Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಿತ್ತಳೆ ಬುಟ್ಟಿಯಿಂದ ಅಕ್ಷರ ಕ್ರಾಂತಿ ಹೊಮ್ಮಿಸಿದ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ

ಕಿತ್ತಳೆ ಬುಟ್ಟಿಯಿಂದ ಅಕ್ಷರ ಕ್ರಾಂತಿ ಹೊಮ್ಮಿಸಿದ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ


ಈ ಸಾಧಕರ ಬದುಕು ಹಾಗಲ್ಲ ಅವರು ಸ್ಥಿತಪ್ರಜ್ಞರು ಅಂದುಕೊಂಡದ್ದನ್ನು ಸಾಧಿಸದೆ ಅವರು ವಿರಮಿಸೋದಿಲ್ಲ. ಜಗತ್ತು ಅವರಿಗೆ ಏನೇ ಅನ್ನಲಿ. ಅದನ್ನು ಕಟ್ಟಿಕೊಂಡು ಅವರಿಗೆ ಆಗಬೇಕಿರುವುದು ಏನೂ ಇಲ್ಲ. 

ಉಳ್ಳಾಲ ಶಾಸಕ ಯುಟಿ ಫರೀದ್ ಅವರ ಮನೆ ಹಾಗೆ.. ದಿನಾ ಬೆಳಗಾದ್ರೆ ಸಾಕು ಒಂದಷ್ಟು ಅಹವಾಲು ಹೊತ್ತ ಜನರಿಂದ ತುಂಬಿರುತ್ತಿತ್ತು. ಹತ್ತು ಗಂಟೆವರೆಗೂ ಜನರೊಂದಿಗೆ ಮಾತನಾಡ್ತಾ ಅವರ ದೂರುಗಳನ್ನು ಸ್ವೀಕರಿಸ್ತಾ ಇದ್ದ ಫರೀದ್ ಆಮೇಲೆ ತಮ್ಮ ಬಾಕಿ ಕಾರ್ಯಕ್ರಮಗಳಿಗೆ ಹೊರಟು ಬಿಡ್ತಾ ಇದ್ರು. ಕಳೆದ ಮೂರು ನಾಲ್ಕು ದಿನದಿಂದ ಅವನ್ಯಾವನೋ ಒಬ್ಬ ಹರಕಲು ಅಂಗಿ ಲುಂಗಿ ಕುರುಚಲು ಕೂದಲಿನ   ಸಣಕಲು ದೇಹದ ಮನುಷ್ಯ ದಿನಾ  ಬೆಳಗಾದ್ರೆ ಜಗಲಿಯಲ್ಲಿ ಬಂದು ಕೂರುತ್ತಿದ್ದ.

ಮೊಣಕಾಲಿನಿಂದ ಸ್ವಲ್ಪ ಕೆಳಗೆ ಬರುವಂತೆ ಕುಪ್ಪಾಯ ಉಡುತ್ತಿದ್ದ ಅವನನ್ನು ನೋಡಿದ ಕೂಡಲೆ ಅವನೊಬ್ಬ ಪಕ್ಕಾಬ್ಯಾರಿ ಅನ್ನೋದು ತಿಳಿಯುತ್ತಿತ್ತು. ಉಳಿದ ಅಹವಾಲುದಾರರು ಮನೆ ಒಳಗೆ ಬಂದು ಕೂರುತ್ತಿದ್ದರೂ ಈತ ಮಾತ್ರ ಜಗಲಿಯಲ್ಲೇ ಕುಕ್ಕರುಗಾಲು ಮಾಡಿ ಮುಖಕ್ಕೆ ಕೈಕೊಟ್ಟು ಕೂರುತ್ತಿದ್ದ. ಒಳ ಬಂದವರ ಅರ್ಜಿ ವಿಲೇವಾರಿ ಆದ ನಂತರ ಹೊರಟು ಬಿಡುತ್ತಿದ್ದ ಫರೀದ್ ಅವರಿಗೆ ಹೊರಗಡೆ ಬಾಗಿಲು ಕಾಯುತ್ತಿದ್ದ ಈ ಆಸಾಮಿ ಒಂದೆರಡು ದಿನ ಗಮನಕ್ಕೇ ಬಂದಿರಲಿಲ್ಲ.  ಏನೋ... ಮಗಳ ಮದುವೆ, ಮನೆ ಕಟ್ಟೋದಿದೆ.. ರೇಶನ್ನು ಕಾರ್ಡು,.. ಹೆಂಡತಿಗೆ ಆಪರೇಶನ್ನು.. ಹೀಗೆ ಏನೋ ಒಂದು ಗೋಳು ಹೇಳ್ಕೊಂಡು ಬಂದಿರ್ತಾನೆ ಅಂತ ಶಾಸಕರ ಜತೆಗಿದ್ದವರೂ ಈ ಜಗಲಿ ಪಾರ್ಟಿಯನ್ನು ಅಷ್ಟಾಗಿ ಗಮನಿಸಿರಲಿಲ್ಲ.

ಕಡೆಗೂ ಒಂದು ದಿನ ಆತ ಫರೀದ್ ಕಣ್ಣಿಗೆ ಬಿದ್ದ ನೋಡಿ.. ಬಾರಪ್ಪಾ ಅಲ್ಯಾಕೆ ನೆಲದಲ್ಲಿ ಕೂತಿದ್ಯಾ ಮೇಲೆ ಕೂತ್ಕೋ ಅಂದ್ರು... ಆದರೆ ಅವನಿಗೆ ಮುಜುಗರ ಬಿಡಲಿಲ್ಲ. ಫರೀದ್ ಎಳೆದು ಸೋಫಾದ ಮೇಲೆ ಕೂರಿಸಿದರು. ಏನಪ್ಪಾ ಪ್ರಾಬ್ಲಮ್ಮು  ಅಂದ್ರು... ಅವ ಕೊಟ್ಟ ಉತ್ತರಕ್ಕೆ ವಯೋವೃದ್ಧ ಫರೀದ್ ದಂಗು ಬಡಿದು ಹೋದ್ರು.. ಅಂಗಿಯ ಬಟನನ್ನೂ ಸರಿಯಾಗಿ ಹಾಕಿಕೊಳ್ಳೋ ಅಭ್ಯಾಸ ಇರದ ಆ ಬರಿಗೈ ಫಕೀರ ಹೇಳ್ತಾನೆ ...ನನ್ನ ಊರಿನ ಮಕ್ಕಳಿಗೆ ಕಲಿಯೋದಿಕ್ಕೆ ಶಾಲೆ ಇಲ್ಲ. ನಾನು ಒಂದು  ಶಾಲೆ ಕಟ್ಟಬೇಕು ಅಂತ ಇದ್ದೀನಿ  ಸಾರು....!!  ಶಾಸಕ ಫರೀದ್ ಅವರಿಗೆ ಈ ಮಾತು ಕೇಳಿ ದಿಗ್ಭ್ರಮೆಯಾಯ್ತು.

ಅವರು ಕೇಳ್ತಾರೆ.  ಏನು ಮಾಡ್ಕೊಂಡಿದ್ದೀಯಾ ನೀನು...? ಅವನು ಹೇಳಿದ ಹಂಪನಕಟ್ಟೆ  ಬಸ್ ಸ್ಟ್ಯಾಂಡಲ್ಲಿ ಬುಟ್ಟಿಯಲ್ಲಿ ಹೊತ್ತು ಕಿತ್ತಾಳೆ ಮಾರ್ತೀನಿ.. ಶಾಲೆ ಕಟ್ಟೋದಿಕ್ಕೆ ಕಿತ್ತಾಳೆ ಮಾರಿ ಉಳಿಸಿದ ಸ್ವಲ್ಪ ಚಿಲ್ಲರೆ ದುಡ್ಡಿದೆ. ಮತ್ತೆ ಯಾರಾದ್ರು ಪುಣ್ಯಾತ್ಮರು ಸಹಾಯ ಮಾಡಿಯಾರು ಅಂತ ಹೇಳಿ ಆ ಮನುಷ್ಯ ಕಣ್ಣಗಲಿಸಿ ತಲೆ ಕೆರೆದುಕೊಂಡ. ಫರೀದ್ ಅವರಿಗೆ ತನ್ನ ಕಣ್ಣು ಕಿವಿಗಳನ್ನೇ ನಂಬಲಾಗಲಿಲ್ಲ. ಇವನು ಶಾಲೆ ಮಾಡೋದು ಅಂದ್ರೆ ಏನೂಂತ ತಿಳ್ಕೊಂಡಿದ್ದಾನೆ.? ಶಾಸಕರಾದ ನಾವೇ ವರ್ಷಗಟ್ಟಲೆ ಒದ್ದಾಡಿದರೂ ಒಂದು ಶಾಲೆ ಮಂಜೂರು ಮಾಡೋಕಾಗಲ್ಲ. ಬಸ್ಸಿಂದ ಬಸ್ಸಿಗೆ ಜಿಗಿದು ಕಿತ್ತಳೆ ಮಾರಿದಷ್ಟು ಸುಲಭಾನಾ..? ಆದರೆ ಇವನಿಗೆ ಅದರ ಹಿಂದಿರುವ ಕಷ್ಟ ವಿವರಿಸೋದು ಹೇಗೆ..? 

ನೋಡಪ್ಪಾ ನಿನ್ನ ಊರಿನ ಶಾಲೆಗೆ ಪ್ರಸ್ತಾವನೆಯನ್ನ ನಾನು ಮಾಡ್ತೀನಿ ಆದ್ರೆ ಇದರಲ್ಲಿ ತುಂಬಾ ಓಡಾಟ ಇದೆ. ನೀನು  ನೋಡಿದ್ರೆ ಅಂಗೂಟಾ ಛಾಪ್  ಯಾವ ಫೈಲು, ಯಾವ ಇಲಾಖೆ, ಯಾರು ಅಧಿಕಾರಿ .ಹುಡುಕ ಬೇಕು.. ಕೊಡಬೇಕು.. ಇದೆಲ್ಲಾ ನಿನ್ನಿಂದ ಆದೀತೋ..? ಅಂತ ಕೇಳಿ ಅವನ ಮುಖ ನೋಡಿದರು.

ಸಾರು... ನೀವು ಮೇಲೆ ಬರೆದು ಹಾಕಿ ಸಾಕು. ಆಮೇಲೆ ನಾನು ನೋಡಿ ಕೊಳ್ತೇನೆ ನಾನು ಮಂಗಳೂರಿನಲ್ಲೇ ಇರೋದು. ಎಲ್ಲಾ ಕೆಲಸ ನಾನೇ ಮಾಡಿಸ್ತೇನೆ ಅಂದ. 

ಅವನ ಸುಕ್ಕುಗಟ್ಟಿದ ಕಪ್ಪು ಮುಖದಲ್ಲಿ ಚಿಮ್ಮಿದ  ಉತ್ಸಾಹದ ಹಿರಿನಗೆ ಕಂಡು ಫರೀದ್ ಅವರಿಗೂ ತಡೆಯಲಾಗಲಿಲ್ಲ. ಕೂಡಲೆ ಪ್ರಾಥಮಿಕ ಶಾಲೆ ಮಂಜೂರು ಮಾಡುವಂತೆ ಇಲಾಖೆಗೆ ಬರೆದು ಹಾಕಿದರು. ಅಲ್ಲೇ ಇದ್ದ ಒಂದಿಬ್ಬರು ಪುಸುಕ್ಕನೆ ನಕ್ಕರು. ಅದು ಪಂಜಿ ಮುಡಿಯ ಹಾಜಬ್ಬ ಅಲ್ವಾ..? ಅವನಿಗೆ ಎಂಥ ಶಾಲೆಯ ಮರ್ಲ್ ಸುರುವಾಗಿದ್ದು ಮಾರ್ರೆ.. ? 

ಹೌದು ಹಾಜಬ್ಬನಿಗೆ ಶಾಲೆ ಕಟ್ಟುವ ಹುಚ್ಚು ತಲೆಗೆ ಅಡರಿತ್ತು.

ಶಾಸಕ  ಫರೀದ್ ಅವರಿಂದ ಭರವಸೆ ಸಿಕ್ಕಿದ್ದೇ ತಡ ಆರಂಭವಾಯ್ತು ನೋಡಿ ಅಕ್ಷರದ ಹುಚ್ಚನ ಕಚೇರಿ ಅಲೆದಾಟದ ರಂಪು. 

ಈ ಮನುಷ್ಯನನ್ನು ಸರಿಯಾಗಿ ನೋಡಿದರೆ ಈತ ಎದುರಿಗೆ ಬಾಗದೆ ಹಿಂದಕ್ಕೆ ವಾಲುತ್ತಾರೆ. ಇದು ಸರಕಾರಿ ಅಧಿಕಾರಿಗಳು ಇವರನ್ನು ಆರು ವರ್ಷಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡಿಸಿ ಬೆನ್ನು ಮೂಳೆಯ  ಬೆಂಡೆತ್ತಿದ ನಿಶಾನಿ.  ಮದ್ಯಾಹ್ನದವರೆಗೆ ಕಿತ್ತಾಳೆ ಮಾರಿ ಮದ್ಯಾಹ್ನ ಒಂದು ಪರೋಟ ತಿಂದು ದುಡಿದ ದುಡ್ಡಿನಲ್ಲಿ ಶಾಲೆಗಾಗಿ ಹೋರಾಟ...

ಅಲೆಯದ ಕಚೇರಿ ಇಲ್ಲ.. ಕಾಣದ ಅಧಿಕಾರಿಗಳಿಲ್ಲ.. ಹಿಡಿಯದೆ ಉಳಿದ ಪುಡಾರಿಗಳ ಕೈಕಾಲಿಲ್ಲ. ಕಡತಗಳ ನಡುವೆ ಅಪ್ಪಚ್ಚಿಯಾದ ಜಿರಳೆಯಂತಾಗಿದ್ದ ಹಾಜಬ್ಬರನ್ನು  ಅಧಿಕಾರಿಗಳು ಹಾವು ಏಣಿ ಆಟ ಆಡಿಸಿದರು. ಕೆಲವು ಅಧಿಕಾರಿಗಳಿಗೆ ಈ ಕಿತ್ತಳೆ ವ್ಯಾಪಾರಿಯ ಶಿಕ್ಷಣದ ಬಗ್ಗೆ ಇರುವ ಒಲವು ಕಂಡು ಅಚ್ಚರಿಯಾಗಿ ತಮ್ಮಿಂದ ಆದ ಸಹಾಯವನ್ನು ಮಾಡಿದರು. ಕೊನೆಗೂ ೧೯೯೯ರಲ್ಲಿ ಹಾಜಬ್ಬನ ಬರಿಗಾಲ ಸವೆತಕ್ಕೆ ಅಕ್ಷರಲಕ್ಷ್ಮಿಯ ಭಾಗ್ಯದ ಬಾಗಿಲು ತೆರೆದುಕೊಂಡಿತು. ಅಲ್ಲಿನ ಮದರಸಾವೊಂದರಲ್ಲೇ ತಾತ್ಕಾಲಿಕ ಪ್ರಾಥಮಿಕ ಶಾಲೆ ಆರಂಭವಾಯಿತು. 

ಆರು ವ‍ರ್ಷದ ಭಗೀರಥ ಶ್ರಮ ಕೊನೆಗೂ ಫಲನೀಡಿತು. ಕಿತ್ತಳೆ ಬುಟ್ಟಿಯಿಂದ ಅಕ್ಷರ ಕ್ರಾಂತಿ ಹೊಮ್ಮಿತು. ಮಳೆಗಾಲಕ್ಕೆ ಸೋರುವ ತನ್ನ ಮುರುಕಲು ಮನೆಯಲ್ಲಿ ಅರೆ ಹೊಟ್ಟೆಯಲ್ಲಿ ಮಲಗಿದ ಮಕ್ಕಳು ಮತ್ತು ಉಬ್ಬಸ ಪೀಡಿತ ಹೆಂಡತಿಯ ಕೆಮ್ಮಿನ ನಡುವೆಯೂ ಹಾಜಬ್ಬನಿಗೆ ಶಾಲೆಗೊಂದು ಸ್ವಂತ ಕಟ್ಟಡ ಇಲ್ಲವಲ್ಲ ಅನ್ನುವ ಚಟಪಡಿಕೆ ಕಾಡತೊಡಗಿತು. ಅವರಿವರ ಕೈ ಕಾಲು ಹಿಡಿದು ಅಲ್ಲೇ ಇದ್ದ ಸರಕಾರಿ ಭೂಮಿಯಲ್ಲಿ ಸಣ್ಣ ಕಟ್ಟಡವೊಂದನ್ನು ಹಾಜಬ್ಬ ಕಟ್ಟಿಸಿದರು. ಈಗ ಆ ಶಾಲೆಗೆ ಹಾಜಬ್ಬ ಅವರ ಹೆಸರು ಇಡ ಬಾರದು ಅಂತ ಅಪಸ್ವರ ಎತ್ತುತ್ತಿರುವವುಗಳೆಲ್ಲ ಆಗ ಚಡ್ಡಿ ಇಲ್ಲದೆ ಸಿಂಬಳ ಸುರಿಸಿಕೊಂಡು ಓಡಾಡುತ್ತಿದ್ದವು. 

ಶಾಲೆಗೆ ಜಾಗ, ಕಟ್ಟಡ, ಬಾವಿ, ವಿದ್ಯುತ್,ಪಂಪು, ಹೈಸ್ಕೂಲು, ಹೀಗೆ ಒಂದೊಂದರ ಹಿಂದೆಯೂ ಈ ಹಾಜಬ್ಬನ ಬೆವರಿನ ಶ್ರಮವಿದೆ. ಹರೇಕಳದ ಪಡ್ಪುವಿನಲ್ಲಿ ಒಬ್ಬ ಬರಿಗಾಲ ಪಕೀರ ಸರಕಾರಿ ಶಾಲೆ ತರಲು ಈ ಪಾಟಿ ಬಡಿದಾಡುತ್ತಿದ್ದರೂ ಹೊರಜಗತ್ತಿಗೆ ಮಾತ್ರ ಇದರ ಬಗ್ಗೆ ಎಳ್ಳಷ್ಟೂ ಅರಿವಿರಲಿಲ್ಲ. ಈ ಅಕ್ಷರಸಂತನನ್ನು ಮೊತ್ತಮೊದಲು ಬೆಳಕಿಗೆ ತಂದವರು ಹೊಸದಿಗಂತ ಪತ್ರಿಕೆಯ ಗುರುವಪ್ಪ ಬಾಳೆ ಪುಣಿಯವರು. ಅವರ ವರದಿಯ ಬಳಿಕ ಹಲವಾರು ಜನರು ಹರೇಕಳ ಹಾಜಬ್ಬರ ಬಗ್ಗೆ ಬರೆದರು.

ಕಿತ್ತಳೆ ಮಾರುವ ಹಾಜಬ್ಬ ಅದ್ಯಾವ ಮಟ್ಟಕ್ಕೆ ಬೆಳೆದರು ಅಂದ್ರೆ ಅವರ ಜೀವನವೇ ಮೂರು ಯೂನಿವರ್ಸಿಟಿಯ ವಿಧ್ಯಾರ್ಥಿಗಳಿಗೆ ಪಾಠವಾಗಿಬಿಟ್ಟಿತು. ರಾಜ್ಯದ ಹೆಚ್ಚಿನ ಎಲ್ಲಾ ಪ್ರತಿಷ್ಟಿತ ಪ್ರಶಸ್ತಿಗಳು ಹಾಜಬ್ಬ ಅವರಿಗೆ ಸಂದಿತು. ಹಾಜಬ್ಬ ಅವರ ಪರಿಶ್ರಮಕ್ಕೆ ಮೆಚ್ಚಿ ಲಕ್ಷಾಂತರ ರೂಪಾಯಿ ಹಣ ನ್ಯೂ ಪಟ್ಪುವಿನ ಈ  ಶಾಲೆಗೆ ಹರಿದು ಬಂತು. ತನಗೆ ದಕ್ಕಿದ ಎಲ್ಲಾ ಹಣವನ್ನು ಮನೆ,ಮಕ್ಕಳಿಗೆ ನೀಡದೆ ಹಾಜಬ್ಬ ಈ ಶಾಲೆಗೆ ಧಾರೆ ಎರೆದರು. ಪ್ರತಿಷ್ಟಿತ ಅಂತರಾಷ್ಟ್ರೀಯ ಸುದ್ದಿವಾಹಿನಿಯೊಂದು ಒಟ್ಟು ೨೦ ರಿಯಲ್ ಹಿರೋಸ್ ಗಳನ್ನು ಘೋಷಿಸಿ ಪ್ರಶಸ್ತಿ ನೀಡಿದೆ. ಆ ಪ್ರಶಸ್ತಿಗಳಲ್ಲಿ ಒಂದು ಹಾಜಬ್ಬರ ಮನೆಯಲ್ಲಿದೆ.

ಒಮ್ಮೆ ದುಬಾಯಿಯಲ್ಲಿ ಒಂದು ಸಂಘಟನೆಯವರು ಹಾಜಬ್ಬರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಂತೆ. ಅಲ್ಲಿನ ವಿಮಾನ ನಿಲ್ದಾಣದಲ್ಲಿ ಹಾಜಬ್ಬ  ತನ್ನ ಅದೇ ಹಳೆ ಅಂಗಿ ಲುಂಗಿ ತೊಟ್ಟು ಕೊಂಡು ಒಂದು ಪ್ಲಾಸ್ಟಿಕ್ ತೊಟ್ಟೆಯನ್ನು ಮಡಚಿ ಬಗಲಲ್ಲಿ ಇಟ್ಟುಕೊಂಡು ಇಮಿಗ್ರೇಶನ್ ಹತ್ತಿರ ನಿಂತುಕೊಂಡಿದ್ದರಂತೆ. ಆ ಅಧಿಕಾರಿಗೆ ಈ ಆಕೃತಿಯನ್ನು ನೋಡಿ ಶಾಕ್ ಆಯ್ತು. ಇವನ್ಯಾರೋ ನೈಜೀರಿಯಾದ ನಿರಾಶ್ರಿತ ಇದ್ದಂಗಿದ್ದಾನಲ್ಲಪ್ಪಾ..? ಅಂತ ಅನುಮಾನ ಬಂದು ಮುಂದೆ ಹೋಗಲು ಬಿಡದೆ ಪಕ್ಕದಲ್ಲಿ ನಿಲ್ಲಿಸಿ ಬಿಟ್ಟ. ಎಲ್ಲರ ಚೆಕಪ್ ಮುಗಿಯೋವರೆಗೆ ಇವರನ್ನ ಬಿಡಲೇ ಇಲ್ಲ.

ತಾನು ಯಾರು ..ಏನು.. ಎಲ್ಲಿಗೆ ಹೋಗುತ್ತಿದ್ದೇನೆ ಅನ್ನೋದನ್ನ ಹೇಳೋದಿಕ್ಕೆ ಇವರಿಗೆ ಭಾಷೆ ಬೇರೆ ಬರೋದಿಲ್ಲ. ಒಂದೆರಡು ಗಂಟೆಯ ಬಳಿಕ ಹಾಜಬ್ಬರಿಗೆ ಅದು ಹೇಗೋ ತಲೆ ಕೆಲಸ ಮಾಡಿತು. ತನ್ನ ಹರಕಲು ತೊಟ್ಟೆಯಿಂದ ಒಂದಷ್ಟು ಪೇಪರ್ ಕಟಿಂಗ್ಸನ್ನು ತೆಗೆದು ಆ ಅಧಿಕಾರಿಯ ಎದುರು ಹಿಡಿದರು. ಅಂತರಾಷ್ಟ್ರೀಯ ಮಟ್ಟದ ಆಂಗ್ಲ ಪತ್ರಿಕೆಗಳು ಹಾಜಬ್ಬ ಅವರ ಬಗ್ಗೆ ಚಿತ್ರ ಸಹಿತವಾಗಿ ಮಾಡಿದ್ದ ವರದಿಗಳು ಅಲ್ಲಿದ್ದವು. ಆ ಅಧಿಕಾರಿಗೆ ತನ್ನ ಎದುರಿಗೆ ನಿಂತಿರುವವನು ಎಂಥಾ ದೊಡ್ಡ ಸಾಧಕ ಅನ್ನೋದು ತಿಳಿದು ತನ್ನ ತಪ್ಪಿನ ಅರಿವಾಗಿ ಹಾಜಬ್ಬರ ಬಳಿ ಕ್ಷಮೆ ಕೇಳಿ ಅವರಿಗೆ ತಾನೇ ಮಾರ್ಗದರ್ಶನ ಮಾಡಿ ವಿಮಾನ ನಿಲ್ದಾಣದಿಂದ ಹೊರ ಗೇಟಿನ ತನಕ ಕಳುಹಿಸಿ ಕೊಟ್ಟನಂತೆ..!!

ಈ ರೀತಿಯ ನೂರಾರು ಕತೆಗಳು ಹಾಜಬ್ಬರ ಬಗಲಿನಲ್ಲಿರುವ ತೊಟ್ಟೆಯಲ್ಲಿ ಬೆಚ್ಚಗೆ ಕುಳಿತಿವೆ.

ಗುರುವಪ್ಪ ಬಾಳೆಪುಣಿಯವರು ಹೇಳುವಂತೆ ಇಷ್ಟೆಲ್ಲಾ ಪ್ರಶಸ್ತಿಗಳು ಬಂದರೂ ಸಾವಿರಾರು ವೇದಿಕೆಗಳನ್ನು ಹತ್ತಿ ಇಳಿದರೂ ಹಾಜಬ್ಬ ಇಂದಿಗೂ ಬದಲಾಗಿಲ್ಲ. ಎಂಥೆಂಥಾ ಅಂತರಾಷ್ಟ್ರೀಯ ಪ್ರತಿಷ್ಟಿತ ವೇದಿಕೆಗಳನ್ನೂ ಹಾಜಬ್ಬ ಅವರು ಇದೇ ವೇಷದಲ್ಲಿ ಹತ್ತಿ ಇಳಿದಿದ್ದಾರೆ. ಈವತ್ತಿಗೂ ಅವರ ಅಂಗಿಯ ಮೇಲಿನ ಎರಡು ಬಟನ್ ಗಳನ್ನು ಹಾಕಿಸೋದು ಯಾರಿಂದಲೂ ಸಾಧ್ಯವಾಗಿಲ್ಲ. 

ಪುಟ್ಟ ಮಕ್ಕಳಿಗಿರುವ ಮೊಂಡು ಹಠ ಈ ಮನುಷ್ಯನಿಗಿದೆ. ಇಂದಿಗೂ ಅದೇ ಭಾಷೆ, ಅದೇ ಸಣ್ಣ ಮಗುವಿನಂತ ಮುಗ್ಧತೆ, ಹಠಮಾರಿತನ, ಯಾರನ್ನೂ ನೋಯಿಸದ ನೋಯಿಸಲಾರದ ಸೌಮ್ಯ ವ್ಯಕ್ತಿತ್ವ. ಅದೇ ಹವಾಯಿ ಚಪ್ಪಲು. ಅದೇ ಕಿತ್ತಾಳೆಯ ಬುಟ್ಟಿ... ಹಾಜಬ್ಬ ಯಾವತ್ತಿಗೂ ಬದಲಾಗೋದಿಲ್ಲ. ಹೆಣ್ಣು ಮಕ್ಕಳು ಮದುವೆಯ ಪ್ರಾಯಕ್ಕೆ ಬಂದಿದ್ದಾರೆ. ಮಗ ಪೈಂಟಿಂಗ್ ಕೆಲಸಕ್ಕೆ ಹೋಗುತ್ತಾನೆ. ಮನೆ ಬಹಳ ಕಷ್ಟದಲ್ಲಿ ನಡೀತಿದೆ. ಆದರೆ ಹಾಜಬ್ಬನಿಗೆ ಮಾತ್ರ ಹೈಸ್ಕೂಲ್ ಪಕ್ಕದಲ್ಲೇ ಕಾಲೇಜೂ ಆಗಬೇಕು  ಎನ್ನುವ ಹುಚ್ಚು..... 

ಹುಚ್ಚು ನಮ್ಮಲ್ಲೂ ಇದೆ. ನಮ್ಮದು ದಿನಕ್ಕೊಂದು ಹುಚ್ಚು. ನಮ್ಮ ಹುಚ್ಚು ದಿನಾ ಹುಟ್ಟುತ್ತದೆ ದಿನಾ ಸಾಯುತ್ತದೆ. ಅರ್ಥವಿಲ್ಲದ ಹುಚ್ಚುಗಳ ಹುಟ್ಟು ಸಾವಿನ ಸಂತೆಯೇ ನಮ್ಮ ಜೀವನ.  ಆದರೆ ಈ ಸಾಧಕರ ಬದುಕು ಹಾಗಲ್ಲ ಅವರು ಸ್ಥಿತಪ್ರಜ್ಞರು ಅಂದುಕೊಂಡದ್ದನ್ನು ಸಾಧಿಸದೆ ಅವರು ವಿರಮಿಸೋದಿಲ್ಲ. ಜಗತ್ತು ಅವರಿಗೆ ಏನೇ ಅನ್ನಲಿ. ಅದನ್ನು ಕಟ್ಟಿಕೊಂಡು ಅವರಿಗೆ ಆಗಬೇಕಿರುವುದು ಏನೂ ಇಲ್ಲ. ಹಾಜಬ್ಬರಿಗೆ ಒಂದೇ ಹುಚ್ಚು ಅಡರಿತ್ತು. ಅದನ್ನೇ ಬೆನ್ನು ಬಿದ್ದು ಸಾಧಿಸಿದರು.  

ಈ ಮಹಾನ್ ವ್ಯಕ್ತಿಗೆ ಭಾರತ ಸರ್ಕಾರ 2020ರಲ್ಲಿ  ಪ್ರತಿಷ್ಟಿತ  ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

(ಸಾಮಾಜಿಕ ಜಾಲತಾಣದಲ್ಲಿ ದೊರೆತ ಲೇಖನ: ಈ ಲೇಖನ ಬರೆದ ಬರಹಗಾರರಿಗೆ  ಧನ್ಯವಾದಗಳು.  ನಮ್ಮ ಓದುಗರರಿಗೆ  ಈ ಲೇಖನದ ಬರಹಗಾರ ಮಾಹಿತಿ ಇದ್ದರೆ ತಿಳಿಸಿ.) 

ನಮ್ಮEmail: searchcoorg@gmail.com

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,