ಕಾಫಿ ಬೆಳೆಗಾರರಿಗೆ ಅದ್ಭುತ ಸಂತಸದ ಸುದ್ದಿ ; ಕಾಫಿ ಎಲೆಯಿಂದಲೂ ಪಾನೀಯ ಅಭಿವೃದ್ದಿಪಡಿಸಿದ ಮೈಸೂರಿನ CFTRI
ಕಾಪಿ ಎಲೆಗಳಿಂದಲೂ ಪಾನೀಯ ತಯಾರು ಮಾಡುವ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿರುವ ಮೈಸೂರು ಸಂಶೋಧನಾಲಯದ ಪ್ರಧಾನ ವಿಜ್ಞಾನಿ ಪುಷ್ಪಾ ಎಸ್ ಮೂರ್ತಿ ಅವರು ಇದರಿಂದ ಮನುಷ್ಯನ ಆರೋಗ್ಯಕ್ಕೂ ಉಪಯುಕ್ತವಾಗಲಿದೆ ಎಂದು ತಿಳಿಸಿದರು. ಈ ಕುರಿತು ಈ ವರದಿಗಾರನೊಂದಿಗೆ ಮಾತನಾಡಿದ ಅವರು ಕಾಫಿ ಎಲೆಗಳಿಂದ ಪಾನೀಯ ತಯಾರು ಮಾಡುವುದರಿಂದ ಬೆಳೆಗಾರರಿಗೆ ವರ್ಷವಿಡೀ ಆದಾಯ ಲಭಿಸಲಿದೆ ಎಂದು ಹೇಳಿದರು.
2019 ರಿಂದಲೇ ತಾವು ಈ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸುತಿದ್ದು ಇದಕ್ಕೆ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆ ಗಳ ಸಚಿವಾಲಯದಿಂದ ಅನುದಾನವನ್ನು ಪಡೆದುಕೊಳ್ಳಲಾಗಿದೆ ಎಂದರು.
ಕಾಫಿ ಬೀಜದ ಬೆಳವಣಿಗೆಗೆ ಅಡ್ಡಿಯಾಗದಂತೆ ರೈತರು ಹಿಂಗಾರು ಹಂಗಾಮಿನ ಸಮಯದಲ್ಲಿ ಬಲಿತ ಕಾಫಿ ಎಲೆಗಳನ್ನು ಬಳಸಿದರೆ, ಅದು ಕಾಫಿ ಬೆಳೆಗಾರರ ಆರ್ಥಿಕ ಅಭಿವೃದ್ದಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ಇಂದು ಕಾಫಿ ಉದ್ಯಮದ ಸುಮಾರು 70 ಪ್ರತಿಶತದಷ್ಟು ಜನರು ಕಾಫಿ ಬೀಜಗಳ ಬೆಳವಣಿಗೆಯ ಚಕ್ರದ ಸ್ವರೂಪದಿಂದಾಗಿ ವರ್ಷದ ಒಂಬತ್ತು ತಿಂಗಳುಗಳ ಕಾಲ ನಿರುದ್ಯೋಗಿಗಳಾಗಿರಬೇಕಾಗುತ್ತದೆ. ಆದರೆ ಈ ಪಾನೀಯ ಯಶಸ್ವಿ ಆದರೆ ಕಾಫಿ ಬೆಳೆಗಾರರಿಗೆ ವರ್ಷಪೂರ್ತಿ ಉದ್ಯೋಗ ಲಭಿಸಲಿದೆ ಎಂದು ಅವರು ಹೇಳಿದರು.
ಕಾಫಿ ಎಲೆಗಳು ನಿರುಪಯುಕ್ತ ವಸ್ತು ಎಂದು ಭಾವಿಸಲಾಗುತ್ತದೆ. ಆದರೆ ಕಾಫಿ ಬೆಳೆಯುವ ದೇಶವೇ ಆಗಿರುವ ಇಂಡೋನೇಷ್ಯಾ ಮತ್ತು ಇಥಿಯೋಪಿಯಾದಲ್ಲಿ ಕಾಫಿ ಎಲೆಯಿಂದ ಪಾನೀಯವನ್ನು ತಯಾರಿಸುವುದು ಹೊಸತೇನಲ್ಲ. ಅಲ್ಲಿ ಇದನ್ನು ಹಿಂದಿನಿಂದಲೇ ತಯಾರಿಸುತಿದ್ದು ಇದನ್ನು "ಕುಟಿ ಟೀ" ಎಂದು ಕರೆಯಲಾಗುತ್ತದೆ ಮತ್ತು ಪಶ್ಚಿಮ ಸುಮಾತ್ರಾ ಮತ್ತು ಇಂಡೋನೇಷ್ಯಾದಲ್ಲಿ "ಕಹ್ವಾ ಡಾನ್" ಎಂದು ಕರೆಯಲಾಗುತ್ತದೆ. ಆದರೆ ಈ ಪ್ರದೇಶಗಳಲ್ಲಿನ ಪಾನೀಯ CFTRI ಅಭಿವೃದ್ಧಿಪಡಿಸಿದ ಪಾನೀಯಕ್ಕಿಂತ ಭಿನ್ನವಾಗಿದೆ ಎಂದು ಪುಷ್ಪಾ ಹೇಳಿದರು. ಈ ಪಾನೀಯವನ್ನು ನೀರಿನಿಂದ ತಯಾರಿಸಬಹುದು, ಕೆಲವು ನಿಮಿಷಗಳ ಕಾಲ ಫಿಲ್ಟರ್ ಮಾಡಿ ಸೇವಿಸಬಹುದು.
ಪುಷ್ಪಾ ಅವರ ಪ್ರಕಾರ ಎಲೆಯ ಸಾರವು ಕಾಫಿಯಂತೆ ರುಚಿಸುವುದಿಲ್ಲ. "ಕಾಫಿ ಅಥವಾ ಚಹಾಕ್ಕೆ ಹೋಲಿಸಿದರೆ ಇದು ಕಡಿಮೆ ಕೆಫೀನ್ ಅಂಶ ಹೊಂದಿದೆ ಎಂದು ಅವರು ಹೇಳಿದರು. ಪಾನೀಯದ ಪೌಷ್ಟಿಕಾಂಶದ ಮೌಲ್ಯದ ಕುರಿತು, ಮಾತನಾಡಿದ ಅವರು ಕಾಫಿ ಎಲೆಗಳಲ್ಲಿ ಫಿನಾಲಿಕ್ ಆಮ್ಲ ಸಮೃದ್ಧವಾಗಿದೆ ಮತ್ತು ಸಂಭಾವ್ಯ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂದು ಹೇಳಿದರು. ಒಂದು ಕಾಫಿ ಎಲೆಯು ಹಸಿರು ಚಹಾಕ್ಕಿಂತ ಸುಮಾರು 17 ಪ್ರತಿಶತ ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಪಾನೀಯವನ್ನು ಸರಳವಾಗಿ ಸೇವಿಸಬೇಕು. ಪಾನೀಯವು ಕ್ಲೋರೊಜೆನಿಕ್ ಆಮ್ಲ ಮತ್ತು ಮ್ಯಾಂಗಿಫೆರಿನ್‌ನಂತಹ ಆರೋಗ್ಯ-ಉತ್ತೇಜಿಸುವ ಪಾಲಿಫಿನಾಲ್‌ಗಳನ್ನು ಹೊಂದಿದ್ದು, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟ , ಉರಿಯೂತ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಈ ನೂತನ ತಂತ್ರಜ್ಞಾನದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿದ ಅವರು 2019 ರಲ್ಲಿ ಆರಂಭಗೊಂಡಿರುವ ಈ ಯೋಜನೆ ಎರಡು ವರ್ಷಗಳಲ್ಲಿ ಮುಗಿಯಬೇಕಾಗಿತ್ತು. ಕೋವಿಡ್ ಕಾರಣದಿಂದಾಗಿ ಮತ್ತೆ 6 ತಿಂಗಳು ಮುಂದೆ ಹೋಗಿದೆ ಎಂದರು. ಈ ತಂತ್ರಜ್ಞಾನವನ್ನು ಕೇಂದ್ರೀಯ ಸಂಶೋಧನಾಲಯದ ಉನ್ನತ ಮಟ್ಟದ ಸಮಿತಿಯ ಮುಂದೆ ಇಟ್ಟು ಆಸಕ್ತ ಉದ್ಯಮಿಗಳು , ವ್ಯಕ್ತಿಗಳಿಗೆ ರಾಯಲ್ಟಿ ಪಡೆದು ನೀಡಲು ಯೋಜಿಸಲಾಗಿದೆ ಎಂದ ಅವರು ಸುಮಾರು ಒಂದು ಲಕ್ಷ ರೂಪಾಯಿ ರಾಯಧನ ನಿಗದಿಪಡಿಸುವ ಸಾಧ್ಯತೆ ಇದೆ ಎಂದರು. ಆದರೆ ಈ ಕುರಿತು ಸಮಿತಿಯು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು. ವಿಜ್ಞಾನಿ ಪುಷ್ಪಾ ಅವರ ನೂತನ ಸಂಶೋಧನೆ ಕಾಫಿ ಉದ್ಯಮದಲ್ಲಿ ಕ್ರಾಂತಿಯನ್ನೇ ಮಾಡುವ ಸಾದ್ಯತೆ ಇದೆ.
ಪುಷ್ಪಾ ಅವರು ಕಳೆದ ಎರಡು ದಶಕಗಳಿಂದ ಕೇಂದ್ರೀಯ ಆಹಾರ ಸಂಶೋಧನಾಲಯದಲ್ಲಿ ಕೆಲಸ ಮಾಡುತಿದ್ದು ಕಾಫಿ ಹಾಗೂ ಸಂಬಾರ ಪದಾರ್ಥಗಳ ಕುರಿತು ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ.
✍️....ಕೋವರ್ ಕೊಲ್ಲಿ ಇಂದ್ರೇಶ್
( ಪತ್ರಕರ್ತರು )
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network