"ನಮ್ಮ ನಗರ ಮಡಿಕೇರಿ ಸ್ವಚ್ಚ ಮಡಿಕೇರಿ” ನಗರಸಭೆ ವತಿಯಿಂದ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ
ಮಡಿಕೇರಿ ಅ.29: ನಗರದ ಬೀದಿಬದಿ ವ್ಯಾಪಾರಿಗಳು ತಾವು ವ್ಯಾಪಾರ ಮಾಡುತ್ತಿರುವ ಸ್ಥಳಗಳಲ್ಲಿನ ಕಸವನ್ನು ಎಲ್ಲೆಂದರಲ್ಲಿ ಹಾಕದೆ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ಪ್ರತ್ಯೇಕವಾಗಿ ವಿಂಗಡಿಸಿ ನಗರ ಸಭೆಯ ವಾಹನಕ್ಕೆ ಹಾಕಬೇಕು. ನಗರದ ಸ್ವಚ್ಚತೆಯನ್ನು ಕಾಪಾಡುವಲ್ಲಿ ನಗರ ಸಭೆಯೊಂದಿಗೆ ಸಹಕರಿಸುವ ಮೂಲಕ “ನಮ್ಮ ಮಡಿಕೇರಿ ಸ್ವಚ್ಚ ಮಡಿಕೇರಿ” ಎಂಬ ಘೋಷಣೆಯನ್ನು ಸಾಕಾರಗೊಳಿಸಬೇಕು. ನಗರದ ನೈರ್ಮಲ್ಯವನ್ನು ಕಾಪಾಡುವುದು ಎಲ್ಲರ ಕರ್ತವ್ಯ. ಕಸವನ್ನು ಎಲ್ಲೆಂದರಲ್ಲಿ ಹಾಕುವವರು ಕಂಡಲ್ಲಿ ಮಾಹಿತಿಯನ್ನು ಪೌರಾಡಳಿತ ಇಲಾಖೆಗೆ ತಿಳಿಸಿದಲ್ಲಿ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ. ಬೀದಿ ಬದಿ ವ್ಯಾಪಾರಿಗಳು ಸ್ವಚ್ಚತಾ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ, ಅವರನ್ನು ವ್ಯಾಪಾರ ಮಾಡುವ ಸ್ಥಳದಿಂದ ತೆರವುಗೊಳಿಸಲಾಗುವುದು. ಅಲ್ಲದೇ ಅವರಿಗೆ ನೀಡಿರುವ ಗುರುತಿನ ಚೀಟಿಯನ್ನು ರದ್ದುಪಡಿಸಲಾಗುವುದು ಎಂದು ಪೌರಾಯುಕ್ತರಾದ ಎಸ್.ಎ.ರಾಮ್‍ದಾಸ್ ಅವರು ತಿಳಿಸಿದರು.
ನಗರಸಭೆ ಹಾಗೂ ಕೌಶಲ್ಯಬಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಹಸಿ ಹಾಗೂ ಒಣ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ, ನಿರ್ವಹಣೆಯ ಬಗ್ಗೆ ಏರ್ಪಡಿಸಲಾಗಿದ್ದ ಸ್ವಚ್ಚತಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಾಕ್ರಮದ ಆರಂಭದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಮಹಿಳಾ ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ಸಹಾಯಕ ಸಾಂಖ್ಯಿಕ ಅಧಿಕಾರಿಯಾದ ಡಾ.ರೂಪ ಅವರು ಸ್ವಚ್ಚತಾ ಜಾಗೃತಿಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಪ್ರವಾಸೋದ್ಯಮ, ಫುಡ್ ಪ್ರೊಸೆಸಿಂಗ್, ಕೃಷಿ, ಆರೋಗ್ಯ ಹಾಗೂ ಐ.ಟಿ. ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಹಾಗೂ ಐಟಿಐ ಉತ್ತೀರ್ಣಗೊಂಡಿರುವ ಜಿಲ್ಲೆಯ ಯುವ ಜನತೆಗೆ ಉಚಿತ ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಲಾಗುವುದು. ತರಬೇತಿ ನಂತರ ಉದ್ಯೋಗ ಪಡೆಯಲು ಅಥವಾ ಉಧ್ಯಮಿಗಳಾಗಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಬೀದಿ ಬದಿ ವ್ಯಾಪಾರಿಗಳು ತಮ್ಮ ಕುಟುಂಬದವರಿಗೆ ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಬೇಕು ಎಂದರು.
ಪರಿಸರ ಅಭಿಯಂತರರು ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಹಾಗೂ ಮಾನವನ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳು ಬೀರಲಿವೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಟ್ಟಾಗ ಬರುವ ವಾಸನೆಯಿಂದ ಕ್ಯಾನ್ಸರ್ ಬರುವ ಸಂಭವವಿದೆ. ಅಲ್ಲದೆ ಉಸಿರಾಟದ ತೊಂದರೆ, ಚರ್ಮರೋಗಗಳು ಉಂಟಾಗುವ ಅಪಾಯವಿರುವುದರಿಂದ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ‘ಪ್ಲಾಸ್ಟಿಕ್ ವೆಸ್ಟ್ ಮ್ಯಾನೇಜ್‍ಮೆಂಟ್ ಆ್ಯಕ್ಟ್- 2016’ ರಂತೆ ಕರ್ನಾಟಕದಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಊಟದ ಟೇಬಲ್‍ಗಳ ಮೇಲೆ ಹಾಕುವ ಪ್ಲಾಸ್ಟಿಕ್ ಕವರ್‍ಗಳ ಬಳಕೆಯನ್ನು ನಿಷೇದಿಸಲಾಗಿದೆ. ಆದ್ದರಿಂದ ಬೀದಿ ಬದಿ ವ್ಯಾಪಾರಿಗಳು ತಮ್ಮಲ್ಲಿ ಖರೀದಿಗೆ ಬರುವ ಗ್ರಾಹಕರಿಗೆ ತಾವೆ 2 ರಿಂದ 3 ರೂ. ನಿಗದಿಪಡಿಸಿ ಬಟ್ಟೆ ಬ್ಯಾಗ್‍ಗಳ ಮೂಲಕ ವಸ್ತುಗಳನ್ನು ನೀಡಿ. ಅವರು ಮತ್ತೆ ಬರುವಾಗ ಬ್ಯಾಗ್‍ನೊಂದಿಗೆ ಬರುತ್ತಾರೆ. ಊಟವನ್ನು ಪಾರ್ಸಲ್ ನೀಡುವಾಗ ಪ್ಲಾಸ್ಟಿಕ್ ಕವರ್‍ಗಳಿಗೆ ಬದಲಾಗಿ ಡಬ್ಬಗಳಲ್ಲಿ ನೀಡಿದರೆ, ಅದು ಮರು ಬಳಕೆಯಾಗುತ್ತದೆ. ಈ ಮೂಲಕ ನಾವು ಪರಿಸರವನ್ನು ಸ್ವಚ್ಚಗೊಳಿಸಿದಂತಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಸಭೆಯ ಆರೋಗ್ಯ ಅಧಿಕಾರಿಗಳು, ಸಮುದಾಯ ಸಂಘಟಕರು ಮತ್ತು ಬೀದಿ ಬದಿ ವ್ಯಾಪಾರಿಗಳು ಹಾಗೂ ಸ್ತ್ರೀ-ಶಕ್ತಿ ಸಂಘಗಳ ಮಹಿಳಾ ಸದಸ್ಯರು ಹಾಜರಿದ್ದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network