Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೇರಳದಲ್ಲಿ ಸೋಂಕು ಕಡಿಮೆಯಾಗುವವರೆಗೆ ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕೊಡದಂತೆ ಪ್ರವಾಸೋದ್ಯಮ ವಿರೋಧಿ ಒಕ್ಕೂಟ ಒತ್ತಾಯ.

ಕೇರಳದಲ್ಲಿ ಸೋಂಕು ಕಡಿಮೆಯಾಗುವವರೆಗೆ ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕೊಡದಂತೆ ಪ್ರವಾಸೋದ್ಯಮ ವಿರೋಧಿ ಒಕ್ಕೂಟ ಒತ್ತಾಯ.

●ವಿಕೆಂಡ್ ಕರ್ಫ್ಯೂ ಕೇವಲ ಸ್ಥಳೀಯರಿಗೆ ಮಾತ್ರವಲ್ಲ ಪ್ರವಾಸೋದ್ಯಮ ಬಂದ್ ಮಾಡಿ.


ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನ ಅಟ್ಟಹಾಸ ಮುಂದುವರಿದಿದ್ದು ಕೊಡಗಿನೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಅಪಾಯವಿದ್ದು ಕೇರಳದಲ್ಲಿ ಕೊರೋನ ಸೋಂಕು ಕಡಿಮೆಯಾಗುವವರೆಗೆ ಕೊಡಗಿನ ಎಲ್ಲಾ ಗಡಿಗಳನ್ನು ಬಂದ್ ಮಾಡುವ ಮೂಲಕ ಪ್ರವಾಸಿಗರಿಗೆ ಹಾಗೂ ಪ್ರವಾಸೋದ್ಯಮಕ್ಕೆ ಅವಕಾಶ ಕೊಡಬಾರದು ಎಂದು ವಿವಿಧ ಜಾತಿ ಜನಾಂಗದ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಮತ್ತು ಮೂಲ ನಿವಾಸಿಗಳ ಸಭೆಯಲ್ಲಿ ಒಕ್ಕೊರಳಿನ ತಿರ್ಮಾನ ಕೈಗೊಳ್ಳಲಾಯಿತು. 

ಹಾಗೇ ವಿಕೆಂಡ್ ಕರ್ಫ್ಯೂ ನೆಪದಲ್ಲಿ ಸ್ಥಳೀಯರನ್ನು ಮನೆಯೊಳಗೆ ಕೂಡಿ ಹಾಕಿ ಪ್ರವಾಸಿಗರಿಗೆ ರತ್ನ ಕಂಬಳಿ ಹಾಸಲಾಗಿರುವುದರ ಬಗ್ಗೆ ಸಭೆ ಖಂಡಿಸಿ, ಕರ್ಫ್ಯೂ ಎನ್ನುವುದು ಪಾಪದ ಅಂಗಡಿ ಮುಗ್ಗಟ್ಟುಗಳಿಗೆ ಹೊರತು ಯಾವುದೇ ಪ್ರವಾಸಿ ಚಟುವಟಿಕೆಗಳಿಗೆ ಇಲ್ಲ ಎಂಬಂತಾಗಿದೆ. ಕರ್ಫ್ಯೂ ಸಮಯದಲ್ಲಿ ಜಿಲ್ಲೆಯಲ್ಲಿ ಯಾವುದೇ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು. ಶುಕ್ರವಾರದಿಂದಲೇ ಎಲ್ಲಾ ಹೋಂಸ್ಟೇ ರೆಸಾರ್ಟ್ ಸೇರಿದಂತೆ ಪ್ರವಾಸೋದ್ಯಮ ಚಟುವಟಿಕೆಗಳು ಸಂಪೂರ್ಣ ಬಂದ್ ಮಾಡಬೇಕು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟವರು ಯಾವುದೇ ಒತ್ತಡಕ್ಕೂ ಮಣಿಯಬಾರದು. ಇದಕ್ಕೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟವರು ಸ್ಪಂದಿಸದಿದ್ದರೆ ಮುಂದಿನ 15 ದಿನದಲ್ಲಿ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲಾ ಜಾತಿ ಜನಾಂಗವನ್ನು ಸೇರಿಸಿ ಸಭೆ ನಡೆಸಿ ಪಕ್ಷಬೇಧ ಮರೆತು ಪ್ರವಾಸೋದ್ಯಮ ಹಾಗೂ ಜಿಲ್ಲಾಡಳಿತ ವಿರುದ್ಧವೇ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಸಭೆ ತಿರ್ಮಾನಿಸಿತು.

ಸೋಮವಾರ ಪೊನ್ನಂಪೇಟೆಯಲ್ಲಿ ವಿವಿಧ ಜಾತಿ ಜನಾಂಗ ಸೇರಿದಂತೆ, ಸ್ಥಳೀಯ ಮೂಲ ನಿವಾಸಿಗಳು ಹಾಗೂ ಅನಾದಿಕಾಲದಿಂದಲೂ ಜಿಲ್ಲೆಯಲ್ಲಿ ಬದುಕು ಕಟ್ಟಿಕೊಂಡ ಕೊಡಗಿನ ಮೇಲೆ ಅಭಿಮಾನವಿರುವ ಸಮಾನ ಮನಸ್ಸಿನ ಒಂದಷ್ಟು ಮಂದಿ ಸೇರಿ  ಪ್ರವಾಸೋದ್ಯಮದಿಂದ ಕೊಡಗನ್ನು ರಕ್ಷಿಸಿ ಎಂಬ ವಾಕ್ಯದೊಂದಿಗೆ "ಸೇವ್ ಕೊಡಗು ಫ್ರಮ್ ಟೂರಿಸಂ" ಎಂಬ ಪ್ರವಾಸೋದ್ಯಮ ವಿರೋಧಿ ಒಕ್ಕೂಟ ವತಿಯಿಂದ ತುರ್ತು ಸಭೆ ನಡೆದು ಪ್ರವಾಸೋದ್ಯಮ ವಿರುದ್ಧ ಹರಿಹಾಯ್ದರು. 

ಸಭೆಯಲ್ಲಿ ಕೊಡಗಿನ ಮೂಲ ನಿವಾಸಿಗಳು ಸೇರಿದಂತೆ, ವಿವಿಧ ಜಾತಿ ಜನಾಂಗದ ಪ್ರತಿನಿಧಿಗಳು ಹಾಗೂ ಕೊಡಗಿನ ಬಗ್ಗೆ ಕಾಳಜಿ ಇರುವ ಹಲವಾರು ಸಮಾನ ಮನಸ್ಕರು ಭಾಗಿಯಾಗಿ ಬೇಕಾಬಿಟ್ಟಿಯಾಗಿ ನಡೆಯುತ್ತಿರುವ ಕೊಡಗಿನ ಪ್ರವಾಸೋದ್ಯಮ ಕೊಡಗಿಗೆ ಕಪ್ಪುಚುಕ್ಕೆಯಾಗಿದ್ದು, ಕೇರಳದಲ್ಲಿ ಸೋಂಕು ಕಡಿಮೆಯಾಗುವವರೆಗೂ  ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಸಂಪೂರ್ಣ ಕಡಿವಾಣ ಹಾಕಬೇಕು. ಕರ್ಫ್ಯೂ ಇದ್ದರು ಕೂಡ ಕೊಡಗಿಗೆ ಪ್ರವಾಸಿಗರ ದಂಡೂ ಪ್ರವಾಹದಂತೆ ಹರಿದುಬರುತ್ತಿರುವ ಬಗ್ಗೆ ಅಸಮದಾನದ ಮಾತು ಕೇಳಿಬಂತು. ಹಾಗೂ ಯಾವುದೇ ತಪಾಸಣೆ ಇಲ್ಲದೆ ಕೊವೀಡ್ ನಿಯಮವನ್ನು ಪಾಲಿಸದೆ ಹಾಗೂ ಯಾವುದೇ ದಾಖಲೆಗಳಿಲ್ಲದೆ ಕೊಡಗಿಗೆ ಬರುತ್ತಿರುವ ಅಸ್ಸಾಮಿ ಕಾರ್ಮಿಕರು ಎಂದು ಹೇಳಲಾಗುವ ಹೊರ ರಾಜ್ಯದಿಂದ ಬರುತ್ತಿರುವ ವಲಸಿ ಕಾರ್ಮಿಕರ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಭೆಯಲ್ಲಿ ಮಾತು ಕೇಳಿಬಂತು.

ಕರ್ನಾಟಕದ ಕಾಶ್ಮೀರ, ಭಾರತದ ಸ್ವಿಜರ್ಲೆಂಡ್ ಎಂಬಿತ್ಯಾದಿ ಹೊಗಳಿಕೆಗೆ ಹೆಸರಾದ ಪ್ರಕೃತಿ ಸೌಂದರ್ಯದ ಕೊಡಗು ಜಿಲ್ಲೆ ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ, ಇಲ್ಲಿನ ಪದ್ದತಿ ಸಂಸ್ಕೃತಿ, ಆಚಾರ ವಿಚಾರ, ಉಡುಗೆ ತೊಡುಗೆ ಸೇರಿದಂತೆ ಆಹಾರ ಪದ್ದತಿ ಕೂಡ ವಿಭಿನ್ನ ಹಾಗೂ ವಿಶೇಷ. ಕೊಡಗು ಕೃಷಿ ಪ್ರಧಾನ ಜಿಲ್ಲೆ, ಕೃಷಿಯೇ ಕೊಡಗಿನ ಮೂಲನಿವಾಸಿಗಳ ಬದುಕು. ಅದು ಭತ್ತದ ಕೃಷಿ ಇರಲಿ ಅಥವಾ ಕಾಫಿ, ಕರಿಮೆಣಸು, ಏಲಕ್ಕಿ, ಕಿತ್ತಳೆ, ತೆಂಗು, ಅಡಿ, ಬಾಳೆ ಸೇರಿದಂತೆ ಇನ್ನಿತರ ಕೃಷಿಯಿಂದ ಬದುಕು ಕಟ್ಟಿಕೊಂಡವರು ಕೊಡಗಿನ ಮಂದಿ. ಕೊಡಗಿನಲ್ಲಿ ನಡೆಯುವ ವ್ಯಾಪಾರ ವ್ಯವಹಾರದಿಂದ ಹಿಡಿದು ಜನರ ಬದುಕು ಕೂಡ ಶೇಕಡಾ 90% ಕೃಷಿಯನ್ನು ಅವಲಂಬಿಸಿಯೇ ಸಾಗುತ್ತಿದೆ. ಆದರೆ ಕೇವಲ ಶೇಕಡಾ 10% ಪ್ರವಾಸೋದ್ಯಮ ಅವಲಂಬಿತರಿಂದ ಶೇಕಡಾ 90% ಮಂದಿಯ ಬದುಕು ಸಂಕಷ್ಟದಲ್ಲಿದೆ ಎಂದರೆ ತಪ್ಪಲ್ಲವೆ?. ಕೊವೀಡ್-19 ಎಂಬ ಮಹಾಮಾರಿ ಇಲ್ಲಿನ ಕೃಷಿ ಕುಟುಂಬದಿಂದ ಹಿಡಿದು ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಹಾಗೂ ಜನ ಸಾಮಾನ್ಯರ ಬದುಕನ್ನು ಅತಂತ್ರ ಮಾಡಿದೆ. ಕೊಡಗು ಕಳೆದ ಹಲವು ತಿಂಗಳಿಂದ ಲಾಕ್ ಡೌನ್ ಶಿಕ್ಷೆಯನ್ನು ಅನುಭವಿಸುತ್ತಿದ್ದು ಸದ್ಯಕ್ಕೆ ಇದು ಮುಗಿಯುವಂತೆ ಕಾಣುತ್ತಿಲ್ಲ. ಕೊವೀಡ್-19 ಎರಡನೇ ಅಲೆ ಕೊಡಗಿನ ಜನರ ಬದುಕಿನ ಮೇಲೆ ಬರೆ ಎಳೆದದ್ದು ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾವು ನೋವುಗಳನ್ನು ಅನುಭವಿಸಬೇಕಾಯಿತು. 

ಇದೀಗ ನೆರೆಯ ಕೇರಳ ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಮೂರನೇ ಅಲೆಯ ಅಬ್ಬರ ಅಧಿಕವಾಗಿದೆ. ಕೊಡಗಿನೊಂದಿಗೆ ಒಂದೇ ಗಡಿಯನ್ನು ಹಂಚಿಕೊಂಡಿರುವ ಕೇರಳ ರಾಜ್ಯದಲ್ಲಿ ದಿನೇದಿನೆ ಕೊವೀಡ್-19 ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಕೇರಳದೊಂದಿಗಿನ ನಂಟು ಕೊಡಗಿನವರಿಗೆ ಅಧಿಕವಾಗಿದ್ದು ಸೋಂಕು ಇಲ್ಲಿಯೂ ಹರಡುವ ಭಯ ನಮ್ಮನ್ನು ಕಾಡುತ್ತಿದೆ ಹಾಗೂ ಲಾಕ್ ಡೌನ್  ಶಿಕ್ಷೆಯಿಂದ ಸ್ಥಳೀಯ ವ್ಯಾಪಾರಿಗಳ ಬದುಕು ಕೂಡ ಅತಂತ್ರವಾಗಿದ್ದು ಇವರಲ್ಲಿ ಶೇಕಡಾ 99% ವ್ಯಾಪಾರಸ್ಥರು ಸ್ಥಳೀಯರ ವ್ಯಾಪಾರವನ್ನೆ ನಂಬಿ ಬದುಕು ಸಾಗಿಸುತ್ತಿದ್ದಾರೆ ಹೊರತು ಯಾರು ಪ್ರವಾಸಿಗರನ್ನು ನಂಬಿ ಬದುಕು ಸಾಗಿಸುತ್ತಿಲ್ಲ. ಅತಿಯಾದ ಪ್ರವಾಸೋದ್ಯಮ ಕೊಡಗಿನ ಪರಿಸರಕ್ಕೆ ಹಾಗೂ ಕೊಡಗಿನ ಶ್ರೀಮಂತ ಸಂಸ್ಕೃತಿಗೆ ಮಾರಕವಾಗಿದೆ ಎಲ್ಲಾವು ಒಂದು ಇತಿಮಿತಿಯೊಳಗಿದ್ದರೆ ಚೆನ್ನ ಅದು ಮಿತಿಮೀರಿದರೆ ನಾವು ಕೂಡ ಹೋರಾಟದ ಹಾದಿ ಹಿಡಿಯಬೇಕಾಗಿರುವುದು ಅನಿವಾರ್ಯ ಎಂಬ ಮಾತು ಸಭೆಯಲ್ಲಿ ಕೇಳಿಬಂತು. 

ಈಗಾಗಲೇ ವಿಧ್ಯಾರ್ಥಿಗಳ ಭವಿಷ್ಯ ಕೂಡ ಅತಂತ್ರವಾಗಿದ್ದು, ಮುಂದಿನ ದಿನಗಳಲ್ಲಿ ಶಾಲೆ ಆರಂಭವಾದರೂ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಲು ಪೋಷಕರು ಯೋಚನೆ ಮಾಡಬೇಕಾದಂತಹ ಪರಿಸ್ಥಿತಿ ಈಗ ಇದೆ. ಸದ್ಯದ ಮಟ್ಟಿಗೆ ಪ್ರವಾಸಿಗರಿಗೆ ಸಂಪೂರ್ಣ ಕಡಿವಾಣ ಹಾಕಿ ಸ್ಥಳೀಯ ವ್ಯಾಪಾರಸ್ಥರಿಗೆ ಮುಕ್ತವಾಗಿ ವ್ಯಾಪಾರ ವಹಿವಾಟು ಮಾಡಲು ಹಾಗೂ ಮುಂದಿನ ದಿನಗಳಲ್ಲಿ ವಿಧ್ಯಾರ್ಥಿಗಳಿಗೆ ನಿರ್ಭಯದಿಂದ ಶಾಲೆಗೆ ತೆರಳಲು ಅವಕಾಶ ಮಾಡಿಕೊಡಬೇಕಿದೆ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. 

ಒಂದೆರಡು ತಿಂಗಳು ಹೊರಗಿನ ಪ್ರವಾಸಿಗರಿಗೆ ಕೊಡಗಿನ ಪ್ರವಾಸಿ ತಾಣಗಳ ಬಾಗಿಲನ್ನು ಮುಚ್ಚುವುದು ಉತ್ತಮ ಎನ್ನುವುದು ಸಭೆಯ ಅನಿಸಿಕೆಯ ಜೊತೆಗೆ ನೆರೆಯ ರಾಜ್ಯ ಕೇರಳದಲ್ಲಿ ಸೋಂಕು ಕಡಿಮೆಯಾಗುವವರೆಗೂ ಕೊಡಗಿನ ಹೋಂಸ್ಟೇ, ರೆಸಾರ್ಟ್ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು. ವಿಕೆಂಡ್ ಕರ್ಫ್ಯೂವನ್ನು ಪ್ರವಾಸಿ ತಾಣಗಳ ಮೇಲೆ ಹಾಗೂ ಪ್ರವಾಸಿಗರ ಮೇಲೆ ಹೇರಬೇಕಿದೆ ಹೊರತು ಸ್ಥಳೀಯರ ಮೇಲೆ ಅಲ್ಲಾ. 

ಹಾಗೇ ಕೊಡಗಿನ ಧಾರ್ಮಿಕ ಕ್ಷೇತ್ರಗಳು ಕೇವಲ ಧಾರ್ಮಿಕ ಕ್ಷೇತ್ರಗಳಾಗಿಯೇ ಇರಬೇಕು ಹೊರತು ಇದನ್ನು ಪ್ರವಾಸೋದ್ಯಮ ಪಟ್ಟಿಯಿಂದ ಹೊರಗಿಡಬೇಕು ಹಾಗೂ ದೇವಸ್ಥಾನಗಳಲ್ಲಿ ಕಠಿಣ ವಸ್ತ್ರ ಸಂಹಿತೆ ಜಾರಿಯಾಗಬೇಕು ಎಂಬ ಒತ್ತಾಯದೊಂದಿಗೆ, ಕಳೆದ ಹಲವು ದಿನಗಳಿಂದ ಕೊಡಗಿನ ಗಡಿಯೊಳಗೆ ಅಸ್ಸಾಮಿ ಕಾರ್ಮಿಕರು ಎಂದು ಭಯೋತ್ಪಾದನ ಹಿನ್ನಲೆಯುಳ್ಳ ಹಾಗೂ ಅಪರಾಧಿ ಹಿನ್ನಲೆ ಉಳ್ಳ ಬಾಂಗ್ಲಾ, ಅಫಘಾನಿಸ್ಥಾನ ಅಥವಾ ಪಾಕಿಸ್ತಾನಿಯರು ಕೂಡ ನುಸುಳಿರುವ ಸಾದ್ಯತೆ ಅಧಿಕವಾಗಿದ್ದು ಇವರೊಂದಿಗೆ ಕೊರೋನ ಸೋಂಕನ್ನು ಕೂಡ ಹೊತ್ತು ತಂದಿರುವ ಸಾದ್ಯತೆ ಹೆಚ್ಚಾಗಿದೆ. ಕಾರ್ಮಿಕರ ಸಮಸ್ಯೆ ಇರುವುದು ನಿಜ, ಹಾಗಂತ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವುದು ಸರಿಯಲ್ಲಾ. 

ಕೂಡಲೇ ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಅಗತ್ಯವಿದ್ದು 72 ಗಂಟೆಯೊಳಗಿನ ಸೋಂಕು ತಪಾಸಣಾ ವರದಿಯೊಂದಿಗೆ ಅವರ ಸಂಪೂರ್ಣ ದಾಖಲೆಯನ್ನು ಪರಿಶೀಲಿಸಿ ದಾಖಲೆಯ ಪ್ರತಿಗಳನ್ನು ಪಡೆದು ಜೊತೆಗೆ ಅವರನ್ನು ಕರೆದುಕೊಂಡು ಹೋಗುವ ಮಾಲಿಕನ ಒಪ್ಪಿಗೆ ಪತ್ರವನ್ನು ಪಡೆಯಬೇಕಿದೆ ಈ ಮೂಲಕ ಮುಂದೆ ಒದಗಬಹುದಾದ ಅನಾಹುತವನ್ನು ತಪ್ಪಿಸಬೇಕಿದೆ. ಈಗಾಗಲೇ ಜಿಲ್ಲೆಯ ವಿವಿಧೆಡೆ ಕಾಫಿ ತೋಟಗಳಲ್ಲಿ ಇವರು ಬೀಡುಬಿಟ್ಟಿದ್ದು ಕೂಡಲೆ ಆಯಾಯ ವ್ಯಾಪ್ತಿಯ ಪೊಲೀಸ್ ಠಾಣೆಯ ಮೂಲಕ ಇವರ ದಾಖಲೆಯನ್ನು ಕ್ರೋಢೀಕರಿಸಿ ಇವರ ಭಾವಚಿತ್ರ ಹಾಗೂ ಅವರ ಗಾಯದ ಕಲೆಗಳ ಗುರುತನ್ನು ಸಂಗ್ರಹಿಸಬೇಕಿದೆ ಹಾಗೂ ದಾಖಲೆಯನ್ನು ಆಯಾಯ ಜಿಲ್ಲೆ ರಾಜ್ಯದ ಮೂಲಕ ಪರಿಶೀಲಿಸಬೇಕಿದೆ. ಈಗಾಗಲೇ ಹಲವೆಡೆ ಇವರಿಂದ ಅಪರಾಧಗಳು ನಡೆದಿರುವ ಸಾದ್ಯತೆ ಇದ್ದು ಮುಂದೆ ನಡೆಯಬಹುದಾದ ಅನಾಹುತಗಳಿಗೆ ಅವಕಾಶ ಕೊಡಬಾರದು ಹಾಗೂ ಇವರಿಗೆ ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಆಧಾರ್ ಕಾರ್ಡ್ ಅಥವಾ ಮತದಾನದ ಗುರುತಿನ ಚೀಟಿ ನೀಡಬಾರದು. ನೀಡಿದವರ ಗುರುತಿನ ಚೀಟಿ ಅಥವಾ ಇತರ ದಾಖಲೆಯನ್ನು ಅಮಾನತ್ತುವಿನಲ್ಲಿಡಬೇಕು ಎಂದು ಸಭೆಯಲ್ಲಿ ಒಕ್ಕೊರಳಿನ ತಿರ್ಮಾನ ಕೈಗೊಳ್ಳಲಾಯಿತು. ಈ ಎರಡು ವಿಷಯದ ಕುರಿತಾಗಿ ಸಭೆ ನಡೆದು, ಇದನ್ನು ಸರಿಪಡಿಸಲು ಮುಂದಿನ ಹದಿನೈದು ದಿವಸದ ಕಾಲಾವಕಾಶ ನೀಡಿದ್ದು. ಪ್ರವಾಸೋದ್ಯಮ ವಿರುದ್ಧ ಹಾಗೂ ಅಸ್ಸಾಮಿ ಕಾರ್ಮಿಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಸೆಪ್ಟೆಂಬರ್ 16ರಂದು ನಡೆಯುವ ಮತ್ತೊಂದು ಸಭೆಯಲ್ಲಿ ಪ್ರತಿಭಟನೆಯ ರೂಪುರೇಷೆಗಳನ್ನು ಹಾಕಲಾಗುತ್ತದೆ ಎಂದು ಸಭೆ ಎಚ್ಚರಿಸಿದೆ.

ಸಭೆಯಲ್ಲಿ ಪ್ರಮುಖರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ, ಸಣ್ಣುವಂಡ ದರ್ಶನ್ ಕಾವೇರಪ್ಪ, ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಅಪಾಡಂಡ ಧನು ದೇವಯ್ಯ, ಕಟ್ಟೇಂಗಡ ಸುನಿಲ್ ಚೆಂಗಪ್ಪ, ಚೊಟ್ಟೆಕ್'ಮಾಡ ರಾಜೀವ್ ಬೋಪಯ್ಯ, ಅನ್ವೇಶ್ ಕೇಕುಣ್ಣಾಯ, ಮಡಿಕೇರಿಯ ಶ್ರೀನಿವಾಸ್ ರೈ, ಕೊಟ್ಟಕೇರಿಯನ ಅಜಿತ್, ಮರಗೋಡುವಿನ ಪ್ರದೀಪ್, ಮಡಿಕೇರಿಯ ಉಮೇಶ್ ಕುಮಾರ್, ಮಂಡಂಗಡ ಆಶೋಕ್, ಮಲ್ಲಪನೆರ ವಿನು ಚಿಣ್ಣಪ್ಪ, ಮಿದೇರೀರ ಕವಿತಾ ರಾಮು, ಸುಭೆದಾರ್ ಮೇಜರ್ ಬಿದ್ದಂಡ ನಾಣಿ ದೇವಯ್ಯ, ಮಂಜು ಮಾಯಮುಡಿ, ಎಂ ಎ ಶಾನ್ ಬೋಪಯ್ಯ,  ಚಿರಿಯಪಂಡ ನಾಣಯ್ಯ, ಅಣ್ಣೀರ ಹರೀಶ್ ಮಾದಪ್ಪ, ಕೊಟೇರ ಉದಯ ಪೂಣಚ್ಚ, ಕಡೇಮಾಡ ವಿನೋದ್, ಪುಳ್ಳಂಗಡ ಕೀರ್ತನ್, ಅಪ್ಪಚ್ಚೀರ ಕಮಲ, ಕರ್ನಲ್ ಚೆಪ್ಪುಡೀರ ಮುತ್ತಣ್ಣ, ಕಳ್ಳೇಂಗಡ ಹರೀಶ್, ಚಿರಿಯಪಂಡ ರುಕ್ಮಿಣಿ ನಾಣಯ್ಯ, ಕೊಳೇರ ಬೋಪಣ್ಣ, ಚಟ್ಟಂಡ ಸುನಿಲ್ ಸೋಮಣ್ಣ, ಅಪ್ಪಂಡೇರಂಡ ದೇವಯ್ಯ, ಪಣಿಯರವರ ಬಿ ಬೆಳ್ಳಿ, ಪಣಿಯರವರ ಎಸ್ ಮುತ್ತ, ಮದ್ರೀರ ಗಿರೀಶ್ ಗಣಪತಿ, ನೂರೇರ ದೇವಯ್ಯ,   ಸೇರಿದಂತೆ ಇತರರು ಉಪಸ್ಥಿತರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,