Header Ads Widget

ಸರ್ಚ್ ಕೂರ್ಗ್ ಮೀಡಿಯ

ಅತಿವೃಷ್ಠಿಯಿಂದ ಅಪಾರ ಬೆಳೆ ನಷ್ಟ - ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಮನವಿ

ಅತಿವೃಷ್ಠಿಯಿಂದ ಅಪಾರ ಬೆಳೆ ನಷ್ಟ - ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಮನವಿ

ಕೊಡಗು ಬೆಳೆಗಾರರ ಒಕ್ಕೂಟದಿಂದ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಕೆ


ಅತಿವೃಷ್ಠಿಯಿಂದ ಉಂಟಾಗಿರುವ ಬೆಳೆ ನಷ್ಟ ಸಮೀಕ್ಷೆ ನಡೆಸಲು ಕಾಫಿ ಮಂಡಳಿಯ ಅಧಿಕಾರಿಗಳಿಗೆ ಹಾಗೂ ಜಿಲ್ಲೆಯಲ್ಲಿ ಬಹುವಾರ್ಷಿಕ ಬೆಳೆಗಳಾದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಯುತ್ತಿರುವುದರಿಂದ ಈ ಬೆಳೆಗಳನ್ನು ಪ್ರತಿ ವರ್ಷ ಆರ್.ಟಿ.ಸಿ.ಯಲ್ಲಿ ಬೆಳೆ ಕಲಂನಲ್ಲಿ ನಮೂದಿಸುವ ಸಮೀಕ್ಷೆಯನ್ನು ಕೈಬಿಡುವ ಬಗ್ಗೆ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು. 

ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಯವರನ್ನು ಬೆಳೆಗಾರರ ಒಕ್ಕೂಟದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭ ಈ ಬಗ್ಗೆ ಅವರು ತಿಳಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿದ ಪ್ರಮುಖರು ಜಿಲ್ಲೆಯು ಪ್ರತಿವರ್ಷ ಪ್ರಾಕೃತಿಕ ವಿಕೋಪ ಹಾಗೂ ಅತಿವೃಷ್ಟಿಗೆ ಸಿಲುಕುತ್ತಿದ್ದು, ಇದರ ನೇರ ದುಷ್ಪರಿಣಾಮ ಬೆಳೆಗಾರರ ಮೇಲೆ ಬೀರುತ್ತಿದ್ದು, ಅಪಾರ ಪ್ರಮಾಣದಲ್ಲಿ ಬೆಳೆನಷ್ಟ ಉಂಟಾಗುತ್ತಿದೆ. ಬೆಳೆ ನಷ್ಟದಿಂದ ಬೆಳೆಗಾರ ಸಮುದಾಯ ಆರ್ಥಿಕವಾಗಿ ಹಿಂದುಳಿಯುವಂತೆ ಆಗಿದೆ. 

ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಅತಿವೃಷ್ಠಿ ಹಾಗೂ ಬಿರುಗಾಳಿಗೆ ತುತ್ತಾಗಿ ಅಪಾರ ಪ್ರಮಾಣದಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಬೆಳೆ ನಷ್ಟವಾಗಿದೆ. ನಿರಂತರ ಮಳೆಯಿಂದ ಈ ಬೆಳೆಗಳಿಗೆ ಅತಿ ತೇವಾಂಶದಿಂದ ಕೊಳೆ ರೋಗಕ್ಕೆ ತುತ್ತಾಗಿ ಹೆಚ್ಚಿನ ನಷ್ಟವಾಗಿರುತ್ತದೆ. ಸತತ  ಕಳೆದ ಮೂರು ವರ್ಷದಿಂದ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ ಬೆಳೆನಷ್ಟವಾಗಿದ್ದು, ಮತ್ತೆ ರೈತ ಹಾಗೂ ಬೆಳೆಗಾರ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಬೆಳೆ ನಷ್ಟ ಸಮೀಕ್ಷೆ ನಡೆಸುವ ಸಂದರ್ಭ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಮಳೆಯ ಸರಾಸರಿಯನ್ನು ಪರಿಗಣಿಸದೇ ಹೋಬಳಿ ಮಟ್ಟದಲ್ಲಿ ಆಗಿರುವ ಒಟ್ಟು ಮಳೆಯ ಅಂಕಿ ಅಂಶವನ್ನು ಪರಿಶೀಲಿಸಿ ಸಮೀಕ್ಷೆ ನಡೆಸಿದಾಗ ಮಾತ್ರ ನೈಜ್ಯ ಬೆಳೆ ನಷ್ಟದ ಮನವರಿಕೆಯಾಗಲಿದೆ ಎಂದು ಗಮನ ಸೆಳೆದರು. 

ಜಿಲ್ಲೆಯಲ್ಲಿ  ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಆರ್.ಟಿ.ಸಿಯಲ್ಲಿ ಬೆಳೆ ನಮೂದು ಮಾಡುವ ಕಾರ್ಯಕ್ರಮದ ಮೊಬೈಲ್ ಆ್ಯಪ್‌ನಲ್ಲಿ ಸಂಬಂಧಿ ಅಪ್ಲಿಕೇಷನ್‌ನಲ್ಲಿ ಸ್ವಯಂ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಬಹಳಷ್ಟು ಅವಿಧ್ಯಾವಂತ, ವಯೋವೃದ್ದ ಹಾಗೂ ಸ್ಮಾರ್ಟ್ ಫೋನ್ ಇಲ್ಲದ ರೈತರು, ಬೆಳೆಗಾರರಿಗೆ ಈ ಸ್ವಯಂ ಬೆಳೆ ದಾಖಲಾತಿ ಸಾಧ್ಯವಾಗುತ್ತಿಲ್ಲ. 

ಕೊಡಗು ಜಿಲ್ಲೆಯಲ್ಲಿ ಬಹುವಾರ್ಷಿಕ ಬೆಳೆಗಳಾದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳು ಬೆಳೆಯಲಾಗುತ್ತಿದ್ದು, ಇತರ ಜಿಲ್ಲೆಗಳಂತೆ ಪ್ರತಿ ವರ್ಷ ಹಾಗೂ 4 ರಿಂದ 6 ತಿಂಗಳಿನಲ್ಲಿ ಬೆಳೆ ಬದಲಾಗುವುದಿಲ್ಲ. ಆದ್ದರಿಂದ ಜಿಲ್ಲೆಯ ಮಟ್ಟಿಗೆ ಆರ್.ಟಿ.ಸಿ ಯಲ್ಲಿ ಬೆಳೆ ದಾಖಲು ಮಾಡುವ ಈ ಕಾರ್ಯಕ್ರಮವನ್ನು ಕೈಬಿಡಬೇಕಾಗಿ ಕೇಳಿಕೊಳ್ಳುತ್ತೇವೆ. ಅಲ್ಲದೇ 4 ರಿಂದ 6 ತಿಂಗಳಲ್ಲಿ ಆರ್.ಟಿ.ಸಿ. ಗಳಲ್ಲಿ ನಮೂದಾಗಿರುವ ಬೆಳೆಯನ್ನು ತೆಗೆದು ಹಾಕಲಾಗುತ್ತಿದ್ದು, ಇದರಿಂದ ಬ್ಯಾಂಕಿನಲ್ಲಿ ಸಾಲ ಪಡೆಯಲು ಸರಕಾರದ ಸೌಲಭ್ಯ ಹಾಗೂ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ರೈತರು ಹಾಗೂ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಬೆಳೆ ನಮೂದನ್ನು ಬೆಳೆ ಕಲಂನಿಂದ  ತೆಗೆಯದೇ ಬೆಳೆಗಾರರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿ ಮನವಿ ಮಾಡಿದರು.  

ಬೆಳೆಗಾರರು ಹಾಗೂ ರೈತರು ಬ್ಯಾಂಕಿನಲ್ಲಿ ಸಾಲ ಪಡೆದು ಅದನ್ನು ಸಂಪೂರ್ಣ ಪಾವತಿಸಿದ ನಂತರ ಸದರಿ ಬ್ಯಾಂಕಿನವರು ಸಾಲ ಮರುಪಾವತಿಸಿದ ಋಣಮುಕ್ತ ಬಗ್ಗೆ ನೋಂದಾವಣೆ ಕಚೇರಿಯಲ್ಲಿ ಮಾಡಿಕೊಂಡಿರುವ ನೋಂದಾವಣಿಯಲ್ಲಿ ಅಳಿಸಲು ಪತ್ರವನ್ನು ನೀಡಿದ್ದರೂ ಸಹ, ಈ ಸಂದರ್ಭ ನೋಂದಾವಣಿ ಕಚೇರಿಯಲ್ಲಿ ಕನಿಷ್ಟ ಇಬ್ಬರು ಸಾಕ್ಷಿದಾರರನ್ನು ಕೇಳುತ್ತಿರುವುದು ಬೆಳೆಗಾರರಿಗೆ ಹಾಗೂ ರೈತರಿಗೆ ತೀವ್ರ ತೊಂದರೆ ಹಾಗೂ ಖರ್ಚಿಗೆ ತುತ್ತಾಗುವಂತಾಗಿದೆ. ಆದ್ದರಿಂದ ಈ ಬಗ್ಗೆ ಸಾಲ ಮುಗಿದ ನಂತರ ಬ್ಯಾಂಕಿನವರೇ ನೇರವಾಗಿ ನೊಂದಾವಣಿ ಕಚೇರಿಗೆ ಸಾಲ ಮುಕ್ತ ಪತ್ರವನ್ನು ರವಾನಿಸಿ ನೋಂದಾವಣಿಯಲ್ಲಿ ರದ್ದುಗೊಳಿಸುವಂತೆ ಮನವಿಯಲ್ಲಿ ವಿವರಿಸಿದರು. 

ಇದಲ್ಲದೇ ಪಡಿತರ ಚೀಟಿ, ಇ.ಕೆ.ವೈ.ಸಿ  ಮಾಡುವ ಸಮಯವನ್ನು ವಿಸ್ತರಿಸಬೇಕು. ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ನಿಗಧಿತ ಅವಧಿಯಲ್ಲಿ ಈ ಪ್ರಕ್ರಿಯೆ ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು. 

ಈ ಸಂದರ್ಭ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್‌ಮಾದಪ್ಪ, ಖಜಾಂಚಿ ಮಾಣೀರ ವಿಜಯ್‌ನಂಜಪ್ಪ, ಸದಸ್ಯರುಗಳಾದ ಕಾಳಿಮಾಡ ತಮ್ಮುಮುತ್ತಣ್ಣ, ಕಡೇಮಾಡ ಕುಸುಮಾಜೋಯಪ್ಪ, ಮದ್ರೀರ ಗಿರೀಶ್‌ಗಣಪತಿ, ಕೋಳೆರ ಭಾರತಿ, ಕೋಡಿಮಣಿಯಂಡ ವಿಶ್ವನಾಥ್, ಅಚ್ಚೆಯಂಡ ವೇದಿತ್‌ಮುತ್ತಪ್ಪ ಹಾಜರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,