‘ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ’ ಭಾಗಮಂಡಲದಲ್ಲಿ ಗ್ರಾಮ ವಾಸ್ತವ್ಯ
ಹಲವು ಸ್ಥಳೀಯ ಸಮಸ್ಯೆ ಹಂತ ಹಂತವಾಗಿ ಪರಿಹಾರ: ಡಾ.ಬಿ.ಸಿ.ಸತೀಶ
ಮಡಿಕೇರಿ ಅ.30: ಕೃಷಿಕರಿಗೆ ಆರ್‍ಟಿಸಿ ಒದಗಿಸುವುದು, ಬಸ್ ಸಂಪರ್ಕ ಕಲ್ಪಿಸುವುದು, ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸುವುದು. ಹೀಗೆ ಹಲವು ಅಹವಾಲುಗಳ ಬಗ್ಗೆ ಭಾಗಮಂಡಲದ ಗೌಡ ಸಮಾಜದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಹೆಚ್ಚಾಗಿ ಕೇಳಿ ಬಂದವು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಂದ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಬೆಳಕು ಚೆಲ್ಲಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಸರ್ಕಾರ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ’ ಎಂಬ ಹೆಸರಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸ್ಥಳೀಯ ಹಲವು ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಹಂತದ ಸಮಸ್ಯೆಗಳನ್ನು ಪರಿಹರಿಸಲು ಹಂತ ಹಂತವಾಗಿ ಪ್ರಯತ್ನಿಸಲಾಗುವುದು ಎಂದರು.
ಭಾಗಮಂಡಲ-ತಲಕಾವೇರಿ ಮತ್ತು ಭಾಗಮಂಡಲ-ಕರಿಕೆ ಮಾರ್ಗದಲ್ಲಿ ಬಸ್ ಸಂಪರ್ಕ ಕಲ್ಪಿಸಲಾಗುವುದು. ಶಾಲಾ ವಿದ್ಯಾರ್ಥಿಗಳು, ಭಕ್ತಾಧಿಗಳು, ಸಾರ್ವಜನಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಲಭ್ಯವಿರುವ ಕಡೆ ಜಾಗ ಒದಗಿಸಲಾಗುವುದು. ಸರ್ಕಾರಿ ಕಚೇರಿಗಳು, ವಸತಿ ನಿರ್ಮಾಣ, ಅಂಗನವಾಡಿ ನಿರ್ಮಾಣ, ಸ್ಮಶಾನಕ್ಕೆ ಭೂಮಿ ಹೀಗೆ ಹಲವು ಉದ್ದೇಶಗಳಿಗೆ ಭೂಮಿ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಭಾಗಮಂಡಲ ಸ್ಥಳೀಯರಾದ ಅಮೆ ಬಾಲಕೃಷ್ಣ ಅವರು ಜಮ್ಮಾ ಬಾಣೆಯಲ್ಲಿ ಕೃಷಿಕರು ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಅವರವರ ಖಾತೆಗೆ ಆರ್‍ಟಿಸಿ ಇಲ್ಲದಿರುವುದರಿಂದ ಸಹಕಾರ ಸಂಘಗಳಲ್ಲಿ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೃಷಿಕರ ಖಾತೆಗೆ ಆರ್‍ಟಿಸಿ ಮಾಡಿಸಿಕೊಡುವಂತೆ ಕೋರಿದರು.
ಒಂದು ಕುಟುಂಬದ ಪಟ್ಟೆದಾರರ ಹೆಸರಿನಲ್ಲಿ ಭೂಮಿ ಇದ್ದು, ಮಕ್ಕಳ, ಮೊಮ್ಮಕ್ಕಳ ಹೆಸರಿಗೆ ಆರ್‍ಟಿಸಿ ಆಗಿರುವುದಿಲ್ಲ. ಇದು ಕೊಡಗಿನ ಸಮಸ್ಯೆಯಾಗಿದ್ದು, ಈ ಬಗ್ಗೆ ಗಮನಹರಿಸಬೇಕಿದೆ ಎಂದು ಮನವಿ ಮಾಡಿದರು.
ಏಲಕ್ಕಿ ಬೆಳೆ ಸಂರಕ್ಷಣೆಗೆ ಒತ್ತು ನೀಡಬೇಕಿದೆ. ಈ ಭಾಗದ ಯುವಜನರು ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೃಷಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.
‘ಗ್ರಾ.ಪಂ.ಉಪಾಧ್ಯಕ್ಷರಾದ ಹೊಸೂರು ಸತೀಶ್‍ಕುಮಾರ್ ಅವರು ಮಾತನಾಡಿ ಕುಟುಂಬದಲ್ಲಿ ಹೊಂದಾಣಿಕೆ ಇಲ್ಲದಿರುವುದರಿಂದ ಕೃಷಿಕರು ಆರ್‍ಟಿಸಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುಟುಂಬದವರು ಹೊಂದಾಣಿಕೆಯಿಂದ ಹೋದರೆ ಆರ್‍ಟಿಸಿ ಮಾಡಿಸಿಕೊಳ್ಳಬಹುದಾಗಿದೆ. ಆದರೆ ಇದು ಆಗುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.’
ಜಿಲ್ಲೆಯಲ್ಲಿ ಸಹಕಾರ ಸಂಘದಲ್ಲಿ ಶೇ.30ರಷ್ಟು ಮಾತ್ರ ರೈತರು ಕೃಷಿ ಸಾಲ ಪಡೆದುಕೊಂಡಿದ್ದಾರೆ. ಉಳಿದವರು ಆರ್‍ಟಿಸಿ ಇಲ್ಲದೆ ಕೃಷಿ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ನವಗ್ರಾಮ ಯೋಜನೆಯಡಿ ನಿವೇಶನ ಕಾಯ್ದಿರಿಸಿಕೊಡಬೇಕು. ಹಾಗೆಯೇ ಮಳೆಗಾಲದ ಅವಧಿಯಲ್ಲಿ ಭಾಗಮಂಡಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತದೆ. ಆದ್ದರಿಂದ ಮೇಲು ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ಮಳೆಗಾಲದ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮೇಲು ಸೇತುವೆ ನಿರ್ಮಾಣ ಸಂಬಂಧ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‍ಗಳ ಜೊತೆ ಚರ್ಚಿಸಲಾಗುವುದು ಎಂದರು.
ಭಾಗಮಂಡಲದಲ್ಲಿ ಗ್ರಾ.ಪಂ.ವತಿಯಿಂದ ಶೌಚಾಲಯ ನಿರ್ಮಾಣಕ್ಕೆ ಜಾಗ ಒದಗಿಸುವ ಸಂಬಂಧ ಸ್ಥಳ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸ್ಥಳೀಯರಾದ ಸುನಿಲ್ ಪತ್ರಾವೊ ಅವರು ಮಾತನಾಡಿ ಭಾಗಮಂಡಲ ಸುತ್ತಮುತ್ತ ಹಲವು ಬಡ ಕುಟುಂಬಗಳು ಕೃಷಿ ಭೂಮಿ ಇಲ್ಲದೆ ಬಡತನದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದಾರೆ. ಇಂತಹ ನಿರ್ಗತಿಕ ಕುಟುಂಬಗಳಿಗೆ ಭೂಮಿ ಒದಗಿಸವಂತಾಗಬೇಕು ಎಂದು ಅವರು ಕೋರಿದರು.
ಭಾಗಮಂಡಲ-ತಲಕಾವೇರಿ ಮಾರ್ಗ ಬಸ್ ಸೌಕರ್ಯ ಒದಗಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ, ಭಕ್ತಾಧಿಗಳಿಗೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಸುನಿಲ್ ಪತ್ರಾವೊ ಅವರು ಮನವಿ ಮಾಡಿದರು. ಕುದುಕುಳಿ ಜೆ.ಭರತ್ ಅವರು ಮಾತನಾಡಿ ಕೃಷಿಕರಿಗೆ ಭೂಮಿಯ ದಾಖಲೆ ಒದಗಿಸಬೇಕು ಎಂದು ಅವರು ಮನವಿ ಮಾಡಿದರು.
2019 ಮತ್ತು 2020 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಇವರಿಗೆ ಇದುವರೆಗೆ ಪರಿಹಾರ ದೊರೆತಿಲ್ಲ ಎಂದು ಸಾರ್ವಜನಿಕರೊಬ್ಬರು ಅವಲತ್ತುಕೊಂಡರು.
ತಲಕಾವೇರಿ ದೇವಾಲಯದ ಅರ್ಚಕ ಕುಟುಂಬದವರಾದ ವಿಠಲ ಆಚಾರ್ಯ ಅವರು 2020ರ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡಿದ್ದು, ಒಂದು ವರ್ಷ ಕಳೆದರೂ ಪರಿಹಾರ ದೊರೆತಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಕ್ಷಣ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಕೋಡಿ ಪೊನ್ನಪ್ಪ ಅವರು ಮಾತನಾಡಿ ಕರಿಕೆ ವ್ಯಾಪ್ತಿಯಲ್ಲಿ ಆದಿವಾಸಿ ಗಿರಿಜನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕಿದೆ. ಕರಿಕೆಯಲ್ಲಿರುವ ಸರ್ಕಾರಿ ಶಾಲೆಯ ಭೂಮಿಯ ಸರ್ವೇ ಕಾರ್ಯ ಮಾಡಿ ದಾಖಲೆಯನ್ನು ಜತನ ಮಾಡಿಕೊಳ್ಳಬೇಕು ಎಂದು ಅವರು ಕೋರಿದರು.
ಹಾಗೆಯೇ ಭಾಗಮಂಡಲ-ಕರಿಕೆ ಮಾರ್ಗ ಬಸ್ ಸಂಪರ್ಕ ಕಲ್ಪಿಸಬೇಕಿದೆ ಎಂದು ಅವರು ಮನವಿ ಮಾಡಿದರು. ಕಾಳನ ರವಿ, ಸುಭಾಷ್ ಇತರರು ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಅಯ್ಯಂಗೇರಿ ಗ್ರಾ.ಪಂ.ಸದಸ್ಯರಾದ ಚಂಗಪ್ಪ ಅವರು ಅಯ್ಯಂಗೇರಿ ಗ್ರಾ.ಪಂ.ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಗೊಂದಲವಿದ್ದು, ಇದನ್ನು ಸರಿಪಡಿಸಬೇಕಿದೆ ಎಂದು ಅವರು ಮಾಡಿದರು.
ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕರಾದ ಗೀತಾ ಅವರು ಭಾಗಮಂಡಲ-ತಲಕಾವೇರಿ, ಭಾಗಮಂಡಲ-ಕರಿಕೆ ಮಾರ್ಗ ಬಸ್ ಸಂಪರ್ಕ ಕಲ್ಪಿಸುವ ಸಂಬಂಧ ಅಗತ್ಯ ಕ್ರಮವಹಿಸಲಾಗುವುದು ಎಂದರು.
ತಹಶೀಲ್ದಾರ್ ಮಹೇಶ್ ಅವರು ಮಾತನಾಡಿ ಪಹಣಿ, ಪೌತಿ ಖಾತೆ, ಸಾಮಾಜಿಕ ಭದ್ರತಾ ಯೋಜನೆಗಳು, ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವುದು, ಸರ್ಕಾರಿ ಭೂಮಿ ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸುವುದು, ಕೃಷಿಕರಿಗೆ ಹಾಗೂ ಇತರರಿಗೆ ಪ್ರಮಾಣ ಪತ್ರ ಒದಗಿಸುವುದು, ಹೀಗೆ ಹಲವು ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಜಿಲ್ಲಾಧಿಕಾರಿ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ತಾ.ಪಂ.ಇಒ ಶೇಖರ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಮುದ್ದಣ್ಣ, ಸಿಡಿಪಿಒ ಅರುಂಧತಿ, ಗಡಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್, ಐಟಿಡಿಪಿ ಇಲಾಖೆ ಅಧಿಕಾರಿ ಶ್ರೀನಿವಾಸ್, ತಲಕಾವೇರಿ-ಭಾಗಮಂಡಲ ಕಾರ್ಯನಿರ್ವಹಣಾಧಿಕಾರಿ ಬಿ.ಎಂ.ಕೃಷ್ಣಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್, ಗ್ರಾ.ಪಂ.ಅಧ್ಯಕ್ಷರಾದ ಪೆಮಿತ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟರಾಜು ಇತರರು ಇದ್ದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network