Ad Code

Responsive Advertisement

"ಕೈಲ್‌ಮುಹೂರ್ತ" ಎಂಬ ಕೊಡಗಿನ ಆಯುಧ ಪೂಜೆ

"ಕೈಲ್‌ಮುಹೂರ್ತ" ಎಂಬ ಕೊಡಗಿನ ಆಯುಧ ಪೂಜೆ


"ಕೈಲ್‌ಮುಹೂರ್ತ" ಹಬ್ಬವನ್ನು ಕೊಡವ ಭಾಷೆಯಲ್ಲಿ "ಕೈಲ್‌ಪೊಳ್ದ್" ಎಂದು ಕರೆಯಲಾಗುತ್ತದೆ. "ಕೈಲ್" ಎಂದರೆ ಆಯುಧ "ಪೊಳ್ದ್" ಎಂದರೆ ಹಬ್ಬ ಹಾಗಾಗಿ ಕೊಡಗಿನವರಿಗೊಂದು ಆಯುಧಪೂಜೆಯೇ... "ಕೈಲ್‌ಮುಹೂರ್ತ" ಹಬ್ಬವು ಕೊಡಗಿನವರ ಲೆಕ್ಕದ ಪ್ರಕಾರ ಚಿನ್ಯಾರ್ ತಿಂಗಳ ಹದಿನೆಂಟನೇ ತಾರೀಖಿನಂದು ಬರುತ್ತದೆ. ಅಂದರೆ ಪ್ರತಿವರ್ಷ ಸೆಪ್ಟಂಬರ್ 3ರಂದು ಆಚರಣೆ ನಡೆಯುತ್ತದೆ.‌

ಹಿಂದೆ ಮಳೆಗಾಲಕ್ಕೆ ಮುನ್ನ ಬೇಟೆ ಇನ್ನಿತರೆ ಕಾರ್ಯಗಳಲ್ಲಿ ತೊಡಗಿರುತ್ತಿದ್ದ ಕೊಡಗಿನ ಜನ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಆಯುಧಗಳನ್ನು ಕೆಳಗಿಟ್ಟು ನೇಗಿಲು, ಗುದ್ದಲಿಗಳನ್ನು ಹಿಡಿದು ಗದ್ದೆಗಿಳಿದುಬಿಡುತ್ತಿದ್ದರು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಗದ್ದೆ ಕೆಲಸ ಆರಂಭವಾದರೆ ಅದು ಆಗಸ್ಟ್ ತಿಂಗಳಲ್ಲಿ ಮುಕ್ತಾಯವಾಗುತ್ತಿತ್ತು. ಸುರಿಯುವ ಮಳೆಯಲ್ಲಿ ಗದ್ದೆ ಕೆಲಸ ಮಾಡುವುದೆಂದರೆ ಸುಲಭದ ಕೆಲಸವಾಗಿರಲಿಲ್ಲ. ಜೊತೆಗೆ ನಿರ್ದಿಷ್ಟ ಸಮಯದಲ್ಲಿ ಮಾಡಿ ಮುಗಿಸಲೇಬೇಕಾಗಿದ್ದುದರಿಂದ ಬಿಡುವಿಲ್ಲದ ದುಡಿಮೆ ಅನಿವಾರ್ಯವಾಗಿತ್ತು. ಈ ದಿನಗಳಲ್ಲಿ ಕೋವಿ, ಕತ್ತಿ, ಒಡಿಕತ್ತಿ, ಪೀಚೆಕತ್ತಿ ಯನ್ನು  ಕನ್ನಿಕೋಂಬರೆ ಎಂದು ಕರೆಯಲ್ಪಡುವ ದೇವರ ಕೋಣೆಯಲ್ಲಿಟ್ಟುಬಿಡುವರು. 

ಕಕ್ಕಡ(ಆಟಿ) ಮಾಸ (ಜು. 17ರಿಂದ ಆ. 16ರವರೆಗಿನ ಒಂದು ತಿಂಗಳ ಅವಧಿ)ದಲ್ಲಿ ಶುಭಕಾರ್ಯ, ಬೇಟೆ ಮುಂತಾದ ಯಾವುದೇ ಕಾರ್ಯವನ್ನು ಮಾಡುತ್ತಿರಲಿಲ್ಲ. ಕೃಷಿ ಚಟುವಟಿಕೆಯಷ್ಟೆ ಪ್ರಮುಖವಾಗಿರುತ್ತಿತ್ತು. ಸಿಂಹ ಮಾಸದ ಹದಿನೇಳರೊಳಗೆ ಎಲ್ಲರೂ ತಮ್ಮ ಗದ್ದೆಗಳಲ್ಲಿ ನಾಟಿ ಕೆಲಸವನ್ನು ಮುಗಿಸಲೇ ಬೇಕು. ಒಂದು ವೇಳೆ ಯಾರದಾದರೂ ಕೆಲಸ ಮುಗಿಯುವಂತೆ ತೋರುತ್ತಿಲ್ಲವೆಂದು  ಊರವರು ಗಮನಕ್ಕೆ ಕಂಡುಬಂದರೆ ಅವರು ಮನೆಗೊಬ್ಬರಂತೆ ಮುಯ್ಯಾಳಾಗಿ ಹೋಗಿ ಕೆಲಸವನ್ನು ಮುಗಿಸುವರು. ಹದಿನೆಂಟನೇ ದಿನದಂದು ಈ ಮೊದಲು ತೆಗೆದಿರಿಸಿದ ಆಯುಧಗಳನ್ನು ನೇಮಾನುಸಾರ ಧಾರಣ ಮಾಡಬೇಕು. ಸ್ನಾನಾದಿ ಕೆಲಸಗಳ ನಂತರ ಕನ್ನಿಕೋಂಬರೆಯಲ್ಲಿಟ್ಟಿರುವ ಆಯುಧಗಳನ್ನು ಹೊರದೆಗೆದು ಸ್ವಚ್ಛಗೊಳಿಸಿ, ಕನ್ನಿಕೋಂಬರೆಯಲ್ಲಿ ತಾಳೆಯೋಲೆಯ ಚಾಪೆಯ ಮೇಲೆ ಪೂರ್ವಕ್ಕೆ ಅಭಿಮುಖವಾಗಿ ಓರಣವಾಗಿ ಇರಿಸುವರು. 

ನೆಲ್ಲಕ್ಕಿ ನಡುಬಾಡೆ ಎಂದು ಕರೆಯಲ್ಪಡುವ ಮನೆಯ ನಡು ಹಜಾರದಲ್ಲಿಯೂ ಇವುಗಳನ್ನಿಡಬಹುದು. ಅಲ್ಲಿರುವ ತೂಗುದೀಪವನ್ನು ಹಚ್ಚುವರು. ಆಯುಧಗಳನ್ನು ವಿವಿಧ ಹೂವುಗಳಿಂದ ಸಿಂಗರಿಸುವರು. ವಿಶೇಷವಾಗಿ ಕೋವಿಯನ್ನು ತೋಕ್ ಪೂ(ಕೋವಿ ಹೂ)ಗಳಿಂದ ಅಲಂಕರಿಸುವರು. ಈ ಹೂವಿಗೆ ಕನ್ನಡದಲ್ಲಿ ಗೌರಿ ಹೂ ಎನ್ನುವರು. ಇದು ಆರ್ಕಿಡ್ ಜಾತಿಗೆ ಸೇರಿದ್ದು ಆಂಗ್ಲದಲ್ಲಿ ಗ್ಲೋರಿಯೊಸ ಲಿಲಿ ಎನ್ನುವ ಹೆಸರಿದೆ ಮನೆಯವರೆಲ್ಲರೂ ಸೇರಿದ ಮೇಲೆ ಮನೆಯ ಯಜಮಾನನು ಆಯುಧಗಳನ್ನು ಚಂದನ, ಧೂಪ, ದೀಪಾದಿಗಳಿಂದ ಪೂಜಿಸುವನು. ಒಂದು ತುದಿ ಬಾಳೆಯೆಲೆಯಲ್ಲಿ ಮಾಡಿದ ಅಡಿಗೆಯನ್ನೆಲ್ಲಾ ಸ್ವಲ್ಪ-ಸ್ವಲ್ಪ ಹಾಕಿ, ಅದನ್ನು ಆಯುಧಗಳ ಪಕ್ಕದಲ್ಲಿಡುವರು. ಎಲ್ಲರೂ ತೂಗುದೀಪವನ್ನೂ, ಆಯುಧಗಳನ್ನೂ ಕೈಗಳಿಂದ ಮುಟ್ಟಿ ನಮಸ್ಕರಿಸುವರು. ಕಿರಿಯರು ಹಿರಿಯರ ಕಾಲ್ಮುಟ್ಟಿ ನಮಸ್ಕರಿಸುವರು.

ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳೆಲ್ಲವೂ ಇತರೆಡೆಗಳಲ್ಲಿ ಆಚರಿಸುವ ಹಬ್ಬಗಳಿಗಿಂತ ಭಿನ್ನ, ವೈಶಿಷ್ಟ್ಯಪೂರ್ಣವಾಗಿರುತ್ತದೆ. ಇಲ್ಲಿಯ ಹಬ್ಬಗಳ ಆಚರಣೆಯನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಪ್ರತಿಯೊಂದು ಹಬ್ಬವೂ ಭತ್ತದ ಕೃಷಿಗೆ ಅನುಗುಣವಾಗಿ ಆಚರಣೆಗೆ ಬಂದಿರುವುದು ಗೋಚರಿಸುತ್ತದೆ. ಜೊತೆಗೆ ಎಲ್ಲಾ ಹಬ್ಬಗಳ ಹಿಂದೆಯೂ ಶೂರತ್ವ, ಕ್ರೀಡೆಯ ಹಿನ್ನೆಲೆ, ಸಂಪ್ರದಾಯದ ಕಾಂತಿಯೊಂದಿಗೆ ಸಂಭ್ರಮ ಉಲ್ಲಾಸ ಎದ್ದು ಕಾಣುತ್ತಿರುತ್ತದೆ.

ಕೈಲ್‌ ಮುಹೂರ್ತ ಹಬ್ಬಕ್ಕೆ ತನ್ನದೇ ಆದ ಆಚರಣೆ ಹಾಗೂ ರೋಮಾಂಚನಕಾರಿ ಹಿನ್ನೆಲೆಯಿದೆ. ಗುಡ್ಡಕಾಡುಗಳಿಂದ ಕೂಡಿದ ಕೊಡಗಿನಲ್ಲಿ ಹಿಂದೆ ಭತ್ತದ ಕೃಷಿ ಹೊರತುಪಡಿಸಿದರೆ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯಿರಲಿಲ್ಲ. ಹೀಗಾಗಿ ಕೃಷಿಕರಿಗೆ ನಿರ್ದಿಷ್ಟ ಕೃಷಿ ಭೂಮಿಗಳಿರಲಿಲ್ಲ. ಅವರವರ ಶಕ್ತಿ, ಸಾಮರ್ಥ್ಯಕ್ಕನುಗುಣವಾಗಿ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಈ ಸಂದರ್ಭ ಬೆಳೆಗಳನ್ನು ನಾಶ ಮಾಡಲು ಬರುವ ವನ್ಯ ಮೃಗಗಳೊಂದಿಗೆ ಹೋರಾಡಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ಆಯುಧಗಳ ಅಗತ್ಯವಿತ್ತು. ಅಲ್ಲದೆ ಅದನ್ನು ಬಳಸಲು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಡಲಾಗುತ್ತಿತ್ತು. ಆದುದರಿಂದ ಅಂದಿನಿಂದ ಇಂದಿನವರೆಗೆ ಇಲ್ಲಿನವರು ಶೂರರೇ. ಕೋವಿಯನ್ನು ಹಿಡಿಯದ ಕೈಗಳೇ ಇಲ್ಲವೆನ್ನಬೇಕು.

ಕೊಡಗಿನಲ್ಲಿ ಕೈಲ್‌ ಮುಹೂರ್ತ ಹಬ್ಬದ ದಿನದಂದು ಊರ ಮೈದಾನದಲ್ಲಿ ವಿವಿಧ ಕ್ರೀಡಾಕೂಟ ನಡೆಯುತ್ತಿರುತ್ತವೆ. ಮನೆಗಳಲ್ಲಿ ಹಂದಿಮಾಂಸದ ಸಾರು ಹಾಗೂ ಅಕ್ಕಿ ಕಡಂಬಿಟ್ಟು(ಕಡುಬು)ನ ಅಡುಗೆ ಘಮಘಮಿಸುತ್ತಿರುತ್ತದೆ. ಚಿಕ್ಕವರು ದೊಡ್ಡವರೆನ್ನದೆ ಎಲ್ಲರೂ ಸಾಂಪ್ರದಾಯಿಕವಾಗಿ ಮದ್ಯ ಸೇವಿಸಿ ಖುಷಿಯಾಗಿರುತ್ತಾರೆ. ಹೀಗೆ ಈ ಹಬ್ಬ ಒಂದೇ ದಿನದಲ್ಲಿ ಮುಕ್ತಾಯಗೊಂಡರೂ ಹಬ್ಬದ ನೆನಪು ಮಾತ್ರ ಅನೇಕ ದಿನಗಳವರೆಗೆ ಕೊಡಗಿನವರ ಮನಸ್ಸಿನಲ್ಲಿ ತೇಲುತ್ತಲೇ ಇರುತ್ತದೆ. ಪ್ರಾಚೀನ ಸಮಾಜದ ಅಗತ್ಯಗಳಲ್ಲೊಂದಾದ ಬೇಟೆಯ ಪ್ರಾಮುಖ್ಯವನ್ನು ಎತ್ತಿ ತೋರಿಸುವುದಕ್ಕಾಗಿ ಈ ಹಬ್ಬಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ.

ಲೇಖಕರು: ✍️.... ವಿವೇಕ್‌ ನರೇನ್

                                   (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,