮೂಢರು ವಿಜೃಂಭಿಸಿ ಶಾಂತಿ ಭಂಗ ಮಾಡಿ ಆಸುರೀ ಮನೋಭಾವವನ್ನು ಎಲ್ಲೆಡೆ ಪಸರಿಸಲು ಯತ್ನಿಸುತ್ತಿರುವಾಗ ನಾವು ಎಲ್ಲರಲ್ಲೂ ರಾಷ್ಟ್ರಾಭಿಮಾನ ಮೂಡಿಸುವ ಕೆಲಸ ಮಾಡವ ಪಣ ತೊಡಬೇಕಿದೆ.

ಇಂದಿನ ಯುವಪೀಳಿಗೆ ಆಧುನಿಕತೆ ಹಾಗೂ ಪಾಶ್ಚಿಮಾತ್ಯಕ್ಕೆ ಮಾರುಹೋಗಿದ್ದಾರೆ. ಅವರ ಭಾವನೆಯಲ್ಲಿ ನಾವು ದೇಶಾಭಿಮಾನವನ್ನು ಭಿತ್ತುವ ಕೆಲಸ ಮಾಡಬೇಕು. ಹಾಗೂ ಅವರಲ್ಲಿ ಸಂಯಮ, ಸೌಹಾರ್ದತೆ, ಸಹಬಾಳ್ವೆಯಂತಹ ಗುಣಗಳನ್ನು ರೂಪಿಸಬೇಕಾಗಿದೆ. "ನಾಡು ನನ್ನದು ಎನ್ನದ ಎದೆ ಸುಡುಗಾಡು" ಎಂಬ ಕುವೆಂಪು ಅವರ ನಾಣ್ಣುಡಿಯಂತೆ ನಾವು ಪ್ರತಿಯೊಬ್ಬರಲ್ಲೂ ದೇಶದ ಬಗ್ಗೆ ಅಭಿಮಾನ ಮತ್ತು ನಾಡು-ನುಡಿಯ ಬಗ್ಗೆ ಒಲುಮೆಯನ್ನು ಬೆಳೆಸಬೇಕಾಗಿದೆ. 

ಯಾರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ ಎಂಬುದರ ಬಗ್ಗೆ ಇಂದಿನ ಮಕ್ಕಳಿಗೆ ಅರಿವು ಮೂಡಿಸಬೇಕು. ಹಾಗೂ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಇಂದಿನ ಯುವಜನತೆ ಅರಿತುಕೊಳ್ಳಬೇಕು. ಮಕ್ಕಳಲ್ಲಿ ದೇಶ ಪ್ರೇಮ ಎಂಬುದು ಕೇವಲ ಪ್ರಬಂಧ ಸ್ಪರ್ಧೆಗೆ ಸೀಮಿತವಾಗದೆ ಆಚರಣೆಗೂ ತರುವಲ್ಲಿ ಪ್ರೇರೆಪಿಸುವ ಜವಬ್ದಾರಿ ನಮ್ಮೆಲ್ಲರದ್ದು. ಸರ್ವರಿಗೂ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ  ಶುಭಾಶಯಗಳು. 

✍️.... ಅರುಣ್‌ ಕೂರ್ಗ್‌ 

            (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,