Header Ads Widget

ಸರ್ಚ್ ಕೂರ್ಗ್ ಮೀಡಿಯ

ವನ-ಧನ ವಿಕಾಸ ಕೇಂದ್ರಗಳ ಅನುಷ್ಠಾನಕ್ಕೆ ಡಾ.ಬಿ.ಸಿ.ಸತೀಶ ಸೂಚನೆ

ವನ-ಧನ ವಿಕಾಸ ಕೇಂದ್ರಗಳ ಅನುಷ್ಠಾನಕ್ಕೆ ಡಾ.ಬಿ.ಸಿ.ಸತೀಶ ಸೂಚನೆ


ಮಡಿಕೇರಿ ನ.10:
ವನ-ಧನ ವಿಕಾಸ ಕೇಂದ್ರಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ ಅವರು ಬುಡಕಟ್ಟು ಜನರು ಅರಣ್ಯದಲ್ಲಿ ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನಗಳಿಗೆ ಉತ್ತಮ ಬೆಲೆ ಕಲ್ಪಿಸುವಲ್ಲಿ ವನ-ಧನ ವಿಕಾಸ ಕೇಂದ್ರ ತೆರೆಯಲು ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಅವಕಾಶ ಮಾಡಿದೆ ಎಂದು ತಿಳಿಸಿದರು. 

 ಕಿರು ಅರಣ್ಯ ಉತ್ಪನ್ನಗಳಿಗೆ ಬೆಂಬಲ ಬೆಲೆ ಒದಗಿಸುವ ಕಾರ್ಯಕ್ರಮ ಅನುಷ್ಠಾನ ಸಂಬಂಧ ವನ-ಧನ ಕೇಂದ್ರಗಳನ್ನು ಸ್ಥಾಪಿಸಿ ಕಿರು ಅರಣ್ಯ ಉತ್ಪನ್ನಗಳ ಮೌಲ್ಯವರ್ಧಿತ ಮಾರುಕಟ್ಟೆ ಸೃಜಿಸುವ ಮೂಲಕ ಬುಡಕಟ್ಟು ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಜಿಲ್ಲೆಯಲ್ಲಿ ವನ ಧನ ವಿಕಾಸ ಕೇಂದ್ರ ಸ್ಥಾಪಿಸಲು ಕನಿಷ್ಠ 15 ಸ್ವಸಹಾಯ ಸಂಘಗಳ 20 ಸದಸ್ಯರನ್ನು ಒಳಗೊಂಡ 300 ಸದಸ್ಯರನ್ನು ಆಯ್ಕೆ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.  

ಕೊಡಗು ಜಿಲ್ಲೆಯಲ್ಲಿ ಲ್ಯಾಂಪ್ಸ್ ಸಹಕಾರದೊಂದಿಗೆ ವನ-ಧನ ವಿಕಾಸ ಕೇಂದ್ರ ಸ್ಥಾಪಿಸಲು 300 ಸದಸ್ಯರನ್ನು ಗುರುತಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಮೂರು ಸಂಘಗಳನ್ನು ಗುರ್ತಿಸಲಾಗಿದ್ದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನೆ (ಎನ್‍ಆರ್‍ಎಲ್‍ಎಂ) ಯಡಿ ನಾಗರಹೊಳೆಯಲ್ಲಿ ಜೇನು ಸಾಕಾಣಿಕೆ ಮತ್ತು ಸಂರಕ್ಷಣೆ ಹಾಗೂ ಲ್ಯಾಂಟೇನಾ ಪೀಠೋಪಕರಣ ತಯಾರಿಕೆ, ಬಸವನಹಳ್ಳಿಯಲ್ಲಿ ಸೀಗೆಹುಡಿ ಸಂಗ್ರಹಣೆ ಮತ್ತು ಸಂಸ್ಕರಣೆ ಹಾಗೂ ಬಿದಿರಿನಿಂದ ಬುಟ್ಟಿ ಮತ್ತು ಕರಕುಶಲ ವಸ್ತುಗಳ ತಯಾರಿಕೆ, ಹಾಗೆಯೇ ಮಡಿಕೇರಿ ತಾಲ್ಲೂಕಿನ ಮದೆ ಗ್ರಾಮದಲ್ಲಿ ಜೇನು ಸಂಗ್ರಹಣೆ ಹಾಗೂ ಸಂರಕ್ಷಣೆ ಜೊತೆಗೆ ಕಾಚಂಪುಳಿ ತಯಾರಿಕೆ ಘಟಕ ಆರಂಭಿಸಲು ಈ ಸಂಘಗಳನ್ನು ಸ್ಥಾಪಿಸಲಾಗಿದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ ಅವರು ಹೇಳಿದರು.  

ಬಸವನ ಹಳ್ಳಿ ವ್ಯಾಪ್ತಿಯ 27 ಸಂಘದಿಂದ 354 ಸದಸ್ಯರು, ನಾಗರಹೊಳೆ 22 ಸಂಘದಿಂದ 298 ಸದಸ್ಯರು, ಮಡಿಕೇರಿ ತಾಲ್ಲೂಕಿನ ಮದೆ ಗ್ರಾಮದ 26 ಸಂಘದಿಂದ 240 ಸದಸ್ಯರು ಇದ್ದು, ಈ ಸಂಘಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕಾರಿ ಮಂಡಳಿ ರಚಿಸಲಾಗಿದೆ ಎಂದು ಶ್ರೀನಿವಾಸ ಅವರು ಮಾಹಿತಿ ನೀಡಿದರು. 

ಕಿರು ಅರಣ್ಯ ಉತ್ಪನ್ನ ಸಂಬಂಧಿಸಿದಂತೆ ಮೂರು ತಾಲ್ಲೂಕಿನ ಮೂರು ಸ್ವಸಹಾಯ ಸಂಘದ 20 ಮಂದಿಗೆ ತರಬೇತಿ ನೀಡಲಾಗುತ್ತದೆ. ಈ 20 ಮಂದಿ ಉಳಿದ ಸದಸ್ಯರಿಗೆ ಮಾಹಿತಿ ನೀಡಲಿದ್ದಾರೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಅವರು ತಿಳಿಸಿದರು. 

‘ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ಪಡೆದು ಮಾತನಾಡಿ ವನ-ಧನ ವಿಕಾಸ ಕೇಂದ್ರ ತೆರೆಯುವ ಸಂಬಂಧ ಮಾತನಾಡಿ ಬುಡಕಟ್ಟು ಜನರು ಅರಣ್ಯದಲ್ಲಿ ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನ ಸಂಬಂಧಿಸಿದಂತೆ ಅರಣ್ಯ ಇಲಾಖೆ ಜೊತೆ  ಸಮನ್ವಯ ಸಾಧಿಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.’  

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಮನ್ವಯ ಅಧಿಕಾರಿ ಕುಮಾರ್ ಅವರು ವನಧನ ಕಾರ್ಯಕ್ರಮ ಅನುಷ್ಠಾನ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. 

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಷಾ, ನಗರಸಭೆಯ ರೇಖಾ, ಬಿಸಿಎಂ ಇಲಾಖೆ ಅಧಿಕಾರಿ ಕವಿತಾ, ಐಟಿಡಿಪಿ ಇಲಾಖೆಯ ವ್ಯವಸ್ಥಾಪಕರಾದ ದೇವರಾಜು, ನವೀನ್, ಇತರರು ಇದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,