Header Ads Widget

Responsive Advertisement

ಕರ್ನಾಟಕ ಕೊಡವ ಸಾಹಿತ್ಯ ಸಾಂಸ್ಕೃತಿಕ ಗ್ರಾಮ ನೆನೆಗುದಿಗೆ; ಮಾಜಿ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ ಬೇಸರ

ಕರ್ನಾಟಕ ಕೊಡವ ಸಾಹಿತ್ಯ ಸಾಂಸ್ಕೃತಿಕ ಗ್ರಾಮ ನೆನೆಗುದಿಗೆ; ಮಾಜಿ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ ಬೇಸರ

( ಸಾಂದರ್ಭಿಕ ಚಿತ್ರ )

ಗೋಣಿಕೊಪ್ಪಲು,ಅ.12: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ 1994 ರಲ್ಲಿ ಸ್ಥಾಪನೆಗೊಂಡಿದ್ದು, ಅಕಾಡೆಮಿಯ ಸಾಹಿತ್ಯ ಸಾಂಸ್ಕೃತಿಕ ಗ್ರಾಮ ಯೋಜನೆ ನೆನೆಗುದಿಗೆ ಬಿದ್ದಿರುವದಾಗಿ ಅಕಾಡೆಮಿ ಮಾಜಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ತಮ್ಮ ಬೇಸರ ತೋಡಿಕೊಂಡಿದ್ದಾರೆ.

ಗೋಣಿಕೊಪ್ಪಲಿನಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಸಾಂಸ್ಕೃತಿಕ ಭವನವೂ ಒಳಗೊಂಡಂತೆ ಕೊಡವ ಭಾಷೆ,ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಮುಂದಿನ ಯುವ ಜನಾಂಗಕ್ಕೆ ಅನಾವರಣಗೊಳಿಸಲು ಸುಮಾರು 10 ಎಕರೆ ಸರ್ಕಾರಿ ಜಾಗದ ಅವಶ್ಯಕತೆ ಬಗ್ಗೆ ಈ ಹಿಂದಿನ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪೈಸಾರಿ ಜಾಗವನ್ನೂ ಗುರುತಿಸಲಾಗಿತ್ತು.ಆದರೆ, ನಂತರ ಈ ಬಗ್ಗೆ ಯಾವ ಪ್ರಯತ್ನವೂ ನಡೆದಿಲ್ಲ ಎಂದರು.

ವೀರಾಜಪೇಟೆ ತಾಲ್ಲೋಕು ವಿ.ಬಾಡಗದಲ್ಲಿ ಗ್ರಾಮಸ್ಥರ ಒಪ್ಪಿಗೆಯೊಂದಿಗೆ ಸ.ನಂ.77/2ಎ ನಲ್ಲಿ ಸುಮಾರು 10 ಎಕರೆ ಪೈಸಾರಿ ಜಾಗವನ್ನು ಗುರುತಿಸಲಾಗಿತ್ತು.ತಾ.21/05/2019ರಲ್ಲಿ ಮೇಲಿನ ಜಾಗವನ್ನು ಕೊಡವ ಭಾಷಿಕ ಜನಾಂಗದ ಆಚಾರ,ವಿಚಾರ, ಪದ್ಧತಿ, ಪರಂಪರೆ,ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸಲು ಮಂಜೂರು ಮಾಡಿ ಕೊಡಲು ಅಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಅಕಾಡೆಮಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿತ್ತು.

ಉದ್ಧೇಶಿತ ಜಾಗವನ್ನು ಪರಿಶೀಲನೆ ನಡೆಸಿ ಮಂಜೂರು ಮಾಡಿ ಕೊಡುವಂತೆ ತಾ.14/06/2019ರಂದು ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿಗಳು ಮತ್ತು ವೀರಾಜಪೇಟೆ ತಹಶೀಲ್ಧಾರ್‌ರವರಿಗೆ ಆದೇಶ ನೀಡಿದ್ದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ೨೫ ವರ್ಷ ಪೂರೈಸಿದ ಹಿನ್ನೆಲೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಆವರಣದಲ್ಲಿ 2019ಜೂನ್, 8 ಹಾಗೂ 9ರಂದು ರಜತ ಮಹೋತ್ಸವವನ್ನು ತಮ್ಮ ಅಧ್ಯಕ್ಷತೆಯಲ್ಲಿ ಆಚರಿಸಲ್ಪಟ್ಟ ಸಂದರ್ಭ ಎಲ್ಲ ಮಾಜಿ ಅಧ್ಯಕ್ಷರನ್ನು ಆಹ್ವಾನಿಸಿ ಸನ್ಮಾನಿಸಲಾಗಿತ್ತು. ಮಾಜಿ ಅಧ್ಯಕ್ಷರ ಸಮ್ಮುಖದಲ್ಲಿಯೇ ಕೊಡವ ಸಾಹಿತ್ಯ ಸಾಂಸ್ಕೃತಿಕ ಗ್ರಾಮ ಮತ್ತು ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿರ್ಣಯವೂ ಒಳಗೊಂಡಂತೆ ಹಲವು ನಿರ್ಣಯಗಳನ್ನು ಅಂದಿನ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು ಎಂದು ಪಿ.ಕೆ.ಪೊನ್ನಪ್ಪ ಮಾಹಿತಿ ನೀಡಿದರು.

ಇದೀಗ ರಾಜ್ಯದಲ್ಲಿ ನೂತನ ಸರ್ಕಾರವಿದ್ದು, ನೂತನ ಅಕಾಡೆಮಿ ಅಧ್ಯಕ್ಷರಾದ ಅಮ್ಮಾಟಂಡ ಪಾರ್ವತಿ ಮತ್ತು ಸಮಿತಿ ಸದಸ್ಯರುಗಳು ಕೊಡವ ಸಾಹಿತ್ಯ ಸಾಂಸ್ಕೃತಿಕ ಗ್ರಾಮ ನಿರ್ಮಾಣ ವಿಚಾರವಾಗಿ ನಿರ್ಲಕ್ಷ್ಯ ವಹಿಸಿರುವದಾಗಿ ಪೊನ್ನಪ್ಪ ಅವರು ಆರೋಪಿಸಿದ್ದಾರೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಜತ ಮಹೋತ್ಸವದ ಸಂದರ್ಭ ಕೈಗೊಳ್ಳಲಾದ ನಿರ್ಣಯಗಳ ಕಡತ ಅಕಾಡೆಮಿ ಕಚೇರಿಯಲ್ಲಿ ಇಡಲಾಗಿದ್ದು, ನಂತರ ಜರುಗಿದ ಅಕಾಡೆಮಿಯ ಹಲವು ಸಭೆಗಳಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡದಿರುವದು ಮತ್ತು ಜಿಲ್ಲಾಡಳಿತದೊಂದಿಗೆ ಜಾಗ ಮಂಜೂರಾತಿಗೆ ಪ್ರಯತ್ನ ಪಡದಿರುವದು ದುರಾದೃಷ್ಟಕರ ಎಂದು ಹೇಳಿರುವ ಪೊನ್ನಪ್ಪ ಅವರು ಅಕಾಡೆಮಿಯ ತುರ್ತು ಸಭೆ ಕರೆದು ಜಾಗ ಮಂಜೂರಾತಿಗಾಗಿ ಕಂದಾಯ ಇಲಾಖೆಯ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿದ್ದಾರೆ. ಗೋಷ್ಠಿಯಲ್ಲಿ ಅಕಾಡೆಮಿಯ ಮಾಜಿ ಸದಸ್ಯರಾದ ಉಮೇಶ್ ಕೇಚಮಯ್ಯ ಇದ್ದರು.

                                                                                                                   ✍️....ಟಿ.ಎಲ್.‌ ಶ್ರೀನಿವಾಸ್‌

       ( ಪತ್ರಕರ್ತರು )

         ಸುದ್ದಿ ಸಂಸ್ಥೆ, ಗೋಣಿಕೊಪ್ಪಲು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,