Header Ads Widget

Responsive Advertisement

ದೀಪ ಬೆಳಗೋಣ; ಬೆಳಗುತ್ತಾ…. ಮನೆಯೊಳಗಿನ ಮನದೊಳಗಿನ ಅಂಧಕಾರವನ್ನು ಹೋಗಲಾಡಿಸೋಣ….

ದೀಪ ಬೆಳಗೋಣ; ಬೆಳಗುತ್ತಾ…. ಮನೆಯೊಳಗಿನ ಮನದೊಳಗಿನ ಅಂಧಕಾರವನ್ನು ಹೋಗಲಾಡಿಸೋಣ….


ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ. ಹಬ್ಬಗಳ ಹೆಸರೇ ಮನುಷ್ಯನನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯಕಥೆಯನ್ನು ಬೆಸೆದು ಹಬ್ಬಕ್ಕೆ ಮೆರಗು ಹಾಕಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ಮಾನವನು ಹಬ್ಬಗಳ ಅಲೌಕಿಕ ಅರ್ಥವನ್ನು ತೆಗೆದುಕೊಳ್ಳದೇ ಕೇವಲ ಸ್ಥೂಲ ರೂಪದಲ್ಲಿ ಆಚರಿಸುತ್ತಿರುವುದರಿಂದ ಅಲೌಕಿಕ ಸಂತೋಷದ ಅನುಭವವಾಗುತ್ತಿಲ್ಲ.

ನವರಾತ್ರಿ ಉಕ್ಕಿಸಿದ ನವೋಲ್ಲಾಸ ಮನಸ್ಸಲ್ಲಿನ್ನೂ ಹಿತವಾಗಿ ಹರಡಿಕೊಂಡಿರುವಂತೆಯೇ ಮುಸ್ಸಂಜೆಯ ಮುದ್ದಾದ ಮಳೆ, ಚೂರುಚೂರೇ ಆವರಿಸಿಕೊಳ್ಳುತ್ತಾ ಖುಷಿ ಕೊಡುವ ಚಳಿಯ ನಡುವೆ ಮತ್ತೊಂದು ಸಂಭ್ರಮ ಮೈದಳೆದಿದೆ. ಅದು ಬೆಳಕಿನ ಹಬ್ಬ, ಬದುಕಿನ ಹಬ್ಬ, ಕುಟುಂಬದ ಹಬ್ಬ, ಊರ ಹಬ್ಬವಾದ ದೀಪಾವಳಿ. ನವರಾತ್ರಿಯ ವಿಜಯದಶಮಿಗೂ ದೀಪಾವಳಿ ಆರಂಭದ ಚತುರ್ದಶಿಗೂ ನಡುವೆ ಇರುವುದು ಹದಿನೆಂಟೇ ದಿನದ ಅಂತರ. ಅದರ ನಡುವೆಯೇ ಹಾಲು ಪೈರಿನ ಮೊಳಕೆ ಬೆಳೆದು ಭತ್ತವಾಗುತ್ತದೆ, ಪ್ರಕೃತಿಯಲ್ಲಿ ಹೊಸ ಹೂವು ಅರಳುತ್ತದೆ, ಬದುಕು ಸಡಗರದ ಮತ್ತೊಂದು ಶಿಖರದೆಡೆಗೆ ಹೊರಳುತ್ತದೆ.

ದೀಪಾವಳಿಯು ಹಿಂದುಗಳ ಮತ್ತು ಜೈನರ ಜನಪ್ರಿಯ ಹಬ್ಬ. ದೀಪಾವಳಿಯು ಕತ್ತಲೆಯ ವಿರುದ್ಧ ಜಯಗಳಿಸಿದ ಬೆಳಕಿನ ಸಂಕೇತ, ಅಜ್ಞಾನದ ವಿರುದ್ಧ ಜ್ಞಾನದ ಜಯದ ಸಂಕೇತ, ದುಷ್ಟರ ವಿರುದ್ಧ ಶಿಷ್ಟರ ಜಯದ ಸಂಕೇತ. ಕೆಟ್ಟದ್ದರ ವಿರುದ್ಧ ಒಳ್ಳೆಯತನದ ಜಯದ ಸಂಕೇತ. ದೀಪಾವಳಿ ಹಬ್ಬದಲ್ಲಿ ಮನೆಗಳು, ಅಂಗಡಿಗಳು, ಕಚೇರಿಗಳು, ಮಠಗಳು ಮತ್ತು ಮಂದಿರಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಿ, ದೀಪಾಲಂಕಾರ ಮಾಡಿ ಲಕ್ಷ್ಮಿ, ಸರಸ್ವತಿ, ಗಣೇಶ ಮತ್ತು ಕುಬೇರ ದೇವರುಗಳನ್ನು ಪೂಜಿಸುವರು. ತಮ್ಮ ಎಲ್ಲಾ ಬಂಧುಗಳನ್ನು, ಗೆಳೆಯರನ್ನು ಕರೆದು, ಸಿಹಿ ಹಂಚಿ, ಕಾಣಿಕೆಗಳನ್ನು ಕೊಟ್ಟು ಸಂತೋಷ ಪಡುವರು. ತಾವು ಕೂಡ ಒಳ್ಳೆಯ ಮತ್ತು ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮಿಸುವರು. ಹಬ್ಬದ ದಿವಸ ಮನೆಯ ಮುಂದೆ ಮತ್ತು ಅಂಗಡಿಯ ಮುಂದೆ ಪಟಾಕಿ (ಮದ್ದು-ಗುಂಡುಗಳು) ಸಿಡಿಸಿ ಸಂಭ್ರಮಿಸುವರು.

ದೀಪಾವಳಿ ಕೆಲವರಿಗೆ ಪಂಚ ದಿನಗಳ ಹಬ್ಬ. ಕೆಲವರಿಗೆ ನಾಲ್ಕಾದರೆ, ಉಳಿದವರಿಗೆ ಮೂರು ದಿನದ ವೈಭವ. ಧನ ತ್ರಯೋದಶಿಯಿಂದ ಆರಂಭಿಸಿ ಅಮಾವಾಸ್ಯೆ ದಾಟಿ ಬಿದಿಗೆವರೆಗೂ ಸಡಗರ ವಿಸ್ತರಿಸುತ್ತದೆ. ಈ ಎಲ್ಲ ದಿನಗಳಲ್ಲಿ ಮೆರೆಯವುದು ಭಕ್ತಿ, ಪ್ರೀತಿ ಮತ್ತು ಪ್ರಕೃತಿ. ಇದು ಬದುಕಿಗೆ ಆಧಾರವಾದ ಜೀವ ಶಕ್ತಿಯ ವೈವಿಧ್ಯಮಯ ಸ್ವರೂಪಗಳ ಆರಾಧನೆ, ಕೃತಜ್ಞತೆ ಸಮರ್ಪಣೆಗೆ ವೇದಿಕೆ. ಸಂಬಂಧಗಳ ನಂಟನ್ನು ಮತ್ತಷ್ಟು ಗಾಢವಾಗಿಸುವ ಬೆಸುಗೆ. ದೀಪಾವಳಿ ಎಂದರೆ ಮನೆ-ಮನ ಎಲ್ಲವೂ ಒಮ್ಮೆ ಸ್ವಚ್ಛವಾಗಿ ಲಕಲಕಿಸುತ್ತದೆ. ಅಂತೆಯೇ ಹಳೆ ನೆನಪು, ನೋವುಗಳ ಕೊಳೆಯೂ ಗುಡಿಸಿ ಹೋಗುತ್ತದೆ. ಹೊಸ ಬಣ್ಣ, ಹೊಸ ಬೆಳಕು, ಹೊಸ ಬಟ್ಟೆಗಳ ಮಿರಿಮಿರಿ ಮಿಂಚು ಹಿತವಾಗುತ್ತದೆ. ದೇವರೊಂದಿಗೆ, ಕುಟುಂಬದೊಂದಿಗೆ, ಪ್ರಕೃತಿಯೊಂದಿಗಿನ ಸಂಬಂಧ ಮತ್ತೆ ನವೀಕರಣಗೊಳ್ಳುತ್ತದೆ.

ದೀಪಾವಳಿ ಬೆಳಕಿನ ಹಬ್ಬವಾಗಿದ್ದು ದೀಪಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವ ಇದೆ. ದೀಪದಾನವು ಈ ಹಬ್ಬದಲ್ಲಿ ಮಾಡುವ ವಾಡಿಕೆ ಇದೆ. ಸ್ಥೂಲ ದೀಪದ ಜೊತೆಗೆ ಆತ್ಮಜೋತಿಯನ್ನು ಬೆಳಗಿಸಿದರೆ ನಮ್ಮ ಜೀವನ ಪರಿಪೂರ್ಣ ವಾಗುತ್ತದೆ. ಪ್ರತಿ ಒಂದು ಹಬ್ಬಕ್ಕೆ ತನ್ನದೇ ಆದ ಹಿನ್ನಲೆ ಇದ್ದು, ಅಧ್ಯಾತ್ಮಿಕ ರಹಸ್ಯವನ್ನು ತಿಳಿಸಿಕೊಡುವುದರ ಜೊತೆಗೆ ಅದನ್ನು ತಮ್ಮ ನಿತ್ಯ ಜೀವನದಲ್ಲಿ ಸಹಜವಾಗಿ ಹೇಗೆ ಅಳವಡಿಕೊಳ್ಳುಬೇಕು ಎಂಬುವುದು, ಅಜ್ಞಾನದ ಕತ್ತಲೆಯಿಂದ ಸತ್ಯ ಜ್ಞಾನದ ಬೆಳಕನ್ನು ನಾವು ಪಡೆದರೆ ನಮ್ಮ ಈ ಮಾನವ ಜನ್ಮ ಸಾರ್ಥಕ.

ದೀಪಾವಳಿ ಬಂದ ಕೂಡಲೇ ಎಲ್ಲವೂ ದೇವರಾಗಿ ಬಿಡುತ್ತದೆ. ಎಣ್ಣೆ ಸ್ನಾನಕ್ಕೆ ಮುನ್ನ ಹಂಡೆಯೂ ಹೂವಿನಿಂದ ಅಲಂಕಾರಗೊಳ್ಳುತ್ತದೆ, ದೀಪದ ಬೆಳಕಲ್ಲಿ ದೇವರಾಗುತ್ತದೆ. ಗದ್ದೆಯ ನಡುವೆ ದೀಪವಿಟ್ಟು ಸಲ್ಲಿಸುವ ಪ್ರಾರ್ಥನೆ, ಎಲ್ಲ ಕೃಷಿ ಪರಿಕರಗಳಿಗೆ ನಡೆಯುವ ಪೂಜೆ ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆಯ ರೂಪಕಗಳಾಗುತ್ತವೆ. ಬದುಕಿನ ಭಾಗವಾಗಿ ಜತೆಯಾಗಿ ಬಾಳುವ ಗೋವುಗಳ ಮೇಲಿನ ಪ್ರೀತಿ ಉತ್ತುಂಗಕ್ಕೇರುವ ಕಾಲ ಇದು. ಹಿತವಾದ ಸ್ನಾನ, ಬಣ್ಣ ಬಣ್ಣದ ಹೂವುಗಳ ಅಲಂಕಾರ, ರುಚಿಕರ ತಿನಿಸಿನ ಜತೆಗೆ ಬೆಳಗುವ ದೀಪಾರತಿಯಲ್ಲಿ ಒಲವಿನ ಧಾರೆಯೇ ಹರಿಯುತ್ತದೆ.

ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,

ಮೃತ್ಯೋರ್ಮಾ ಅಮೃತಂಗಮಯ… ಓಂ ಶಾಂತಿ, ಶಾಂತಿ ಶಾಂತಿಃ

ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.

ದೀಪಾವಳಿ - ಹೆಸರೇ ಹೇಳುವಂತೆ ದೀಪಗಳ ಸಮೂಹ. ಮನೆಯ ತುಂಬ ಪ್ರಣತಿಗಳನ್ನು ಹಚ್ಚಿ ಅದರ ನಗುವಿನಲ್ಲಿ ನಾವು ನಗುತ್ತಾ ಸಂಭ್ರಮಿಸುವುದು. "ದೀಪಯತಿ ಸ್ವಂ ಪರ ಚ ಇತಿ ದೀಪ:"- ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. “ತಮಸೋಮಾ ಜ್ಯೋತಿರ್ಗಮಯ” ಎಂಬ ಮಾತಿನ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ... ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬ ದೀಪಾವಳಿ.

ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶತೆ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ(ಪ್ರಕಾಶ) ಅವಶ್ಯಕ. ಆದ್ದರಿಂದಲೇ 'ನಹಿ ಜ್ಞಾನೇನ ಸದೃಶಂ'(ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) 'ಜ್ಞಾನ ವಿನಃ ಪಶು:'(ಜ್ಞಾನವಿಲ್ಲದವನು ಪಶು) ಎನ್ನಲಾಗುತ್ತದೆ. ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಆದ್ದರಿಂದ ಪ್ರತಿ ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಮೂಲ ಸಂದೇಶವಾಗಿದೆ.

✍️.... ಕಾನತ್ತಿಲ್‌ ರಾಣಿಅರುಣ್

                     (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,