Header Ads Widget

ಸರ್ಚ್ ಕೂರ್ಗ್ ಮೀಡಿಯ

ವಿವಿಧ ಸಾಲ ಯೋಜನೆಗೆ ಅರ್ಜಿ ಆಹ್ವಾನ

ವಿವಿಧ ಸಾಲ ಯೋಜನೆಗೆ ಅರ್ಜಿ ಆಹ್ವಾನ


ಮಡಿಕೇರಿ ಡಿ.02: ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದಿಂದ 2021-22ನೇ ಸಾಲಿನಲ್ಲಿ ವಿವಿಧ ಯೋಜನೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಸುವಿಧಾ ತಂತ್ರಾಂಶದ ಮುಖಾಂತರ ಆನ್‍ಲೈನ್ ಅರ್ಜಿ ಸ್ವೀಕರಿಸಲಾಗುವುದು. 

       ಅರಿವು ಶೈಕ್ಷಣಿಕ ಸಾಲ ಯೋಜನೆ ನವೀಕರಣ: ಕರ್ನಾಟಕ ಮಡಿವಾಳ ಮಾಚಿದೇವ  ಅಭಿವೃದ್ದಿ ನಿಗಮದಿಂದ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಈಗಾಗಲೇ ಕಳೆದ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ(ನವೀಕರಣ) ಯೋಜನೆಯಡಿಯಲ್ಲಿ ಸೌಲಭ್ಯ ಪಡೆದ ವಿದ್ಯಾರ್ಥಿಗಳಿಗೆ 2021-22 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ಮುಂದುವರೆದ ಕಂತುಗಳಿಗೆ (3, 4, 5 ನೇ ಕಂತುಗಳು) ಸುವಿಧಾ ತಂತ್ರಾಂಶದಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

      ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. https://suvidha.karnataka.gov.in  ಜಾಲತಾಣದೊಂದಿಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಸಂಬಂಧಿಸಿದಂತೆ, ಹೆಚ್ಚಿನ ಮಾಹಿತಿಗೆ ಹಾಗೂ ಸಲ್ಲಿಸಬೇಕಾಗಿರುವ ದಾಖಲೆಗಳ ಬಗ್ಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮದ https://kmmd.karnataka.gov.in    ಜಾಲತಾಣದಲ್ಲಿ ಮಾಹಿತಿ ಪಡೆಯಬಹುದು.  ಸಾಲ ಸೌಲಭ್ಯ ಪಡೆಯ ಬಯಸುವವರು ಮಡಿವಾಳ ಸಮುದಾಯದ ಪ್ರವರ್ಗ–2ಎ ಗೆ ಸೇರಿದ ಮಡಿವಾಳ ಮತ್ತು ಇದರ ಉಪಜಾತಿಗಳಿಗೆ (ಅಗಸ, ಚಕಲ, ಧೋಬಿ, ಮಡಿವಾಳ, ಮನ್ನನ್, ಪರಿತ್, ರಾಜಕ, ಸಕಲ, ವನ್ನನ್, ವೆಲ್ಲುತೇಡ್, ಸಾಕಲವಾಡು) ಸೇರಿದವರಾಗಿರಬೇಕು.

ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ: ಈ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯ ಬಯಸುವ ಹಿಂದುಳಿದ ವರ್ಗಗಳ ಪ್ರವರ್ಗ-2ಎ ಗೆ ಸೇರಿದ ಮಡಿವಾಳ ಮತ್ತು ಇದರ ಉಪಜಾತಿಯವರ ಕುಲಕಸುಬು/ ಸಾಂಪ್ರದಾಯಿಕ ವೃತ್ತಿದಾರರಾದ ಧೋಬಿ ಘಟಕ, ಡ್ರೈ ಕ್ಲೀನಿಂಗ್ ಘಟಕಗಳ ಸ್ಥಾಪನೆ, ಇಸ್ತ್ರೀ ಮುಂತಾದ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ಧಿಗಾಗಿ ಆಧುನಿಕ ಉಪಕರಣಗಳನ್ನು ಖರೀಧಿಸಲು ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ವೃತ್ತಿ ಅನುಸಾರ ಗರಿಷ್ಠ 2 ಲಕ್ಷ ರೂ ವರೆಗೆ  ಆರ್ಥಿಕ ನೆರವು.  ಇದರಲ್ಲಿ ಗರಿಷ್ಠ ಶೇ: 15 ರಷ್ಟು ಸಹಾಯ ಧನ, ಉಳಿಕೆ ಮೊತ್ತ ಶೇ: 2ರ ಬಡ್ಡಿ ದರದಲ್ಲಿ ಸಾಲ.  

        ಸ್ವಯಂ ಉದ್ಯೋಗ ಸಾಲ ಯೋಜನೆ: ಈ ಯೋಜನೆಯ ಸೌಲಭ್ಯ ಪಡೆಯ ಬಯಸುವ ಹಿಂದುಳಿದ ವರ್ಗಗಳ ಪ್ರವರ್ಗ-2ಎ ಗೆ ಸೇರಿದ ಮಡಿವಾಳ ಮತ್ತು ಇದರ ಉಪಜಾತಿಯವರು ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ ಶೇ: 15 ರಷ್ಟು ಸಹಾಯ ಧನ, ಉಳಿಕೆ ಮೊತ್ತ ಶೇ: 4ರ ಬಡ್ಡಿ ದರದಲ್ಲಿ ಸಾಲ. 

 ಸ್ವ ಸಹಾಯ ಗುಂಪುಗಳ ಆರ್ಥಿಕ ನೆರವು: ಮಡಿವಾಳ ಸಮುದಾಯದ ಮಹಿಳೆಯರು ಕೈಗೊಳ್ಳುವ ಆರ್ಥಿಕ ಚಟುವಟಿಗೆಗಳಿಗೆ ಸ್ವಸಹಾಯ ಗುಂಪುಗಳ ಒಟ್ಟು 15 ಸದಸ್ಯರಿಗೆ ತಲಾ ರೂ.5 ಸಾವಿರಗಳ ಸಹಾಯ ಧನ ಹಾಗೂ ತಲಾ ರೂ. 15 ಸಾವಿರ ಸಾಲವನ್ನು ಶೇ.4 ರಷ್ಟು ಬಡ್ಡಿ ದರದಲ್ಲಿ ಹೀಗೆ ಪ್ರತಿ ಗುಂಪಿಗೆ ರೂ. 75 ಸಾವಿರ ಸಹಾಯಧನ ಹಾಗೂ ರೂ. 2,25,000 ಗಳ ಸಾಲ ಒಟ್ಟು ರೂ. 3 ಲಕ್ಷ ಸಾಲ ಪಡೆಯಲು ಬಯಸುವವರು ಅರ್ಜಿ ಸಲ್ಲಿಸಬೇಕು.   

ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಹೊಂದಿರಬೇಕಾದ ಸಾಮಾನ್ಯ ಅರ್ಹತೆಗಳು: ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-2 ಗೆ ಸೇರಿದ ಮಡಿವಾಳ ಮತ್ತು ಇದರ ಉಪಜಾತಿಗೆ ಸೇರಿದವರಾಗಿರಬೇಕು. ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 98 ಸಾವಿರ, ಪಟ್ಟಣ ಪ್ರದೇಶದವರಿಗೆ 1.20 ಲಕ್ಷ ರೂ ಒಳಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.  ಅರ್ಜಿ ದಾರರು ಕೆ.ವೈ.ಸಿ. ಬಗ್ಗೆ ಆಧಾರ್ ಕಾರ್ಡ್/ ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್ ದಾಖಲೆಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿದಾರರು ಐಎಫ್‍ಎಸ್‍ಸಿ. ಕೋಡ್ ಹೊಂದಿರುವ ರಾಷ್ಟ್ರೀಕೃತ/ ಗ್ರಾಮೀಣ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿರಬೇಕು.

ಈ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದ ಅರ್ಜಿದಾರರು ನಿಗಮದ ವೆಬ್‍ಸೈಟ್ www.kmmd.karnataka.gov.in ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ನಿಗಮದ ಸಹಾಯವಾಣಿ ಸಂಖ್ಯೆ: 080-22374832 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ರಾಡ್ರಿಗಸ್ ಕಟ್ಟಡದ ಎದುರು, ರೇಸ್ ಕೋರ್ಸ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ದೂರವಾಣಿ ಸಂಖ್ಯೆ: 08272-221656 ಇಲ್ಲಿ ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜನವರಿ, 15 ರೊಳಗೆ ಸಲ್ಲಿಸಬೇಕು ಎಂದು ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,