Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಕಾಲಿಕ ಮಳೆಯಿಂದ ಬೆಳೆಹಾನಿ ಪ್ರದೇಶಗಳಿಗೆ ಆರ್.ಅಶೋಕ್ ಭೇಟಿ; ಪರಿಶೀಲನೆ

ಅಕಾಲಿಕ ಮಳೆಯಿಂದ ಬೆಳೆಹಾನಿ ಪ್ರದೇಶಗಳಿಗೆ ಆರ್.ಅಶೋಕ್ ಭೇಟಿ; ಪರಿಶೀಲನೆ 


ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಕಂದಾಯ ಸಚಿವರಾದ ಆರ್.ಅಶೋಕ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. 

ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಮುಸುಕಿನ ಜೋಳ ಮತ್ತು ಸುಂಟಿ ಬೆಳೆ ಹಾನಿಯಾಗಿರುವುದನ್ನು ವೀಕ್ಷಿಸಿದರು. ಬಳಿಕ ಕುಶಾಲನಗರದಲ್ಲಿ ಕಂದಾಯ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. 

    ನಂತರ ಸುದ್ದಿಗಾರರ ಜೊತೆ ಮಾತನಾಡಿದ ಆರ್.ಅಶೋಕ್ ಅವರು ರಾಜ್ಯದಲ್ಲಿ ಅಕಾಲಿಕ ಮಳೆಯಾಗಿ ಬೆಳೆ ಹಾನಿ ಆಗಿರುವುದರಿಂದ ಚುನಾವಣಾ ಆಯೋಗವು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಆ ನಿಟ್ಟಿನಲ್ಲಿ ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭೇಟಿ ನೀಡಿ ವೀಕ್ಷಣೆ ಮಾಡಲಾಗುತ್ತಿದೆ ಎಂದರು. 

     ಅಕಾಲಿಕ ಮಳೆಯಿಂದಾಗಿ ಹೆಬ್ಬಾಲೆ ಗ್ರಾ.ಪಂ.ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಮುಸುಕಿನ ಜೋಳ ಮತ್ತು ಶುಂಟಿ ಬೆಳೆ ಹಾನಿಯಾಗಿದೆ. ಮುಸುಕಿನ ಜೋಳ ಹೆಚ್ಚಿನ ಮಳೆಯಿಂದಾಗಿ ಮೊಳಕೆ ಬರುತ್ತಿದೆ. ಹಾಗೆಯೇ ಶುಂಟಿ ಬೆಳೆ ಕೊಳೆಯುತ್ತಿದೆ. ಆದ್ದರಿಂದ ಕೂಡಲೇ ೧೫ ದಿನದೊಳಗೆ ಬೆಳೆ ಹಾನಿಯಾದ ಕೃಷಿಕರಿಗೆ ಪರಿಹಾರ ವಿತರಿಸಲು ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವರು ಹೇಳಿದರು. 

    ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಭಾರಿ ಮಳೆಯಿಂದಾಗಿ ೧೪೬ ಮನೆಗಳು ಹಾನಿಯಾಗಿದೆ. ೪೦,೮೭೮ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ೨೨ ಜಾನುವಾರುಗಳ ಪ್ರಾಣ ಹಾನಿ, ೧೦ ಜಾನುವಾರು ಕೊಟ್ಟಿಗೆ ಹಾನಿ ಹಾಗೂ ೧೨೭ ಕೋಟಿ ರೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಈಗಾಗಲೇ ಹಲವು ಹಾನಿ ಪ್ರಕರಣಕ್ಕೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ. ಸದ್ಯ ಅಕಾಲಿಕ ಮಳೆಯಿಂದ ಹಾನಿಯಾಗಿರುವ ಬೆಳೆ ಹಾನಿಗೆ ಪರಿಹಾರ ಭರಿಸಲಾಗುವುದು ಎಂದು ಕಂದಾಯ ಸಚಿವರಾದ ಆರ್.ಅಶೋಕ್ ಅವರು ತಿಳಿಸಿದರು.   

      ಬಳಿಕ ಕಂದಾಯ ಸಚಿವರಾದ ಆರ್.ಅಶೋಕ್ ಅವರು ಸೋಮವಾರಪೇಟೆ ತಾಲ್ಲೂಕಿನ ಬೇಳೂರು ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಕಾಫಿ ಬೆಳೆ ಹಾನಿಯಾಗಿರುವುದನ್ನು ಪರಿಶೀಲಿಸಿದರು. ಗಿಡದಲ್ಲಿಯೇ ಕೊಳೆಯುತ್ತಿರುವ ಕಾಫಿ ಬೆಳೆಯನ್ನು ವೀಕ್ಷಿಸಿದರು. 

     ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆ ಉದುರುತ್ತಿರುವುದು, ಕಾಫಿ ಬೆಳೆಯ ಬಣ್ಣ ಕಳೆದುಕೊಳ್ಳುತ್ತಿರುವುದು ಹಾಗೂ ಕಾಫಿ ಕುಯಿಲು ಮಾಡಿ ಒಣಗುವ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆ ಕಪ್ಪು ಬಣ್ಣಕ್ಕೆ ತುತ್ತಾಗಿರುವುದನ್ನು ಪರಿಶೀಲಿಸಿದರು. 

     ‘ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಂದಾಯ ಸಚಿವರು ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಕಾಫಿ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಕಾಫಿ ಬೆಳೆ ಹಾನಿ ಸಂಬಂಧ ಮರು ಸರ್ವೆ ಮಾಡಿ ೧೫ ದಿನದಲ್ಲಿ ವರದಿ ನೀಡಿ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.’ 

     ಕೃಷಿ, ತೋಗಾರಿಕೆ, ಹಾಗೂ ಕಾಫಿ ಸೇರಿದಂತೆ ಬೆಳೆ ಹಾನಿ ಸಂಬಂಧ ನಿಯಮಾನುಸಾರ ಸಮೀಕ್ಷೆ ಮಾಡಿ, ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ್ ಅವರು ತಿಳಿಸಿದರು. 

     ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಹೆಚ್ಚಿನ ಹಣವಿದೆ. ಕೃಷಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಗಮನಹರಿಸುವುದು ಮೊದಲ ಆದ್ಯತೆಯಾಗಿದೆ ಎಂದು ಸಚಿವರು ನುಡಿದರು. 

     ಬಳಿಕ ಕಾಫಿ


ತೋಟದ ಅಂಗಳದಲ್ಲಿ ಕಾಫಿ ಸವಿದ ಕಂದಾಯ ಸಚಿವರು, ಅಕಾಲಿಕ ಮಳೆಯಿಂದ ಉಂಟಾಗಿರುವ ನಷ್ಟಕ್ಕೆ ಕೂಡಲೇ ಪರಿಹಾರ ಒದಗಿಸುವುದು, ಕೃಷಿಕರಿಗೆ ಸ್ಪಂದಿಸುವಲ್ಲಿ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಹಲವು ನಿರ್ದೇಶನ ನೀಡಿದರು.  

      ಇದೇ ನವೆಂಬರ್ ೨೬ ಮತ್ತು ೨೭ ರಂದು ಜಿಲ್ಲೆಯಲ್ಲಿಯೂ ಅಕಾಲಿಕ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಕೃಷಿಕರು ಮುನ್ನೆಚ್ಚರ ವಹಿಸಬೇಕು ಎಂದು ಆರ್.ಅಶೋಕ್ ಅವರು ಸಲಹೆ ಮಾಡಿದರು.  

      ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಪ್ರಸಕ್ತ ಸಾಲಿನಲ್ಲಿ ಭಾರಿ ಮಳೆಯಿಂದ ಮೂರು ಮಾನವ ಪ್ರಾಣ ಹಾನಿಗೆ ಪರಿಹಾರ ವಿತರಿಸಲಾಗಿದೆ. ೨೨ ಜಾನುವಾರು ಪ್ರಾಣ ಹಾನಿ ಪ್ರಕರಣಗಳಿಗೆ ೪.೮೬ ಲಕ್ಷ ರೂ ಪರಿಹಾರ ವಿತರಿಸಲಾಗಿದೆ. ಗುಡಿಸಲು ಹಾನಿ ಹಾಗೂ ಜಾನುವಾರು ಕೊಟ್ಟಿಗೆ ಹಾನಿ ಪ್ರಕರಣಗಳಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.  

    ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ತಹಶೀಲ್ದಾರರಾದ ಗೋವಿಂದರಾಜು, ಪ್ರಕಾಶ, ಯೋಗಾನಂದ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ.ಶೇಕ್, ಕಾಫಿ ಮಂಡಳಿ ಜಂಟಿ ನಿರ್ದೇಶಕರಾದ ತಿಮ್ಮರಾಜು, ಉಪ ನಿರ್ದೇಶಕರಾದ ಶಿವಕುಮಾರ ಸ್ವಾಮಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್, ಲೋಕೋಪಯೋಗಿ ಇಲಾಖೆಯ ಇಇ ನಾಗರಾಜು, ಎಇಇ ಶಿವರಾಮು ಇತರರು ಇದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,