“ಮಣ್ಣುಂಡ ಬಾಯ ತೆರೆದು, ಬ್ರಹ್ಮಾಂಡವನೆ ತೋರಿದ ಕೃಷ್ಣ; ನಿನ್ನ ಲೀಲೆ ಪಾಡಲು ಮತಿಯು ಸಾಲದು…”
ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಶ್ರಾವಣ ಮಾಸದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ 8ನೇ ಮಗನಾಗಿ ಜನಿಸಿದನು. ಮಥುರ (ಈಗಿನ ಉತ್ತರಪ್ರದೇಶದ ಮಥುರ ಜಿಲ್ಲೆ) ಯಾದವ ಕುಲದ ರಾಜಧಾನಿಯಾಗಿತ್ತು.
ಸಿಂಹ ಮಾಸದ ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರ ಇಲ್ಲದಿದ್ದಾಗ ಅದು ”ಶ್ರೀ ಕೃಷ್ಣಜನ್ಮಾಷ್ಟಮಿ.” ಗೀತಾಚಾರ್ಯ ಶ್ರೀಕೃಷ್ಣ ಅವತರಿಸಿದ್ದು, ಸಿಂಹ ಮಾಸದ ಅಷ್ಟಮಿ ತಿಥಿಯಂದು, ರೋಹಿಣಿ ನಕ್ಷತ್ರ ಕೂಡಿ ಬಂದಾಗ. ಇವು ಮೂರು ಕೂಡಿ ಬರುವುದನ್ನು ”ಶ್ರೀ ಕೃಷ್ಣ ಜಯಂತಿ” ಎನ್ನುತ್ತೇವೆ.(ಮಹಾಭಾರತ) ಇಂಥ ಅಪೂರ್ವ ಯೋಗ ಸೋಮವಾರ ಅಥವಾ ಬುಧವಾರ ಘಟಿಸಿದರೆ ಅದು ಬಹಳ ಶ್ರೇಷ್ಠ.(ಪದ್ಮ ಪುರಾಣ).
ಶ್ರಾವಣ ಮಾಸದ ಬಹುಳ ಅಷ್ಟಮಿಯ೦ದು ಹಿ೦ದೂಗಳು ಭಕ್ತಿಯಿ೦ದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಇದೊ೦ದು ಜನಪ್ರಿಯವೂ – ವರ್ಣರ೦ಜಿತವೂ ಆದ ಹಬ್ಬ. ಭಗವಾನ್ ಮಹಾ ವಿಷ್ಣುವಿನ ಎ೦ಟನೆಯ ಅವತಾರವಾದ ಶ್ರೀ ಕೃಷ್ಣನು ಜನಿಸಿದ ದಿನವಾದ್ದರಿ೦ದ ಈ ದಿನವನ್ನು ಜನ್ಮಾಷ್ಟಮಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಎ೦ದು ಕರೆಯಲಾಗುತ್ತದೆ. ಅ೦ತೆಯೇ ಮಧ್ಯರಾತ್ರಿಯಲ್ಲಿ ಶ್ರೀ ಕೃಷ್ಣ ದೇವಾಲಯಗಳಲ್ಲಿ ಹಾಗೂ ಇನ್ನತರ ದೇವಾಲಯಗಳಲ್ಲಿ ಶ್ರೀ ಕೃಷ್ಣನ ಜನನದ ಅ೦ಗವಾಗಿ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕ ಹಾಗೂ ಧಾರ್ಮಿಕ ಪ್ರವಚನಗಳು ಜರುಗುತ್ತವೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವ:
ಪರಮಾತ್ಮನು ಗೀತೆಯಲ್ಲಿ ಹೇಳುತ್ತಾನೆ,
ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮ ಸ್ಯ ತದಾತ್ಮಾನಂ ಸೃಜಾಮ್ಯಹಮ್||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕ ತಾಮ್|
ಧರ್ಮಸಂಸ್ಥಾಪನಾಥಾಯ ಸಂಭವಾಮಿ ಯುಗೇ ಯುಗೇ||||
(ಇದರ ಅರ್ಥ, ಯಾವಾಗ ಮತ್ತು ಎಲ್ಲೆಲ್ಲಿ ಧರ್ಮದಲ್ಲಿ ಏರುಪೇರುಗಳು ವ್ಯಕ್ತಗೊಂಡು, ಅಧರ್ಮವು ಮೆರೆಯತೊಡಗುತ್ತದೆಯೋ (ಪ್ರತಿ ಯುಗದಲ್ಲೂ ಪುನಾರಾವರ್ತಿತವಾಗುವ ವಿದ್ಯಮಾನವಿದು), ಆಗ ಶಿಷ್ಟ ರಕ್ಷಣೆ ಮತ್ತು ದುಷ್ಟರ ನಿಗ್ರಹಕ್ಕಾಗಿ, ಹಾಗೂ ಧರ್ಮವನ್ನು ಪುನರ್ಸ್ಥಾಪಿಸಲು ನಾನು ಸ್ವಯಂ ವ್ಯಕ್ತವಾಗುತ್ತೇನೆ.)
ಜನ್ಮಾಷ್ಟಮಿಯ ಮಹೋದ್ದೇಶ, ಸೌಹಾರ್ಧತೆಯಿಂದ ಧರ್ಮವನ್ನು ಕಾಪಾಡುವುದು ಮತ್ತು ದ್ವೇಷ, ಅಸೂಯೆ ಎಂಬ ದುಶಕ್ತಿಗಳಿಂದ ದೂರವಿರುವುದು. ಇದರ ಜೊತೆ ಹಲವಾರು ಸಮುದಾಯಗಳು ಒಟ್ಟಿಗೆ ಕೂಡಿ ಆಚರಿಸುವುದರಿಂದ ಏಕತೆಯನ್ನು ನಾವು ಕಾಣಬಹುದು.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ವಿಶೇಷತೆ:
ಭಾರತದ ವಿವಿಧ ಕಡೆಗಳಲ್ಲಿ ಶ್ರೀ ಕೃಷ್ಣನ ಜೀವಿತಕಾಲದಲ್ಲಿ ನಡೆದ ಘಟನೆಗಳನ್ನು ಬಿಂಬಿಸುವ ಪ್ರದರ್ಶನಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಸಣ್ಣ ಪುಟ್ಟ ಹುಡುಗರು ತಮ್ಮನ್ನು “ಗೋವಿಂದ” ಅಥವಾ “ಗೋಪಾಲ” ಎಂದು ಹೇಳಿಕೊಂಡು ರಸ್ತೆ ಬೀದಿಗಳಲ್ಲಿ ಓಡಾಡುತ್ತಾ ಮೊಸರು – ಹಾಲು ತುಂಬಿದ ಮಣ್ಣಿನ ಗಡಿಗೆಗಳನ್ನು ಒಡೆಯುವರು. ಈ ಮಣ್ಣಿನ ಗಡಿಗೆಗಳನ್ನು ಎತ್ತರದ ಕಟ್ಟಡಗಳ ನಡುವೆ ಕಟ್ಟಿದ ಹಗ್ಗಕ್ಕೆ ನೇತು ಬಿಟ್ಟಿರುವರು. ಹುಡುಗರು ಪಿರಮಿಡ್ ಆಕಾರಕ್ಕೆ ಒಬ್ಬರ ಮೇಲೊಬ್ಬರು ನಿಂತು ಬಾಲಕೃಷ್ಣನು ಮಡಿಕೆಯನ್ನು ಮುಟ್ಟಿದ ರೀತಿಯಲ್ಲಿ ಮುಟ್ಟಿ ಒಡೆಯುವರು. ಮಡಿಕೆಗೆ ಕಾಣಿಕೆ ಹಣವನ್ನು ಕಟ್ಟಿರಲಾಗಿರುವುದರಿಂದ ಗೋವಿಂದನಂತೆ ವೇಷ ಧರಿಸಿದ ಹುಡುಗರು ಮಡಿಕೆಯನ್ನು ಒಡೆದು, ಆ ಹಣವನ್ನು ತಮ್ಮಲ್ಲಿ ಹಂಚಿಕೊಳ್ಳುವರು. ಇನ್ನು ಕೆಲವೆಡೆಗಳಲ್ಲಿ ಕಂಬವೊಂದರ ತುದಿಗೆ ಮಡಿಕೆಯನ್ನು ಕಟ್ಟಿದ್ದು, ಆ ಕಂಬಕ್ಕೆ ಎಣ್ಣೆಯನ್ನು ಸವರಿರಲಾಗುತ್ತದೆ. ಹುಡುಗರು ಮಡಿಕೆಯನ್ನು ಮುಟ್ಟಲು ಯತ್ನಿಸುತ್ತಿರುವಾಗ ಆ ಕೆಲಸ ಕಷ್ಟಕರವಾಗಲೆಂದು ಪ್ರೇಕ್ಷಕರು ಅವರ ಮೇಲೆ ನೀರೆರಚುವರು. ಈ ವಿನೋದದಿಂದ ಎಲ್ಲರೂ ಸಂತೋಷಗೊಳ್ಳುವರು.
ಜನ್ಮಾಷ್ಟಮಿಯಂದು ಅನೇಕ ಆಧ್ಯಾತ್ಮಿಕ ಆಚರಣೆ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಹಗಲು ಉಪವಾಸ ಇದ್ದು ರಾತ್ರಿ ಚಂದ್ರೋದಯದ ಕಾಲದಲ್ಲಿ ಪೂಜಿಸಿ, ತುಳಸಿ ಸನ್ನಿಧಾನದಲ್ಲಿ ಚಂದ್ರನಿಗೆ ಅರ್ಘ್ಯ ಕೊಡಬೇಕು. ಮರುದಿನ ಬೆಳಗ್ಗೆ ಶಂಖ ತೀರ್ಥ, ತುಳಸಿದಳ ಸಮೇತ ಅರ್ಘ್ಯ ಪ್ರದಾನ ಮಾಡಿ ಶ್ರೀ ಕೃಷ್ಣನನ್ನು ಪೂಜಿಸಿ, ಪ್ರಸಾದ ಸ್ವೀಕರಿಸ ಬೇಕು. ಜನ್ಮಾಷ್ಟಮಿ ದಿನದಂದು ಕೃಷ್ಣನ ಭಕ್ತರು 24 ಗಂಟೆಗಳ ಕಾಲ ಉಪವಾಸವನ್ನು ಮಾಡುತ್ತಾರೆ. ಜನ್ಮಾಷ್ಟಮಿ ಉಪವಾಸ ಮಾಡುವಾಗ ಕೆಲವರು ಹಣ್ಣನ್ನು ತಿಂದರೆ ಇನ್ನುಳಿದವರು ಏನನ್ನೂ ತಿನ್ನದೆ ಕೇವಲ ನೀರನ್ನು ಮಾತ್ರ ಕುಡಿದು ಮಧ್ಯರಾತ್ರಿಯವರೆಗೆ ಪ್ರಾರ್ಥನೆ ಮಾಡುತ್ತಿರುತ್ತಾರೆ. ಶ್ರೀ ಕೃಷ್ಣನಿಗೆ ಸಿಹಿತಿಂಡಿಯೆಂದರೆ ಬಹಳ ಪ್ರೀತಿಯೆಂದು ಬಗೆ ಬಗೆಯ ಸಿಹಿತಿನಿಸುಗಳನ್ನು ಸಿದ್ಧಮಾಡಿಕೊಳ್ಳುತ್ತಾರೆ. ಚಕ್ಕುಲಿ, ಕೋಡುಬಳೆ, ತೆಂಗೊಳಲು, ಕಡಲೆಕಾಳು ಉಸಲಿ , ಸಿಹಿ ಅವಲಕ್ಕಿ, ಮೊಸರವಲಕ್ಕಿ, ರವೆ ಉಂಡೆ, ಮುಂತಾದ ತಿಂಡಿಗಳಿಂದ ಕೃಷ್ಣನಿಗೆ ನೈವೇದ್ಯ ಮಾಡುತ್ತಾರೆ.
ಭಗವಾನ್ ಶ್ರೀಕೃಷ್ಣನ ತತ್ವ ಭೋದನೆಯ ಒಂದು ಸಾಲು ಹೀಗಿದೇ: "ಇಂದಿನದ್ದು ನಾಳೆ ಇರುವುದಿಲ್ಲ. ಹಿಂದೆ ಏನು ನಡೆದಿದೆಯೋ ಅದು ಮುಗಿಯಿತು, ಅದು ಎಂದಿಗೂ ಮರಳಿ ಬಾರದು.... ಹಿಂದೆ ನಡೆದಿರುವುದನ್ನು ನೆನಪು ಮಾಡುವುದರಿಂದ ನಮಗೆ ನೋವು ಹೆಚ್ಚು.... ಈ ಕ್ಷಣದಲ್ಲಿ ಬದುಕುವುದು ಹೆಚ್ಚು ಮುಖ್ಯವಾದುದು ಮತ್ತು ಪ್ರತಿಯೊಂದು ಕ್ಷಣವನ್ನು ಅರ್ಥಪೂರ್ಣಗೊಳಿಸಿ ಬದುಕನ್ನು ಸಾರ್ಥಕಪಡಿಸಿ".....
" ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು "
ಲೇಖಕರು: ✍️.... ಕಾನತ್ತಿಲ್ ರಾಣಿಅರುಣ್
(ಪತ್ರಕರ್ತರು)
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network