Header Ads Widget

ಸರ್ಚ್ ಕೂರ್ಗ್ ಮೀಡಿಯ

ಭಾಗಮಂಡದಲ್ಲಿ ಸರಳವಾಗಿ ನಡೆದ ಪೊಲಿಂಕಾನ ಉತ್ಸವ

ಭಾಗಮಂಡದಲ್ಲಿ ಸರಳವಾಗಿ ನಡೆದ ಪೊಲಿಂಕಾನ ಉತ್ಸವ 


ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯದೇ ಸೌಮ್ಯಳಾಗಿ ಹರಿಯುವ ಮೂಲಕ ರೈತಾಪಿ ವರ್ಗಕ್ಕೆ ಒಳಿತು ಮಾಡಲೆಂದು ಪ್ರಾರ್ಥಿಸುವುದು ‘ಪೊಲಿಂಕಾನ ಉತ್ಸವ’ ವಿಶೇಷ.

ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ಭಾಗಮಂಡಲದವರೆಗೆ ಗುಪ್ತಗಾಮಿನಿಯಾಗಿ ಹರಿದು, ತ್ರಿವೇಣಿ ಸಂಗಮದಲ್ಲಿ ‘ಸುಜ್ಯೋತಿ’, ‘ಕನ್ನಿಕೆ’ ನದಿಗಳೊಂದಿಗೆ ಸೇರುವ ಮೂಲಕ ತಮಿಳುನಾಡಿನವರೆಗೆ ಹರಿದರೂ ಪ್ರವಾಹ ಭೀತಿ ಎದುರಾಗುವುದು ಮಾತ್ರ ಭಾಗಮಂಡಲದಲ್ಲಿ.

ಪ್ರತಿವರ್ಷ ಕರ್ಕಾಟಕ ಅಮಾವಾಸ್ಯೆಯಂದು ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವ ಆಚರಿಸುವುದು ವಾಡಿಕೆ. ತುಂಬಿ ಹರಿದು ಪ್ರವಾಹ ರೂಪಿಣಿಯಾಗುವ ಕಾವೇರಿ ಮಾತೆಗೆ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಧನ್ಯವಾದ ಅರ್ಪಿಸಲಾಗುವುದು.

ಹಿಂದೆ ಮಳೆಗಾಲದಲ್ಲಿ ಕಾವೇರಿ ನದಿ ತುಂಬಿ ಹರಿದು ಪ್ರವಾಹ ಎದುರಾದಾಗ ಜನರು ಸಂಪರ್ಕವಿಲ್ಲದೇ ಪರಿತಪಿಸುವ ಪರಿಸ್ಥಿತಿಯಿತ್ತು. ಆ ಸಂದರ್ಭದಲ್ಲಿ ಹಿರಿಯರು ಸೇರಿಕೊಂಡು ‘ಕಾವೇರಿ ಮಾತೆ ಕೋಪಗೊಂಡಿದ್ದಾಳೆ’ ಎಂದು ಆಕೆಯನ್ನು ಸಂತೈಸುವ ನಿಟ್ಟಿನಲ್ಲಿ ಮುತ್ತೈದೆಯರು ಆಭರಣಗಳನ್ನು ಇರಿಸಿ ತೆಪ್ಪದ ಮೂಲಕ ಸಾಗಿ ಬಾಗಿನ ಅರ್ಪಿಸುತ್ತಿದ್ದರು. ಅದೇ ಪ್ರತೀತಿ ಮುಂದುವರಿದುಕೊಂಡು ಬಂದಿದ್ದು ‘ಪೊಲಿಂಕಾನ ಉತ್ಸವ’ವಾಗಿ ಆಚರಿಸಲಾಗುತ್ತಿದೆ.

ಕೊಡಗಿನ ಪುಣ್ಯಕ್ಷೇತ್ರವಾದ ಭಾಗಮಂಡಲದಲ್ಲಿ ಭಾನುವಾರ ಪೊಲಿಂಕಾನ ಉತ್ಸವ ಆಚರಿಸಲಾಯಿತು. ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಆಚರಣೆ ಮಾಡಲಾಯಿತು.

ಪ್ರತಿ ವರ್ಷ ಭಗಂಡೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಸಲ್ಲಿಸಿ ಉತ್ಸವ ಆಚರಿಸಲಾಗುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಬೆಳಿಗ್ಗೆ ಪೊಲಿಂಕಾನ ಉತ್ಸವ ಮಂಟಪದೊಂದಿಗೆ ಕಾವೇರಿ ಮಾತೆಗೆ ಕರಿಮಣಿ, ಬಿಚ್ಚೋಲೆ, ಸೀರೆ, ವಸ್ತ್ರ ಮತ್ತು ಕುಂಕುಮ ಬಳೆಗಳನ್ನು ಬೆಳ್ಳಿಯ ತಟ್ಟೆಯಲ್ಲಿಟ್ಟು ಪೂಜಿಸಲಾಯಿತು.

ಬಳಿಕ, ಬಾಳೆದಿಂಡುಗಳಿಂದ ರಚಿಸಲಾದ ಪೊಲಿಂಕಾನ ಮಂಟಪವನ್ನು ಭಗಂಡೇಶ್ವರ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿಸಿದ ನಂತರ ತ್ರಿವೇಣಿ ಸಂಗಮದ ಬಳಿ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಂತರ ನದಿ ನೀರಿನಲ್ಲಿ ಬಾಗಿನದಂತೆ ಬಾಳೆದಿಂಡಿನ ಮಂಟಪವನ್ನು ತೇಲಿ ಬಿಡಲಾಯಿತು. ತಲೆತಲಾಂತರಗಳಿಂದ ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತಿದೆ.

ಹೆಚ್ಚು ಪ್ರಚಾರ ಮಾಡದೇ ಸಂಪ್ರದಾಯಕ್ಕೂ ಚ್ಯುತಿ ಬಾರದಂತೆ ದೇವಾಲಯದ ವತಿಯಿಂದ ಸರಳವಾಗಿ ಪೊಲಿಂಕಾನ ಉತ್ಸವವನ್ನು ಆಚರಿಸಲಾಯಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,