Header Ads Widget

ಸರ್ಚ್ ಕೂರ್ಗ್ ಮೀಡಿಯ

ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್)2021: ಸಮಾಜದ ಒಳಿತಿಗಾಗಿ ಹೊಸ ಕಲ್ಪನೆಗಳು ಮತ್ತು ನಾವಿನ್ಯತೆಯೊಂದಿಗೆ ಹೊರಹೊಮ್ಮಿ – ನಾವೀನ್ಯದಾರರು ಮತ್ತು ಉದ್ಯಮಿಗಳಿಗೆ ಉಪ ರಾಷ್ಟ್ರಪತಿ ಕರೆ

ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್)2021: ಸಮಾಜದ ಒಳಿತಿಗಾಗಿ ಹೊಸ ಕಲ್ಪನೆಗಳು ಮತ್ತು ನಾವಿನ್ಯತೆಯೊಂದಿಗೆ ಹೊರಹೊಮ್ಮಿ – ನಾವೀನ್ಯದಾರರು ಮತ್ತು ಉದ್ಯಮಿಗಳಿಗೆ ಉಪ ರಾಷ್ಟ್ರಪತಿ ಕರೆ


* ಜನರ ಜೀವನದಲ್ಲಿ ಸಂತೋಷವನ್ನು ತರುವುದು ತಂತ್ರಜ್ಞಾನದ ಅಂತಿಮ ಗುರಿಯಾಗಬೇಕು – ಉಪ ರಾಷ್ಟ್ರಪತಿ

* ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಆಡಳಿತದಲ್ಲಿ ಸ್ಮಾರ್ಟ್ ತಂತ್ರಜ್ಞಾನದ ಮಧ್ಯಸ್ಥಿಕೆಗಳ ಅಗತ್ಯ ಪ್ರತಿಪಾದಿಸಿದ ಶ್ರೀ ನಾಯ್ಡು

* ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್) 2021 ಉದ್ಘಾಟಿಸಿದ ಉಪ ರಾಷ್ಟ್ರಪತಿ

* ಕನ್ನಡದ ಚಿತ್ರನಟ ಶ್ರೀ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಉಪ ರಾಷ್ಟ್ರಪತಿ

ಮಾನವಕುಲ ಮತ್ತು ಸಮಾಜದ ಹೆಚ್ಚಿನ ಒಳಿತಿಗಾಗಿ ಮತ್ತು ಪ್ರಗತಿಗಾಗಿ ಜ್ಞಾನ ಸಂಪತ್ತು ಮತ್ತು ಆರ್ಥಿಕ ಸಂಪತ್ತು ಸೃಷ್ಟಿಸಲು ಹೊಸ ಕಲ್ಪನೆಗಳು ಮತ್ತು ನಾವೀನ್ಯತೆಗಳೊಂದಿಗೆ ಹೊರ ಹೊಮ್ಮುವಂತೆ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಉದ್ಯಮಶೀಲರಿಗೆ ಉಪ ರಾಷ್ಟ್ರಪತಿ ಶ್ರೀ ಎಂ ವೆಂಕಯ್ಯನಾಯ್ಡು ಅವರಿಂದು ಕರೆ ನೀಡಿದ್ದಾರೆ. 

ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್)2021ಕ್ಕೆ ಬೆಂಗಳೂರಿನಲ್ಲಿಂದು ಚಾಲನೆ ನೀಡಿದ ಶ್ರೀ ನಾಯ್ಡು, ತಂತ್ರಜ್ಞಾನದ ಅಂತಿಮ ಗುರಿ ನಮ್ಮ ಬದುಕಿನಲ್ಲಿ ಸಂತಸ ತರುವುದಾಗಿರಬೇಕು ಎಂದು ಹೇಳಿದರು. ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರ ಜೀವನವನ್ನು ಸಂತೋಷಭರಿತ ಮತ್ತು ಸುಗಮಗೊಳಿಸುವ ತಂತ್ರಜ್ಞಾನದ ಅಭಿವೃದ್ಧಿಗೆ ಕರೆ ನೀಡಿದರು. 

ಹಲವು ಕ್ಷೇತ್ರಗಳಲ್ಲಿ ಇತ್ತೀಚೆಗೆ ತಂತ್ರಜ್ಞಾನದ ತೊಡಕುಗಳ ಕುರಿತಂತೆ ಪ್ರಸ್ತಾಪಿಸಿದ ಉಪ ರಾಷ್ಟ್ರಪತಿಯವರು, ತಂತ್ರಜ್ಞಾನದ ನೈಜ ಸಾಮರ್ಥ್ಯವು, ಕೃಷಿ, ಶಿಕ್ಷಣ, ಆರೋಗ್ಯ ಆರೈಕೆ, ಆಡಳಿತ ಮತ್ತು ಹವಾಮಾನ ಬದಲಾವಣೆಯಂತಹ ಕ್ಷೇತ್ರಗಳಲ್ಲಿ ಗಣನೀಯ ಸುಧಾರಣೆ ತರಲು ಅನಾವರಣಗೊಳಿಸಬೇಕು ಎಂದು ಪ್ರತಿಪಾದಿಸಿದರು.  

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಭಾಗವಹಿಸುವವರಿಗೆ ಕೃಷಿಯತ್ತ ಹೆಚ್ಚಿನ ಗಮನ ಹರಿಸುವಂತೆ ಆಗ್ರಹಿಸಿದ ಅವರು, ಕೃಷಿ ಉತ್ಪಾದಕತೆ ಮತ್ತು ಆದಾಯವನ್ನು ಸುಧಾರಿಸಲು ಸಹಾಯ ಮಾಡಲು ನಿಖರವಾದ ಕೃಷಿ, ಆನ್‌ ಲೈನ್ ಮಾರುಕಟ್ಟೆಗಳು ಮತ್ತು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯಂತಹ ಸ್ಮಾರ್ಟ್ ಕೃಷಿ-ತಂತ್ರಜ್ಞಾನದ ಪರಿಹಾರಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಕೃಷಿಯ ಮೇಲೆ ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿಯವರು, ಈ ಸವಾಲಿಗೆ ತಾಂತ್ರಿಕ ಪರಿಹಾರಗಳನ್ನು ಒದಗಿಸಲು ಕರೆ ನೀಡಿದರು.

ತಂತ್ರಜ್ಞಾನದ ಬಳಕೆಯ ಮೂಲಕ ಆಡಳಿತ ವ್ಯವಸ್ಥೆಗಳನ್ನು ಪರಿವರ್ತಿಸುವತ್ತ ಗಮನಹರಿಸಿರುವ ಸರ್ಕಾರವನ್ನು ಶ್ಲಾಘಿಸಿದ ಅವರು, ಪ್ರಕ್ರಿಯೆಗಳ ಡಿಜಿಟಲೀಕರಣವು ಜನರಿಗೆ ಸೇವೆಗಳನ್ನು ಉತ್ತಮವಾಗಿ ತಲುಪಿಸಲು ಸಹಾಯ ಮಾಡಿದೆ ಎಂದು ಹೇಳಿದರು.

'ಹಂಚಿಕೆ ಮತ್ತು ಕಾಳಜಿ'ಯ ಪ್ರಾಚೀನ ಭಾರತೀಯ ತತ್ವವನ್ನು ಪುನರುಚ್ಚರಿಸಿದ ಶ್ರೀ ನಾಯ್ಡು, ಶೃಂಗಸಭೆಯಲ್ಲಿ ಭಾಗವಹಿಸುವವರು ಮಾನವೀಯತೆ ಮತ್ತು ಜಗತ್ತಿನ ದೊಡ್ಡ ಒಳಿತಿಗಾಗಿ ತಮ್ಮ ಆಲೋಚನೆಗಳು, ಅನುಭವಗಳು ಮತ್ತು ನಾವೀನ್ಯತೆಗಳನ್ನು ಹಂಚಿಕೊಂಡು ಚರ್ಚಿಸಬೇಕೆಂದು ಆಶಿಸಿದರು.

ಪ್ರಧಾನಮಂತ್ರಿಯವರ - ಸುಧಾರಣೆ, ಕಾರ್ಯಾನುಷ್ಠಾನ ಮತ್ತು ಪರಿವರ್ತನೆ ಎಂಬ ಮೂರು ಪದಗಳ ಮಂತ್ರವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಮುಂದಿನ ದಿನಗಳಲ್ಲಿ ನಾವು ಜ್ಞಾನದ ಆರ್ಥಿಕತೆ, ಡಿಜಿಟಲೀಕರಣ ಮತ್ತು ನಾವೀನ್ಯತೆಯನ್ನು ಸೃಷ್ಟಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳು ಕನ್ನಡದ ಖ್ಯಾತ ನಟ ಶ್ರೀ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದರು. "ಶ್ರೀ ಪುನೀತ್ ಪ್ರತಿಭಾವಂತ ನಟರಷ್ಟೇ ಆಗಿರಲಿಲ್ಲ, ಜೊತೆಗೆ, ನಿರ್ಗತಿಕರ ಕಲ್ಯಾಣ ಮತ್ತು ಅವರ ಯೋಗ ಕ್ಷೇಮಕ್ಕಾಗಿ ಕಾಳಜಿ ವಹಿಸುತ್ತಿದ್ದ ಮಹಾನ್ ವ್ಯಕ್ತಿ"ಯಾಗಿದ್ದರು ಎಂದು ಅವರು ಹೇಳಿದರು.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬಿಟಿಎಸ್-2021ಲ್ಲಿ ಪಾಲ್ಗೊಂಡಿದ್ದಕ್ಕಾಗಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಸ್ಕಾಟ್ ಮಾರಿಸನ್ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ ನಫ್ತಾಲಿ ಬೆನೆಟ್ ಅವರಿಗೆ ಉಪರಾಷ್ಟ್ರಪತಿಯವರು ಧನ್ಯವಾದಗಳನ್ನು ಅರ್ಪಿಸಿದರು.

ಶ್ರೀ ನಾಯ್ಡು ಅವರು ಭಾರತದಲ್ಲಿ ಐಟಿ ಕ್ರಾಂತಿಯ ಅಗ್ರೇಸರನಾಗಿರುವ ಕರ್ನಾಟಕ ರಾಜ್ಯವನ್ನು ಶ್ಲಾಘಿಸಿದರು ಮತ್ತು ವಿಶ್ವದ ಅನೇಕ ಪ್ರಮುಖ ಕಂಪನಿಗಳ ಅಭಿವೃದ್ಧಿ ಮತ್ತು ಸಂಶೋಧನೆಗೆ ಆಯ್ಕೆಯ ಕೇಂದ್ರವಾಗಿದೆ ಎಂದರು. ನಾವೀನ್ಯತೆ ಮತ್ತು ತಂತ್ರಜ್ಞಾನದ ಪ್ರಮುಖ ಜಾಗತಿಕ ಸಮ್ಮೇಳನವಾಗಿ ಬಿಟಿಎಸ್ ಅನ್ನು ಯಶಸ್ವಿಯಾಗಿ ಮಾಡಲು ಕರ್ನಾಟಕ ಸರ್ಕಾರದ ಸಮರ್ಪಣೆ ಮತ್ತು ಸತತ ಪ್ರಯತ್ನಕ್ಕಾಗಿ ಅಭಿನಂದನೆ ಸಲ್ಲಿಸಿದರು.

ಕರ್ನಾಟಕದ ರಾಜ್ಯಪಾಲರಾದ ಶ್ರೀ ತಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರ ಶ್ರೀ ರಾಜೀವ್ ಚಂದ್ರಶೇಖರ್, ಕರ್ನಾಟಕ ಸರ್ಕಾರದ ಸಚಿವರುಗಳಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಶ್ರೀ ಮುರುಗೇಶ್ ಆರ್. ನಿರಾಣಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಪಿ. ರವಿಕುಮಾರ್, ಹಿರಿಯ ಸರ್ಕಾರಿ ಅಧಿಕಾರಿಗಳು, ಸಂಶೋಧಕರು, ಉದ್ಯಮಿಗಳು ಮತ್ತು ವಿಶ್ವಾದ್ಯಂತದ ನಾವೀನ್ಯದಾರರು ಈ ಕಾರ್ಯಕ್ರಮದಲ್ಲಿ ಭೌತಿಕವಾಗಿ ಮತ್ತು ವರ್ಚುವಲ್ ಆಗಿ ಪಾಲ್ಗೊಂಡಿದ್ದರು.   

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,