Header Ads Widget

ಸರ್ಚ್ ಕೂರ್ಗ್ ಮೀಡಿಯ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ‘ದಶ ವರ್ಷದ ಕಾರ್ಯಕ್ರಮ’ ಉದ್ಘಾಟನೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ‘ದಶ ವರ್ಷದ ಕಾರ್ಯಕ್ರಮ’ ಉದ್ಘಾಟನೆ
ಭಾಷೆ ಮತ್ತು ಭಾವನೆ ಒಂದಕ್ಕೊಂದು ಅವಿನಾಭಾವ ಸಂಬಂಧ: ಎಸ್.ಅಂಗಾರ


ಮಡಿಕೇರಿ: ಮಾತೃ ಭಾಷೆಯಲ್ಲಿ ಭಾವನೆಗಳ ಅಭಿವ್ಯಕ್ತಿ ಇದ್ದು, ಆ ದಿಸೆಯಲ್ಲಿ ಮಾತೃ ಭಾಷೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ ಶುಕ್ರವಾರ ನಡೆದ ಅಕಾಡೆಮಿಯ ‘ದಶ ವರ್ಷದ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಅರೆಭಾಷೆ ಸೇರಿದಂತೆ ಕನ್ನಡ ಉಪ ಭಾಷೆಗಳನ್ನು ಉಳಿಸಿ ಬೆಳೆಸುವಂತಾಗಬೇಕು. ಜೊತೆಗೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಕಾರ್ಯಕ್ರಮಗಳು ಜರುಗುವಂತಾಗಬೇಕು. ಮಾತೃ ಭಾಷೆಯು ಪ್ರತಿಯೊಬ್ಬರ ಅವಿನಾಭಾವ ಸಂಬಂಧ ಹೊಂದಿದೆ. ಜೊತೆಗೆ ಇತರ ಭಾಷೆಗಳನ್ನು ಕಲಿಯಬೇಕಿದೆ ಎಂದು ಎಸ್.ಅಂಗಾರ ಅವರು ತಿಳಿಸಿದರು.

ಅರೆಭಾಷೆಯನ್ನು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಿಂದ ಬೆಂಗಳೂರು ಸೇರಿದಂತೆ ದೇಶ, ವಿದೇಶಗಳಲ್ಲಿ ವಾಸಿಸುವ ಜನರು ಮಾತನಾಡುತ್ತಾರೆ. ಆ ನಿಟ್ಟಿನಲ್ಲಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸುವಲ್ಲಿ ಇನ್ನಷ್ಟು ಶ್ರಮಿಸಬೇಕಿದೆ ಎಂದರು.

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಸಂಸ್ಕøತಿಗಳಾದ ದುಡಿ, ಕೋಲ ಸೇರಿದಂತೆ ಸ್ಥಳೀಯ ಶ್ರೀಮಂತ ಸಂಸ್ಕೃತಿ ಮತ್ತಷ್ಟು ಪಸರಿಸಬೇಕಿದೆ ಎಂದು ಸಚಿವರು ನುಡಿದರು. ‘ಭಾಷೆ ಮತ್ತು ಭಾವನೆ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದ್ದು, ಆ ದಿಸೆಯಲ್ಲಿ ಕನ್ನಡ ಭಾಷೆ ಜೊತೆಗೆ ಕನ್ನಡದ ಉಪ ಭಾಷೆಗಳನ್ನು ಉಳಿಸುವಂತಾಗಬೇಕು ಎಂದು ಎಸ್.ಅಂಗಾರ ಅವರು ಹೇಳಿದರು.’

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ನಾಡಿನ ಜನರು ಎಲ್ಲೇ ಇದ್ದರೂ, ಹೇಗೆ ಇದ್ದರೂ ಎಂದೆಂದೂ ನೀ ಕನ್ನಡವಾಗಿರು ಎಂದು ಹೇಳಿರುವಂತೆ ಕನ್ನಡದ ಜೊತೆಗೆ ಸ್ಥಳೀಯ ಭಾಷೆಗಳನ್ನು ಪ್ರೀತಿಸಬೇಕು ಎಂದು ಅವರು ಹೇಳಿದರು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಹಲವರು ಶ್ರಮಿಸಿದ್ದಾರೆ. ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ರಾಜ್ಯ, ದೇಶಗಳಿಗೆ ತಲುಪಿಸುವಲ್ಲಿ ಹಿಂದಿನ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಪ್ರಯತ್ನಿಸಿದ್ದಾರೆ. ಈಗಿನ ಅಧ್ಯಕ್ಷರು ತಾಂತ್ರಿಕವಾಗಿ ಡಿಜಿಟಲ್ ಮಾಧ್ಯಮಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಭಾಷೆ, ಸಂಸ್ಕøತಿ, ಆಚಾರ, ವಿಚಾರಗಳನ್ನು ಗುರುತಿಸಬೇಕು. ದೇಶದ ಆಚಾರ, ವಿಚಾರ ಸಂಸ್ಕøತಿಯನ್ನು ಉಳಿಸಬೇಕು ಮತ್ತು ಗೌರವಿಸಬೇಕು ಎಂದರು.

ನಗರದಲ್ಲಿ ಸುವರ್ಣ ಸಮುಚ್ಛಯ ಕನ್ನಡ ಭವನ ನಿರ್ಮಾಣವಾಗುತ್ತಿದ್ದು, ಕೊಡವ ಮತ್ತು ಅರೆಭಾಷೆ ಅಕಾಡೆಮಿ ಕಚೇರಿಗಳು ಸ್ಥಳಾಂತರವಾಗಬೇಕಿದೆ. ಆ ನಿಟ್ಟಿನಲ್ಲಿ ಸುವರ್ಣ ಸಮುಚ್ಛಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು. ಸರ್ಕಾರ ಅಕಾಡೆಮಿಗಳಿಗೆ ಅನುದಾನ ನೀಡುತ್ತಿದ್ದು, ಸಾಹಿತ್ಯ, ಸಾಂಸ್ಚಕೃತಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.

ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆ ಹಾಗೂ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಪ್ರತಿಮೆ ನಿರ್ಮಾಣಕ್ಕೆ ಹಲವರು ಶ್ರಮಿಸಿದ್ದಾರೆ ಎಂದರು.
ಸಣ್ಣ ಸಣ್ಣ ಸಮಾಜಗಳ ಆಚಾರ-ವಿಚಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಎಲ್ಲರೂ ಪ್ರೀತಿ ವಿಶ್ವಾಸದಿಂದ ಮತ್ತೊಬ್ಬರನ್ನು ಗೌರವದಿಂದ ಕಾಣಬೇಕು. ಎಲ್ಲಾ ಸಮಾಜಗಳು ಒಟ್ಟುಗೂಡಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದರಿಂದ ವಿವಿಧತೆಯಲ್ಲಿ ಏಕತೆ ಕಾಣಬಹುದಾಗಿದೆ. ಎಲ್ಲರೂ ಒಟ್ಟಾಗಿ ಇದ್ದಾಗ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಾತನಾಡಿ ಕೊಡವ ಮತ್ತು ಅರೆಭಾಷೆ ಅಕಾಡೆಮಿ ಅಧ್ಯಕ್ಷರು ಇಲ್ಲಿನ ಸ್ಥಳೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ವಿವಿಧ ಜನಾಂಗಗಳ ಅಭಿವೃದ್ಧಿಗೆ ನಿಗಮಗಳನ್ನು ಸ್ಥಾಪಿಸಿ, ಸಮಾಜದ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ಆ ದಿಸೆಯಲ್ಲಿ ಕೊಡವ ಮತ್ತು ಅರೆಭಾಷೆ ಜನಾಂಗದ ಅಭಿವೃದ್ಧಿಗೂ ನಿಗಮವನ್ನು ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.’

ಜನಾಂಗವು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮೇಲೆತ್ತಲು ನಿಗಮಗಳು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕಿದೆ ಎಂದು ವೀಣಾ ಅಚ್ಚಯ್ಯ ಅವರು ಕೋರಿದರು.

ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಮಾತನಾಡಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ಆ ನಿಟ್ಟಿನಲ್ಲಿ ಅಕಾಡೆಮಿಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಮಾತನಾಡಿ ಕೊಡವ ಮತ್ತು ಅರೆಭಾಷೆ ಜನಾಂಗದವರು ಒಂದಾಗಿ ಹೋಗಬೇಕು. ಸೌರ್ಹಾಧತೆಯಿಂದ, ಭ್ರಾತೃತ್ವದಿಂದ ಇದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣ ಕಜೆಗದ್ದೆ ಅವರು ಮಾತನಾಡಿ ಡಿಸೆಂಬರ್, 2011 ರಲ್ಲಿ ಅಕಾಡೆಮಿ ಸ್ಥಾಪನೆಯಾಗಿ 10 ವರ್ಷವಾಗುತ್ತಿದೆ. ಆ ನಿಟ್ಟಿನಲ್ಲಿ ಕೋವಿಡ್ ನಡುವೆಯೂ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ದಶವರ್ಷದ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಭಾಷೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾಟಕ, ಸಾಕ್ಷ್ಯಚಿತ್ರ, ಮದುವೆ ಶಾಸ್ತ್ರ, ಪುಸ್ತಕಗಳ ಡಿಜಿಟಲೀಕರಣ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷೆ ಮತ್ತು ಸಂಸ್ಕøತಿ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಮಾತನಾಡಿ ಅಕಾಡೆಮಿಗಳು ಒಟ್ಟುಗೂಡಿ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಕೊಡಗು ಗೌಡ ಸಮಾಜದ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ಮಾತನಾಡಿ ಅಕಾಡೆಮಿಯು ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಕಾಡೆಮಿ ಪೂರ್ವ ಅಧ್ಯಕ್ಷರಾದ ಪಿ.ಸಿ.ಜಯರಾಮ, ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಅವರು ಮಾತನಾಡಿದರು.

ಇತ್ತೀಚೆಗೆ ಟೋಕಿಯೋದಲ್ಲಿ ನಡೆದ ಒಲಂಪಿಕ್ ಕ್ರೀಡೆಯ ಹಾಕಿ ತರಬೇತುದಾರರಾದ ಅಂಕಿತಾ ಸುರೇಶ್ ಮಾತನಾಡಿ ಸಾಹಿತ್ಯ ಮತ್ತು ಸಂಸ್ಕøತಿ ಜೊತೆಗೆ ಕ್ರೀಡಾ ಕ್ಷೇತ್ರದ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಾಣ ಮಾಡುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗೆ ಇನ್ನಷ್ಟು ಹೆಚ್ಚಿನ ಒತ್ತು ನೀಡಬೇಕು. ಪ್ರತೀ ಮನೆಯಲ್ಲಿ ಕ್ರೀಡಾಪಟುಗಳು ಇರಬೇಕು ಎಂದು ಅವರು ಸಲಹೆ ಮಾಡಿದರು.

ಸಚಿವರು ಅರೆಭಾಷೆ ಡಿಜಿಟಲ್ ಪುಸ್ತಕಗಳ ಬಿಡುಗಡೆ ಮಾಡಿದರು. ಕೊಡಗು ಗೌಡ ವಿದ್ಯಾ ಸಂಸ್ಥೆಗೆ ಸಂಬಂಧಿಸಿದಂತೆ ಅನಿಲ್ ಎಚ್.ಟಿ. ಅವರು ನಿರ್ದೇಶನ ಮಾಡಿರುವ ಸಾಕ್ಷ್ಯಚಿತ್ರ, ದುರ್ಗಾ ಕುಮಾರ್ ನಾಯರ್ಕೆರೆ ಅವರು ಎನ್.ಎಸ್.ದೇವಿಪ್ರಸಾದ್ ಅವರು ಕುರಿತು ನಿರ್ದೇಶನ ಮಾಡಿರುವ ಸಾಕ್ಷ್ಯಚಿತ್ರ, ಭಾವನಾ ಸಂಗಮ ಸಂಗೀತ ಬಳಗದ ಕೆ.ಆರ್.ಗೋಪಾಲಕೃಷ್ಣ ಅವರು ರಾಗ ಸಂಯೋಜನೆ ಮಾಡಿರುವ ಸಿಡಿ ಬಿಡುಗಡೆ ಮಾಡಲಾಯಿತು.

ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ವಾದ್ಯ ಪರಿಕರ ವಿತರಣೆ ಮಾಡಲಾಯಿತು. ಕಥೆ ಕವಿತೆ, ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಪೂಜಾರೀರ ಮಾದಪ್ಪ ಅವರು ನಿರ್ದೇಶನ ಮಾಡಿರುವ ಹರಿಸೇವೆ ಸಾಕ್ಷ್ಯಚಿತ್ರ, ಲೋಕೇಶ್ ಊರುಬೈಲು ಅವರ ಕಥೆಗಳ ಸಂಪಾದನೆ ಮತ್ತು ನಿರ್ದೇಶನದ ಸಾಕ್ಷ್ಯಚಿತ್ರವನ್ನು ಗಣ್ಯರು ಬಿಡುಗಡೆ ಮಾಡಿದರು.
ಭಾರತೀಯ ಹಾಕಿ ತಂಡದ ತರಬೇತುದಾರರಾದ ಅಂಕಿತಾ ಸುರೇಶ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಪಟ್ಟಡ ಪ್ರಭಾಕರ್ ಅವರಿಂದ ಅಕಾಡೆಮಿ ಗ್ರಂಥಾಲಯಕ್ಕೆ ಕೊಡಗು ಸಂಗಾತಿ ಪತ್ರಿಕೆಯ ಕೊಡುಗೆಗೆ ಅಭಿನಂದನೆ ಸಲ್ಲಿಸಲಾಯಿತು.

ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ದಂಬೆಕೋಡಿ ಎಸ್.ಆನಂದ, ಎ.ಟಿ.ಕುಸುಮಾಧರ, ಡಾ.ವಿಶ್ವನಾಥ ಬದಿಕಾನ, ಪುರುಷೋತ್ತಮ ಕಿರ್ಲಾಯ, ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ, ಡಾ.ಪುರುಷೋತ್ತಮ ಕೆ.ವಿ.ಕರಂಗಲ್ಲು, ಕಿರಣ್ ಕುಂಬಳಚೇರಿ ಮತ್ತು ಭರತೇಶ್ ಅಲಸಂಡೆಮಜಲು ಇತರರು ಇದ್ದರು.

ಅಕಾಡೆಮಿ ಸದಸ್ಯರಾದ ಕೂಡಕಂಡಿ ದಯಾನಂದ ಸ್ವಾಗತಿಸಿದರು. ಧನಂಜಯ ಅಗೋಳಿಕಜೆ ನಿರೂಪಿಸಿದರು. ಕೆ.ಆರ್.ಗೋಪಾಲಕೃಷ್ಣ ಸುಗಮ ಸಂಗೀತ ನುಡಿದರು. ರಿಜಿಸ್ಟ್ರಾರ್ ಚಿನ್ನಸ್ವಾಮಿ ವಂದಿಸಿದರು.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,