Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಂಘಕಾರ್ಯ ವಿಸ್ತಾರ, ಸ್ವಾತಂತ್ರ್ಯದ ಅಮೃತಮಹೋತ್ಸವಕ್ಕೆ ಯೋಜನೆಗಳು, ಉದ್ಯೋಗಸೃಷ್ಟಿ: ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪತ್ರಿಕಾಗೋಷ್ಟಿಯ ಮುಖ್ಯಾಂಶಗಳು

ಸಂಘಕಾರ್ಯ ವಿಸ್ತಾರ, ಸ್ವಾತಂತ್ರ್ಯದ ಅಮೃತಮಹೋತ್ಸವಕ್ಕೆ ಯೋಜನೆಗಳು, ಉದ್ಯೋಗಸೃಷ್ಟಿ: ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪತ್ರಿಕಾಗೋಷ್ಟಿಯ ಮುಖ್ಯಾಂಶಗಳು


ಧಾರವಾಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಶನಿವಾರ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಮಾಹಿತಿ ನೀಡಿದರು. ಸಂಘದ ಕಾರ್ಯಚಟುವಟಿಕೆಗಳ ವಿಸ್ತಾರದ ಯೋಜನೆ, ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷದಲ್ಲಿ ಸ್ವಯಂಸೇವಕರು ತೊಡಗಿಸಿಕೊಳ್ಳಲಿರುವ ಕಾರ್ಯಗಳು, ಉದ್ಯೋಗಸೃಷ್ಟಿಗೆ ಸಹಕಾರ ನೀಡುವ ಯೋಜನೆ ಇತ್ಯಾದಿಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಚರ್ಚೆಯಾದ ವಿಷಯಗಳ ಆಚೆಗೂ, ಪತ್ರಿಕಾಗೋಷ್ಟಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಹ ಉತ್ತರಿಸಿ ಅವರು ಹಲವು ವಿಷಯಗಳಲ್ಲಿ ಸಂಘದ ನಿಲುವುಗಳನ್ನು ಪುನರುಚ್ಚರಿಸಿದರು.
ಪ್ರಾರಂಭದಲ್ಲಿಯೇ ನಟ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ದತ್ತಾತ್ರೇಯ ಹೊಸಬಾಳೆ,
“ದೀಪಾವಳಿಯ ಸಂತೋಷದ ಎದುರಲ್ಲೇ ದುಃಖದ ಸುದ್ದಿ ಬಂದಿದೆ. ವರನಟ ರಾಜ್ ಕುಮಾರ್ ಅವರ ಪುತ್ರ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿರುವುದು ಅತೀವ ದುಃಖದ ಸಂಗತಿ.” ಎಂದು ಖೇದ ವ್ಯಕ್ತಪಡಿಸಿದರು.

ಕೊರೋನಾ ಎದುರಿಸುವ ತಯಾರಿ
ಮೂರನೇ ಅಲೆ ಬಂದರೆ ಅದಕ್ಕೆ ಸನ್ನದ್ಧವಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ತಯಾರಿ ಮಾಡಿತ್ತು. ಇದರಲ್ಲಿ ಯೋಗದ ಮೂಲಕ ರೋಗನಿರೋಧಕತೆ ಹೆಚ್ಚಿಸುವುದು, ಕಷಾಯ ಪಾನಕ್ಕೆ ವ್ಯವಸ್ಥೆ ಮಾಡುವುದು ಇತ್ಯಾದಿ. ಲಸಿಕೆ ಪ್ರಕ್ರಿಯೆಯೂ ಉತ್ತಮವಾಗಿರುವುದರಿಂದ ಮೂರನೇ ಅಲೆ ಬರದು ಎಂದು ಆಶಿಸೋಣ. ಬಂದರೂ ಅದಕ್ಕೆ ತಕ್ಕ ತಯಾರಿ ಆರೆಸ್ಸೆಸ್ ಕಡೆಯಿಂದ ಇರಲಿದೆ.

ಸಂಘದ ಈಗಿನ ಕಾರ್ಯ ವಿವರ ಮತ್ತು ಕಾರ್ಯ ವಿಸ್ತಾರ ಯೋಜನೆ
• 34,000 ಶಾಖೆಗಳು ದಿನನಿತ್ಯ
• 12,780 ವಾರದ ಶಾಖೆಗಳು
• 7,900 ಮಾಸಿಕ ಅಥವಾ ಪಾಕ್ಷಿಕ ಶಾಖೆಗಳು
• 54,382 ಒಟ್ಟೂ ಶಾಖೆಗಳು

ಪ್ರತಿ ಮೂರು ವರ್ಷಗಳಿಗೊಮ್ಮೆ ವಿಸ್ತಾರದ ಕಾರ್ಯ ನಡೆಯುತ್ತದೆ. ನಾಗಾಲ್ಯಾಂಡ್, ಮಿಜೊರಾಂ, ಜಮ್ಮು-ಕಾಶ್ಮೀರ ಇತ್ಯಾದಿಗಳಲ್ಲಿ ಬ್ಲಾಕ್ ಮಟ್ಟದಲ್ಲಿ ಇನ್ನೂ ವಿಸ್ತಾರವಾಗಬೇಕು. ಮಂಡಲದ ಮಟ್ಟದಲ್ಲಿ ಇನ್ನೂ ಹೆಚ್ಚಿನ ವಿಸ್ತಾರ ಕಾರ್ಯ ಆಗಲಿದೆ.
ಇನ್ನೂ ಮೂರು ವರ್ಷಗಳಲ್ಲಿ ಎಲ್ಲ ಮಂಡಲಗಳನ್ನು ತಲುಪುವ ಯೋಜನೆ ಇದೆ.
ಸಂಘದ ನೂರು ವರ್ಷದ ಪ್ರಯುಕ್ತ ಕನಿಷ್ಠ 2 ವರ್ಷ ನೀಡುವ ಪೂರ್ಣಾವಧಿ ಕಾರ್ಯಕರ್ತರನ್ನು ರೂಪಿಸುವ ಗುರಿ ಇದೆ.
1,05,000 ಜಾಗಗಳಲ್ಲಿ ಗುರುಪೂಜೆಯಾಗಿದೆ. ಶಾಖೆಗಳಿಲ್ಲದ ಕಡೆಯೂ ವಿವಿಧ ಸೇವಾಕಾರ್ಯಗಳ ಮೂಲಕ ಸಂಪರ್ಕವಿದೆ.

ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ಕಾರ್ಯಕ್ರಮಗಳು
ಸ್ವತಂತ್ರದ ಅಮೃತಮಹೋತ್ಸವದ ವೇಳೆ ಪ್ರದರ್ಶಿನಿಗಳನ್ನು ಮತ್ತಿತರ ಕಾರ್ಯಗಳನ್ನು ಮಾಡಲಾಗುವುದು. ಉದಾಹರಣೆಗೆ ಕರ್ನಾಟಕದ ರಾಣಿ ಅಬ್ಬಕ್ಕ, ಮಣಿಪುರದ ಗೈಡೆನ್ಲು ಥರದ ಪ್ರಸಿದ್ಧರಲ್ಲದ ಹೀರೋಗಳನ್ನು ಪರಿಚಯಿಸಲಾಗುವುದು. ಎಸ್ಸಿ-ಎಸ್ಟಿ ಸಮುದಾಯದ ದೊಡ್ಡಮಟ್ಟದ ಕೊಡುಗೆ ಸ್ವಾತಂತ್ರ್ಯ ಹೋರಾಟಕ್ಕಿದೆ. ಅಲ್ಲದೇ, ಸ್ವಾತಂತ್ರ್ಯ ಹೋರಾಟ ಕೇವಲ ಬ್ರಿಟಿಷರನ್ನು ಓಡಿಸುವುದು ಮಾತ್ರವಲ್ಲ, ದೇಶದ ಸ್ವಯಂ ಅನ್ನು ಜಾಗೃತಗೊಳಿಸುವುದಾಗಿತ್ತು. ಇವನ್ನೆಲ್ಲ ಸಮಾಜದ ಮುಂದೆ ತರುವುದಲ್ಲದೇ, ಈಗಿನ ಪೀಳಿಗೆಗೆ ನಮ್ಮ ದೇಶವನ್ನು ಎಲ್ಲ ವಿಭಾಗಗಳಲ್ಲಿ ಮುನ್ನಡೆಸುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಸಲಾಗುವುದು. ಗುರು ತೇಗ್ ಬಹಾದ್ದೂರ್ ಸಿಂಗ್ ಅವರ ತ್ಯಾಗವನ್ನು ಇದೇ ಸಂದರ್ಭದಲ್ಲಿ ಯುವಪೀಳಿಗೆಯ ಮುಂದಿಡಬೇಕಾಗುತ್ತದೆ. ಜತೆಯಲ್ಲೇ ಸಾಮಾಜಿಕ ದೋಷಗಳಾದ ಜಾತೀಯತೆ ಇತ್ಯಾದಿಗಳನ್ನು ನಿವಾರಿಸುವ ಹಂತದಲ್ಲೂ ಸಮಾಜದ ಎಲ್ಲ ವರ್ಗವನ್ನು ಜೋಡಿಸಿಕೊಂಡು ಜಾಗೃತಿ ನಡೆಸಲಾಗುತ್ತದೆ.

ಕೌಶಲವೃದ್ಧಿ ಮೂಲಕ ಉದ್ಯೋಗ ಸೃಷ್ಟಿ
ಕೊರೋನಾ ಸಂದರ್ಭದಲ್ಲಿ ಶಿಕ್ಷಣ ಮತ್ತು ಉದ್ಯೋಗ ವಲಯ ಹೊಡೆತ ತಿಂದಿವೆ. ಹೀಗಾಗಿ ಕೌಶಲವೃದ್ಧಿ ಮೂಲಕ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಆರೆಸ್ಸೆಸ್ ದೊಡ್ಡಮಟ್ಟದಲ್ಲಿ ಕೆಲಸ ಮಾಡಲಿದೆ. ಸ್ಥಳೀಯವಾಗಿ ಮಣ್ಣಿನ ದೀಪ ತಯಾರಿಕೆ, ಸೀರೆ ನೇಕಾರಿಕೆ ಇತ್ಯಾದಿಗಳಲ್ಲಿ ಅದಾಗಲೇ ಸ್ವಯಂಸೇವಕರು ಅದಾಗಲೇ ಕೌಶಲವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ
• ಪರಿಸರದ ರಕ್ಷಣೆ ಮುಖ್ಯ. ಆದರೆ ಇದರಲ್ಲಿ ಸಮುದಾಯದ ಸಮ್ಮತಿ ಪಡೆದುಕೊಳ್ಳಬೇಕು. ಪಟಾಕಿಯ ಮೇಲೆ ಸಂಪೂರ್ಣ ನಿಷೇಧಕ್ಕೆ ಮೊದಲು ಅದರಲ್ಲಿ ತೊಡಗಿಕೊಂಡವರ ಉದ್ಯೋಗದ ಬದಲಿ ವ್ಯವಸ್ಥೆ ಏನು, ಯಾವ ಬಗೆಯ ಪಟಾಕಿಗಳು ಮಾರಕ ಎಂಬ ಬಗ್ಗೆ ಸ್ಪಷ್ಟತೆ ಇರಬೇಕು.
• ಮತಾಂತರದ ವಿರುದ್ಧ ಕಾಂಗ್ರೆಸ್ ಸರ್ಕಾರಗಳೂ ಮಸೂದೆ ತಂದಿರುವ ಉದಾಹರಣೆ ಹಿಮಾಚಲ ಪ್ರದೇಶದಂಥ ರಾಜ್ಯಗಳಲ್ಲಿದೆ. ಮತಾಂತರ ನಿಲ್ಲಬೇಕು ಎಂಬುದು ಆರೆಸ್ಸೆಸ್ಸಿನ ಲಾಗಾಯ್ತಿನ ನಿಲುವು. ಆ ನಿಟ್ಟಿನಲ್ಲಿ ಯಾವುದೇ ಕಾನೂನುಗಳನ್ನು ನಾವು ಸ್ವಾಗತಿಸುತ್ತೇವೆ. ಮುಖ್ಯವಾಗಿ, ಮತಾಂತರ ಆದವರು ಎರಡೂ ಕಡೆಯ ಲಾಭಗಳನ್ನು ಪಡೆಯುವುದು ನಿಲ್ಲಬೇಕು.
• ಜನಸಂಖ್ಯಾ ನೀತಿಯ ಬಗ್ಗೆ ಐದು ವರ್ಷಗಳ ಹಿಂದೆಯೇ ಅಖಿಲ ಭಾರತೀಯ ಪ್ರತಿನಿಧಿ ಸಭಾ ನಿರ್ಣಯ ಕೈಗೊಂಡಿದೆಯಾದ್ದರಿಂದ ಈ ಹೊತ್ತಿನಲ್ಲಿ ಆ ಚರ್ಚೆ ಆಗಿಲ್ಲ. ಆದರೆ, ದೇಶಕ್ಕೊಂದು ಜನಸಂಖ್ಯಾ ನೀತಿ ಇರಬೇಕು ಹಾಗೂ ಅದು ಎಲ್ಲ ಜನರಿಗೆ, ಎಲ್ಲ ಪ್ರದೇಶಗಳಿಗೆ ಸಮಾನವಾಗಿ ಅನ್ವಯ ಆಗಬೇಕು ಎಂಬುದು ಸಂಘದ ನಿಲುವು.
• ಸಮಾನ ನಾಗರಿಕ ಸಂಹಿತೆ ಅನ್ನೋದು ದೇಶದ ಸಂವಿಧಾನದ ರಾಜ್ಯನಿರ್ದೇಶಕ ತತ್ವಗಳಲ್ಲೇ ಅಡಕವಾಗಿದೆ. ಸರ್ಕಾರವೂ ಇದಕ್ಕೆ ಬದ್ಧವಾಗಿರುವುದಾಗಿ ಹೇಳಿದೆ. ಅದು ಯಾವಾಗ ಜಾರಿಯಾಗಬೇಕೆಂಬ ನಿರ್ಧಾರವನ್ನು ರಾಜಕೀಯ ನಾಯಕತ್ವವೇ ತೆಗೆದುಕೊಳ್ಳಬೇಕು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,