Header Ads Widget

ಸರ್ಚ್ ಕೂರ್ಗ್ ಮೀಡಿಯ

ಬೆಳೆ ಹಾನಿ ನಿಖರ ಮಾಹಿತಿ ನೀಡಿ: ಜಿಲ್ಲಾಧಿಕಾರಿ

ಬೆಳೆ ಹಾನಿ ನಿಖರ ಮಾಹಿತಿ ನೀಡಿ: ಜಿಲ್ಲಾಧಿಕಾರಿ


ಮಡಿಕೇರಿ ನ.23: ಅಕಾಲಿಕ ಮಳೆಯಿಂದ ಉಂಟಾದ ಬೆಳೆಹಾನಿ ಸಂಬಂಧಿಸಿದಂತೆ ಕಾಫಿ ಮಂಡಳಿ, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡವು ಕೃಷಿಕರಿಗೆ ಮಾಹಿತಿ ನೀಡಿ, ನಿಖರ ಸಮೀಕ್ಷೆ ಮಾಡಿ, ವರದಿ ನೀಡುವಂತೆ ಜಂಟಿ ಸಮೀಕ್ಷೆ ತಂಡಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದ್ದಾರೆ. 

ನಗರದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರದಲ್ಲಿ ವಿಡಿಯೋ ಸಂವಾದ ಮೂಲಕ ಮಾಹಿತಿ ಪಡೆದು ಅವರು ಮಾತನಾಡಿದರು. 

ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳುವ ಸಂಬಂಧ ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕೃಷಿಕರಿಗೆ ಮಾಹಿತಿ ನೀಡಬೇಕು. ಸ್ಥಳ ಪರಿಶೀಲಿಸುವ ಸಂದರ್ಭದಲ್ಲಿ ಪ್ರತೀ ನಿತ್ಯ ಛಾಯಾಚಿತ್ರ ಸಹಿತ ವರದಿ ನೀಡಬೇಕು. ಕೃಷಿಕರಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡದೆ ಬೆಳೆ ಹಾನಿ ಸಮೀಕ್ಷೆ ಮಾಡಿ ವರದಿ ನೀಡುವಂತೆ ನಿರ್ದೇಶನ ನೀಡಿದರು. 

ಬೆಳೆ ಹಾನಿ ಪೋರ್ಟಲ್‍ನಲ್ಲಿ ನಮೂದು ಮಾಡಬೇಕು. ಕೃಷಿಕರಿಂದ ಯಾವುದೇ ರೀತಿಯ ದೂರುಗಳು ಕೇಳಿ ಬರದಂತೆ ಸಮೀಕ್ಷೆ ಕೈಗೊಂಡು ನವೆಂಬರ್, 30 ರೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಜಂಟಿ ಸಮೀಕ್ಷೆ ತಂಡಕ್ಕೆ ಸೂಚಿಸಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಶೇ.33 ಕ್ಕಿಂತ ಹೆಚ್ಚು ಮಳೆಯಿಂದ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ತೆರಳುವ ಸಂದರ್ಭದಲ್ಲಿ ಕೃಷಿಕರಿಗೆ ಮಾಹಿತಿ ನೀಡುವುದರ ಜೊತೆಗೆ ಕೃಷಿಕರಿಂದ ಅರ್ಜಿ ಪಡೆಯುವಂತೆ ಅವರು ಸಲಹೆ ಮಾಡಿದರು. 

ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅವರು ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿ ಆಗಿರುವ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ಕೈಗೊಳ್ಳಬೇಕು. ಜಂಟಿ ಸಮೀಕ್ಷೆ ಸಂದರ್ಭದಲ್ಲಿ ಸ್ಥಳ ಪರಿಶೀಲಿಸಲಾಗುವುದು ಎಂದರು. 

ತಹಶೀಲ್ದಾರ್ ಗೋವಿಂದರಾಜು ಅವರು ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ, ಸೋಮವಾರಪೇಟೆ ಮತ್ತು ಸುಂಟಿಕೊಪ್ಪ ಭಾಗದಲ್ಲಿ ಶೇ.33 ಕ್ಕಿಂತ ಹೆಚ್ಚು ಕಾಫಿ, ಕಾಳುಮೆಣಸು ಬೆಳೆ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಶಾಂತಳ್ಳಿ ಹೋಬಳಿಯ ಅಭಿಮಠ, ಬೆಟ್ಟದಹಳ್ಳಿ, ಚಿಕ್ಕತೋಳೂರು, ದೊಡ್ಡ ತೋಳೂರು, ಹರಗ, ಕೂತಿ, ಕೊತ್ತನಹಳ್ಳಿ, ಕುಮಾರಳ್ಳಿ, ಕುಂದಳ್ಳಿ, ಶಾಂತಳ್ಳಿ, ಟಿ.ಶೆಟ್ಟಳ್ಳಿ, ತೋಳೂರು ಶೆಟ್ಟಳ್ಳಿ, ಹಾಗೆಯೇ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಗರ್ವಾಲೆ, ಮುವತ್ತೋಕ್ಲು, ಶಿರಂಗಳ್ಳಿ, ಸೂರ್ಲಬ್ಬಿ, ಸೋಮವಾರಪೇಟೆ ಕಸಬಾ ಹೋಬಳಿಯ ಬಿಳಿಗೇರಿ, ಕಿರಗಂದೂರು, ತಾಕೇರಿ, ಹೀಗೆ ಹಲವು ಕಡೆಗಳಲ್ಲಿ ಕಾಫಿ, ಕಾಳು ಮೆಣಸು ಹಾನಿಯಾಗಿದೆ ಎಂದು ತಹಶೀಲ್ದಾರ್ ಅವರು ಮಾಹಿತಿ ನೀಡಿದರು. 

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ.ಶೇಕ್, ಕಾಫಿ ಮಂಡಳಿ ಉಪ ನಿರ್ದೇಶಕರಾದ ಶಿವಕುಮಾರ್ ಸ್ವಾಮಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಇತರರು ಬೆಳೆ ಹಾನಿ ಸಮೀಕ್ಷೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,