Header Ads Widget

Responsive Advertisement

ಬ್ಯಾಂಕುಗಳ ತ್ರೈಮಾಸಿಕದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ

ಬ್ಯಾಂಕುಗಳ ತ್ರೈಮಾಸಿಕದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ 


ಮಡಿಕೇರಿ ಅ.28: ಬ್ಯಾಂಕುಗಳ ತ್ರೈಮಾಸಿಕದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.  

       ಸಭೆಯಲ್ಲಿ ಸ್ವಾತಂತ್ರ್ಯದ 75ನೇ ಸಂಭ್ರಮಾಚರಣೆಗಳ ಸಂದರ್ಭದಲ್ಲಿ 'ಜಾಗೃತಿ ಅರಿವು' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ವಿಚಕ್ಷಣಾ ಅಧಿಕಾರಿಗಳಾದ ಬಸವರಾಜ್ ಅವರು ಸಭೆಯಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಪ್ರತಿಜ್ಞೆ ಬೋಧಿಸಿದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ಪ್ರಾದೇಶಿಕ ವ್ಯವಸ್ಥಾಪಕರಾದ  ಜ್ಯೋತಿ ಕೃಷ್ಣನ್  ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಬ್ಯಾಂಕಿನ ಒಟ್ಟು ಆರ್ಥಿಕ ವಹಿವಾಟಿನ ಚಿತ್ರಣವನ್ನು ಸಭೆಗೆ ನೀಡಿದರು.

 ಭಾರತೀಯ ರಿಸರ್ವ್ ಬ್ಯಾಂಕಿನ ವೆಂಕಟೇಶ್ ಗೋಪಾಲ್ ಮಾತನಾಡಿ ಬ್ಯಾಂಕುಗಳು ಕೃಷಿಕರಿಗೆ ಒಳಿತು ಮಾಡುವಲ್ಲಿ ಶ್ರಮಿಸಬೇಕು ಎಂದರು. 

ನಂತರ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲಾವಾರು ಬ್ಯಾಂಕುಗಳ ಪ್ರಗತಿ ಪರಿಶೀಲನೆ ನಡೆಸಿ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಸೂಕ್ತವಾದ ಮಾರ್ಗದರ್ಶನ ನೀಡಿದರು. 

ಜಿಲ್ಲಾ ಅಗ್ರಣೀ ಬ್ಯಾಂಕಿನ ಮುಖ್ಯಸ್ಥರಾದ ಆರ್.ಕೆ.ಬಾಲಚಂದ್ರ ಅವರು 2020-21 ನೇ ಸಾಲಿನ ಜಿಲ್ಲಾ ಅಂಕಿ ಅಂಶಗಳ ಕುರಿತು ಮಾತನಾಡಿ ಜೂನ್ ವರ್ಷಾಂತ್ಯಕ್ಕೆ ಜಿಲ್ಲೆಯಲ್ಲಿ ಶಾಖೆಗಳ ಒಟ್ಟು ಸಂಖ್ಯೆ 174 ಆಗಿದ್ದು, ಒಟ್ಟು ಠೇವಣಿಗಳು ರೂ. 7123 ಕೋಟಿ, ಮುಂಗಡ ರೂ.5169 ಕೋಟಿ, ಮುಂಗಡ ಹಾಗೂ ಠೇವಣಿಗಳ ಅನುಪಾತ ಪ್ರತಿಶತ 72.58 ಆಗಿದೆ ಎಂದು ತಿಳಿಸಿದರು. 

ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ವಯ ರೂ.5100 ಕೋಟಿ ಗುರಿಯಲ್ಲಿ ಶೇ. 76 ಪ್ರತಿಶತ (ರೂ. 3900 ಕೋಟಿ) ಆದ್ಯತಾ ವಲಯಕ್ಕೆ ಮೀಸಲಿಟ್ಟಿದ್ದು ಅವುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ರೂ.2600 ಕೋಟಿ, ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಕ್ಕೆ ರೂ.700 ಕೋಟಿ ಮತ್ತು ಇತರೆ ಆದ್ಯತಾ ವಲಯಕ್ಕೆ ರೂ.600 ಕೋಟಿ ಗುರಿ ನಿಗದಿಪಡಿಸಿದ್ದು ಕ್ರಮವಾಗಿ ರೂ.988 ಕೋಟಿ ಒಟ್ಟು ಸಾಲ ವಿತರಣೆ, ಅವುಗಳಲ್ಲಿ ಆದ್ಯತಾ ವಲಯಕ್ಕೆ ರೂ.5021 ಕೋಟಿ, ಅವುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ರೂ.403 ಕೋಟಿ, ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಕ್ಕೆ ರೂ.53 ಕೋಟಿ ಮತ್ತು ಇತರೆ ಆದ್ಯತಾ ವಲಯಕ್ಕೆ ರೂ. 83 ಕೋಟಿ ಗುರಿ ಸಾಧಿಸಲಾಗಿದೆ ಎಂದರು. 

ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬ್ಯಾಂಕುಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯತೆಯನ್ನು ಸಾಧಿಸುವುದರ ಮೂಲಕ ಸರ್ಕಾರಿ ಪ್ರಾಯೋಜಿತ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಕರೆ ನೀಡಿದರು. 

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ(ನಬಾರ್ಡ್) ವ್ಯವಸ್ಥಾಪಕರಾದ ವಿ.ರಮೇಶ್ ಬಾಬು ಅವರು ಬ್ಯಾಂಕುಗಳ ತ್ರೈಮಾಸಿಕ ಪ್ರಗತಿ ಪರಿಶೀಲಿಸಿ, ಎಲ್ಲಾ ಬ್ಯಾಂಕುಗಳು ವಾರ್ಷಿಕ ಸಾಲ ಯೋಜನೆಯಲ್ಲಿ ನಿಗದಿಪಡಿಸಿರುವ ಗುರಿಯನ್ನು ತಲುಪಲು ಶ್ರಮಿಸುವಂತೆ ತಿಳಿಸಿದರು. 

ಸಭೆಯಲ್ಲಿ ವಿವಿಧ ಬ್ಯಾಂಕುಗಳ ಪ್ರಾದೇಶಿಕ ಕಾರ್ಯಾಲಯದ ಪ್ರತಿನಿಧಿಗಳು, ಬ್ಯಾಂಕುಗಳ ಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,