Header Ads Widget

ಸರ್ಚ್ ಕೂರ್ಗ್ ಮೀಡಿಯ

ಮೊಬೈಲ್ ಹೆಚ್ಚು ಬಳಸಿದಷ್ಟು ದುಷ್ಪರಿಣಾಮ ಕೂಡ ಹೆಚ್ಚು; ಬಿ.ಎಲ್.ಜಿನರಾಳಕರ್

ಮೊಬೈಲ್ ಹೆಚ್ಚು ಬಳಸಿದಷ್ಟು ದುಷ್ಪರಿಣಾಮ ಕೂಡ ಹೆಚ್ಚು; ಬಿ.ಎಲ್.ಜಿನರಾಳಕರ್


ಮಡಿಕೇರಿ ಅ.29: ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ಮೊಬೈಲ್ ಹೆಚ್ಚು ಬಳಸಿದಷ್ಟು ದುಷ್ಪರಿಣಾಮಗಳು ಕೂಡ ಹೆಚ್ಚಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಲ್.ಜಿನರಾಳಕರ್ ಅವರು ಹೇಳಿದ್ದಾರೆ. 

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ‘ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ’ ಕುರಿತು ಶುಕ್ರವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಮಾತನಾಡಿದರು. 

ಪ್ರಸ್ತುತ ಯುಗದಲ್ಲಿ ಮೊಬೈಲ್ ಬಳಕೆಯು ಚಟವಾಗಿ ಮಾರ್ಪಾಡಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ, ಎಲ್ಲರೊಂದಿಗೂ ಸ್ಮಾರ್ಟ್‍ಫೋನ್ ಇರುವುದರಿಂದ ಅಂಗೈಯಲ್ಲಿ ಪ್ರಪಂಚ ಕಾಣುವಂತೆ ಮಾಡಿದೆ. ಆದ್ದರಿಂದ ಮೊಬೈಲ್ ಎಷ್ಟು ಬಳಕೆಗೆ ಇದೆ ಅಷ್ಟೇ ಬಳಸಬೇಕು ಎಂದು ಹೇಳಿದರು.

ಚಿಕ್ಕ ಮಕ್ಕಳು ಅತ್ತರು ಸಹ ಅವರ ಕೈಯಲ್ಲಿ ಮೊಬೈಲ್ ಫೋನ್ ಕೊಟ್ಟು ಕೂರಿಸುತ್ತಾರೆ. ಮಕ್ಕಳಿಗೆ ಸಂಬಂಧಗಳ ಬೆಲೆಯನ್ನು ಅರ್ಥೈಸಬೇಕು ಎಂದು ಹೇಳಿದರು.  

ಸಂಪನ್ಮೂಲ ವ್ಯಕ್ತಿಯಾದ ಆದರ್ಶಗೌಡ ಪಿ.ಎನ್. ಅವರು ಮೊಬೈಲ್ ದುಷ್ಪರಿಣಾಮಗಳ ಕುರಿತು ವಿವರಿಸಿ, ನಾವೆಲ್ಲರೂ ಶಿಕ್ಷಣದಲ್ಲಿ ಮಾತ್ರ ವಿದ್ಯಾವಂತರಾಗಿದ್ದೇವೆ, ಆದರೆ ಮೊಬೈಲ್ ಬಳಕೆಯಲ್ಲಿ ಅವಿದ್ಯಾವಂತರು ಎಂದರು.

ಮೊಬೈಲ್ ಕರೆಗಳ ಮೂಲಕ ಸೂಕ್ಷ್ಮ ತರಂಗಗಳು ಬರುವುದರಿಂದ ಮಾನವನ ದೇಹಕ್ಕೆ ಹಲವಾರು ರೀತಿಯ ತೊಂದರೆಗಳು ಉಂಟಾಗುತ್ತದೆ. ಹೆಚ್ಚು ಕಾಲ ಮೊಬೈಲ್ ಫೋನ್‍ನಲ್ಲಿ ಮಾತನಾಡುವುದರಿಂದ ಗ್ಲಿಯೋಮಾ ಟ್ಯೂಮರ್ ಹಾಗೂ ನಿಮೋನಿಯಾದಂತಹ ಕಾಯಿಲೆಗಳು ಬರುತ್ತದೆ ಎಂದರು. 

ವಕೀಲರ ಸಂಘದ ಅಧ್ಯಕ್ಷರಾದ ಕೆ.ಡಿ.ದಯಾನಂದ ಅವರು ಮಾತನಾಡಿ, ನಮ್ಮ ಬಾಲ್ಯವನ್ನು ನಾವು ರಸ್ತೆಬದಿಯಲ್ಲಿ, ಮಣ್ಣಲ್ಲಿ ಹಾಗೂ ಹೊರಾಂಗಣ ಆಟವಾಡಿದ ನೆನಪಿದೆ. ಆದರೆ ಈಗಿನ ಮಕ್ಕಳು ತಮ್ಮ ಬಾಲ್ಯವನ್ನು ಮೊಬೈಲ್‍ನಲ್ಲೇ ಕಳೆಯುತ್ತಿದ್ದಾರೆ. ಇದು ಸಮಾಜಕ್ಕೆ ಮಾರಕವಾಗಿದೆ ಎಂದು ಹೇಳಿದರು.

ಮೊಬೈಲ್ ಬಂದ ನಂತರ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ನೆರೆಹೊರೆಯವರನ್ನು ಆತ್ಮೀಯರನ್ನು ಮಾತನಾಡಿಸಲು ಸಮಯವಿಲ್ಲದಂತೆ ಮೊಬೈಲ್‍ನಲ್ಲಿ ಮಗ್ನರಾಗಿರುತ್ತಾರೆ. ತಂತ್ರಜ್ಞಾನ ಸುಧಾರಿಸುತ್ತಿದಂತೆ ಜನರು ಆಧುನೀಕರಣಕ್ಕೆ ಮುಂದಾಗುತ್ತಿದ್ದಾರೆ ಮಿತಿ ಮೀರದೆ ಮೊಬೈಲ್ ಫೋನ್ ಅನ್ನು ಅವಶ್ಯಕವಾಗಿ ಮಾತ್ರ ಬಳಸಿಕೊಳ್ಳುವುದು ಉತ್ತಮ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಸುಬ್ರಮಣ್ಯ ಎನ್,, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ.ರೂಪ ಕೆ. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಮನು ಬಿ.ಕೆ., ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸ್ಮಿತಾ ನಾಗಲಾಪುರ, ಸಿಂಕಾನ್ ಫೌಂಡೇಶನ್ ಮತ್ತು ಸೋಷಿಯಲ್ ವೆಲ್ಫೇರ್ ಟ್ರಸ್ಟ್‍ನ ಯೋಜನಾಧಿಕಾರಿಗಳಾದ ರಾಜೇಶ್ ನಾಯಕ್ ಜಿ.ಆರ್., ವಕೀಲರ ಸಂಘದ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.

ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ.ಅರುಣ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ನೌಕರ ಸಂಘದ ಅಧ್ಯಕ್ಷರಾದ ರೋಹಿಣಿ ಅವರು ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,