Header Ads Widget

Responsive Advertisement

ನವೆಂಬರ್ 15ನ್ನು ಜನಜಾತಿಯ ಗೌರವ ದಿವಸ ಎಂದು ಘೋಷಿಸಲು ಸಂಪುಟ ಅನುಮೋದನೆ

ನವೆಂಬರ್ 15ನ್ನು ಜನಜಾತಿಯ ಗೌರವ ದಿವಸ ಎಂದು ಘೋಷಿಸಲು ಸಂಪುಟ ಅನುಮೋದನೆ

ಈ ದಿನಾಂಕವು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಾಗಿದೆ

ಬುಡಕಟ್ಟು ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು 15ನೇ ನವೆಂಬರ್ ನಿಂದ 22ನೇ ನವೆಂಬರ್ 2021 ರವರೆಗೆ ಸಪ್ತಾಹ ಆಚರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ನವೆಂಬರ್ 15ರಂದು ವೀರ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗೆ ಸಮರ್ಪಿತವಾಗಿ ಜನಜಾತಿಯ ಗೌರವ ದಿವಸ ಎಂದು ಘೋಷಿಸಲು ತನ್ನ ಅನುಮೋದನೆ ನೀಡಿದ್ದು, ಇದರಿಂದಾಗಿ ಮುಂದಿನ ಪೀಳಿಗೆ ದೇಶಕ್ಕಾಗಿ ಅವರು ಮಾಡಿದ ತ್ಯಾಗದ ಬಗ್ಗೆ ಅರಿತುಕೊಳ್ಳಬಹುದಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟವು ಕೆಲವು ಹೆಸರಿಸಬಹುದಾದ ಬುಡಕಟ್ಟು ಸಮುದಾಯಗಳಾದ ಸಂತಾಲ್‌ ಗಳು, ತಮರ್‌ ಗಳು, ಕೋಲ್‌ ಗಳು, ಭಿಲ್‌ ಗಳು, ಖಾಸಿಗಳು ಮತ್ತು ಮಿಜೋಸ್‌ ಗಳ ಹಲವಾರು ಚಳವಳಿಗಳಿಂದ ಬಲಗೊಂಡಿತ್ತು. ಬುಡಕಟ್ಟು ಸಮುದಾಯಗಳು ಆಯೋಜಿಸಿದ ಕ್ರಾಂತಿಕಾರಿ ಚಳವಳಿಗಳು ಮತ್ತು ಹೋರಾಟಗಳು ಅವರ ಅಗಾಧ ಧೈರ್ಯ ಮತ್ತು ಅತ್ಯುನ್ನತ ತ್ಯಾಗದಿಂದ ಗುರುತಿಸಲ್ಪಟ್ಟಿವೆ. ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ದೇಶದ ವಿವಿಧ ಪ್ರದೇಶಗಳಲ್ಲಿನ ಬುಡಕಟ್ಟು ಚಳವಳಿಗಳು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದೊಂದಿಗೆ ಸಂಬಂಧ ಹೊಂದಿದ್ದವು ಮತ್ತು ದೇಶದಾದ್ಯಂತ ಭಾರತೀಯರಿಗೆ ಸ್ಫೂರ್ತಿ ನೀಡಿದ್ದವು. ಆದಾಗ್ಯೂ, ಸಾರ್ವಜನಿಕರಿಗೆ ಈ ಬುಡಕಟ್ಟು ವೀರರ ಬಗ್ಗೆ ಹೆಚ್ಚು ತಿಳಿದಿಲ್ಲ. 2016 ರ ಸ್ವಾತಂತ್ರ್ಯ ದಿನದಂದು ಮಾನ್ಯ ಪ್ರಧಾನಮಂತ್ರಿಯವರ ಭಾಷಣಕ್ಕೆ ಅನುಗುಣವಾಗಿ, ಭಾರತ ಸರ್ಕಾರವು ದೇಶಾದ್ಯಂತ 10 ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತು ಸಂಗ್ರಹಾಲಯಗಳನ್ನು ಮಂಜೂರು ಮಾಡಿದೆ.

ಈ ದಿನಾಂಕವು ದೇಶದಾದ್ಯಂತ ಬುಡಕಟ್ಟು ಸಮುದಾಯಗಳಿಂದ ಭಗವಾನ್ ಎಂದು ಪೂಜಿಸಲ್ಪಡುವ ಶ್ರೀ ಬಿರ್ಸಾ ಮುಂಡಾ ಅವರ ಜನ್ಮದಿನವಾಗಿದೆ. ಬಿರ್ಸಾ ಮುಂಡಾ ಅವರು ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆಯ ಶೋಷಣೆ ವಿರುದ್ಧ ದೇಶದಾದ್ಯಂತ ಕೆಚ್ಚೆದೆಯಿಂದ ಹೋರಾಡಿದ್ದರು ಮತ್ತು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ 'ಉಲ್ಗುಲಾನ್' (ಕ್ರಾಂತಿ)ಗೆ ಕರೆ ನೀಡಿ, ಚಳವಳಿಯನ್ನು ಮುನ್ನಡೆಸಿದ್ದರು. ಈ ಘೋಷಣೆಯು ಬುಡಕಟ್ಟು ಸಮುದಾಯಗಳ ಭವ್ಯ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸುತ್ತದೆ. ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಭಾರತೀಯ ಮೌಲ್ಯಗಳಾದ ಶೌರ್ಯ, ಆತಿಥ್ಯ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಚಾರಕ್ಕಾಗಿ ಬುಡಕಟ್ಟು ಜನಾಂಗದವರ ಪ್ರಯತ್ನಗಳನ್ನು ಗುರುತಿಸುತ್ತದೆ. ಬಿರ್ಸಾ ಮುಂಡಾ ಅವರು ಕೊನೆಯುಸಿರೆಳೆದ ರಾಂಚಿಯಲ್ಲಿರುವ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ವಸ್ತು ಸಂಗ್ರಹಾಲಯವನ್ನು ಮಾನ್ಯ ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.

ಬುಡಕಟ್ಟು ಜನರು, ಸಂಸ್ಕೃತಿ ಮತ್ತು ಸಾಧನೆಗಳ 75 ವರ್ಷಗಳ ವೈಭವಯುತ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು ಭಾರತ ಸರ್ಕಾರವು 15ನೇ ನವೆಂಬರ್ ನಿಂದ 22 ನವೆಂಬರ್ 2021 ರವರೆಗೆ ಒಂದು ವಾರಕಾಲ ಆಚರಣೆ ಮಾಡಲಿದೆ.

ಆಚರಣೆಯ ಅಂಗವಾಗಿ, ರಾಜ್ಯ ಸರ್ಕಾರಗಳೊಂದಿಗೆ ಜಂಟಿಯಾಗಿ ಹಲವಾರು ಚಟುವಟಿಕೆಗಳನ್ನು ಯೋಜಿಸಲಾಗಿದ್ದು, ಪ್ರತಿ ಚಟುವಟಿಕೆಯ ಹಿಂದಿನ ಉದ್ದೇಶವು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳ ಸಾಧನೆಗಳನ್ನು, ಶಿಕ್ಷಣ, ಆರೋಗ್ಯ, ಜೀವನೋಪಾಯ, ಮೂಲಸೌಕರ್ಯ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಭಾರತ ಸರ್ಕಾರ ಕೈಗೊಂಡ ವಿವಿಧ ಕಲ್ಯಾಣ ಕ್ರಮಗಳನ್ನು ಪ್ರದರ್ಶಿಸುವುದಾಗಿದೆ. ಈ ಕಾರ್ಯಕ್ರಮಗಳು ಅನನ್ಯ ಬುಡಕಟ್ಟು ಸಾಂಸ್ಕೃತಿಕ ಪರಂಪರೆ, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆಗಳು, ಆಚರಣೆಗಳು, ಹಕ್ಕುಗಳು, ಸಂಪ್ರದಾಯಗಳು, ಪಾಕಪದ್ಧತಿಗಳು, ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯವನ್ನು ಬಿಂಬಿಸುತ್ತವೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,