ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಿ: ಡಾ.ಬಿ.ಸಿ.ಸತೀಶ
ಮಡಿಕೇರಿ ಡಿ.23: ಕೊಡಗು ಜಿಲ್ಲೆಯ ಕುಗ್ರಾಮ ಹಾಗೂ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳು ಇನ್ನೂ ವಿದ್ಯುತ್ ಸಂಪರ್ಕ ಪಡೆಯದಿದ್ದಲ್ಲಿ, ಅಂತಹ ಕುಟುಂಬಗಳ ಪಟ್ಟಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಒದಗಿಸಿದ್ದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದಿಂದ ವಿದ್ಯುತ್ ಕಲ್ಪಿಸಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಬೆಳಕು ಯೋಜನೆ ಹೀಗೆ ವಿವಿಧ ಕಾರ್ಯಕ್ರಮದಡಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಬಹುದಾಗಿದ್ದು, ಆ ನಿಟ್ಟಿನಲ್ಲಿ ಪರಿಶಿಷ್ಟ ಕುಟುಂಬಗಳ ಪಟ್ಟಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಈ ಬಗ್ಗೆ ಬೆಳಕು ಚೆಲ್ಲಿದ ಸಮಿತಿ ಸದಸ್ಯರಾದ ಪಳನಿ ಪ್ರಕಾಶ್ ಅವರು ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡದ ಕುಟುಂಬದವರು ವಾಸ ಮಾಡುತ್ತಿದ್ದು, ವಿದ್ಯುತ್ ಸಂಪರ್ಕ ಇನ್ನೂ ಒದಗಿಸಿಲ್ಲ. ಹಾಗೆಯೇ ಮೂಲ ಸೌಕರ್ಯದಿಂದ ವಂಚಿತರಾಗಿದ್ದು, ಇವರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕಿದೆ ಎಂದು ಅವರು ಕೋರಿದರು.
ಸಮಿತಿ ಸದಸ್ಯರಾದ ಮುತ್ತಪ್ಪ ಅವರು ಗಣಗೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಲಕ್ಕೆರೆ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯ ಕುಟುಂಬಗಳು ವಾಸಮಾಡುತ್ತಿದ್ದು, ಈ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲ. ಆದ್ದರಿಂದ ಸ್ಮಶಾನ ಭೂಮಿ ಕಾಯ್ದಿರಿಸಬೇಕು ಎಂದು ಮನವಿ ಮಾಡಿದರು.
ಮತ್ತೊಬ್ಬ ಸಮಿತಿ ಸದಸ್ಯರಾದ ಸುಕುಮಾರ್ ಅವರು ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯ ತೊಂಬತ್ತು ಮನೆ ಗ್ರಾಮಕ್ಕೆ ಸ್ಮಶಾನ ಭೂಮಿ ಗುರುತಿಸಿದ್ದು, ಗ್ರಾ.ಪಂ.ಗೆ ಆರ್‍ಟಿಸಿ ನೀಡಬೇಕಿದೆ ಎಂದು ಅವರು ಗಮನ ಸೆಳೆದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೂಡಲೇ ಪರಿಶೀಲಿಸಿ ಆರ್‍ಟಿಸಿ ಒದಗಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ಸೋಮವಾರಪೇಟೆ ತಾಲ್ಲೂಕು ಕೇಂದ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಇನ್ನೂ ಉದ್ಘಾಟನೆಯಾಗಿಲ್ಲ ಎಂದು ಮುತ್ತಪ್ಪ ಅವರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
‘ಜಿಲ್ಲೆಯ ಗ್ರಾ.ಪಂ.,ಪ.ಪಂ.ಹಾಗೂ ನಗರಸಭೆಯಲ್ಲಿ ಹೊರಗುತ್ತಿಗೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಮಾಡುವಂತಾಗಲು ಅಗತ್ಯ ಕ್ರಮವಹಿಸಬೇಕಿದೆ ಎಂದು ಪಳನಿ ಪ್ರಕಾಶ್ ಅವರು ಕೋರಿದರು.’
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ‘ಪ್ರತಿಮೆ’ ಇದುವರೆಗೆ ನಿರ್ಮಾಣ ಆಗಿಲ್ಲ, ಪ್ರತಿಮೆ ನಿರ್ಮಿಸುವಂತಾಗಲು ಹಲವು ವರ್ಷಗಳಿಂದ ಮನವಿ ಮಾಡುತ್ತ ಬರಲಾಗಿದೆ, ಆದರೆ ಇದುವರೆಗೆ ಕಾರ್ಯಗತವಾಗಿಲ್ಲ ಎಂದು ಪಳನಿ ಪ್ರಕಾಶ ಅವರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮವಹಿಸುವಂತೆ ಪೌರಾಯುಕ್ತರಿಗೆ ಸಲಹೆ ಮಾಡಿದರು.
ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸಭೆ: ಗೃಹ ಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಗುಂಪು ಮನೆ ನಿರ್ಮಿಸುವ ಸಂಬಂಧ ತಕ್ಷಣವೇ ಗುದ್ದಲಿ ಪೂಜೆಗೆ ಅಗತ್ಯ ಕ್ರಮವಹಿಸುವಂತೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದರು.
ಗೃಹ ಭಾಗ್ಯ ಯೋಜನೆಯಡಿ ವಸತಿ ರಹಿತ ಪೌರ ಕಾರ್ಮಿಕರಿಗೆ ಗುಂಪು ಮನೆ ನಿರ್ಮಿಸಲು ಈಗಾಗಲೇ ಜಾಗ ಗುರುತಿಸಲಾಗಿದ್ದು, ಲಭ್ಯವಿರುವ ಹಣದಲ್ಲಿ ಮನೆ ಆರಂಭಕ್ಕೆ ಚಾಲನೆ ನೀಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಈ ಬಗ್ಗೆ ಮಾತನಾಡಿದ ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ಈಗಾಗಲೇ ಉಕ್ಕುಡ ಬಳಿ ಒಂದು ಎಕರೆ ಜಾಗ ಗುರುತಿಸಲಾಗಿದ್ದು, 16 ವಸತಿ ರಹಿತ ಕುಟುಂಬಗಳಿಗೆ ಗುಂಪು ಮನೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸದ್ಯ ನಗರಸಭೆಯಲ್ಲಿ 14 ಲಕ್ಷ ರೂ. ಅನುದಾನವಿದ್ದು, ಒಂದು ಗುಂಪು ಮನೆ(ಜಿ+1) ನಿರ್ಮಿಸಬಹುದಾಗಿದೆ. ಸಿಎಸ್‍ಆರ್ ನಿಧಿಗಾಗಿ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಲಭ್ಯವಿರುವ ಅನುದಾನವನ್ನು ಬಳಸಿಕೊಳ್ಳಲು ಮುಂದಾಗಬೇಕು. ಹಿರಿಯ ಪೌರಕಾರ್ಮಿಕರಿಗೆ ವಸತಿ ಕಲ್ಪಿಸಲು ಪ್ರಯತ್ನಿಸುವಂತೆ ಪೌರಾಯುಕ್ತರಿಗೆ ಸಲಹೆ ಮಾಡಿದರು.
ಸಫಾಯಿ ಕರ್ಮಚಾರಿ/ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‍ಗಳ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಪುಟ್ಟಮ್ಮ ಅವರು ಮನೆ ಇಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಮಳೆಗಾಲದಲ್ಲಂತೂ ಬದುಕು ನರಕಯಾತನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರ ಗಮನ ಸೆಳೆದರು.
ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ಉನ್ನತ ಶಿಕ್ಷಣ ಪಡೆಯುವ ಪೌರಕಾರ್ಮಿಕ ಕುಟುಂಬದ ವಿದ್ಯಾರ್ಥಿಗಳಿಗೆ ನಗರಸಭೆಯಿಂದ ಲ್ಯಾಪ್‍ಟಾಪ್ ಒದಗಿಸಲಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಳಚರಂಡಿ/ ಸೆಪ್ಟಿಕ್ ಟ್ಯಾಂಕ್‍ಗಳನ್ನು ಆಧುನಿಕ ಯಂತ್ರಗಳ ಮೂಲಕ ಸ್ವಚ್ಛಗೊಳಿಸಲಾಗುತ್ತದೆ. ಸಕ್ಕಿಂಗ್ ಯಂತ್ರವನ್ನು ಬಳಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಪಿ.ಶ್ರೀನಿವಾಸ್ ಅವರು ಮಾಹಿತಿ ನೀಡಿದರು.
ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ರಂಗಸ್ವಾಮಿ ಅವರು ಖಾಯಂ ಮತ್ತು ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡಬಾರದು. ಬೆದರಿಕೆ ಉಂಟು ಮಾಡಬಾರದು ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಗ್ರಾ.ಪಂ.ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾರ್ಯ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಸತಿ, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಮತ್ತು ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅನುಪಾಲನಾ ವರದಿ ಸಂಬಂಧ ಮಾಹಿತಿ ನೀಡಿದರು.
ಪೌರ ಕಾರ್ಮಿಕ ಕುಟುಂಬದ 18 ರಿಂದ 45 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ವಾಹನ ಚಾಲನ, ಕಂಪ್ಯೂಟರ್, ಟೈಲರಿಂಗ್, ಮೆಕಾನಿಕ್, ಬ್ಯೂಟಿಪಾರ್ಲರ್, ಹೀಗೆ ವಿವಿಧ ಸ್ವ ಉದ್ಯೋಗ ತರಬೇತಿಯನ್ನು ಕಾಬ್‍ಸೆಟ್ ಇಲ್ಲಿ ನೀಡಲಾಗುತ್ತದೆ ಎಂದು ಶೇಖರ್ ಅವರು ಮಾಹಿತಿ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತ ಅಧಿಕಾರಿ ಡಾ.ನಂಜುಂಡೇಗೌಡ, ಜಿ.ಪಂ. ಉಪ ಕಾರ್ಯದರ್ಶಿ ಲಕ್ಷ್ಮೀ, ಮುಖ್ಯ ಯೋಜನಾಧಿಕಾರಿ ಶ್ರೀಕಂಠಮೂರ್ತಿ, ಲೋಕೋಪಯೋಗಿ ಇಲಾಖೆಯ ಇಇ ನಾಗರಾಜು, ತಹಶೀಲ್ದಾರ್ ಗೋವಿಂದರಾಜು, ಮಹೇಶ್, ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ್, ಪ.ಪಂ.ಮುಖ್ಯಾಧಿಕಾರಿಗಳಾದ ಕೃಷ್ಣ ಪ್ರಸಾದ್(ಕುಶಾಲನಗರ), ಚಂದ್ರಕುಮಾರ್ (ವಿರಾಜಪೇಟೆ), ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಚಂದ್ರಶೇಖರ್, ಇತರರು ಇದ್ದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network