Header Ads Widget

Responsive Advertisement

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯಿದೆಯಡಿ ಸುಂಕ ಸಂಗ್ರಹಿಸುವ ಇಲಾಖೆಯ ಅಧಿಕಾರಿಗಳ ಜಿಲ್ಲಾ ಮಟ್ಟದ ಸಭೆ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯಿದೆಯಡಿ ಸುಂಕ ಸಂಗ್ರಹಿಸುವ ಇಲಾಖೆಯ ಅಧಿಕಾರಿಗಳ ಜಿಲ್ಲಾ ಮಟ್ಟದ ಸಭೆ


ಮಡಿಕೇರಿ ಡಿ.03: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯಿದೆಯಡಿ ಸುಂಕ ಸಂಗ್ರಹಿಸುವ ಇಲಾಖೆಯ ಅಧಿಕಾರಿಗಳ ಜಿಲ್ಲಾ ಮಟ್ಟದ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.      

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ತಲುಪಿಸುವಂತೆ ಸೂಚಿಸಿದರು.  

ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಪಿಂಚಣಿ, ಶ್ರಮ ಸಾಮಥ್ರ್ಯ, ವಸತಿ ಸೌಲಭ್ಯ, ಹೆರಿಗೆ ಸೌಲಭ್ಯ, ಶಿಶುಪಾಲನಾ ಸೌಲಭ್ಯ, ಶೈಕ್ಷಣಿಕ ಹಾಗೂ ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ ಮತ್ತು ಮದುವೆ ಸಹಾಯಧನ, ತಾಯಿ ಮಗು ಸಹಾಯ ಹಸ್ತ ಹೀಗೆ ಹಲವು ಕಾರ್ಯಕ್ರಮಗಳಿದ್ದು, ಇವುಗಳನ್ನು ತಲುಪಿಸುವಂತೆ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದರು. 

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯಿದೆಯಡಿ ಸುಂಕ ಕಟಾವಣೆ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಅವರು ಗ್ರಾ.ಪಂ. ಪ.ಪಂ. ಹಾಗೂ ನಗರಸಭೆಯು ಕಟ್ಟಡ ಕಟ್ಟಲು ಪರವಾನಗಿ ನೀಡುವ ಸಂದರ್ಭದಲ್ಲಿ 10 ಲಕ್ಷ ಮೇಲ್ಪಟ್ಟು ವಸತಿ ಕಟ್ಟಡ ನಿರ್ಮಾಣ ಮಾಡುವ ವೆಚ್ಚದ ಮೇಲೆ ಶೇ.1 ರಷ್ಟು ಸುಂಕ ಕಡಿತ ಮಾಡಿ ಕಾರ್ಮಿಕ ಕಲ್ಯಾಣ ಮಂಡಳಿಗೆ 30 ದಿನದೊಳಗೆ ಪಾವತಿಸಬೇಕಿದೆ ಎಂದರು.   

ಲೋಕೋಪಯೋಗಿ, ಪಂಚಾಯತ್ ರಾಜ್, ನೀರಾವರಿ, ನಗರಾಭಿವೃದ್ಧಿ ಹೀಗೆ ಎಂಜಿನಿಯರಿಂಗ್ ಹಾಗೂ ಇತರೆ ಇಲಾಖೆಗಳಿಂದ ಕೈಗೊಳ್ಳುವ ಕಾಮಗಾರಿಗಳ ಮೊತ್ತ ಶೇ.1 ರಷ್ಟು ಸುಂಕವನ್ನು ಕಟಾವಣೆ ಮಾಡಿ ಕಾರ್ಮಿಕ ಕಲ್ಯಾಣ ಮಂಡಳಿಗೆ ಸುಂಕ ಪಾವತಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.   

ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಅವರು ಸಂಗ್ರಹಿತ ಸುಂಕವನ್ನು ಮಂಡಳಿಗೆ ಪಾವತಿಸದೆ ಕಚೇರಿಯಲ್ಲಿ ಇದ್ದರೆ ಅದನ್ನು ತಕ್ಷಣ ಮಂಡಳಿಗೆ ಪಾವತಿಸಬೇಕಿದೆ ಎಂದು ಹೇಳಿದರು.  

ಸಂಗ್ರಹ ಮಾಡಿದ ಸೆಸ್‍ನಲ್ಲಿ ಶೇ.1 ರಷ್ಟು ಆಡಳಿತ ವೆಚ್ಚಕ್ಕೆ ಕಡಿತ ಮಾಡಿ ಕಾರ್ಮಿಕ ಕಲ್ಯಾಣ ಮಂಡಳಿಗೆ ಪಾವತಿಸಬೇಕಿದೆ. ಈಗಾಗಲೇ ಮಂಡಳಿಗೆ ಸಂಗ್ರಹಿಸಿದ ಸೆಸ್ ಮೊತ್ತದಲ್ಲಿ ಶೇ.1 ರಷ್ಟು ಆಡಳಿತ ವೆಚ್ಚದ ಮೊತ್ತವನ್ನು ಕಡಿತ ಮಾಡದೆ ಪಾವತಿಸಿದ್ದಲ್ಲಿ ಪಾವತಿಸುವ ಸೆಸ್ ಮೊತ್ತದಲ್ಲಿ ಕಡಿತ ಮಾಡಿ ಉಳಿದ ಮೊತ್ತವನ್ನು ಮಂಡಳಿಗೆ ಪಾವತಿಸಬೇಕಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಅವರು ಮಾಹಿತಿ ನೀಡಿದರು.  

      ಕಾರ್ಮಿಕ ಕಲ್ಯಾಣ ಮಂಡಳಿಗೆ ಸೆಸ್ ಮಾಹಿತಿಯ ಪ್ರತಿಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಯವರಿಗೆ ಇ-ಮೇಲ್-lomadikeri@gmail.com    ಮೂಲಕ ಮಹಿತಿ ನೀಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಅವರು ಕೋರಿದರು.   

      ಪ್ರತಿ ತಿಂಗಳು ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಹಾಗೂ ನಗರ ಸಭೆಯವರು ಕಟ್ಟಡ ಕಟ್ಟಲು ಪರವಾನಗಿ ನೀಡುವಾಗ ಮಾಲೀಕರಿಗೆ ಕಾರ್ಮಿಕರನ್ನು ನೋಂದಣಿ ಮಾಡಿಸಲು ತಿಳುವಳಿಕೆ ನೀಡುವುದು. ಪರವಾನಗಿ ಪಡೆದ ಮಾಲೀಕರ ಮಾಹಿತಿಯನ್ನು ಕಾರ್ಮಿಕ ಇಲಾಖೆಗೆ ನೀಡಿದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಕಟ್ಟಡ ಕಾರ್ಮಿಕರನ್ನು ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 

     ‘ಗ್ರಾ.ಪಂ. ಪ.ಪಂ., ನಗರಸಭೆ, ಲೋಕೋಪಯೋಗಿ, ಅರಣ್ಯ, ಚೆಸ್ಕಾಂ, ಹಾರಂಗಿ ಪುನರ್ವಸತಿ ವಿಭಾಗ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲೀಕರಣ, ಕೆಆರ್‍ಡಿಎಲ್, ರಾಷ್ಟ್ರೀಯ ಹೆದ್ದಾರಿ ವಿಭಾಗ, ಸಣ್ಣ ನೀರಾವರಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕರ್ನಾಟಕ ರಸ್ತೆ ಅಭಿವೃದ್ಧಿ ಸಂಸ್ಥೆ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ನಿರ್ಮಿತಿ ಕೇಂದ್ರ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಇನ್ನಿತರ ಇಲಾಖೆಯವರು ಕೈಗೊಳ್ಳುವ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರರಿಗೆ ಕಾಮಗಾರಿಯು ಪ್ರಾರಂಭವಾದ 15 ದಿನದೊಳಗೆ ನೋಂದಣಿ ಮಾಡಿಸಲು ತಿಳಿಸುವುದು ಹಾಗೂ ಕಾಮಗಾರಿಗಳ ಮಾಹಿತಿಯನ್ನು ನೀಡಿದಲ್ಲಿ ಸ್ಥಳಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಅವರು ಹೇಳಿದರು.  

       ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ವರ್ಷದಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಯಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಬೇಕಿದೆ. ಗ್ರಾ.ಪಂ.ಮಟ್ಟದಲ್ಲಿಯೂ ಕಟ್ಟಡ ನಿರ್ಮಾಣ ಸುಂಕ ಕಟಾವಣೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು. 

     ಜಿ.ಪಂ.ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ, ತಾಲ್ಲೂಕು ಕಾರ್ಮಿಕ ಅಧಿಕಾರಿಗಳಾದ ಎಂ.ಎಂ.ಯತ್ನಟ್ಟಿ, ಲೀನಾ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ಇಇ ನಾಗೇಶ್, ಪಿಎಂಜಿಎಸ್‍ವೈ ಎಇಇ ಕೆ.ಟಿ.ಪ್ರಭು, ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಎಂಜಿನಿಯರ್ ಹನುಮಂತು, ಡಿಯುಡಿಸಿ ಎಇಇ ನಟರಾಜು, ನಗರಸಭೆಯ ಎಇಇ ರಾಜೇಂದ್ರ ಕುಮಾರ್, ಎಇ ಸಮಂತ್ ಕುಮಾರ್, ಬಿಸಿಎಂ ಇಲಾಖೆಯ ವ್ಯವಸ್ಥಾಪಕರಾದ ಶಿವಶಂಕರ, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಕುಸುಮ, ಹಲವು ಇಲಾಖೆ ಅಧಿಕಾರಿಗಳು ಇದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,