Header Ads Widget

ಸರ್ಚ್ ಕೂರ್ಗ್ ಮೀಡಿಯ

ಒಂದು ಹ್ರದಯಸ್ಪರ್ಶಿ ಕಾರ್ಯಕ್ರಮ; ಶಕ್ತಿ ಮತ್ತು ಎ.ಕೆ.ಸುಬ್ಬಯ್ಯ ಕುಟುಂಬ ಒಂದಾಯಿತೆ?

ಒಂದು ಹ್ರದಯಸ್ಪರ್ಶಿ ಕಾರ್ಯಕ್ರಮ; 

ಶಕ್ತಿ ಮತ್ತು ಎ.ಕೆ.ಸುಬ್ಬಯ್ಯ ಕುಟುಂಬ ಒಂದಾಯಿತೆ?


ಬದ್ಧ ವೈರಿಗಳು ಎಂದೆ ಜಿಲ್ಲೆಯಲ್ಲಿ ಮನೆ ಮಾತಾಗಿದ್ದ ಎ.ಕೆ.ಸುಬ್ಬಯ್ಯ ಮತ್ತು ಶಕ್ತಿ ಬಳಗಕ್ಕೆ ತಾ.27 ರಂದು ಆರ್.ಕೆ.ಎಫ್ ,ಬಿಟ್ಟಂಗಾಲ ಸಭಾಂಗಣದಲ್ಲಿ ಎ.ಕೆ.ಸುಬ್ಬಯ್ಯ ಪೊನ್ನಮ್ಮ ದತ್ತಿ ಮತ್ತು‌ ಶೈಕ್ಷಣಿಕ ಟ್ರಸ್ಟ್ ಮೂಲಕ ಜಿಲ್ಲೆಯ ಸುಮಾರು ಅರ್ಹ 45 ವಿದ್ಯಾರ್ಥಿ ನಿಯರನ್ನು ಗುರುತಿಸಿ ತಲಾ ರೂ.10 ಸಾವಿರದಂತೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಹಲವು ವರ್ಷಗಳ ನಂತರ ಶಕ್ತಿ ಸಹಯೋಗದಲ್ಲಿ ಜರುಗಿದ ಹ್ರದಯಸ್ಪರ್ಶಿ ಕಾರ್ಯಕ್ರಮದಲ್ಲಿ  ಟ್ರಸ್ಟ್ ಮುಖ್ಯಸ್ಥರು ಹಾಗೂ ಹೈಕೋರ್ಟ್ ಹಿರಿಯ ವಕೀಲರಾದ ಎ.ಎಸ್.ಪೊನ್ನಣ್ಣ ಅವರು ಪ್ರಾಸ್ತಾವಿಕವಾಗಿ ಹೇಗೆ ಮಾತನಾಡುತ್ತಾರೆ ಮತ್ತು ಶಕ್ತಿ ಸಂಪಾದಕರಾದ ಜಿ.ಚಿದ್ವಿಲಾಸ್ ರವರು ಮುಖ್ಯ ಅತಿಥಿ ಸ್ಥಾನದಿಂದ ಹೇಗೆ ಮಾತನಾಡಬಹುದು ಎಂದು ಕುತೂಹಲ ಇತ್ತು. ಮೊದಲಿಗೆ ಪೊನ್ನಣ್ಣನವರು ಜಿ.ಚಿದ್ವಿಲಾಸ್ ಮತ್ತು ಶಕ್ತಿ ಬಳಗದ ಸಹಕಾರವನ್ನು ಸ್ಮರಿಸಿದರು. 100 ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಾಗದಕ್ಕೆ ವಿಷಾಧಿಸಿದರು.

ಎ.ಕೆ.ಸುಬ್ಬಯ್ಯ ಅವರ ಕನಸನ್ನು ,ಸಾಮಾಜಿಕ ಬದ್ಧತೆಯನ್ನು ಅನುಷ್ಠಾನಗೊಳಿಸಲು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಯೋಜನೆ ಹಾಕಿಕೊಳ್ಳಲಾಯಿತು. ಈವರೆಗೂ ನನ್ನ ವೈಯಕ್ತಿಕ ದುಡಿಮೆಯ ಹಣದ ಒಂದು ಭಾಗವನ್ನು ಕೋವಿಡ್ 19 ಸಂಕಷ್ಟ ಕಾಲದಲ್ಲಿ ಬಡವರಿಗೆ, ಅಸಂಘಟಿತ ಕಾರ್ಮಿಕ ವರ್ಗಕ್ಕೆ ನೆರವಾಗಲು ಬಳಸಿದ್ದೇನೆ. ಜನಪರ ಕಾರ್ಯಕ್ರಮ ನನ್ನ ಜೀವನದ ಕೊನೆಯ ದಿನದ ವರೆಗೂ ವಿಸ್ತರಿಸಲು ಬಯಸುತ್ತೇನೆ. ಇದಕ್ಕೆ ರಾಜಕೀಯ ಬಣ್ಣ ಬೇಡ. ಯಾವತ್ತೂ ನಾನು ಆರ್ಥಿಕವಾಗಿ‌ ಅಸಹಾಯಕನಾಗುತ್ತೇನೋ ಅವತ್ತು ಈ ಸಮಾಜ ಸೇವೆ ನಿಲ್ಲಿಸುತ್ತೇನೆ. ಆದರೆ, ನನಗೆ ಸಾಮಾಜಿಕ ಸೇವೆಯನ್ನು ನಿರಂತರ ಮಾಡಲು ಆ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನನಗೂ ಎರಡು ಹೆಣ್ಣು ಮಕ್ಕಳಿದ್ದಾರೆ. ಹಣ ಶ್ರೀಮಂತರ ಬಳಿಯಲ್ಲಿ ಮಾತ್ರಾ ಕ್ರೋಢೀಕರಣ ಆಗುತ್ತಿರುವದರಿಂದ ದೇಶದಲ್ಲಿ ಆರ್ಥಿಕ ಅಸಮಾನತೆ ಕಂಡು ಬಂದಿದೆ. ವಿದೇಶದಲ್ಲಿ ಇದಕ್ಕೆಲ್ಲಾ ಕಠಿಣ ಕಾನೂನು ಇದೆ. ನನಗೆಷ್ಟು ಬೇಕೋ ಇಟ್ಟುಕೊಂಡು ಉಳಿಕೆ ಮೊತ್ತ ದೇಶದ ಅಭ್ಯುದಯಕ್ಕೆ ವಿನಿಯೋಗಿಸಲಾಗುತ್ತದೆ. ಇಂತಹಾ ಕಠಿಣ ಕಾನೂನು ಭಾರತದಲ್ಲಿ ಬಂದಲ್ಲಿ ನಾವೆಲ್ಲರೂ ಸರಿಸಮಾನರು ಎಂಬ ಕನಸು ನನಸಾಗಲು ಸಾಧ್ಯ. ಇವತ್ತು ವಕೀಲರಲ್ಲಿಯೂ ಕೂಡಾ ಕೊಡುವ ಮನೋಭಾವ ಕಡಿಮೆಯಾಗುತ್ತದೆ. ಹಣ ಕ್ರೋಢೀಕರಣವೇ‌ ಮುಖ್ಯ ಉದ್ಧೇಶ ಆಗಿರುವದು ವಿಷಾಧನೀಯ ಎಂದರು.

ಶಕ್ತಿ ಸಂಪಾದಕರಾದ ಜಿ.ಚಿದ್ವಿಲಾಸ್ ಅವರು ಮಾತನಾಡಿ, ನಾನು ಎ.ಎಸ್.ಪೊನ್ನಣ್ಣನವರನ್ನು ಇವತ್ತು ಇಲ್ಲಿಯೇ ನೋಡಿದ್ದು. ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಶಕ್ತಿಯ ಬೆಂಬಲ ಇದ್ದೇ ಇದೆ. ಮೊದಲಿಗೆ 100 ಅರ್ಜಿಯಲ್ಲಿ 20 ವಿದ್ಯಾರ್ಥಿ ಗಳನ್ನು ಆಯ್ಕೆ ಮಾಡಲಾಯಿತು. ನಂತರ 30 ಹಾಗೂ ನಂತರ‌ ಆಯ್ಕೆಯನ್ನು 45 ಕ್ಕೆ ಹೆಚ್ಚಿಸಲಾಯಿತು. ಪೊನ್ನಣ್ಣನವರ ಹ್ರದಯ ವೈಶಾಲ್ಯತೆಗೆ ಇದು ಉದಾಹರಣೆ. ಇದೇ 45 ವಿದ್ಯಾರ್ಥಿಗಳಿಗೆ ಮುಂದಿನ ಎರಡು ಅವಧಿಗೆ ಮತ್ತೆ ತಲಾ 10 ಸಾವಿರ ರೂ. ನೀಡಲಾಗುವದು. ಒಟ್ಟು 13.50 ಲಕ್ಷ ಮೊತ್ತ ಹಣವನ್ನು ಪೊನ್ನಣ್ಣನವರು ಟ್ರಸ್ಟ್ ಮೂಲಕ ವೈಯಕ್ತಿಕವಾಗಿ ನೀಡುತ್ತಿದ್ದಾರೆ. ಇದರ ಸದುಪಯೋಗ ಆಗಬೇಕು. ನಮ್ಮ ಶಕ್ತಿ ಪ್ರತಿಷ್ಠಾನದಿಂದಲೂ ವಾರ್ಷಿಕ ರೂ.3 ಲಕ್ಷದ ವರೆಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದರೂ ನಂತರ ಸಹಕಾರ ಹೊಂದಿದವರು ನಮ್ಮನ್ನು ಮರೆತೇ ಹೋಗುತ್ತಾರೆ. ಆದರೆ, ಈಗಾಗುವದು ಬೇಡ. ಇದಕ್ಕಾಗಿ ಪೊನ್ನಣ್ಣನವರ ಪರವಾಗಿ ವಿದ್ಯಾರ್ಥಿ ವೇತನ ಹೊಂದಿದ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆಯಾಗಬೇಕು. ಉಪಕಾರ ನೆನೆಯುವ ಗುಣ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕಿವಿಮಾತು ಹೇಳಿದರು. ನೂರು ಅರ್ಜಿಗಳು ಬಂದಾಗ ಐದು ಜನರ ಸಮಿತಿ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಆರ್ಥಿಕವಾಗಿ ಉತ್ತಮವಾಗಿರುವವರು, ಜಿಲ್ಲೆಯ ಹೊರಗಿನವರು ಎಂಬ ಕಾರಣಕ್ಕೆ ಕೆಲವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಇಂತಹಾ ಉತ್ತಮ ಕೆಲಸಕ್ಕೆ ನಮ್ಮ ಶಕ್ತಿ ಬಳಗ ಮುಂದೆಯೂ ಸಾಥ್ ನೀಡುತ್ತದೆ ಎಂದು ಹೇಳಿದರು.

ಶಕ್ತಿ ವಿರುದ್ಧ ಎ.ಕೆ.ಸುಬ್ಬಯ್ಯ ಎಷ್ಟೇ ನಿಷ್ಠುರವಾಗಿದ್ದರೂ ರಾಜ್ಯದಲ್ಲಿ ದಿಟ್ಟತನದ ರಾಜಕಾರಣಿಯಾಗಿದ್ದರು. ಕೆಲವೊಮ್ಮೆ ನಾನೇ ಅವರನ್ನು ನೇರವಾಗಿ 'ಶಕ್ತಿಯನ್ನೇಕೆ ಬೈಯುತ್ತೀರಿ' ಎಂದು ಕೇಳಿದ್ದೂ ಇದೆ. ಭಾಗಮಂಡಲದ ಈಶ್ವರ ವಿಗ್ರಹ ಭಗ್ನ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ನಮ್ಮ ಮೂವರು ಸಹೋದರರನ್ನು ಕಾನೂನು ವ್ಯಾಪ್ತಿಗೆ ತರಲು ಹವಣಿಸಿದರು. ಆದರೆ, ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್.ಐ.ಆರ್.ದಾಖಲಾಗದಿದ್ದರೂ, ನ್ಯಾಯಾಲಯದ ಮೂಲಕ ಪ್ರಕರಣ ದಾಖಲಿಸಲಾಗಿದೆ. ಶಕ್ತಿ ಪರವಾದ ಜಿಲ್ಲೆಯ ಜನತೆ ಮೂಲಕ  ಮುಂದೆ ನಾವೂ ಹೋರಾಟ ಮುಂದುವರಿಸುತ್ತೇವೆ. ನಾಪೋಕ್ಲುವಿನ ನೆರವಂಡ ಉಮೇಶ್ ಹಾಗೂ ಎ.ಎಸ್.ಪೊನ್ನಣ್ಣ ನವರ ಬಳಗದ ಸಹಕಾರಕ್ಕೆ ಕ್ರತಜ್ಞತೆಯನ್ನು ಈ ಸಂದರ್ಭ ಹೇಳಿದರು.

ಆರ್.ಕೆ.ಎಫ್.ಸಭಾಂಗಣ ವಿದ್ಯಾರ್ಥಿಗಳು, ಪೋಷಕರು, ಎ.ಎಸ್.ಪೊನ್ನಣ್ಣ ಅಭಿಮಾನಿಗಳು, ಶಕ್ತಿ ಅಭಿಮಾನಿ ಬಳಗದಿಂದ ತುಂಬಿದ್ದು ಹ್ರದಯಸ್ಪರ್ಶಿ ಕಾರ್ಯಕ್ರಮವಾಗಿ ಮೂಡಿಬಂತು.

ಕೊನೆಯ ಮಾತು:

ಎ.ಕೆ.ಸುಬ್ಬಯ್ಯ ಅವರ 75 ನೇ ವರ್ಷದ ಹುಟ್ಟು ಹಬ್ಬವನ್ನು ಹುದಿಕೇರಿಯಲ್ಲಿ ಅದ್ಧೂರಿಯಾಗಿ  ಆಚರಿಸಲಾದ ಸಂದರ್ಭ, ನನಗೆ ಪತ್ರಕರ್ತ ಅಗಿದಂದಿನಿಂದಲೂ ಎ.ಕೆ.ಎಸ್.ಹತ್ತಿರದ ಪರಿಚಯ. ಅವರ ನೇರ ನಡಿಯ ಮಾತಿಗೆ ನಾನು ಫಿದಾ ಆಗಿದ್ದೆ.

ಅವರು ಬೆಂಗಳೂರು ಹೈಕೋರ್ಟ್ ಕೆಲಸವಿದ್ದಾಲೆಲ್ಲಾ ವೀರಾಜಪೇಟೆ ಯಿಂದ ವಿಐಪಿ ಸೀಟ್ ನಲ್ಲಿ ರಾಜಹಂಸ ಬಸ್ ಪ್ರಯಾಣ ಬೆಳೆಸುವ ಸರಳ ವ್ಯಕ್ತಿತ್ವ ಅವರಲ್ಲಿತ್ತು. ನಾನು ಗೋಣಿಕೊಪ್ಪಲಿನಿಂದ ಬೆಂಗಳೂರಿಗೆ ಹೋದಾಗಲೆಲ್ಲ ಸುಬ್ಬಯ್ಯಣ್ಣ ನನ್ನನ್ನು ಅತ್ಮೀಯವಾಗಿ ಕರೆದು ಅವರ ಪಕ್ಕದ ಸೀಟ್ ನಲ್ಲಿ ಕುಳ್ಳಿರಿಸಿಕೊಳ್ಳುತ್ತಿದ್ದರು. ಗೋಕಾಕ್ ಚಳುವಳಿ ಸಂದರ್ಭ ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದ ರಾಜ್ ಕುಮಾರ್ ಅಭಿಮಾನಿಗಳ ತಂಡವನ್ನು ಹಿಗ್ಗಾ ಮುಗ್ಗಾ ಹೊಡೆದು ಬೆಂಡೆತ್ತಿದ, ಕಡೆಗೆ ಡಾ. ರಾಜ್ ಕುಮಾರ್ ಉಡುಪಿಗೆ ಹೋದ ಸತ್ಯದ ಸ್ವಾರಸ್ಯವನ್ನು ಹೇಳುತ್ತಾ ಹೋಗುತ್ತಿದ್ದರು. ಬಸ್ ಮೈಸೂರು ತಲುಪುವವರೆಗೂ ಮಾತು ನಂತರ ಸ್ವಲ್ಪ ನಿದ್ರೆಗೆ ಜಾರುತ್ತಿದ್ದರು. ಹೀಗೆ ಹಲವು ಬಾರಿ ಹಲವು ಸ್ವಾರಸ್ಯಕರ ಕತೆಯನ್ನು ನನಗೆ ಹೇಳುತ್ತಿದ್ದರು. ಶಕ್ತಿ ಪತ್ರಿಕೆಯನ್ನುವ ಬ್ರಾಹ್ಮಿಣ್ಯ ಶಾಹಿಗಳು, ಈ ದೇಶ ಇಂತಹವರ ಕೈಯಲ್ಲಿಯೇ ಇದೆ. ಇವರು ಮಹಾನ್ ಡೇಂಜರ್ ವ್ಯಕ್ತಿತ್ವದವರು ಎಂದು ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. ಜತೆಗೆಇವರು ಕೊಡಗು ಏಕೀಕರಣ ರಂಗದ ತಮ್ಮು ಪೂವಯ್ಯ ಅವರನ್ನೂ ಸೇರಿಸಿ ಬೈಯುತ್ತಿದ್ದರು. ಜಿಲ್ಲೆಯ ಟಿಂಬರ್ ಮಾಫಿಯಾದ ಬಗ್ಗೆ ಅವರದೇ ಆದ ಕತೆ ಹೇಳುತ್ತಿದ್ದರು.

ಸಿ.ಎನ್.ಸಿ ನಾಚಪ್ಪ ಅವರು ಈ ಹಿಂದೆ ಲಿವಾಕ್ ಸಂಘಟನೆ ಮುಖ್ಯಸ್ಥರಾಗಿದ್ದಾಗ ನಾಚಪ್ಪ ಮತ್ತು ತಂಡವನ್ನು ಗೋಣಿಕೊಪ್ಪಲು ಮತ್ತು ಪೊನ್ನಂಪೇಟೆ  ಪೊಲೀಸ್ ಠಾಣೆಯಲ್ಲಿ ಲಾಠಿ ಏಟಿನ ಮೂಲಕ ಬೆನ್ನು, ತೊಡೆ ಇತ್ಯಾದಿ ಭಾಗದಲ್ಲಿ ಬಾಸುಂಡೆ ಬರುವಂತೆ ಥಳಿಸಲಾಗುತ್ತದೆ. ಇದರ ಪ್ರತಿಭಟನಾ ಸಭೆ ಗೋಣಿಕೊಪ್ಪಲಿನಲ್ಲಿ ನಡೆದಾಗ ಎ.ಕೆ.ಸುಬ್ಬಯ್ಯನವರು ಅಂದಿನ ಕೊಡಗು ಪೊಲೀಸ್ ಉನ್ನತಾಧಿಕಾರಿ ಜಯಪ್ರಕಾಶ್ ನಾಯಕ್ ಬಗ್ಗೆ ಕಟುವಾದ ಶಬ್ಧದಲ್ಲಿ ಟೀಕಿಸುತ್ತಾರೆ. ಆಗ ಪ್ರಥಮ ಬಾರಿಗೆ ನಾನು ಮತ್ತು ಅಡ್ಡಂಡ ಕಾರ್ಯಪ್ಪನವರು ನನ್ನ ಮನೆಯಲ್ಲಿಯೇ ಒಟ್ಟಿಗೆ ಕುಳಿತು ಎ.ಕೆ.ಸುಬ್ಬಯ್ಯ ಭಾಷಣದ ಕಟು ಮಾತನ್ನು ಹಾಗೆಯೇ ಭಟ್ಟಿ ಇಳಿಸುತ್ತೇವೆ. ಭಾನುವಾರ ನಮ್ಮ ವರದಿಯನ್ನು ಸಂಪಾದಕರು ರಜೆಯ ಹಿನ್ನೆಲೆ ಅಂದಿನ ಚಿ.ನಾ.ಸೋಮೇಶ್ ಉಪ ಸಂಪಾದಕರು ಹಾಗೆಯೇ ಪ್ರಕಟವಾಗುವಂತೆ ನೋಡುಕೊಳ್ಳುತ್ತಾರೆ. ಆ ವರದಿಯಲ್ಲಿ ಒಂದು ಕಡೆ ಎ.ಕೆ.ಎಸ್. ಅವರು" ನನಗೇನಾದರೂ ಅಧಿಕಾರ ಇದ್ದರೆ ಈ ಜಯಪ್ರಕಾಶ್ ನಾಯಕ್ ಗೆ ನನ್ನ ಬೂಟ್ ಪಾಲೀಶ್ ಮಾಡುವ ಕೆಲಸ ಕೊಡುತ್ತಿದೆ" ಎಂದು ತೀಕ್ಷ್ಣವಾದ ಟೀಕೆ ಹಾಗೆಯೇ ಮುದ್ರಣವಾಗಿರುತ್ತದೆ.

ಮರುದಿನ ಎಸ್ಪಿಯಿಂದ ಅಂದಿನ ಸಂಪಾದಕರಾದ ಜಿ.ರಾಜೇಂದ್ರ ಸರ್ ಗೆ ದೂರವಾಣಿ ಕರೆ. ನಿಮ್ಮ ಶಕ್ತಿಯ ಬಗ್ಗೆ ನನಗೆ ಗೌರವ, ಅಭಿಮಾನವಿತ್ತು. ಆದರೆ, ಇಷ್ಟು ಕಠಿಣ ಪದ ಬರೆಯಬಾರದಿತ್ತು ಎಂದು ಜಯಪ್ರಕಾಶ್ ನಾಯಕ್ ದುಃಖ ವ್ಯಕ್ತಪಡಿಸಿದ್ದನ್ನು ಸಂಪಾದಕರು ಮನವರಿಕೆ ಮಾಡಿದಾಗ ನನಗೂ ನಿಜ ಅನ್ನಿಸಿತ್ತು. ಆದರೆ ಜಿಲ್ಲೆಯ ಜನತೆ ಬಾಯಿ ಚಪ್ಪರಿಸಿಕೊಂಡು ನನ್ನ ಅಡ್ಡಂಡ ಕಾರ್ಯಪ್ಪನವರ ಜಂಟಿ ವರದಿಯನ್ನು ಓದಿದ್ದರು. ನಂತರ ಎಸ್.ಪಿ.ಜಯಪ್ರಕಾಶ್ ನಾಯಕ್ ಅವರಿಗೆ ಕೋಲಾರಕ್ಕೆ ವರ್ಗವಾಗುತ್ತದೆ.

ಈ ಮಾತು ಯಾಕೆ ಹೇಳಿದೆ ಎಂದರೆ ಎ.ಕೆ.ಸುಬ್ಬಯ್ಯನವರ ಮಾತಿನ ಧಾಟಿಯೇ ಹಾಗೆ ಇತ್ತು. ಅವರ ವಾಕ್ ಪ್ರೌಢಿಮೆಯನ್ನು ಹೆಚ್ಚಿನ ರಾಜಕಾರಣಿಗಳು, ಹೋರಾಟಗಾರರು ಬಳಸಿಕೊಂಡರು. ಇವತ್ತು ಮಾಕುಟ್ಟ ರಸ್ತೆ ಅಭಿವ್ರದ್ಧಿ, ಆನೆಚೌಕೂರು ಹುಣಸೂರು ರಸ್ತೆ ಅಭಿವ್ರದ್ಧಿ,ಜಮ್ಮಾ ಹೋರಾಟ, ರೈತರ ಸೌದೆ ಸಾಗಾಟ ಹೋರಾಟ ಎಲ್ಲದರಲ್ಲಿಯೂ ಎ.ಕೆ.ಎಸ್.ಗೆಲುವನ್ನು ಕಂಡವರು.

ಈಗಿದ್ದಾಗ ಹುದಿಕೇರಿ ಕೊಡವ ಸಮಾಜದಲ್ಲಿ ಜರುಗಿದ ಎ.ಕೆ.ಎಸ್.75 ಹುಟ್ಟು ಹಬ್ಬ ಸಂಭ್ರಮಾಚರಣೆಗೆ ಶಕ್ತಿಗೂ ವೈಯಕ್ತಿಕವಾಗಿ ನನಗೂ ಆಹ್ವಾನವಿರಲಿಲ್ಲ. ಆಗ ಸಂಪಾದಕರಾದ ರಾಜೇಂದ್ರ ಸರ್ ಕರೆದು,  ನಮಗೆ ಆಮಂತ್ರಣವಿಲ್ಲದಿದ್ದರೂ ಪರವಾಗಿಲ್ಲ. ನೀನು ಎಕೆಎಸ್ ಹುಟ್ಟು ಹಬ್ಬ ವರದಿ ಮಾಡುವಂತೆ ಕಳುಹಿಸುತ್ತಾರೆ.

ನಾನು ಆಹ್ವಾನ ಪತ್ರಿಕೆ ಇಲ್ಲದೆ ಮಾಡಿದ ಪ್ರಥಮ ವರದಿ ಇದಾಗಿದೆ. ಆಗಲೇ ಅವರ ಪುತ್ರರಾದ ನರೇನ್ ಕಾರ್ಯಪ್ಪ, ಪೊನ್ನಣ್ಣನವರ ಪರಿಚಯ ಮಾಡಿಕೊಂಡು ವರದಿ ಮಾಡುತ್ತೇನೆ. ಸಭೆಯ ಬಳಿಕ ಸುಬ್ಬಯ್ಯಣ್ಣನ ಬಳಿ ತೆರಳಿ ಸರ್. ಶಕ್ತಿಗೂ ನಿಮಗೂ ಜಗಳ ಯಾಕೆ ಸರ್.‌‌.. ಮಾತನಾಡಿ ಸರಿ ಮಾಡುವ ಎಂದು ಹೇಳಿದಾಗ.. ಆಯಿತು ಮಗಾ.. ಸರಿಮಾಡಿಕೊಳ್ಳುವಾ ಎಂದು ಒಪ್ಪುತ್ತಾರೆ‌.

ಆದರೆ ಕೆಲವೇ ತಿಂಗಳಿನಲ್ಲಿ ಗೋಣಿಕೊಪ್ಪಲು ಇಂಡೇನ್ ಗ್ಯಾಸ್ ಮಾಲೀಕ ಮಡಿಕೇರಿಯ ನಂದಕುಮಾರ್ ನೇತ್ರತ್ವದಲ್ಲಿ ಮಡಿಕೇರಿಯಲ್ಲಿ ಶಕ್ತಿ ಪತ್ರಿಕೆಗೆ ಬೆಂಕಿ ಹಚ್ಚಿ ಸುಟ್ಟು ಪ್ರತಿಭಟಿಸಲಾಗುತ್ತದೆ. ಅಲ್ಲಿಯೂ ಶಕ್ತಿ ವಿರುದ್ಧ ಪ್ರತಿಭಟನಾ ಭಾಷಣಕಾರರು ಇದೇ ಎ.ಕೆ.ಸುಬ್ಬಯ್ಯನವರು. ಶಕ್ತಿಯನ್ನು ಹಿಗ್ಗಾ ಮುಗ್ಗಾ ಬೈಯುತ್ತಾರೆ. ಇದೇ ಸಂದರ್ಭ ಶಕ್ತಿಯ ಬೆಂಬಲಕ್ಕೆ ದಲಿತ ಮುಖಂಡ ಈಗಿನ ಗೋಣಿಕೊಪ್ಪಲು ಶಕ್ತಿ ವರದಿಗಾರ ಹೆಚ್.ಕೆ.ಜಗದೀಶ್ ರನ್ನು ಮಡಿಕೇರಿಗೆ ಕರೆದೊಯ್ದು ಸಂಪಾದಕ ರಾಜೇಂದ್ರ ಸರ್‌ಗೆ ಧೈರ್ಯ ತುಂಬುತ್ತೇನೆ. ಅಟ್ರಾಸಿಟಿ ಕೇಸ್ ಶಕ್ತಿ ಮೇಲೆ ಮಾಡಿದ್ದಲ್ಲಿ ಪ್ರತಿಯಾಗಿ ಹೆಚ್.ಕೆ.ಜಗದೀಶ್ ಶಕ್ತಿಯ ಬೆಂಬಲಕ್ಕೆ ಆಗ ನಿಲ್ಲುತ್ತಾರೆ. ಇದು ದಲಿತ ನಂದಕುಮಾರ್ ಗೆ ಸಿಟ್ಟಿಗೆ ಕಾರಣವಾಗುತ್ತದೆ. ಹೆಚ್.ಕೆ.ಗೂ ಬೆದರಿಕೆ ಹಾಕಲಾಗುತ್ತದೆ. ಇದೊಂದು ನೆನಪಾಯಿತು. ನಂತರ ಎ.ಕೆ.ಎಸ್. ಶಕ್ತಿ ಬಾಂಧವ್ಯ ಹಳಸುತ್ತದೆ. ಆದರೆ, ಇದೀಗ  ಎ.ಎಸ್.ಪೊನ್ನಣ್ಣ ಮತ್ತು ಜಿ.ಚಿದ್ವಿಲಾಸ್ ರವರ ವಿಭಿನ್ನ ಸಮಾಜಮುಖಿ ಸಂಗಮದ ಮೂಲಕ ಮತ್ತೆ ಬಾಂಧವ್ಯದ ಕೊಂಡಿ ಬೆಸೆದಿರುವದನ್ನು ಕಣ್ತುಂಬಾ ನೋಡಿ ಆನಂದಿಸಿದವನಲ್ಲಿ ನಾನೂ ಒಬ್ಬ.

                                                                                                                   ✍️....ಟಿ.ಎಲ್.‌ ಶ್ರೀನಿವಾಸ್‌

       ( ಪತ್ರಕರ್ತರು )

         ಸುದ್ದಿ ಸಂಸ್ಥೆ, ಗೋಣಿಕೊಪ್ಪಲು.

( ಟಿ.ಎಲ್.‌ ಶ್ರೀನಿವಾಸ್‌ )
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,