( ಸೆಪ್ಟೆಂಬರ್ 2 ವಿಶ್ವ ತೆಂಗಿನಕಾಯಿ ದಿನ; ಈ ಕುರಿತು ವಿಶೇಷ ಲೇಖನ )
ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗಿನಕಾಯಿ ಯಾರಿಗೆ ಬೇಡ ಹೇಳಿ? ‘ಇಂಗು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ’
ಮನೆಯಲ್ಲಿ ಒಂದು ತೆಂಗಿನ ಮರವಿದ್ದಲ್ಲಿ ಅದು ಅವರ ಜೀವನದಲ್ಲಿ ಎಂತಹ ಅದ್ಭುತ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಎಲ್ಲರಿಗೂ ಅರ್ಥವಾಗುವಂತೆ ಮಾಡುವ ಸದುದ್ದೇಶವನ್ನು ವಿಶ್ವ ತೆಂಗಿನ ದಿನದಂದು ಮಾಡಲಾಗುತ್ತದೆ.
ಎಳೆಯದಿದ್ದಾಗ ಎಳನೀರು, ಬಲಿತರೆ ತೆಂಗಿನಕಾಯಿ, ಒಣಗಿದರೆ ಕೊಬ್ಬರಿ ಮತ್ತೆ ಕೊಬ್ಬರಿ ಎಣ್ಣೆ. ಕಸಗುಡಿಸಲು ಪೊರಕೆ, ಮದುವೆಗೆ ಚಪ್ಪರ, ಛಾವಣಿಗೆ ಹೊದಿಕೆ, ಹೊಲ–ಗದ್ದೆಗಳಿಗೆ ಗೊಬ್ಬರ, ಮನೆಗಳಿಗೆ ಉರುವಲು... ಹೀಗೆ ತೆಂಗಿನ ಉಪಯೋಗಗಳು ಅನೇಕ. ತೆಂಗಿನ ನಾರೂ ಇದಕ್ಕೆ ಹೊರತಲ್ಲ.
ದಕ್ಷಿಣ ಭಾರತದ ಹೆಚ್ಚಿನ ಅಡುಗೆ ಮನೆಗಳಲ್ಲಿ ಖಾಯಂ ಸ್ಥಾನ ಪಡೆದಿರುವ ತೆಂಗಿನಕಾಯಿಯ ಹಿರಿಮೆ ದೊಡ್ಡದು. ಅಡಿಗೆಯಲ್ಲಿ ತೆಂಗಿನಕಾಯಿ ಇದ್ದರೆ ಅದರ ರುಚಿ ಅದ್ಬುತ ಎನ್ನುವ ಅರ್ಥದಲ್ಲಿ ‘ಇಂಗು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ’ ಎಂಬ ಗಾದೆಯೇ ಇದೆ.
ತೆಂಗಿನಕಾಯಿಯ ಎಳನೀರು ಬಹಳಷ್ಟು ಪೋಷಕಾಂಶಗಳನ್ನು ಹೊಂದಿದ್ದು, ಸುಲಭವಾಗಿ ಜೀರ್ಣವಾಗುವುದರಿಂದ ಎಳೆಯ ಮಕ್ಕಳಿಗೂ, ಅಶಕ್ತರಿಗೂ ಉತ್ತಮ ಆಹಾರವಾಗಿದೆ. ಬೆಳೆದ ಕಾಯಿಯು ಅಡುಗೆಗೆ ಮಾತ್ರವಲ್ಲದೆ ಹೆಚ್ಚಿನ ಧಾರ್ಮಿಕ ಆಚರಣೆಗಳಲ್ಲಿ ಹಬ್ಬಹರಿದಿನಗಳಲ್ಲಿ ಇದರ ಬೇಡಿಕೆಯು ಬಹುಮುಖ್ಯವಾಗಿದೆ.
ಪ್ರತೀ ವರ್ಷದ ಸೆಪ್ಟೆಂಬರ್ 2ನೇ ದಿನವನ್ನು ಭಾರತ ಸೇರಿದಂತೆ ತೆಂಗಿನಕಾಯಿ ಬೆಳೆಯುವ ಸುಮಾರು 18 ಸದಸ್ಯ ರಾಷ್ಟ್ರಗಳನ್ನು ಒಳಗೊಂಡು ಇಂಡೋನೇಷ್ಯಾದ ಜಕಾರ್ತಾದಲ್ಲಿದಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಏಷ್ಯನ್ ಮತ್ತು ಪೆಸಿಫಿಕ್ ತೆಂಗಿನಕಾಯಿ ಸಮುದಾಯ (ಎಪಿಸಿಸಿ) ಮತ್ತು ಅದರ ಸದಸ್ಯ ರಾಷ್ಟ್ರಗಳು ವಿಶ್ವ ತೆಂಗಿನ ದಿನವನ್ನಾಗಿ ಆಚರಿಸುತ್ತವೆ. ಎಪಿಸಿಸಿಯ ಸದಸ್ಯ ರಾಷ್ಟ್ರಗಳಲ್ಲಿ ತೆಂಗಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಮತ್ತು ತೆಂಗಿನಕಾಯಿ ಉದ್ಯಮದ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ವಿಶ್ವ ತೆಂಗಿನ ದಿನವನ್ನು 2009 ರಲ್ಲಿ ಸ್ಥಾಪಿಸಲಾಯಿತು. ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಮತ್ತು ಪೆಸಿಫಿಕ್ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಎ.ಪಿ.ಸಿ.ಸಿ ರಚನೆಯ ದಿನವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ತೆಂಗಿನಕಾಯಿಗಳ ಪ್ರಾಮುಖ್ಯತೆ ಮತ್ತು ಉಪಯೋಗಗಳನ್ನು ಎತ್ತಿ ಹಿಡಿಯಲು ವಿಶ್ವ ತೆಂಗಿನ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ತೆಂಗಿನ ದಿನವು ನೀತಿಗಳನ್ನು ವ್ಯಾಖ್ಯಾನಿಸಲು ಮತ್ತು ಈ ವಲಯದಲ್ಲಿನ ಕ್ರಿಯೆಯ ಯೋಜನೆಯನ್ನು ವ್ಯಕ್ತಪಡಿಸಲು ಒಂದು ಸಂದರ್ಭವಾಗಿದೆ.
ತೆಂಗಿನಕಾಯಿಯು ಆರೋಗ್ಯಕ್ಕೆ ಉತ್ತಮವಾಗಿದ್ದು, ತೂಕ ನಿರ್ವಹಣೆ, ಸಕ್ಕರೆ ಕಾಯಿಲೆ ನಿಯಂತ್ರಣ, ಜೀರ್ಣಕ್ರಿಯೆಯ ಸುಧಾರಣೆ, ಚರ್ಮದ ಸೋಂಕು ತಡೆ, ಕೂದಲಿನ ಬೆಳವಣಿಗೆಗೆ ಉತ್ತೇಜನ, ಮೂಳೆ ಆರೋಗ್ಯ, ಹಲ್ಲಿನ ಆರೈಕೆ, ಒತ್ತಡ ನಿವಾರಣೆ ಮಾಡುತ್ತದೆ. ತೆಂಗಿನಕಾಯಿಯನ್ನು ವಿಶ್ವದಾದ್ಯಂತ 90ಕ್ಕೂ ಹೆಚ್ಚು ದೇಶಗಳಲ್ಲಿ ಬೆಳೆಯಲಾಗುತ್ತದೆ. ತೆಂಗಿನ ತೋಟವನ್ನು ಸ್ಥಾಪಿಸುವುದು ತುಂಬಾ ಕಷ್ಟವಾದರೂ ಅದನ್ನು ಒಮ್ಮೆ ಬೆಳದ ನಂತರ, ವರ್ಷಪೂರ್ತಿ ತೆಂಗಿನಕಾಯಿ ಕೊಯ್ಲು ಮಾಡುವುದರಿಂದ ಇದು ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ತೆಂಗಿನಕಾಯಿಯ ವಿಶ್ವ ಉತ್ಪಾದನೆಯು ವಾರ್ಷಿಕವಾಗಿ ಸುಮಾರು 55 ದಶಲಕ್ಷ ಟನ್‌ಗಳಷ್ಟಿದೆ.
ತೆಂಗು ಇಡೀ ವಿಶ್ವಕ್ಕೆ ಪಯಣಿಸಿದ ಕತೆಯೂ ರೋಚಕವಾಗಿದೆ. ಐಬೀರಿಯಾ ನೌಕಾಯಾನಿಗಳು ಸಾಹಸಿಗಳಾಗಿದ್ದರು, ಇಡೀ ಪ್ರಪಂಚ ಪರ್ಯಟನೆ ಮಾಡುವುದರಲ್ಲಿ ಅವರಿಗೆ ಎಲ್ಲಿಲ್ಲದ ಆಸಕ್ತಿಯಿತ್ತು. ಅವರು ಮೊದಲು ತೆಂಗನ್ನು ಕಂಡಿದ್ದು ಪೆಸಿಫಿಕ್ ಮಹಾಸಾಗರದಲ್ಲಿರುವ ಗುವಾಮ್ ಎನ್ನುವ ದ್ವೀಪದಲ್ಲಿ. ಭೂಮಿಯನ್ನು ಸುತ್ತುವರಿದಿರುವ ಸಮಭಾಜಕ ವೃತ್ತದಲ್ಲಿರುವ ಉಷ್ಣವಲಯ ಪ್ರದೇಶಗಳಲ್ಲಿ ತೆಂಗು ಸಾಮಾನ್ಯ. ಹೀಗಾಗಿ, ಭಾರತ ಮತ್ತು ಪೆಸಿಫಿಕ್ ಸಾಗರ ಪ್ರದೇಶಗಳೇ ತೆಂಗಿನ ತವರೂರು ಎಂದು ಪರಿಗಣಿಸಲಾಗಿದೆ. ಅನೇಕ ಸಂಶೋಧಕರ ಪ್ರಕಾರ ಭಾರತವೇ ತೆಂಗಿನ ಮೂಲಸ್ಥಾನ.
ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗಿನಕಾಯಿ ಯಾರಿಗೆ ಬೇಡ ಹೇಳಿ? ತಿನ್ನುವ ಆಹಾರದಿಂದ ಹಿಡಿದು ಧಾರ್ಮಿಕ ಆಚರಣೆಗಳಲ್ಲಿ, ಗೃಹೋಪಯೋಗಿಯಾಗಿ, ಔಷಧವಾಗಿ, ಉರುವಲಾಗಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ತೆಂಗಿನ ಉಪಯೋಗ ನೂರಾರು. ಇಂದು ತೆಂಗಿನ ಬಳಕೆ ವ್ಯಾಪಕವಾಗಿದೆ. ಇದರ ಕುರಿತು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಷ್ಟೇ ಅಪಪ್ರಚಾರ ನಡೆದರೂ ಇದರ ಜನಪ್ರಿಯತೆಯನ್ನು ಕುಗ್ಗಿಸಲು ಸಾಧ್ಯವಾಗಿಲ್ಲ.
ಶುಭ ಮತ್ತು ಅಶುಭ ಎರಡೂ ರೀತಿಯ ಧಾರ್ಮಿಕ ಆಚರಣೆಗಳಿಗೆ ತೆಂಗಿನಕಾಯಿಗಳನ್ನು ಒಡೆಯುವುದು ನಮ್ಮಲ್ಲಿರುವ ಪದ್ಧತಿ. ಹೆಚ್ಚು ಕಡಿಮೆ ಎಲ್ಲಾ ಭಾರತೀಯ ಆಚರಣೆಗಳಲ್ಲಿ ತೆಂಗಿನ ಕಾಯಿಯು ಒಂದು ಅತ್ಯಾವಶ್ಯಕವಾದ ಸಮರ್ಪಣೆಯ ವಸ್ತುವಾಗಿರುತ್ತದೆ. ತೆಂಗಿನಕಾಯಿ ಎಂದರೆ ಅಜ್ಞಾನ ಮತ್ತು ಅಹಂಗಳ ಪ್ರತೀಕ ಎಂದರ್ಥ. ತೆಂಗಿನಕಾಯಿ ಚಿಪ್ಪು ತನ್ಮೂಲಕ ಅಂತ:ಶುದ್ಧಿ ಹಾಗೂ ಜ್ಞಾನದ ಹೊಂಬೆಳಕಿಗೆ ದಾರಿಮಾಡಿಕೊಡುವುದಾದರೆ, ಒಳಗಿನ ಬಿಳಿಪದರ ಜ್ಞಾನ ಹಾಗೂ ಆತ್ಮಶುದ್ಧಿ ಸಾಧಿಸಿದ್ದರ ದ್ಯೋತಕ.
ಪ್ರತಿ ವರ್ಷ ಸೆಪ್ಟೆಂಬರ್ 2 ರಂದು ವಿಶ್ವ ತೆಂಗಿನಕಾಯಿ ದಿನವನ್ನಾಗಿ ಆಚರಿಸಲಾಗುತ್ತದೆ. ತೆಂಗಿನಕಾಯಿ ದಿನದಂದು ತೆಂಗಿನಕಾಯಿಯಿಂದ ಮಾಡಿದ ವಿವಿಧ ವಸ್ತುಗಳ ಪ್ರದರ್ಶನ ನಡೆಯುತ್ತದೆ. ತೆಂಗಿನಕಾಯಿಯ ಪ್ರತಿಯೊಂದು ಭಾಗವನ್ನು ನಾವು ವಿಭಿನ್ನ ರೀತಿಯಲ್ಲಿ ಬಳಸುತ್ತೇವೆ. ತೆಂಗಿನಕಾಯಿ ದಿನ ತೆಂಗಿನಕಾಯಿಯ ಮಹತ್ವವನ್ನು ಒತ್ತಿಹೇಳುತ್ತದೆ. ಒಟ್ಟಿಗೆ ಕುಳಿತು ನಾವು ಅದನ್ನು ಹೇಗೆ ಹೆಚ್ಚು ಬಳಸಿಕೊಳ್ಳಬಹುದು ಎಂಬುದನ್ನು ಕಂಡುಹಿಡಿಯಲು ಇದು ಒಂದು ದಿನ. ತೆಂಗಿನಕಾಯಿ ನಮ್ಮ ಭಾರತೀಯ ಸಮಾಜದಲ್ಲಿ ಪೂಜನೀಯವಾಗಿ ಸಾಮಾಜಿಕ-ಸಾಂಸ್ಕೃತಿಕ ಅಗತ್ಯಗಳಿಗೆ ಪ್ರಮುಖವಾದುದು. ಅಲ್ಲದೆ ತೋಟದ ಬೆಳೆಗಳಲ್ಲಿ ಗ್ರಾಮೀಣ ಉದ್ಯೋಗ ಮತ್ತು ಆದಾಯದ ಮೂಲವಾಗಿದೆ ಎಲ್ಲಾ ನಮ್ಮ ತೆಂಗು ಬೆಳೆಗಾರರಿಗೆ ವಿಶ್ವ ತೆಂಗಿನ ದಿನದ ಶುಭಾಶಯಗಳು.
ಲೇಖಕರು: ✍️.... ಕಾನತ್ತಿಲ್ ರಾಣಿಅರುಣ್
(ಪತ್ರಕರ್ತರು)
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network