ಕಾವೇರಿ ತುಲಾಸಂಕ್ರಮಣ ಹಾಗೂ ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ಕೊಡಗಿನಲ್ಲಿ ಎರಡು ತಿಂಗಳ ಕಾಲ ಪ್ರವಾಸೋದ್ಯಮವನ್ನು ಸಂಪೂರ್ಣ ಸ್ಥಗಿತಗೊಳಿಸಲು ಸೇವ್ ಕೊಡಗು ಫ್ರಮ್ ಟೂರಿಸಂ ಒತ್ತಾಯ
●ಕೊಡಗಿನ ಮೂಲ ನಿವಾಸಿಗಳು ಹಾಗೂ ಅನಾದಿಕಾಲದಿಂದಲೂ ಬದುಕುಕಟ್ಟಿಕೊಂಡ ಕಾವೇರಿ ಭಕ್ತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಕಾವೇರಿ ತುಲಾ ಸಂಕ್ರಮಣದ ಹಿತದೃಷ್ಟಿಯಿಂದ ಹಾಗೂ ಇಲ್ಲಿನ ಭಕ್ತರ ಆರೋಗ್ಯ ದೃಷ್ಟಿಯಿಂದ ಮತ್ತು ಇದೀಗ ತಾನೇ ಆರಂಭವಾದ ಶಾಲಾ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೊಡಗಿನಲ್ಲಿ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು "ಸೇವ್ ಕೊಡಗು ಫ್ರಮ್ ಟೂರಿಸಂ ಒಕ್ಕೂಟ" ಒತ್ತಾಯಿಸಿದೆ.
●ಈ ಕುರಿತು ಸೋಮವಾರ ಪೊನ್ನಂಪೇಟೆ ಸಮೀಪದ ಖಾಸಗಿ ಹಾಲ್'ವೊಂದರಲ್ಲಿ ನಡೆದ "ಸೇವ್ ಕೊಡಗು ಫ್ರಮ್ ಟೂರಿಸಂ" ಒಕ್ಕೂಟದ ಎರಡನೇ ಸಭೆಯಲ್ಲಿ ಈ ಮೇಲಿನ ನಿರ್ಣಯವನ್ನು ಕೈಗೊಂಡು ಸದ್ಯದಲ್ಲಿಯೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಮಾಡಿ ಮನವಿ ನೀಡಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಇದಕ್ಕೂ ಸ್ಪಂದಿಸದಿದ್ದರೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಮುಂದಿನ ಹೋರಾಟದ ಹಾದಿಯ ಬಗ್ಗೆ ರೂಪುರೇಷೆಗಳನ್ನು ತಯಾರಿಸಲು ಚಿಂತನೆ ನಡೆಸಲಾಯಿತು.
●ಸಭೆಯಲ್ಲಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಇತರ ರಾಜಕೀಯ ಪಕ್ಷಗಳ ಪ್ರಮುಖರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸಮಾನ ಮನಸ್ಕ ಯುವಕ ಯುವತಿಯರು ಪಾಲ್ಗೊಂಡು ಪ್ರವಾಸೋದ್ಯಮದಿಂದ ಜಿಲ್ಲೆಯಲ್ಲಿ ಆಗುತ್ತಿರುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ, ನೆರೆ ರಾಜ್ಯ ಕೇರಳದಲ್ಲಿ ಅಧಿಕವಾಗುತ್ತಿರುವ ಕೊರೋನ ಸೋಂಕು ಹಾಗೂ ನಿಫಾ ವೈರಸ್ ಕೊಡಗಿನ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾದ್ಯತೆ ಇದ್ದು, ಹಾಗೂ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ತಜ್ಞರ ವರದಿಯನ್ನು ಆದಾರವಾಗಿಟ್ಟುಕೊಂಡು ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮದೊಂದಿಗೆ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಡಲು ಜಿಲ್ಲಾಡಳಿತವನ್ನು ಒತ್ತಾಯಿಸಲು ಸಭೆ ತಿರ್ಮಾನಿಸಿತು.
●ಸ್ಥಳೀಯ ಮೂಲ ನಿವಾಸಿಗಳ ಪ್ರಮುಖ ಹಬ್ಬಗಳಲ್ಲಿ ಒಂದಾಂದ ಕಾವೇರಿ ತುಲಾ ಸಂಕ್ರಮಣದ ತಿರ್ಥೋದ್ಬವ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇದೀಗ ಕೊರೋನ ಸಂಕಷ್ಟ ಕಾಲವಾಗಿರುವ ಕಾರಣ ಕಳೆದ ವರ್ಷ ಹೊರಗಿನ ಭಕ್ತರನ್ನು ತಡೆಹಿಡಿಯಲಾಗಿತ್ತು. ಇದರ ಜೊತೆಗೆ ಸ್ಥಳೀಯ ಭಕ್ತರನ್ನು ಕೂಡ ತಡೆದು ಗೊಂದಲ ಸೃಷ್ಟಿಯಾಗಿತ್ತು. ಈ ವರ್ಷ ಕೂಡ ಕೊರೋನ ಸೋಂಕು ಅಧಿಕವಾಗಿ ಸ್ಥಳೀಯರಿಗೆ ಗೊಂದಲ ಉಂಟಾಗಬಾರದು ಎಂಬ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಅಕ್ಟೋಬರ್ ಒಂದರಿಂದ ಪ್ರವಾಸಿಗರು ಜಿಲ್ಲೆಗೆ ಬರುವುದು ತಡೆಯಬೇಕಿದೆ ಹಾಗೂ ತುಲಾ ಸಂಕ್ರಮಣದಿಂದ ಕಿರು ಸಂಕ್ರಮಣದವರೆಗೂ ಅಂದರೆ ಅಕ್ಟೋಬರ್ ಹಾಗೂ ನವೆಂಬರ್ ಎರಡು ತಿಂಗಳು ಸಂಪೂರ್ಣ ಪ್ರವಾಸೋದ್ಯಮವನ್ನು ಸ್ಥಗಿತಗೊಳಿಸುವ ಮೂಲಕ ಸ್ಥಳೀಯ ನಿವಾಸಿಗಳ ಧಾರ್ಮಿಕ ಕಟ್ಟುಪಾಡುಗಳನ್ನು ಆಚರಿಸಲು ಅವಕಾಶ ಮಾಡಿಕೊಡಬೇಕಾಗಿದೆ ಎಂದು ಸಭೆ ಒತ್ತಾಯಿಸಿದೆ.
●ಈ ಮೂಲಕ ಸ್ಥಳೀಯರಿಗೆ ಯಾವುದೇ ತೊಂದರೆ ಇಲ್ಲದೆ ತಿರ್ಥೋದ್ಬವದಲ್ಲಿ ಪಾಲ್ಗೊಳ್ಳಲು ಹಾಗೂ ತಲತಲಾಂತರದಿಂದ ಆಚರಿಸಿಕೊಂಡು ಬಂದಿರುವ ಕಟ್ಟುಪಾಡುಗಳನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂಬುದು ಸಭೆಯ ಒತ್ತಾಯ.
●ಕರ್ಫ್ಯೂ ತೆರವುಗೊಂಡ ನಂತರ ಪ್ರವಾಸಿಗರು ಜಿಲ್ಲೆಯ ಸಾಮರ್ಥ್ಯಕ್ಕೂ ಮೀರಿ ಬರುತ್ತಿದ್ದಾರೆ, ಕೊರೋನ ಪಾಸಿಟಿವಿಟಿ ದರ ಕೂಡ ಕಣ್ಣಾಮುಚ್ಚಾಲೆ ಆಡುತ್ತಿದೆ. ಕರ್ಫ್ಯೂ ತೆರವುಗೊಳ್ಳುವ ವಾರಕ್ಕೂ ನಂತರದ ದಿನಕ್ಕೂ ಹೋಲಿಸಿದರೆ ಪಾಸಿಟಿವಿಟಿ ದರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ.
●ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಪ್ರವಾಹದಂತೆ ಹರಿದುಬರುತ್ತಿರುವ ಪ್ರವಾಸಿಗರ ಆಗಮನದಿಂದ ಮತ್ತೆ ಕೊಡಗಿನಲ್ಲಿ ಕೊರೋನ ಸ್ಪೋಟಗೊಂಡು ಸ್ಥಳೀಯ ಭಕ್ತಾದಿಗಳಿಗೆ ಕಾವೇರಿ ತಿರ್ಥೋದ್ಬವದಲ್ಲಿ ಪಾಲ್ಗೊಳ್ಳಲು ಗೊಂದಲ ಸೃಷ್ಟಿಯಾದರೆ ಇದಕ್ಕೆ ನೇರ ಹೊಣೆ ಜಿಲ್ಲಾಡಳಿತವಾಗಲಿದೆ. ಈ ಎಲ್ಲಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಒಂದಷ್ಟು ಕಠಿಣ ನಿರ್ಣಯವನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತೆಗೆದುಕೊಳ್ಳಬೇಕಿದೆ.
●ಕಾವೇರಿ ಮಾತೆಯನ್ನು ಹೆತ್ತ ತಾಯಿಯಂತೆ ಪೂಜಿಸುವ ಮೂಲ ನಿವಾಸಿಗಳ ಕುಟುಂಬದಲ್ಲಿ ಒಂದು ಮಗು ಜನಿಸಿದ್ದರೆ ಆ ಮಗುವಿನ ಮೊದಲ ತಲೆಯ ಕೂದಲನ್ನು ಭಾಗಮಂಡಲದಲ್ಲಿ ಹರಕೆಯಾಗಿ ಒಪ್ಪಿಸಿ, ವಿವಿಧ ಕಾರ್ಯದಲ್ಲಿ ತೊಡಗುವ ಸ್ಥಳೀಯರು ಸತ್ತಾಗ ಕೂಡ ಅವರ ಹೆಸರಿನಲ್ಲಿ ಕಿರಿಯರು ಕೇಶಮುಂಡನಾ ಮಾಡಿ ಪಿಂಡಪ್ರಧಾನ ಮಾಡುತ್ತಾರೆ. ಹಾಗೇ ವರ್ಷಕ್ಕೊಮ್ಮೆ ಕಾವೇರಿ ತುಲಾಸಂಕ್ರಮಣದಲ್ಲಿ ತಿರ್ಥೋದ್ಬವ ಸಂದರ್ಭ ಭಾಗಿಯಾಗಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಪಿಂಡ ಪ್ರಧಾನ ಮಾಡುವುದಲ್ಲದೆ ಸ್ಥಳೀಯರು ತೀರ್ಥಸ್ನಾನ ಮಾಡಿ ವಿವಿಧ ಕಟ್ಟುಪಾಡುಗಳನ್ನು ಆಚರಿಸುತ್ತಾರೆ. ಇದು ಸ್ಥಳೀಯರ ಪದ್ದತಿಯೊಂದಿಗೆ ಇದು ಅನಿವಾರ್ಯ ಕೂಡ.
●ಈಗಾಗಲೇ ಕೊಡಗಿನಲ್ಲಿ ಕೊರೋನ ಸೋಂಕು ಕಣ್ಣಾಮುಚ್ಚಾಲೆ ಆಡುತ್ತಿದ್ದು, ಕರ್ಫ್ಯೂ ತೆರವುಗೊಂಡನಂತರ ಪಾಸಿಟಿವಿಟಿ ದರ ಏರಿಳಿತ ಕಾಣುತ್ತಲೇ ಇದೆ. ಕಳೆದೆರಡು ವರ್ಷಗಳಿಂದ ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಡಕ್ಕಾಗಿದ್ದು, ಇದೀಗ ತಾನೇ ಮಕ್ಕಳು ಶಾಲೆಗಳತ್ತಾ ಮುಖ ಮಾಡಿದ್ದಾರೆ, ಪೋಷಕರು ತಮ್ಮ ಮಕ್ಕಳನ್ನು ಭಯದಲ್ಲಿಯೇ ಶಾಲೆಗೆ ಕಳುಹಿಸುತ್ತಿದ್ದಾರೆ. ಹೀಗಿರುವಾಗ ಮತ್ತೊಮ್ಮೆ ಕೊರೋನ ಸ್ಪೋಟಗೊಂಡರೆ ಮಕ್ಕಳ ಭವಿಷ್ಯದ ಗತಿಯೇನು ಹಾಗೂ ತಿರ್ಥೋದ್ಬವದಲ್ಲಿ ಸ್ಥಳೀಯರು ಭಾಗವಹಿಸುವುದು ಹೇಗೆ ಎಂದು ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಚಿಂತಿಸಬೇಕಿದೆ.
●ಈ ಎಲ್ಲಾ ಕಾರಣದಿಂದ ಅಕ್ಟೋಬರ್ ಹಾಗೂ ನವೆಂಬರ್ ಎರಡು ತಿಂಗಳು ಪ್ರವಾಸೋಧ್ಯಮ ಚಟುವಟಿಕೆಗಳನ್ನು ಸಂಪೂರ್ಣ ಬಂದ್ ಮಾಡಬೇಕು, ಇಲ್ಲದಿದ್ದರೆ ಕಾವೇರಿ ತಿರ್ಥೋದ್ಬವ ಸಂದರ್ಭದಲ್ಲಿ ಕೊರೋನ ಅಧಿಕವಾಗಿ ಸ್ಥಳೀಯ ಭಕ್ತರಿಗೂ ತಿರ್ಥೋದ್ಬವದಲ್ಲಿ ಪಾಲ್ಗೊಳ್ಳಲು ತೊಡಕ್ಕಾಗುತ್ತೆ, ಹಾಗೂ ಕೊರೋನ ಸ್ಪೋಟಗೊಂಡರೆ ಸ್ಥಳೀಯ ವ್ಯಾಪಾರ ವಹಿವಾಟಿಗೂ ತೊಂದರೆಯಾಗಬಹುದು. ಸ್ಥಳೀಯ ವ್ಯಾಪಾರಿಗಳು ಈಗಾಗಲೇ ಲಾಕ್ ಡೌನ್'ನಿಂದ ಕಂಗೆಟ್ಟಿದ್ದಾರೆ. ಇದೀಗ ಒಂದಿಷ್ಟು ಚೇತರಿಸಿಕೊಳ್ಳುತ್ತಿದ್ದಾರೆ.
●ಪ್ರವಾಸಿಗರಿಂದ ಕೊರೋನ ಸ್ಪೋಟಗೊಂಡರ ಅತ್ತಾ ಸ್ಥಳೀಯರ ವ್ಯಾಪಾರವು ಇಲ್ಲ ಇತ್ತಾ ಪ್ರವಾಸಿಗರ ವ್ಯಾಪಾರವು ಇಲ್ಲ ಎಂದಾಗುತ್ತೆ. ಕೊಡಗಿನೊಳಗೆ ಎಲ್ಲಾ ಅಂಗಡಿ ಮುಗ್ಗಟ್ಟು ಹಾಗೂ ಇತರ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟು ಎರಡು ತಿಂಗಳ ಕಾಲ ಪ್ರವಾಸೋಧ್ಯಮ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಿದ್ದರೆ ಹೊರಗಿನಿಂದ ಸೋಂಕು ಹರಡುವುದನ್ನು ತಪ್ಪಿಸಬಹುದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
●ತಲಕಾವೇರಿ ಭಾಗಮಂಡಲಕ್ಕೆ ಕಡ್ಡಾಯವಾಗಿ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು ಮತ್ತು ತಿರ್ಥೋದ್ಬವ ಸಂದರ್ಭದಲ್ಲಿ ಬಿಗಿ ಉಡುಪುಗಳು ಹಾಗೂ ಮನೆಯಲ್ಲಿ ರಾತ್ರಿ ವೇಳೆ ಹಾಕುವ ನೈಟಿಗಳಲ್ಲಿ ತೀರ್ಥ ಸ್ನಾನಕ್ಕೆ ಅವಕಾಶ ಮಾಡಿಕೊಡಬಾರದು, ಅವರವರ ಸಾಂಪ್ರದಾಯಿಕ ಉಡುಗೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿಬಂತು.
●ಕೆಲವರು ನಮ್ಮನ್ನು ಸಂಪೂರ್ಣ ಪ್ರವಾಸೋದ್ಯಮ ವಿರೋಧಿಗಳು ಎಂಬಂತೆ ಪ್ರತಿಬಿಂಬಿಸುತ್ತಿದ್ದು, ನಮ್ಮಲ್ಲಿ ಕೆಲವರ ವಿರುದ್ಧ ಅನಾಮಧೇಯ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ. ನಮ್ಮ ಎರಡು ಸಭೆಗಳಲ್ಲೂ ಎಲ್ಲಿಯೂ ಸಂಪೂರ್ಣ ಪ್ರವಾಸೋದ್ಯಮವನ್ನು ವಿರೋಧ ಮಾಡಲಾಗಿಲ್ಲ. ಇಲ್ಲಿನ ಜನರ ಹಿತದೃಷ್ಟಿಯಿಂದ ಹಾಗೂ ಕೇರಳದಲ್ಲಿ ಕೊರೋನ ಸೋಂಕು ಅಧಿಕವಾಗಿರುವ ಕಾರಣ ಕೇರಳದೊಂದಿಗೆ ಒಂದೇ ಗಡಿಯನ್ನು ಹಂಚಿಕೊಂಡಿರುವ ಕೊಡಗು ಜಿಲ್ಲೆ ಅಪಾಯದ ಸ್ಥಿತಿಯಲ್ಲಿದೆ, ಈಗಾಗಲೇ ಎರಡನೇ ಅಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ನಮ್ಮವರನ್ನು ಕಳೆದುಕೊಂಡಿದ್ದೇವೆ, ಈ ದೃಷ್ಟಿಯಿಂದ ತಾತ್ಕಾಲಿಕವಾಗಿ ಪ್ರವಾಸೋಧ್ಯಮವನ್ನು ಸ್ಥಗಿತಗೊಳಿಸಬೇಕಿದೆ ಎಂಬ ಒತ್ತಾಯ ಹೊರತು ಎಲ್ಲಿಯೂ ಸಂಪೂರ್ಣ ಪ್ರವಾಸೋದ್ಯಮ ಹಾಗೂ ಪ್ರವಾಸಿಗರನ್ನು ವಿರೋಧ ಮಾಡಿಲ್ಲ.
●ಯಾವುದೇ ವ್ಯಾಪಾರ ವ್ಯವಹಾರವಿರಲಿ ಎಲ್ಲಾದಕ್ಕೂ ಒಂದು ವ್ಯವಸ್ಥೆ ಎನ್ನುವುದಿದೆ ಆ ವ್ಯವಸ್ಥೆಯೊಳಗೆ ಎಲ್ಲಾವು ನಡೆಯಬೇಕು ಎನ್ನುವುದು "ಸೇವ್ ಕೊಡಗು ಫ್ರಮ್ ಟೂರಿಸಂ" ಒತ್ತಾಯವಾಗಿದೆ ಇದನ್ನು ಅರ್ಥ ಮಾಡಿಕೊಳ್ಳದೆ ಕೆಲವರು ನಮ್ಮನ್ನು ಪ್ರವಾಸೋದ್ಯಮ ವಿರೋಧಿಗಳಂತೆ ಬಿಂಬಿಸುತ್ತಿದ್ದಾರೆ. ಕೊಡಗಿನ ಜನರ ಹಿತದೃಷ್ಟಿ, ನಮ್ಮ ಮಕ್ಕಳ ಭವಿಷ್ಯ ದೃಷ್ಟಿಯಿಂದ ಹಾಗೂ ಈ ನೆಲ ಜಲದ ಉಳಿವಿಗಾಗಿ ನಾವು ವಿರೋಧಿಗಳು ಎನಿಸಿಕೊಂಡರು ಚಿಂತೆಯಿಲ್ಲ ಕೊಡಗು ಕೊಡಗಾಗಿಯೇ ಉಳಿಯಲಿ ಎಂಬ ಮಾತು ಸಭೆಯಲ್ಲಿ ಕೇಳಿಬಂತು.
●ಜಿಲ್ಲೆಯ ಭದ್ರತೆಯ ದೃಷ್ಟಿಯಿಂದ ಹೊರರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವ ಕೂಲಿ ಕಾರ್ಮಿಕರ ದಾಖಲಾತಿಯ ಪರಿಶೀಲನೆ ಅಗತ್ಯ, ಇಲ್ಲವೆಂದರೆ ಅನಾಹುತ ಸಂಭವಿಸಿದ ಮೇಲೆ ಚಿಂತಿಸಿ ಪ್ರಯೋಜನವಿಲ್ಲ, ಈ ಕೂಡಲೇ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿಗಳು ಕೊಡಗಿನಲ್ಲಿ ಬೀಡುಬಿಟ್ಟಿರುವ ಅಸ್ಸಾಂ ಸೇರಿದಂತೆ ಹೊರ ರಾಜ್ಯದ ಕಾರ್ಮಿಕರ ದಾಖಲೆಗಳನ್ನು ಕ್ರೋಢೀಕರಿಸಬೇಕಿದೆ ಎಂದು ಸಭೆ ಒತ್ತಾಯಿಸಿತು.
● ಅಕ್ಟೋಬರ್ ನವೆಂಬರ್ ಮಾತ್ರವಲ್ಲ ನಂತರದ ದಿನಗಳಲ್ಲಿ ಕೂಡ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಕೊರೋನ ಕಡಿಮೆಯಾಗುವವರೆಗೂ ಗಡಿಗಳಲ್ಲಿ ತಪಾಸಣೆ ಅಗತ್ಯ ಎಂಬ ಮಾತು ಸಭೆಯಲ್ಲಿ ಕೇಳಿಬಂತು. ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆಗಳು ನಡೆದು ಮುಂದಿನ ದಿನಗಳಲ್ಲಿ ಇದೇ ಬಳಗವನ್ನು ಒಂದು ರಾಜಕೀಯ ರಹಿತ ಹಾಗೂ ಜಾತ್ಯಾತೀತ ಸಂಘಟನೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ರಚನೆಯಾಗುವವರೆಗೆ ಚಮ್ಮಟೀರ ಪ್ರವೀಣ್ ಉತ್ತಪ್ಪನವರನ್ನು "ಸೇವ್ ಕೊಡಗು ಫ್ರಮ್ ಟೂರಿಸಂ" ಸಂಚಾಲಕರಾಗಿ ಅವಿರೋಧವಾಗಿ ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಸರಕಾರದ ಎಲ್ಲಾ ನೀತಿ ನಿಬಂಧನೆಗಳಿಗೆ ಒಳಪಟ್ಟು ಸಮಿತಿಯನ್ನು ರಚಿಸಿ ನೊಂದಾಯಿಸಲು ಸಭೆ ತಿರ್ಮಾನಿಸಿತು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network