Header Ads Widget

ಸರ್ಚ್ ಕೂರ್ಗ್ ಮೀಡಿಯ

ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಿ: ಡಾ.ಬಿ.ಸಿ.ಸತೀಶ

ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಿ: ಡಾ.ಬಿ.ಸಿ.ಸತೀಶ


ಮಡಿಕೇರಿ ನ.29: ಕೊಡಗು ಜಿಲ್ಲೆಯಲ್ಲಿ ‘ಕ್ರೀಡಾ ವಿಶ್ವವಿದ್ಯಾನಿಲಯ’ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚನೆ ನೀಡಿದ್ದಾರೆ. 

ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸುವ ಬಗ್ಗೆ ಮಾಹಿತಿ ಕೇಳಿಬರುತ್ತಿದ್ದು, ಆ ದಿಸೆಯಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. 

ವಿರಾಜಪೇಟೆಯಲ್ಲಿರುವ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಪಡಿಸಿ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. 

ಸೆಟಲ್ ಬ್ಯಾಡ್ಮಿಂಟಲ್, ಜಿಮ್, ಕ್ವಾಷ್, ಟೇಬಲ್ ಟೆನ್ನಿಸ್ ಹಾಗೂ ಯೋಗ ಹಾಲ್‍ನಲ್ಲಿ ಪ್ರವೇಶ ಪಡೆದವರ ಶುಲ್ಕದ ಬಗ್ಗೆ ಮಾಹಿತಿ ಪಡೆದರು.  

ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿನ ಹೊರಾಂಗಣ ಮತ್ತು ಒಳಾಂಗಣ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸದ ಬಗ್ಗೆ ತುರ್ತಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. 

ಈಜುಕೊಳದ ಮೋಟಾರು ರಿಪೇರಿ ಮಾಡಿಸುವುದು, ಅಗತ್ಯವಿರುವೆಡೆ ಹೈಮಾಸ್ ದೀಪ ಅಳವಡಿಸುವುದು, ಒಳಾಂಗಣ ಕ್ರೀಡಾಂಗಣದಲ್ಲಿ ಆಟವಾಡುವುದಕ್ಕೆ ಬರುವವರು ನೋಂದಣಿ ಮಾಡಿಕೊಂಡು, ಶುಲ್ಕ ಪಡೆಯುವುದು. ನೋಟಿಸ್ ಬೋರ್ಡ್ ಅಳವಡಿಸುವುದು. ತರಬೇತಿ ಅವಧಿ ನಿಖರವಾಗಿ ಪಾಲಿಸುವುದು ಮತ್ತಿತರ ವಿಚಾರಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.   

ನಗರಸಭೆ ಬಜೆಟ್‍ನಲ್ಲಿ ಕ್ರೀಡಾ ಉತ್ತೇಜನಕ್ಕೆ ಶೇ.3 ರಷ್ಟು ಅನುದಾನ ಮೀಸಲಿಡುವಂತೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.  

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಅವರು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 400 ಮೀ. ಸಿಂಥೆಟಿಕ್ ಅಥ್ಲೆಟಿಕ್ಸ್ ಟ್ರ್ಯಾಕ್ ನಿರ್ಮಾಣಕ್ಕೆ ಅಂದಾಜುಪಟ್ಟಿ ತಯಾರಿಸಲಾಗಿದೆ ಎಂದರು.  

ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಟೇಬಲ್ ಟೆನ್ನಿಸ್ ಕೋರ್ಟ್‍ನ್ನು ಸರಿಪಡಿಸುವುದು. ಕಟ್ಟಡ ಸೋರುವಿಕೆ ಸರಿಪಡಿಸುವುದು, ಶೌಚಾಲಯ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಆಟವಾಡಲು ಬೆಳಕಿನ ವ್ಯವಸ್ಥೆ ಮತ್ತಿತರವನ್ನು ವ್ಯವಸ್ಥೆ ಮಾಡಬೇಕಿದೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಅವರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. 

ಪೊನ್ನಂಪೇಟೆ ಕ್ರೀಡಾ ವಸತಿ ನಿಲಯ, ಖೇಲೋ ಇಂಡಿಯಾ ಕೇಂದ್ರಕ್ಕೆ ಬೇಕಾದ ಕ್ರೀಡಾಸಾಮಗ್ರಿಗಳ ಖರೀದಿಗೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು. 

ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹೊಸದಾಗಿ ತಡೆಗೋಡೆ ನಿರ್ಮಾಣ, ಫುಟ್‍ಬಾಲ್ ಮೈದಾನ, ಮತ್ತಿತರ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. 

ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಯಂತ್ರ ಸರಿಪಡಿಸಬೇಕಿದೆ. ಈ ಸಂಬಂಧ ಶೇ.50ರಷ್ಟು ಹಣ ಬಿಡುಗಡೆ ಮಾಡಬೇಕಿದೆ ಎಂದರು. 

ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಬಳಿ ಹೊಸ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 217.39 ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಆಹ್ವಾನಿಸಲಾಗಿದೆ ಎಂದು ಗುರುಸ್ವಾಮಿ ಅವರು ಮಾಹಿತಿ ನೀಡಿದರು. 

ಕ್ರೀಡಾ ಇಲಾಖೆಗೆ ಸೇರಿದ ಜಾಗವನ್ನು ಸರ್ವೇ ಮಾಡಲಾಗಿದ್ದು, ಇಲಾಖೆಯ ಹೆಸರಿಗೆ ಆರ್‍ಟಿಸಿ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. 

ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಎಇಇ ಶಿವರಾಮ್, ಜಿ.ಪಂ. ಎಂಜಿನಿಯರ್ ಮಹದೇವು, ಪೌರಾಯುಕ್ತರಾದ ರಾಮದಾಸ್, ಕರ್ನಾಟಕ ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ ಮಂಡಳಿ ಎಂಜಿನಿಯರ್(ಕೆ.ಆರ್.ಐ.ಡಿ.ಎಲ್) ಪ್ರಮೋದ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ಇತರರು ಇದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,