ಕಿರು ಆಹಾರ ಸಂಸ್ಕರಣಾ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಿ: ಡಾ.ಬಿ.ಸಿ.ಸತೀಶ
ಮಡಿಕೇರಿ ಡಿ.15: ಕೊಡಗು ಜಿಲ್ಲೆಯಲ್ಲಿ ಕೃಷಿಗೆ ಪೂರಕವಾದ ಸಂಪನ್ಮೂಲಗಳು ವಿಫುಲವಾಗಿದ್ದು, ಆ ದಿಸೆಯಲ್ಲಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಅಭಿವೃದ್ಧಿಗೆ ಗಮನಹರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸಲಹೆ ಮಾಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕಾಫಿ ಮಂಡಳಿ ಹಾಗೂ ಬೆಂಗಳೂರಿನ ಕೆಪೆಕ್ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಆತ್ಮ ನಿರ್ಭರ ಭಾರತ್’ ಅಭಿಯಾನ ಪ್ರಯುಕ್ತ ಪ್ರಧಾನಮಂತ್ರಿ ಅವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ(ಪಿಎಂಎಫ್‍ಎಂಇ) ಯೋಜನೆಯಡಿ ಒಂದು ಜಿಲ್ಲೆಗೆ ಒಂದು ಉತ್ಪನ್ನ ಮತ್ತು ಕೃಷಿ ಮೂಲಭೂತ ಸೌಕರ್ಯ ಯೋಜನೆಯ ಬಗ್ಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ‘ತಾಂತ್ರಿಕ ಕಾರ್ಯಾಗಾರ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ, ಕರಿಮೆಣಸು, ಭತ್ತ, ಬಾಳೆ, ಜೇನು ಕೃಷಿ, ಹೀಗೆ ಹಲವು ಕೃಷಿ, ತೋಟಗಾರಿಕೆ ಸಂಪನ್ಮೂಲಗಳು ಯಥೇಚ್ಛವಾಗಿ ದೊರೆಯುತ್ತಿದ್ದು, ಈ ಸಂಪನ್ಮೂಲಗಳ ಸದ್ಬಳಕೆ ಮತ್ತಷ್ಟು ಕೃಷಿಕರಿಗೆ ದೊರೆಯಬೇಕು ಎಂದರು.
‘ಜಿಲ್ಲೆಯಲ್ಲಿ ಹೋಂ ಮೇಡ್ ಚಾಕಲೇಟ್ ತಯಾರಿಸಲಾಗುತ್ತಿದೆ. ಅದೇ ರೀತಿ ಕಾಫಿಯಿಂದ ಜ್ಯೂಸ್ ಮಾಡಬಹುದೇ ಎಂಬ ಬಗ್ಗೆ ಅವಲೋಕನ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.’
ಕೊಡಗು ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಹೀಗೆ ಹಲವು ಕೃಷಿ ಬೆಳೆಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ ಕೃಷಿಕರು ನೇರವಾಗಿ ತೊಡಗಿಸಿಕೊಂಡು ಆರ್ಥಿಕವಾಗಿ ಮತ್ತಷ್ಟು ಸಫಲರಾಗುವಲ್ಲಿ ಹೆಚ್ಚಿನ ಉತ್ತೇಜನ ನೀಡಬೇಕಿದೆ. ಮೌಲ್ಯಾಧಾರಿತ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಕೃಷಿಯನ್ನು ಲಾಭದಾಯಕವಾಗಿ ಮಾಡಿ ರೈತರು ಅಭಿವೃದ್ಧಿಯತ್ತ ದಾಪುಗಾಲು ಹಾಕುವಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದು ಡಾ.ಬಿ.ಸಿ.ಸತೀಶ ಅವರು ತಿಳಿಸಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಮಾತನಾಡಿ ಕೃಷಿ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿದ್ದು, ಈ ಯೋಜನೆಗಳನ್ನು ರೈತರು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೃಷಿ, ವಾಣಿಜ್ಯ ಚಟುವಟಿಕೆಗೆ ಬ್ಯಾಂಕುಗಳಿಂದಲೂ ಸಹಾಯಧನ ಸೌಲಭ್ಯಗಳು ದೊರೆಯಲಿದ್ದು, ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಕೇಂದ್ರ ಪುರಸ್ಕøತ ಕೃಷಿ ಮೂಲ ಸೌಕರ್ಯ ನಿಧಿಯಡಿಯಲ್ಲಿ ಹಣಕಾಸು ಸೌಲಭ್ಯಗಳು, ಇ-ಮಾರುಕಟ್ಟೆ ವೇದಿಕೆ ಸೇರಿದಂತೆ ಗೋದಾಮುಗಳ ನಿರ್ಮಾಣ, ಪ್ಯಾಕ್ ಹೌಸ್‍ಗಳು, ವಿಂಗಡಣೆ ಮತ್ತು ಶ್ರೇಣೀಕರಣ ಘಟಕಗಳು, ಶೀತಲ ಗೃಹ, ಸಾಗಾಣಿಕೆ ಸೌಲಭ್ಯಗಳು, ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು, ಮೌಲ್ಯಮಾಪನ ಘಟಕಗಳು ಹೀಗೆ ಕೃಷಿ ಚಟುವಟಿಕೆಗಳನ್ನು ಹಾಗೂ ಯೋಜನೆಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು ಮಾತನಾಡಿ ಆತ್ಮ ನಿರ್ಭರ ಭಾರತ ಅಭಿಯಾನ, ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ(ಪಿಎಂಎಫ್‍ಎಂಇ) ಯೋಜನೆ ಒಂದು ಜಿಲ್ಲೆಗೆ ಒಂದು ಉತ್ಪನ್ನದ(ಒಡಿಒಪಿ) ವಿಧಾನ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ಸುವರ್ಣಾವಕಾಶ ಇದೆ ಎಂದರು.
ವ್ಯಕ್ತಿಗತ ಕಿರು ಉದ್ದಿಮೆಗಳಿಗೆ ಯೋಜನೆಯಡಿ ಪ್ರತಿ ಘಟಕಕ್ಕೆ ರೂ.10 ಲಕ್ಷದ ಗರಿಷ್ಟ ಮಿತಿಯೊಂದಿಗೆ ಅರ್ಹ ಯೋಜನಾ ವೆಚ್ಚದ ಶೇ.35 ರಷ್ಟು ಮೌಲ್ಯದ ಸಾಲ ಸಂಪರ್ಕವಿರುವ ಸಹಾಯಧನ ದೊರೆಯಲಿದೆ ಎಂದು ತಿಳಿಸಿದರು.
ರೈತ ಉತ್ಪಾದಕರ ಸಂಸ್ಥೆಗಳು(ಎಫ್‍ಪಿಒ) ಉತ್ಪಾದಕ ಸೊಸೈಟಿಗಳಿಗೆ ಸಹಾಯಧನ: ಅರ್ಹ ಯೋಜನಾ ವೆಚ್ಚದ ಶೇ.35 ರಷ್ಟು ಮೌಲ್ಯದ ಸಾಲ-ಸಂಪರ್ಕವಿರುವ ಸಹಾಯಧನ. ಸ್ವ ಸಹಾಯ ಸಂಘಗಳ ಸದಸ್ಯರಿಗೆ: ಎಸ್‍ಎಚ್‍ಜಿಯ ಪ್ರತಿ ಸದಸ್ಯರಿಗೆ ಕಾರ್ಯನಿರ್ವಹಣಾ ಬಂಡವಾಳ ಹಾಗೂ ಚಿಕ್ಕ ಪರಿಕರಗಳನ್ನು ಖರೀದಿಸಲು ಸಾಲವಾಗಿ ರೂ.40 ಸಾವಿರ ಪ್ರಾಥಮಿಕ ಬಂಡವಾಳ. ಹಾಗೆಯೇ ಸಾಮಾನ್ಯ ಮೂಲಭೂತ ಸೌಕರ್ಯಕ್ಕೆ ಬೆಂಬಲದಡಿ ಅರ್ಹ ಯೋಜನಾ ವೆಚ್ಚದ ಶೇ.35 ರಷ್ಟು ಮೌಲ್ಯದ ಸಾಲ ಸಂಪರ್ಕವಿರುವ ಸಹಾಯಧನ. ಬ್ರಾಂಡಿಂಗ್ ಹಾಗೂ ಮಾರುಕಟ್ಟೆಗೆ ಬೆಂಬಲ: ಅರ್ಹ ಯೋಜನಾ ವೆಚ್ಚದ ಶೇ.50 ರಷ್ಟು. ಸೌಲಭ್ಯಗಳು ದೊರೆಯಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹೇಳಿದರು.
ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಕೆ ಮತ್ತು ತ್ವರಿತಗತಿಯಲ್ಲಿ ಅರ್ಜಿ ವಿಲೇವಾರಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಯೋಜನಾ ಪ್ರಸ್ತಾವನೆ ಸಿದ್ದತೆ ಮತ್ತು ಅರ್ಜಿ ಸಲ್ಲಿಕೆಗೆ ಸಹಾಯ, ಆಹಾರ ಸಂಸ್ಕರಣ ತಾಂತ್ರಿಕತೆಗಳ ಬಗ್ಗೆ ಉಚಿತವಾಗಿ ತರಬೇತಿ ಸಿಎಫ್‍ಟಿಆರ್‍ಐ ಮುಂತಾದ ಸಂಸ್ಥೆಗಳಿಂದ, ಯೋಜನೆಯಡಿ ಒದಗಿಸುವ ಸಾಲಕ್ಕೆ ಕೇಂದ್ರ ಸರ್ಕಾರದಿಂದ ಕ್ರೆಡಿಟ್ ಗ್ಯಾರಂಟಿ, ಒದಗಿಸುವ ಸಾಲಕ್ಕೆ ಶೇ.2 ರಷ್ಟು ಬಡ್ಡಿ ಸಹಾಯಧನ ಕಲ್ಪಿಸಲಾಗುತ್ತದೆ ಎಂದರು.
ಕೆಪೆಕ್‍ನ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಎಚ್.ಬಂಥನಾಳ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಆಯ್ಕೆಯಾಗಿದ್ದು, ಕೃಷಿಕರು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು.
ಕೆಪೆಕ್ ಸಂಸ್ಥೆಯ ರಾಜ್ಯ ಯೋಜನಾ ವ್ಯವಸ್ಥಾಪಕರಾದ ದೀಪಕ್ ಸಿನ್ಹಾ ಅವರು ಮಾತನಾಡಿ ಕಾಫಿ ಸೇರಿದಂತೆ ವಿವಿಧ ಬೆಳೆಗಳಿಗೆ ಆತ್ಮನಿರ್ಭರ ಯೋಜನೆಯಡಿ ಸಹಾಯಧನ ದೊರೆಯಲಿದ್ದು, ಇವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು.
ಸಿಎಪ್‍ಟಿಆರ್‍ಐನ ತರಬೇತಿ ಸಂಯೋಜಕರಾದ ಹೃಷಿಕೇಶ್ ಎ.ತವನಂದಿ ಅವರು ಕಾಫಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಮಾಹಿತಿ ನೀಡಿ ಮಾತನಾಡಿ ಆಹಾರ ಗುಣಮಟ್ಟ ಕಾಪಾಡುವಲ್ಲಿ ಹೆಚ್ಚಿನ ಎಚ್ಚರವಹಿಸಬೇಕು. ದೇಶೀಯ ಕಚ್ಚಾ ಉತ್ಪನ್ನಗಳನ್ನು ಬಳಸಿಕೊಂಡು ಉಳಿದ ಉತ್ಪನ್ನಗಳ ಉತ್ತೇಜನಕ್ಕೆ ಶ್ರಮಿಸಬೇಕಿದೆ ಎಂದರು.
ಸಿಎಫ್‍ಟಿಆರ್‍ಐನ ರಾಘವೇಂದ್ರ ಅವರು ಮಾತನಾಡಿ ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಉತ್ತೇಜನಕ್ಕೆ ಒತ್ತು ನೀಡಬೇಕಿದೆ. ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾಲಯ ಕೃಷಿ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡಿದೆ ಎಂದರು.
ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಶಿವಕುಮಾರ್ ಸ್ವಾಮಿ ಅವರು ಕಾಫಿಯಲ್ಲಿ ಮೌಲ್ಯವರ್ಧನೆ ಮತ್ತು ಅವಕಾಶಗಳ ಕುರಿತು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಶೇ.29 ರಷ್ಟು ಕಾಫಿ ಕೃಷಿ ಕೈಗೊಳ್ಳಲಾಗಿದೆ ಎಂದರು.
‘ಕೊಡಗು ಜಿಲ್ಲೆ ಕಾಫಿ ಬೆಳೆ ಉತ್ಪಾದನೆಯಲ್ಲಿ ರಾಜ್ಯದಲ್ಲಿ ಶೇ.50ರಷ್ಟು ಮತ್ತು ರಾಷ್ಟ್ರದಲ್ಲಿ ಶೇ.35 ರಷ್ಟು ಉತ್ಪಾದನೆ ಮಾಡಲಾಗುತ್ತಿದೆ. ರೈತರಿಗೆ ಹೆಚ್ಚಿನ ಸಹಾಯಧನ ಕಲ್ಪಿಸುವಲ್ಲಿ ಅಗತ್ಯ ಕ್ರಮವಹಿಸಲಾಗಿದೆ ಎಂದರು.’
ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕರಾದ ಬಿ.ವಿ.ರಮೇಶ್ ಬಾಬು ಅವರು ಮಾತನಾಡಿ ಪ್ರಧಾನಮಂತ್ರಿ ಅವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಹಾಗೂ ಕೃಷಿ ಮೂಲಭೂತ ಸೌಕರ್ಯ ಯೋಜನೆಯಡಿ ನಬಾರ್ಡ್‍ನಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕರಾದ ಲಕ್ಷ್ಮೀಕಾಂತ ನಾಯಕ್ ಪಿ.ಎಂಎಫ್‍ಎಂಇ ಯೋಜನೆಗಳಲ್ಲಿ ಬ್ಯಾಂಕ್ ವತಿಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಸಿ.ಎನ್.ರಘು ಅವರು ಆಹಾರ ಸಂಸ್ಕರಣಾ ಘಟಕಗಳು, ಕೈಗಾರಿಕಾ ನೀತಿಗಳು, ಕೈಗಾರಿಕಾ ಕೇಂದ್ರಗಳಿಂದ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕೊಡಗು ಪ್ಲಾಂಟರ್ಸ್ ಅಸೋಷಿಯೇಷನ್‍ನ ಅಧ್ಯಕ್ಷರಾದ ಬಿ.ವಿ.ಮೋಹನ್ ದಾಸ್ ಅವರು ಪ್ರಶ್ನೋತ್ತರ ಅವಧಿಯಲ್ಲಿ ಕೃಷಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯಬೇಕು. ಕೃಷಿಕರೇ ನೇರವಾಗಿ ತಾವು ಉತ್ಪಾಧಿಸಿದ ಉತ್ಪನ್ನಗಳನ್ನು ರಫ್ತು ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ಉತ್ತೇಜನ ನೀಡಬೇಕಿದೆ ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮತ್ತು ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಕೃಷಿ ಇಲಾಖೆಯಿಂದ ಹೊರ ತರಲಾಗಿರುವ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ(ಪಿಎಂಎಫ್‍ಎಂಇ) ಯೋಜನೆಯ ಕರಪತ್ರ ಹಾಗೂ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಿದರು.
ಕಾರ್ಯಗಾರ ಆರಂಭಕ್ಕೂ ಮೊದಲು ರೈತಗೀತೆ ಹಾಡಲಾಯಿತು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್, ಉದ್ದಿಮೆದಾರರು ಇತರರು ಇದ್ದರು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಗಿರೀಶ್, ಸಹಾಯಕ ನಿರ್ದೇಶಕರಾದ ನಾರಾಯಣ ರೆಡ್ಡಿ ಅವರು ನಿರೂಪಿಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಸ್ವಾಗತಿಸಿದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network