Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾನೂನು ಸೇವಾ ಪ್ರಾಧಿಕಾರದ ಸೌಲಭ್ಯ ಪಡೆದುಕೊಳ್ಳಿ: ಎ.ಎಸ್.ಬೋಪಣ್ಣ

ಕಾನೂನು ಸೇವಾ ಪ್ರಾಧಿಕಾರದ ಸೌಲಭ್ಯ ಪಡೆದುಕೊಳ್ಳಿ: ಎ.ಎಸ್.ಬೋಪಣ್ಣ 


ಮಡಿಕೇರಿ ಡಿ.27: ಕಾನೂನು ಸೇವಾ ಪ್ರಾಧಿಕಾರವು ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದು, ಕಾನೂನು ಸೇವಾ ಪ್ರಾಧಿಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರು ಹೇಳಿದ್ದಾರೆ.  

     ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ವತಿಯಿಂದ ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಸೋಮವಾರ ನಡೆದ ಕಾನೂನು ಸೇವಾ ಶಿಬಿರದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 

     ಕಾನೂನು ಸೇವಾ ಪ್ರಾಧಿಕಾರದಿಂದ ಶ್ರೀ ಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು, ಬಡವರಿಗೆ ಉಚಿತವಾಗಿ ಕಾನೂನು ನೆರವು ಕಲ್ಪಿಸುವುದು, ರಾಜೀ ಸಂಧಾನ ಹಾಗೂ ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಹೀಗೆ ಹಲವು ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.  

     ಸರ್ಕಾರದ ನಾನಾ ಇಲಾಖೆಯ ಹಲವು ಅಭಿವೃದ್ಧಿ ಕಾರ್ಯಕ್ರಮ ತಲುಪಿಸುವ ನಿಟ್ಟಿನಲ್ಲಿ ವಸ್ತುಪ್ರದರ್ಶನ ಏರ್ಪಡಿಸಿ ಆಯಾಯ ಇಲಾಖೆಯ ಮಾಹಿತಿಯನ್ನು ಕರಪತ್ರ, ಬಿತ್ತಿ ಪತ್ರ, ಬ್ಯಾನರ್, ನಾಮಫಲಕ ಮೂಲಕ ಕಟ್ಟಕಡೆಯ ವ್ಯಕ್ತಿಗೂ ಮಾಹಿತಿ ತಿಳಿಯುವಂತಾಗಲು ವಸ್ತು ಪ್ರದರ್ಶನ ಏರ್ಪಡಿಸಿ ಮಾಹಿತಿ ನೀಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅವರು ತಿಳಿಸಿದರು. 

     ನಮಗಾಗಿ ಏನಾದರೂ ಒಳ್ಳೆಯದು ಮಾಡಿಕೊಳ್ಳುತ್ತೇವೆ. ಆದರೆ ಇತರರಿಗಾಗಿ ಏನು ಮಾಡುತ್ತೇವೆ ಎಂಬುದು ಮಹಾತ್ಮ ಗಾಂಧೀಜಿಯವರ ಧ್ಯೇಯವಾಗಿತ್ತು, ಆ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಜನ ಸಾಮಾನ್ಯರಿಗೆ ಕಾನೂನು ಸೇವೆಗಳು ಉಚಿತವಾಗಿ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ನುಡಿದರು. 

     ಸರ್ಕಾರದ ಕಾರ್ಯಕ್ರಮಗಳು ಜನ ಸಾಮಾನ್ಯರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ವಸ್ತು ಪ್ರದರ್ಶನದ ಒಂದೊಂದು ಮಳಿಗೆಯು ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ. ಹಲವು ಇಲಾಖೆಗಳು ವಸ್ತು ಪ್ರದರ್ಶನ ಮಳಿಗೆ ಏರ್ಪಡಿಸಿ ಉಪಯುಕ್ತ ಮಾಹಿತಿ ಒಳಗೊಂಡಿರುವುದು ವಿಶೇಷವಾಗಿದ್ದು, ಇದರ ಪ್ರಯೋಜನ ಪ್ರತಿಯೊಬ್ಬ ಶ್ರೀಸಾಮಾನ್ಯರು ಪಡೆದುಕೊಳ್ಳುವಂತಾಗಬೇಕು ಎಂದು ಎ.ಎಸ್.ಬೋಪಣ್ಣ ಅವರು ಸಲಹೆ ಮಾಡಿದರು.   

     ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಬಿ.ವೀರಪ್ಪ ಅವರು ಮಾತನಾಡಿ ಕಾನೂನು ಸೇವಾ ಪ್ರಾಧಿಕಾರದಿಂದ ಲೋಕ ಅದಾಲತ್ ಮತ್ತು ರಾಜೀ ಸಂಧಾನದ ಮೂಲಕ ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿ, ಸರ್ಕಾರಕ್ಕೆ ಕೋಟಿ ಗೂ ಹೆಚ್ಚು ಹಣ ಉಳಿಸಲಾಗಿದೆ ಎಂದು ಮಾಹಿತಿ ನೀಡಿದರು.   

     ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳು ಪ್ರತಿಯೊಬ್ಬ ಕಟ್ಟಕಡೆಯ ಜನರಿಗೂ ತಲುಪಿಸುವಲ್ಲಿ ಶ್ರಮಿಸಲಾಗುತ್ತದೆ. ಆ ನಿಟ್ಟಿನಲ್ಲಿ ಕಾನೂನು ಅರಿವು ನೆರವನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಅರಿವು ಇರಬೇಕು. ಕಾನೂನಿನ ಅರಿವು ನೆರವನ್ನು ಪಡೆದು ಒಳ್ಳೆಯ ಪ್ರಜೆಗಳಾಗಿ ಬದುಕಬೇಕು ಎಂದು ಬಿ.ವೀರಪ್ಪ ಅವರು ಕರೆ ನೀಡಿದರು.  

     ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬುದು ಸಂವಿಧಾನದ ಧ್ಯೇಯವಾಗಿದೆ. ಎಲ್ಲಾ ನಾಗರಿಕರು ಗೌರವಯುತವಾಗಿ ಸಮಾಜದಲ್ಲಿ ಬದುಕಬೇಕು. ಆ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಕಾನೂನಿನ ಅರಿವು ಮೂಡಿಸುತ್ತಿದೆ ಎಂದರು. 

     ನ್ಯಾಯದಿಂದ ಯಾರೂ ಸಹ ವಂಚಿತರಾಗಬಾರದು. ಹಲವು ಸಂದರ್ಭದಲ್ಲಿ ತಿಳುವಳಿಕೆ ಕೊರತೆಯಿಂದ ಬಡವರು, ನಿರ್ಗತಿಕರು, ನ್ಯಾಯಧಾನದಿಂದ ವಂಚಿತರಾಗುತ್ತಾರೆ. ಇದನ್ನು ತಪ್ಪಿಸಲು ಕಾನೂನು ಸೇವಾ ಪ್ರಾಧಿಕಾರ ಜಾಗೃತಿ ಮೂಡಿಸುತ್ತಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅವರು ವಿವರಿಸಿದರು.  

     ಎಲ್ಲೆಡೆ ಕಾನೂನಿನ ಅರಿವು ನೆರವು ದೊರೆಯುತ್ತಿದೆ. ಆಶಾ ಕಾರ್ಯಕರ್ತರು ಭೂಸೇನೆ ಮಾದರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾನೂನು ಶ್ರೀಸಾಮಾನ್ಯರಿಗೆ ತಲುಪಿಸುವಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ವೀರಪ್ಪ ಅವರು ನುಡಿದರು. 

     ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಅರಿವು ಜಾಗೃತಿ ಹಮ್ಮಿಕೊಳ್ಳುವುದರ ಜೊತೆಗೆ ಲೋಕ ಅದಾಲತ್, ರಾಜೀ ಸಂಧಾನ, ಸಾಕ್ಷರತಾ ರಥದ ಮೂಲಕ ಜಾಗೃತಿ, ಜನತಾ ನ್ಯಾಯಾಲಯ ಮೂಲಕ ಹಲವು ಪ್ರಕರಣಗಳ ಇತ್ಯರ್ಥ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನೆರವಿಗೆ ಧಾವಿಸುವುದು ಹೀಗೆ ಹಲವು ಕಾರ್ಯಗಳನ್ನು ಕೈಗೊಂಡು ಜನಸಾಮಾನ್ಯರಿಗೆ ಕಾನೂನು ಸೇವಾ ಪ್ರಾಧಿಕಾರ ಹತ್ತಿರವಾಗಿದೆ ಎಂದರು. 

    ‘ಕೊಡಗು ಜಿಲ್ಲೆಯ ಜನರು  ರಾಷ್ಟ್ರದ ರಕ್ಷಣಾ ಕ್ಷೇತ್ರದಲ್ಲಿ, ಹಾಗೆಯೇ ರಾಷ್ಟ್ರದ ಕಾನೂನು ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದು ಬಿ.ವೀರಪ್ಪ ಅವರು ಹೇಳಿದರು.’  

     ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿನರಾಳ್ಕರ್ ಭೀಮರಾವ್ ಲಗಮಪ್ಪ ಅವರು ಮಾತನಾಡಿ ಕಾನೂನು ಸೇವಾ ಪ್ರಾಧಿಕಾರವು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಾವಿರಕ್ಕೂ ಹೆಚ್ಚು ಕಾನೂನು ಅರಿವು ಶಿಬಿರಗಳನ್ನು ಏರ್ಪಡಿಸಿ 4 ಲಕ್ಷಕ್ಕೂ ಹೆಚ್ಚು ಜನರಿಗೆ ಮಾಹಿತಿ ನೀಡಲು ಶ್ರಮಿಸಿದೆ. ಹಿರಿಯರು, ಮಹಿಳೆಯರು, ಆದಿವಾಸಿಗಳು ಹೀಗೆ ಹಲವು ಜನ ಸಾಮಾನ್ಯರಿಗೆ ಕಾನೂನು ಅರಿವು ಬಗ್ಗೆ ಜನ ಜಾಗೃತಿ ಮೂಡಿಸಲಾಗಿದೆ ಎಂದು ಅವರು ಹೇಳಿದರು. 

     ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಹೀಗೆ ಹಲವರ ಸಹಕಾರದಿಂದ ಉಚಿತ ಕಾನೂನು ನೆರವು ಏರ್ಪಡಿಸಿ ಮಾಹಿತಿ ನೀಡಲಾಗುತ್ತದೆ ಎಂದರು. 

     ರಾಜ್ಯ ಮತ್ತು ರಾಷ್ಟ್ರ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿಯೂ ಸಹ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಬಡವರು, ನಿರ್ಗತಿಕರು ಹೀಗೆ ಎಲ್ಲಾ ಜನ ಸಾಮಾನ್ಯರಿಗೆ ನ್ಯಾಯ ಒದಗಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರ ಕೆಲಸ ಮಾಡುತ್ತಿದೆ ಎಂದರು. 

     ಕಾನೂನು ಅರಿವು ಮೂಡಿಸುವುದು, ಕಾನೂನು ಸೇವೆ ಒದಗಿಸುವುದು, ಕಾಲ ಕಾಲಕ್ಕೆ ಲೋಕ ಅದಾಲತ್ ನಡೆಸಿ ಜನಸಾಮಾನ್ಯರಿಗೆ ಶೀಘ್ರ ನ್ಯಾಯ ಒದಗಿಸುವುದು, ಅತಿವೃಷ್ಟಿ ಸಂದರ್ಭದಲ್ಲಿ ನೊಂದವರಿಗೆ ಸ್ಪಂದಿಸುವುದು, ವಕೀಲರ ಸಹಕಾರ ಪಡೆದು ಸಂತ್ರಸ್ತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಕೀಲರ ಪಾತ್ರ ಮಹತ್ತರವಾಗಿದೆ ಎಂದು ಅವರು ಹೇಳಿದರು. 

    ಕಾರ್ಯಕ್ರಮದ ನಂತರ ವಿವಿಧ ಇಲಾಖೆಗಳಿಂದ ಪ್ರೋತ್ಸಾಹಧನ ಚೆಕ್, ಪ್ರಮಾಣ ಪತ್ರ, ಗುರುತಿನ ಚೀಟಿ, ಕಿಟ್ ಮತ್ತಿತರವನ್ನು ಇದೇ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ಎ.ಎಸ್.ಬೋಪಣ್ಣ ಅವರು ವಿತರಿಸಿದರು.  

     ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಕಾನೂನು ಇಲಾಖೆಯ ರಿಜಿಸ್ಟ್ರಾರ್ ಭರತ್ ಕುಮಾರ್, ವಕೀಲರ ಸಂಘದ ಅಧ್ಯಕ್ಷರಾದ ಕೆ.ಡಿ.ದಯಾನಂದ, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಸುಬ್ರಮಣ್ಯ, ಡಿವೈಎಸ್‍ಪಿ ಗಜೇಂದ್ರ ಪ್ರಸಾದ್, ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮೀ, ತಹಶೀಲ್ದಾರ್ ಮಹೇಶ್, ನ್ಯಾಯಾಧೀಶರು, ನ್ಯಾಯವಾದಿಗಳು ಇತರರು ಇದ್ದರು. 

      ವಕೀಲರ ಸಂಘದ ಅಧ್ಯಕ್ಷರಾದ ಕೆ.ಡಿ.ದಯಾನಂದ ಸ್ವಾಗತಿಸಿದರು, ಅನಿತಾ ನಿರೂಪಿಸಿದರು. ಶಂಕರಯ್ಯ ನಾಡಗೀತೆ ಹಾಡಿದರು.ಎನ್.ಸುಬ್ರಮಣ್ಯ ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,