Header Ads Widget

Responsive Advertisement

ಕೇಂದ್ರ ಸರ್ಕಾರವು ಕಾಫಿ ಕಾಯಿದೆಯನ್ನು ಸರಳಗೊಳಿಸಲಿದೆ ಮತ್ತು ಸುಗಮ ವ್ಯವಹಾರವನ್ನು ಉತ್ತೇಜಿಸಲಿದೆ- ಕೇಂದ್ರ ಸಚಿವ ಶ್ರೀ ಪೀಯೂಷ್ ಗೋಯಲ್

ಕೇಂದ್ರ ಸರ್ಕಾರವು ಕಾಫಿ ಕಾಯಿದೆಯನ್ನು ಸರಳಗೊಳಿಸಲಿದೆ ಮತ್ತು ಸುಗಮ ವ್ಯವಹಾರವನ್ನು ಉತ್ತೇಜಿಸಲಿದೆ- ಕೇಂದ್ರ ಸಚಿವ ಶ್ರೀ ಪೀಯೂಷ್ ಗೋಯಲ್


* ಕಾಫಿ, ಟೀ ಮತ್ತು ಮಸಾಲೆ ಪದಾರ್ಥಗಳ ಬಗ್ಗೆ ಐಸಿಎಆರ್ ಸಂಶೋಧನೆ ನಡೆಸಲಿದೆ. 
* ಕಾಫಿ ಗಿಡದ ಬಿಳಿ ಕಾಂಡ ಕೊರಕ ಕೀಟಬಾಧೆ ನಿವಾರಣೆಗೆ ಐಸಿಎಆರ್ ಪರಿಹಾರಗಳನ್ನು ಕಂಡುಹಿಡಿಯಲಿದೆ. * ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಫಾಸಿ (SARFAESI) ಕಾಯ್ದೆಯಲ್ಲಿ ಸೂಕ್ತ ನಿಬಂಧನೆಗಳನ್ನು ತರಲು ಕೇಂದ್ರ ಪ್ರಯತ್ನಿಸಲಿದೆ. * ಕಾಫಿ ಬೆಳೆಗಾರರು, ಸಂಸ್ಕರಣಾಗಾರರು ಮತ್ತು ರಫ್ತುದಾರರೊಂದಿಗೆ ಸಂವಾದ ನಡೆಸಿದ.ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಜವಳಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ. - ಸಚಿವ ಶ್ರೀ ಪಿಯೂಷ್ ಗೋಯಲ್

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪೀಯೂಷ್ ಗೋಯಲ್ ಅವರು ಬೆಂಗಳೂರಿನ ಕಾಫಿ ಮಂಡಳಿ ಕೇಂದ್ರ ಕಚೇರಿಯಲ್ಲಿಂದು ಕಾಫಿ ಬೆಳೆಗಾರರು, ಸಂಸ್ಕರಣಾಗಾರರು, ರಫ್ತುದಾರರು ಮತ್ತು ಇತರ ಪಾಲುದಾರರೊಂದಿಗೆ ಸವಿವರವಾದ ಸಂವಾದ ನಡೆಸಿದರು. ಸಭೆಯ ಪ್ರಮುಖ ನಿರ್ಧಾರಗಳು ಹೀಗಿವೆ:

1. ಕಾಫಿ ಕಾಯಿದೆಯ ಸರಳೀಕರಣ:

ಪ್ರಸ್ತುತ ಇರುವ ಕಾಫಿ ಕಾಯಿದೆಯನ್ನು 1942 ರಲ್ಲಿ ಜಾರಿಗೆ ತರಲಾಗಿದೆ. ಇದು ಈಗ ಅನಗತ್ಯವೆನಿಸುವ ಮತ್ತು ಕಾಫಿ ವ್ಯಾಪಾರಕ್ಕೆ ಅಡ್ಡಿಯಾಗಿರುವ ಅನೇಕ ನಿಬಂಧನೆಗಳನ್ನು ಹೊಂದಿದೆ. ಆದ್ದರಿಂದ, ಈ ಕಾನೂನಿನ ನಿಬಂಧನೆಗಳನ್ನು ಸಂಪೂರ್ಣವಾಗಿ ಮರುಪರಿಶೀಲಿಸಲು ಹಾಗೂ ನಿರ್ಬಂಧಿತ ಮತ್ತು ನಿಯಂತ್ರಕ ನಿಬಂಧನೆಗಳನ್ನು ತೆಗೆದುಹಾಕಲು ಮತ್ತು ಕಾಫಿ ವಲಯದ ಪ್ರಸ್ತುತ ಅಗತ್ಯಗಳಿಗೆ ಸರಿಹೊಂದುವ ಮತ್ತು ಬೆಳವಣಿಗೆಗೆ ಪೂರಕವಾಗುವ ಸರಳ ಕಾಯಿದೆಯನ್ನು ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. 

2. ಸರ್ಫಾಸಿ ಕಾಯ್ದೆ:

ಸರ್ಫಾಸಿ (SARFAESI) ಕಾಯಿದೆಯಡಿ ಬ್ಯಾಂಕುಗಳು ನೀಡಿರುವ ನೋಟಿಸ್‌ಗಳಿಂದಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಆತಂಕವನ್ನು ಕಾಫಿ ಬೆಳೆಗಾರರು ವ್ಯಕ್ತಪಡಿಸಿದರು. ವಿವರವಾದ ಸಂವಾದದ ನಂತರ, ಈ ಸಮಸ್ಯೆಯನ್ನು ಇತರ ಸಂಬಂಧಿತ ಸಚಿವಾಲಯಗಳೊಂದಿಗೆ ಚರ್ಚಿಸಲಾಗುವುದು ಮತ್ತು ಸದ್ಯದಲ್ಲಿಯೇ ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಗೌರವಾನ್ವಿತ ಸಚಿವರು ಬೆಳೆಗಾರರಿಗೆ ಭರವಸೆ ನೀಡಿದರು. 

3. ಸಾರಿಗೆ ಮತ್ತು ಮಾರುಕಟ್ಟೆ ನೆರವು ಯೋಜನೆ (ಟಿಎಂಎ) ಅಡಿಯಲ್ಲಿ ಹೆಚ್ಚಿನ ಸಹಾಯ:

ಅಂತಾರಾಷ್ಟ್ರೀಯ ಸರಕು ದರಗಳ ಹೆಚ್ಚಳದಿಂದಾಗಿ, ಭಾರತೀಯ ಕೃಷಿ-ರಫ್ತುಗಳು ಹಲವಾರು ಸ್ಥಳಗಳಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಫ್ತುದಾರರು ಕಳವಳ ವ್ಯಕ್ತಪಡಿಸಿದರು. ಸಾರಿಗೆ ಮತ್ತು ಮಾರುಕಟ್ಟೆ ನೆರವು ಯೋಜನೆ (ಟಿಎಂಎ) ಅಡಿಯಲ್ಲಿ ಹೆಚ್ಚಿನ ನೆರವಿನೊಂದಿಗೆ ಸರ್ಕಾರವು ಕೃಷಿ-ರಫ್ತುದಾರರಿಗೆ ಸಹಾಯ ನೀಡದಿದ್ದರೆ, ಭಾರತವು ಇತರ ಸ್ಪರ್ಧಾತ್ಮಕ ಮೂಲಗಳಿಗೆ ಶಾಶ್ವತವಾಗಿ ಕೃಷಿ ರಫ್ತುಗಳ ಹಲವು ಮಾರುಕಟ್ಟೆಗಳನ್ನು ಕಳೆದುಕೊಳ್ಳಬಹುದು ಎಂದೂ ಅವರು ಆತಂಕ ವ್ಯಕ್ತಪಡಿಸಿದರು. ಕೃಷಿ ರಫ್ತಿಗೆ ಸಹಾಯ ಮಾಡಲು ಹಾಗೂ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಟಿಎಂಎ ಯೋಜನೆಯಡಿ ವಿಶೇಷ ಪ್ಯಾಕೇಜ್ ಅನ್ನು ಕನಿಷ್ಠ ಒಂದು ವರ್ಷದವರೆಗೆ ಪರಿಗಣಿಸಲಾಗುವುದು ಎಂದು ಗೌರವಾನ್ವಿತ ಸಚಿವರು ರಫ್ತುದಾರರಿಗೆ ಎಂದು ಭರವಸೆ ನೀಡಿದರು.

4. ಕಾಫಿ ಗಿಡದ ಬಿಳಿ ಕಾಂಡ ಕೊರಕ ಕೀಟದ ಸಮಸ್ಯೆ:

ಕಾಫಿ ಗಿಡದ ಬಿಳಿ ಕಾಂಡ ಕೊರಕ ಕೀಟದಿಂದ ಉಂಟಾಗಿರುವ ಹಾನಿಯ ಗಂಭೀರತೆ ಮತ್ತು ಕಾಫಿ ಮಂಡಳಿಯ ಅಡಿಯಲ್ಲಿರುವ ಸಂಶೋಧನಾ ವಿಭಾಗವು ಸೀಮಿತ ಸಂಪನ್ಮೂಲಗಳನ್ನು ಹೊಂದಿದೆ ಎಂಬ ಅಂಶವನ್ನು ಮನಗಂಡ ಸಚಿವರು, ಕಾಫಿ ಗಿಡದ ಬಿಳಿ ಕಾಂಡ ಕೊರಕ ಕೀಟದ ಬಗ್ಗೆ ಸುಧಾರಿತ ಸಂಶೋಧನೆಯನ್ನು ಆರಂಭಿಸಲು ಕೃಷಿ ಇಲಾಖೆ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಗೆ ಮನವಿ ಮಾಡಲಾಗುವುದು ಎಂದು ಬೆಳೆಗಾರರಿಗೆ ಭರವಸೆ ನೀಡಿದರು.

5. ಕಾಫಿ ಸಾಲಗಳ ಪುನರ್ರಚನೆ ಮತ್ತು ಬಡ್ಡಿ ವಿನಾಯಿತಿಗಾಗಿ ವಿಶೇಷ ಪ್ಯಾಕೇಜ್:

ಅಸ್ತಿತ್ವದಲ್ಲಿರುವ ಎಲ್ಲಾ ಸಾಲಗಳನ್ನು ದೀರ್ಘಾವಧಿಯ ಮರುಪಾವತಿ ಅವಧಿಯೊಂದಿಗೆ ಮರುರಚಿಸಿ ಏಕ ಅವಧಿಯ ಸಾಲವಾಗಿ ಘೋಷಿಸಬೇಕು ಮತ್ತು ಕಡಿಮೆ ಬಡ್ಡಿಯೊಂದಿಗೆ ಹೊಸ ಕೆಲಸದ ಬಂಡವಾಳವನ್ನು ವಿಸ್ತರಿಸಬೇಕು ಎಂದು ಕಾಫಿ ಮಂಡಳಿಯ ಅಧ್ಯಕ್ಷರು ಸಚಿವರಿಗೆ ಮನವಿ ಮಾಡಿದರು. ಈ ಸಂಕಷ್ಟದ ಸಮಯದಲ್ಲಿ ಕಾಫಿ ಬೆಳೆಗಾರರಿಗೆ ಸಚಿವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ಸಂಬಂಧಿತ ಸಚಿವಾಲಯಗಳ ಜೊತೆ ಚರ್ಚಿಸಿ ಕಾರ್ಯಸಾಧ್ಯವಾದ ಪ್ಯಾಕೇಜ್ ರೂಪಿಸುವ ಬಗ್ಗೆ ಭರವಸೆ ನೀಡಿದರು.

6. ಕಾಫಿ ಮಂಡಳಿಯ ವಿಸ್ತರಣಾ ಚಟುವಟಿಕೆಗಳನ್ನು ಬಲಪಡಿಸುವುದು:

ಕಾಫಿ ತೋಟಗಳಲ್ಲಿ ವಿಸ್ತರಣಾ ಸಿಬ್ಬಂದಿಯು ಕೈಗೊಳ್ಳಬೇಕಾದ ಕ್ಷೇತ್ರ ಭೇಟಿಗಳು, ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆಗಳು, ಸೆಮಿನಾರ್‌ಗಳು ಇತ್ಯಾದಿ ವಿಸ್ತರಣಾ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೈಜ ಸಮಯದಲ್ಲಿ ನೀಡಲು ಡ್ಯಾಶ್‌ಬೋರ್ಡ್ ಅಭಿವೃದ್ಧಿಪಡಿಸುವಂತೆ ಸಚಿವರು ಕಾಫಿ ಮಂಡಳಿಗೆ ನಿರ್ದೇಶನ ನೀಡಿದರು.

ಕಾಫಿ ಮಂಡಳಿಯನ್ನು ಮುಚ್ಚುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದ ಸಚಿವರು,  ಈ ಕುರಿತ ಪಾಲುದಾರರ ಆತಂಕವನ್ನು ನಿವಾರಿಸಿದರು. ಆದಾಗ್ಯೂ, ಕಾಫಿ ಬೆಳೆಗಾರರಿಗೆ ವಿಶೇಷವಾಗಿ ಸಣ್ಣ ಬೆಳೆಗಾರರಿಗೆ ಉತ್ತಮ ಸೇವೆಗಳನ್ನು ಒದಗಿಸಲು, ಕಾಫಿ ಮಂಡಳಿಯನ್ನು ವಾಣಿಜ್ಯ ಸಚಿವಾಲಯದಿಂದ ಕೃಷಿ ಸಚಿವಾಲಯಕ್ಕೆ ವರ್ಗಾಯಿಸಲು ಉದ್ದೇಶಿಸಲಾಗಿದೆ. ಇದು ಕೃಷಿಯ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಕಾಫಿ ಬೆಳೆಗಾರರಿಗೆ ವಿಸ್ತರಿಸುವುದನ್ನು ಖಚಿತಪಡಿಸುತ್ತದೆ ಎಂದು ಸಚಿವರು ತಿಳಿಸಿದರು.

ಒಟ್ಟಾರೆಯಾಗಿ, ತಮ್ಮ ಸಮಸ್ಯೆಗಳ ಬಗ್ಗೆ ಸಹಾನುಭೂತಿಯಿಂದ ಪ್ರತಿಕ್ರಿಯಿಸಿದ್ದಕ್ಕಾಗಿ ಎಲ್ಲಾ ಕಾಫಿ ಪಾಲುದಾರರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಿಗೆ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾಫಿಯ ಉತ್ಪಾದನೆ, ರಫ್ತು ಮತ್ತು ಕಾಫಿ ಬೆಳೆಗಾರರ ಆದಾಯವನ್ನು ಹೆಚ್ಚಿಸಲು ಎಲ್ಲರೂ ಕೈಜೋಡಿಸುವುದಾಗಿಯೂ ಅವರು ಸಚಿವರಿಗೆ ಭರವಸೆ ನೀಡಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,