Header Ads Widget

Responsive Advertisement

ಅಸಮಾನತೆ ಕೊನೆಗೊಳಿಸಿ, ಏಡ್ಸ್ ಕೊನೆಗೊಳಿಸಿ ಹಾಗೂ ಸಾಂಕ್ರಾಮಿಕ ರೋಗ ಕೊನೆಗೊಳಿಸಿ

‘ಅಸಮಾನತೆ ಕೊನೆಗೊಳಿಸಿ, ಏಡ್ಸ್ ಕೊನೆಗೊಳಿಸಿ ಹಾಗೂ ಸಾಂಕ್ರಾಮಿಕ ರೋಗ ಕೊನೆಗೊಳಿಸಿ ಎಂಬ ಘೋಷಣೆಯೊಂದಿಗೆ ನಡೆದ ವಿಶ್ವ ಏಡ್ಸ್ ದಿನ-2021


ಮಡಿಕೇರಿ ಡಿ.01: ಎಚ್ಐವಿ/ ಏಡ್ಸ್ ಬಗ್ಗೆ ಪ್ರತಿ ವಯಸ್ಕರಲ್ಲಿಯೂ ಜಾಗೃತಿ ಇರಬೇಕು ಎಂದು ಜಿಲ್ಲಾದಿಕಾರಿ ಡಾ.ಬಿ.ಸಿ ಸತೀಶ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಕೊಡಗು, ಮಡಿಕೇರಿ ಲಯನ್ಸ್ ಸಂಸ್ಥೆ, ರೋಟರಿ ಸಂಸ್ಥೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಎಫ್ಎಂಕೆಎಂಸಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು, ಓಡಿಪಿ-ಸ್ನೇಹಾಶ್ರಯ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ‘ಅಸಮಾನತೆ ಕೊನೆಗೊಳಿಸಿ, ಏಡ್ಸ್ ಕೊನೆಗೊಳಿಸಿ ಹಾಗೂ ಸಾಂಕ್ರಾಮಿಕ ರೋಗ ಕೊನೆಗೊಳಿಸಿ ಎಂಬ ಘೋಷಣೆಯೊಂದಿಗೆ ನಡೆದ ವಿಶ್ವ ಏಡ್ಸ್ ದಿನ-2021 ರ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಚ್ಐವಿ/ ಏಡ್ಸ್ ಹರಡುವ ವಿಧಾನಗಳು, ಗುಣ ಲಕ್ಷಣಗಳು, ಅದರ ಪ್ರಭಾವ ಮತ್ತಿತರ ಬಗ್ಗೆ ಜ್ಞಾನ ಇರಬೇಕು. ಸೋಂಕಿತ ವ್ಯಕ್ತಿ ಬಗೆಗಿನ ದೃಷ್ಟಿಕೋನ ಬದಲಾಗಬೇಕು. ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಪಡೆಯುವುದರ ಮೂಲಕ ಸುತ್ತಮುತ್ತಲಿನ ವಾತಾವರಣದಲ್ಲಿನ ಬದಲಾವಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.

ಸೋಂಕಿತ ವ್ಯಕ್ತಿಯನ್ನು ಯಾವುದೇ ರೀತಿಯ ತಾರತಮ್ಯದಿಂದ ನೋಡದೆ ಸಮಾನತೆಯಿಂದ ಕಾಣಬೇಕು. ಎಚ್ಐವಿ/ ಏಡ್ಸ್ ಬಾಧಿತರನ್ನು ಇತರರಂತೆ ಕಾಣಬೇಕು. ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.

‘ಜನವರಿ 01, 2022 ರ ವೇಳೆಗೆ 18 ವರ್ಷ ತುಂಬುವ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್-19 ಲಸಿಕೆ ಪಡೆಯಬೇಕು ಜೊತೆಗೆ ಮತದಾನದ ಗುರುತಿನ ಚೀಟಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸಲಹೆ ಮಾಡಿದರು.’

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಸುಬ್ರಮಣ್ಯ ಅವರು ಮಾತನಾಡಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ. ಎಚ್ಐವಿ/ಏಡ್ಸ್ ಪೀಡಿತರಿಗೂ ಸೌಲಭ್ಯಗಳನ್ನು ತಲುಪಿಸಬೇಕು ಎಂದರು.

‘ಎಚ್ಐವಿ ಏಡ್ಸ್ ಮಾರಕ ರೋಗದಿಂದ ದೂರವಿರಲು ಮುನ್ನೆಚ್ಚರಿಕೆ ವಹಿಸಬೇಕು. ರಾಗಿಗೆ ಒಂದೇ ತೆನೆ, ಬಾಳೆಗೆ ಒಂದೇ ಗೊನೆ ಎಂಬ ಪರಿಕಲ್ಪನೆಯಲ್ಲಿ ಬದುಕಬೇಕು ಎಂದರು.’
ಕೋವಿಡ್ನಂತಹ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಮುನ್ನೆಚ್ಚರಿಕೆ ವಹಿಸಬೇಕು. ಕಾಲ ಕಾಲಕ್ಕೆ ಸರ್ಕಾರ ಹೊರಡಿಸುವ ಮಾರ್ಗಸೂಚಿ ಪಾಲಿಸಬೇಕು. ನಾವು ಸುರಕ್ಷಿತವಾಗಿರಬೇಕು. ಇತರರನ್ನು ಸುರಕ್ಷಿತರನ್ನಾಗಿ ಬದುಕಲು ಮುನ್ನೆಚ್ಚರ ವಹಿಸುವುದು ಅತ್ಯಗತ್ಯ ಎಂದು ಎನ್.ಸುಬ್ರಮಣ್ಯ ಅವರು ಪ್ರತಿಪಾದಿಸಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಕೆ.ಸಿ.ದಯಾನಂದ ಅವರು ಮಾತನಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಹೊಂದಿರಬೇಕು. ಇಲ್ಲದಿದ್ದಲ್ಲಿ ಕುಟುಂಬ ಹಾಗೂ ಸಮಾಜದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಅವರು ಹೇಳಿದರು.

ಎಚ್ಐವಿ ಏಡ್ಸ್ ರೋಗವು ಮಾನವನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆ ಮಾಡದ/ ಸೋಂಕಿತರ ರಕ್ತ ಮತ್ತು ರಕ್ತ ಉತ್ಪನ್ನಗಳ ವರ್ಗಾವಣೆ, ಸಂಸ್ಕರಿಸದ ಸೂಜಿ, ಸಿರಿಂಜ್, ಸಾಧನಗಳನ್ನು ಬಳಸುವುದರಿಂದ ಎಚ್ಐವಿ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದರು.

ಎಚ್ಐವಿ ಏಡ್ಸ್ನಿಂದ ತೂಕ ಕಡಿಮೆಯಾಗುವುದು, ಒಂದು ತಿಂಗಳವರೆಗೆ ಭೇದಿ ಆಗುವುದು, ಸತತ ಜ್ವರ ಬರುವುದು, ಕ್ಷಯ ಸೋಂಕು ತಗಲುವುದು, ಬಾಯಿ, ಗಂಟಲು ಮತ್ತು ಅನ್ನನಾಳಗಳಲ್ಲಿ ಬಿಳಿ ಪೊರೆ ಉಂಟಾಗುವುದು, ನ್ಯುಮೊನಿಯಾ ಸೋಂಕು ತಗುಲುವುದು, ದೃಷ್ಟಿ ಕಡಿಮೆಯಾಗುವುದು ಇದರ ಲಕ್ಷಣವಾಗಿದೆ ಎಂದು ದಯಾನಂದ ಅವರು ಮಾಹಿತಿ ನೀಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷರಾದ ಎನ್.ಡಿ.ಅಚ್ಚಯ್ಯ ಅವರು ಮಾತನಾಡಿ ಎಚ್ಐವಿ ಏಡ್ಸ್ ಬರದಂತೆ ಮುನ್ನೆಚ್ಚರ ವಹಿಸುವುದು ಅತ್ಯಗತ್ಯ. ಹಾಗೆಯೇ ಪೌಷ್ಠಿಕ ಆಹಾರ ಪಡೆಯಬೇಕು. ಎಚ್ಐವಿ ಏಡ್ಸ್ ಬಾಧಿತರನ್ನು ಯಾವುದೇ ಕಾರಣಕ್ಕೂ ದೂರವಿಡಬಾರದು. ಇತರರಂತೆ ಕಾಣಬೇಕು ಎಂದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ನಟರಾಜು ಕೆಸ್ತೂರು ಅವರು ಮಾತನಾಡಿ ಎಚ್ಐವಿ/ಏಡ್ಸ್ ಗಿಂತ ಕೊರೊನಾ ವೈರಸ್ ಅಪಾಯಕಾರಿ, ಆದರೆ ಎಚ್ಐವಿ/ಏಡ್ಸ್ ಸೇರಿದಂತೆ ಪ್ರತಿಯೊಂದು ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. 2030 ಕ್ಕೆ ಎಚ್ಐವಿ ಏಡ್ಸ್ನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಅವರು ಹೇಳಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆನಂದ್ ಅವರು ಜಿಲ್ಲೆಯಲ್ಲಿ 44 ಐಸಿಟಿಸಿ ಕೇಂದ್ರ (ಪ್ರತ್ಯೇಕ-07, ಪ್ರಾ.ಆ.ಕೇಂದ್ರ-34 ಹಾಗೂ ಖಾಸಗಿ ಆಸ್ಪತ್ರೆ-03), 01 ಎಆರ್ಟಿ ಕೇಂದ್ರ(ಚಿಕಿತ್ಸಾ ಕೇಂದ್ರ, ಜಿಲ್ಲಾ ಆಸ್ಪತ್ರೆ), 04 ಲಿಂಕ್ ಎಆರ್ಟಿ ಕೇಂದ್ರ, 07 ಇಐಡಿ (ಡಿಎನ್ಎ/ಪಿಸಿಆರ್), 03 ಸ್ವಯಂ ಸೇವಾ ಸಂಸ್ಥೆಗಳು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ, ರೆಡ್ಕ್ರಾಸ್ ಸಂಸ್ಥೆಯ ಡಾ.ಮುರಳೀಧರ, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪಿ.ಆರ್.ವಿಜಯ, ಓಡಿಪಿ-ಸ್ನೇಹಾಶ್ರಯ ಸಮಿತಿ ಕಾರ್ಯಾಧ್ಯಕ್ಷರಾದ ಕೆ.ಟಿ.ಬೇಬಿಮ್ಯಾಥ್ಯೂ, ಜಾಯ್ಸ್ ಮೆನೆಜಸ್, ಲಯನ್ ಕಾರ್ಯದರ್ಶಿ ಸೋಮಣ್ಣ, ಕೆ.ಕೆ.ದಾಮೋದರ ಇತರರು ಇದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಎಚ್ಐವಿ/ ಏಡ್ಸ್ ಜಾಗೃತಿ ಜಾಥಾಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಲ್.ಜಿನರಾಳಕರ್ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಎಚ್ಐವಿ ಏಡ್ಸ್ ಬಗ್ಗೆ ಜಾಗೃತಿ ಹೊಂದಿರಬೇಕು. ಇದು ಹರಡದಂತೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

ಜಾಥಾವು ನಗರದ ಜನರಲ್ ತಿಮ್ಮಯ್ಯ, ಮಂಗೇರಿರ ಮುತ್ತಣ್ಣ, ಸ್ಕ್ವಾರ್ಡನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಸರ್ಕಾರಿ ಜೂನಿಯರ್ ಕಾಲೇಜು ತಲುಪಿತು.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,