Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಹೋದರ-ಸಹೋದರಿಯರ ಭಾಂದವ್ಯದ ಸಂಕೇತ ರಕ್ಷಾ ಬಂಧನ

ಸಹೋದರ-ಸಹೋದರಿಯರ ಭಾಂದವ್ಯದ ಸಂಕೇತ ರಕ್ಷಾ ಬಂಧನ


ರಕ್ಷಾ ಬಂಧನ ಹಬ್ಬವು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ. ರಕ್ಷಾ ಬಂಧನ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪವಿತ್ರ ಪ್ರೀತಿಯ ಸಂಕೇತವಾಗಿದೆ. ಈ ಪ್ರೀತಿಯಲ್ಲಿ ಆತ್ಮೀಯತೆ, ಮಧುರತೆ, ತ್ಯಾಗ, ಸಂರಕ್ಷಣೆ ಮತ್ತು ಸಮರ್ಪಣೆ ಸಮಾವೇಶಗೊಂಡಿದೆ.

ಪುರಾಣದಲ್ಲಿ ದ್ರೌಪದಿಯು ತನ್ನ ಸೀರೆಯ ನೂಲನ್ನು ಹರಿದು ಯುದ್ಧದಲ್ಲಿ ಗಾಯಗೊಂಡ ಶ್ರೀಕೃಷ್ಣ ಪರಮಾತ್ಮನ ಕೈಗೆ ಕಟ್ಟಿದ್ದಳಂತೆ. ಆಗ ಏನೂ ಉಡುಗೊರೆ ಕೊಡದಿದ್ದರೂ, ದ್ರೌಪದಿಯ ವಸ್ತ್ರಾಪಹರಣವಾದಾಗ  ಹೆಣ್ಣಿನ ಅತಿದೊಡ್ಡ ಆಸ್ತಿಯಾದ ಅವಳ ಮಾನ ಕಾಪಾಡಿದವನು ಅವಳ ಅಣ್ಣನಾದ ಶ್ರೀಕೃಷ್ಣ ಪರಮಾತ್ಮನೇ. ಇಷ್ಟೆಲ್ಲಾ ಕತೆಯಿದ್ದರೂ ರಕ್ಷಾ ಬಂಧನಕ್ಕೆ ಹೆಚ್ಚು ಮೆರಗು ಬಂದಿರುವುದು ರಾಣಿ ಕರ್ಣಾವತಿ - ಹುಮಾಯುನ್ ರಕ್ಷಾ ಪ್ರಕರಣದಿಂದ. ಬಹಾದುರ್ ಷಾ ನಿಂದ  ತೊಂದರೆ ಅನುಭವಿಸುತ್ತಿದ್ದ ರಾಣಿ ಕರ್ಣಾವತಿ ಮೊಘಲ್ ದೊರೆ ಹುಮಾಯುನ್ ಗೆ ರಕ್ಷೆ ಕಳುಹಿಸಿ, ರಕ್ಷಣೆ ಯಾಚಿಸಿದಳಂತೆ. ಹುಮಾಯುನ್. ಬಹಾದುರ್ ಷಾ ನನ್ನು ಯುದ್ಧದಲ್ಲಿ ಮಣಿಸಿ, ಕರ್ಣಾವತಿ ಕಳೆದುಕೊಂಡ ರಾಜ್ಯವನ್ನು ಅವಳ ಮಗನಿಗೆ ದೊರಕುವಂತೆ ಮಾಡಿದನಂತೆ. ಹಾಗೆಯೇ ಯಮರಾಜನ ತಂಗಿ ಯಮುನಾ ಅಮರಳಾಗಿ ಉಳಿಯಲು ಬಹುತೇಕ ಈ ರಕ್ಷೆಯೇ ಕಾರಣ. ಯಮರಾಜನೂ ಇದನ್ನೇ ಹೇಳಿದ್ದಾನೆ. ಭೂಲೋಕದಲ್ಲಿ ಯಾರು ತಮ್ಮ ತಂಗಿಗೆ ರಕ್ಷೆ ನೀಡುತ್ತಾರೋ ಅವರು ಅಮರರಾಗಿ ಉಳಿಯುತ್ತಾರೆಂದು, ಹಾಗಾದರೆ ಸೋದರಿ ಕಟ್ಟುವ ರಾಖಿ ನಿಮ್ಮ ಶ್ರೇಯಸ್ಸಿಗಾಗಿಯೂ ಹೌದು. ನಿಮ್ಮಿಂದ ಅವಳಿಗೆ ಸಿಗುವ ಶ್ರೀರಕ್ಷೆಗಾಗಿಯೂ ಹೌದು. 

ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ. ಸೋದರ ಸಂಬಂಧವನ್ನು ಎತ್ತಿಹಿಡಿಯುವುದು ಈ ಹಬ್ಬದ ವೈಶಿಷ್ಟ್ಯ. ಎಲ್ಲಕಿಂತಲೂ ಮಿಗಿಲಾದ ಈ ಸಂಬಂಧವನ್ನು ಸೋದರಿಯರು  ಒಡಹುಟ್ಟಿದ ಅಣ್ಣಂದರಿಗೆ, ತಮ್ಮಂದರಿಗೆ ಕಡ್ಡಾಯವಾಗಿ ಕಟ್ಟಲೇಬೇಕು ಎಂದು ಎಲ್ಲೂ ಶಾಸ್ತ್ರವಿಲ್ಲದಿದ್ದರೂ, ತಮ್ಮ ಪ್ರೀತಿ ವಿಶ್ವಾಸವನ್ನು ತನ್ಮೂಲಕ ವ್ಯಕ್ತಪಡಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಸೋದರಿಯರಿಗೆ ಸೋದರನು ಒಂದು ಪುಟ್ಟ ಕಾಣಿಕೆಯನ್ನು ಕೊಡುತ್ತಾನೆ. ರಕ್ಷಾಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ದೂರದಲ್ಲಿರುವ ಕುಟುಂಬ ಸದಸ್ಯರನ್ನು ಹತ್ತಿರಕ್ಕೆ ತರುತ್ತದೆ. 

ರಾಖಿಯನ್ನು ಕಟ್ಟುವ ವಿಧಿ ಮತ್ತು ಆಧ್ಯಾತ್ಮಿಕ ರಹಸ್ಯ:

ಸಹೋದರಿ ತನ್ನ ಸಹೋದರನ ಬಲಗೈಗೆ ರಾಖಿಯನ್ನು ಕಟ್ಟಿ, ಹಣೆಗೆ ತಿಲಕವನ್ನಿಟ್ಟು ಸಿಹಿ ತಿನಿಸಿ ಶುಭ ಹಾರೈಸಿ ಪ್ರೀತಿಯ ಉಡುಗೊರೆ ಪಡೆದುಕೊಳ್ಳುವಳು. ಇಲ್ಲಿ ರಾಖಿ ಪವಿತ್ರತೆಯ ಕಂಕಣ ಕಟ್ಟಿಕೊಳ್ಳುವ ಸಂಕೇತವಾಗಿದೆ. ತಿಲಕ ನಮ್ಮ ಹಣೆಯ ಮಧ್ಯದಲ್ಲಿ ಅಜರ-ಅಮರ ಆತ್ಮನಿರುವ ಸಂಕೇತವಾಗಿದೆ. ಸಿಹಿ ನಮ್ಮ ಭಾವನೆ, ವಿಚಾರ, ದೃಷ್ಟಿ, ಮಾತು, ಕರ್ಮ, ಸಂಬಂಧ, ವ್ಯವಹಾರಗಳು ಮಧುರ ಮತ್ತು ಪವಿತ್ರ ಪಾವನವಾಗಿರಲೆಂಬುದನ್ನು ತಿಳಿಸುತ್ತದೆ. ರಾಖಿ ಕಟ್ಟಿಸಿಕೊಂಡ ಸಹೋದರ ಸಾಮಾನ್ಯವಾಗಿ ಏನಾದರೂ ಉಡುಗೊರೆ ಕೊಡುವುದು ರೂಢಿ. ಹಣ ಅಥವಾ ವಸ್ತುವಿನ ಉಡುಗೊರೆ ಕೊಡುವುದು ಸುಲಭ. ಆದರೆ, ನಿಜವಾದ ಉಡುಗೊರೆ ನಮ್ಮಲ್ಲಿನ ವಿಷಯ ವಿಕಾರಗಳನ್ನು ಪರಮಾತ್ಮನಿಗೆ ಈ ಪವಿತ್ರ ಪಾವನ ಪರ್ವದಲ್ಲಿ ದಾನವಾಗಿ ಕೊಡುವುದು.

ಈ ಹಬ್ಬವನ್ನು ಆಧ್ಯಾತ್ಮಿಕವಾಗಿ ನೋಡಿದರೆ, ಈ ಹಬ್ಬವು ನಡೆ, ನುಡಿ ಮತ್ತು ಕ್ರಿಯೆಗಳಲ್ಲಿ ಪರಿಶುದ್ಧತೆಯನ್ನು ಹೊಂದುವಂತೆ ಸೂಚಿಸುತ್ತದೆ. ಬಲಗೈಗೆ ಕಟ್ಟಿಕೊಳ್ಳುವ ಈ ಪವಿತ್ರ ದಾರವಾದ ರಾಖಿಯು ಪ್ರತಿಯೊಬ್ಬರಿಗೂ ಪ್ರಪಂಚದ ಐಹಿಕ ಸುಖ-ಭೋಗಗಳಿಗೆ ಮರುಳಾಗದಿರುವಂತೆ ನೆನಪಿಸುತ್ತ ಇರುತ್ತದೆ. ಇನ್ನು ರಾಖಿಯನ್ನು ಕಟ್ಟುವ ಸೋದರಿಯು ತನ್ನ ಸೋದರನಲ್ಲಿ ತನ್ನ ಧಾರ್ಮಿಕ ನಂಬಿಕೆ ಮತ್ತು ಹಂಬಲಗಳನ್ನು ಕಾಣುತ್ತಾಳೆ. ಸದಾ ಆತನ ಶ್ರೇಯಸ್ಸನ್ನು ಕೋರಿ ಕಟ್ಟುವ ಈ ರಾಖಿಯು ಒಂದು ನಿಷ್ಕಲ್ಮಶವಾದ ಪ್ರೀತಿಯ ಧ್ಯೋತಕವಾಗಿ ನಿಲ್ಲುತ್ತದೆ. ಈ ಬಂಧನ ಆಕೆಯ ಭರವಸೆ, ನಂಬಿಕೆ ಹಾಗು ಶಕ್ತಿಯನ್ನು ಸಹೋದರನಿಗೆ ನೆನಪು ಮಾಡಿಕೊಡುತ್ತದೆ. 

ನಾವೆಲ್ಲರೂ ರಕ್ಷಾ ಬಂಧನದ ಸತ್ಯಾರ್ಥವನ್ನು, ಆಧ್ಯಾತ್ಮಿಕ ಹಿನ್ನೆಲೆಯನ್ನು ತಿಳಿದು ಯತಾರ್ಥ ರೀತಿಯಲ್ಲಿ ಆಚರಿಸುತ್ತ ಸಂಪೂರ್ಣ ಸ್ವಾತಂತ್ರ್ಯದ, ಸತ್ಯವಾದ ಬದುಕನ್ನು ನಡೆಸುತ್ತ ಸುಖ-ಶಾಂತಿಯ ಜಗತ್ತನ್ನು ಪುನರ್ ಸ್ಥಾಪಿಸುವ ಭಗವಂತನ ಮಹಾಕಾರ್ಯದಲ್ಲಿ ತೊಡಗೋಣ. ಸರ್ವರಿಗೂ ರಕ್ಷಾ ಬಂಧನದ ಶುಭಾಶಯಗಳು.

ಲೇಖಕರು: ✍️.... ಕಾನತ್ತಿಲ್‌ ರಾಣಿಅರುಣ್

                     (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,