Header Ads Widget

Responsive Advertisement

ಸಾಕ್ಷ್ಯಗಳನ್ನು ಮಾತಾಡಲು ಬಿಡಿ; "ಅಮರಸುಳ್ಯ-೧೮೩೭” ಬ್ರಿಟಿಶ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ

ಸಾಕ್ಷ್ಯಗಳನ್ನು ಮಾತಾಡಲು ಬಿಡಿ

"ಅಮರಸುಳ್ಯ-೧೮೩೭” ಬ್ರಿಟಿಶ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ


ಶ್ರೀ ಕುಡೆಕಲ್ಲು ರವೀಂದ್ರನಾಥ ವಿದ್ಯಾಧರ (ಕೆ.ಆರ್. ವಿದ್ಯಾಧರ) ಇವರು ರಚಿಸಿರುವ ಸಂಶೋಧನಾ ಕೃತಿ “ಬ್ರಿಟಿಶ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ” ಈ ಕೃತಿಗೆ ಮುನ್ನುಡಿ ಬರೆದವರು ಡಾ. ವಿಜಯ್ ಪೂಣಚ್ಚ ತಂಬಂಡ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ. ಈ ಮುನ್ನುಡಿ ಬರಹಗಾರರನ್ನು ವಿಶೇಷವಾಗಿ ಉಲ್ಲೇಖಿಸಿದಕ್ಕೆ ಒಂದು ಕಾರಣವಿದೆ. ಅವರ ಮುನ್ನುಡಿಯ ನುಡಿ ಅಕ್ಷರಗಳೇ ವಿದ್ಯಾಧರರ ೧೫೦ ಪುಟಗಳನ್ನು ಕೆಲವೇ ಪುಟಗಳಲ್ಲಿ ತೆರೆದಿಟ್ಟಿರುವುದು, ವಿದ್ಯಾಧರರ ಪ್ರತೀ ಅಕ್ಷರಗಳನ್ನು ಗಮನಿಸಿಕೊಂಡು ಬರೆದ ಮುನ್ನುಡಿ ಎಂಬುದರಲ್ಲಿ ಯಾರೂ ಎರಡು ಮಾತೆತ್ತುವಂತಿಲ್ಲ.

ಸಾಹಿತಿ, ವಕೀಲರೂ, ಸಂಶೋಧಕರೂ ಆಗಿರುವ ಸುಳ್ಯ ಭಾಗದ ಬಡ್ಡಡ್ಕ ಗ್ರಾಮದ ವಿದ್ಯಾಧರ ಕರಿಕೋಟು ಬಳಗವಲ್ಲದೆ ಆತ್ಮೀಯ ಬಳಗದಲ್ಲಿ ಸಹ ಕೆ.ಆರ್.ವಿ. ಎಂದೇ ಚಿರಪರಿಚಿತ. ಕೊಡಗು ರಾಜರ ಆಡಳಿತ ಹಾಗೆಯೇ ಬ್ರಿಟಿಶ್ ಪ್ರಾಬಲ್ಯಗಳ ನಡುವಿನ ರಾಜಕೀಯ ನಂಟುಗಳ ಬಿಡಿ ಅಕ್ಷರಗಳು “ಅಮರಸುಳ್ಯ-೧೮೩೭” ತೆರೆದಿಡುತ್ತದೆ.

ಸಾಕ್ಷ್ಯಗಳನ್ನು ಮಾತಾಡಲು ಬಿಡಿ” ಇದು ಪುಸ್ತಕ ಪ್ರಕಾಶಕರಾದ ಬಂಟಮಲೆ ಎ.ಕೆ. ಹಿಮಕರರವರು ಅವರ ನುಡಿಗಳಲ್ಲಿ ಬಳಸಿದ ಪದ. ಇದಂತೂ “ಅಮರಸುಳ್ಯ ೧೮೩೭” ರ ಇಡೀ ಚರಿತ್ರೆಯ ಆಳ ಅಗಲಗಳಿಗೆ ಹಿಡಿದ ಕೈಗನ್ನಡಿಯಂತಿದೆ. ಈ ಸಂದರ್ಭದಲ್ಲಿ ಅಗಲಿ ಹೋದ ಎ.ಕೆ. ಸುಬ್ಬಯ್ಯನವರು ನೆನಪಿಗೆ ಬರುತ್ತಾರೆ. ಟಿಪ್ಪುಸುಲ್ತಾನ್ ಬಗ್ಗೆ ಪರವಾಗಿ ಮಾತಾಡುವವರನ್ನು ವಿರೋಧಿಸುವವರನ್ನೂ ಕೂಡ. 

ವಿದ್ಯಾಧರ ಕುಡೆಕಲ್ಲು ಇವರು ಹೊಸ ಸಾಕ್ಷ್ಯಗಳ ಬೆಳಕಲ್ಲಿ ಇತಿಹಾಸವನ್ನು ಹೆಚ್ಚು ಸಮರ್ಥವಾಗಿ ಪುನರ್ರಚನೆ ಮಾಡಿದ್ದಾರೆ. ಇದು ವರುಷಗಳ ಕಾಲದ ಸುತ್ತಾಟ ಸಂಶೋಧನೆ ಹಲವಾರು ಪತ್ರಗಾರಗಳಲ್ಲಿರುವ ಕಡತಗಳ ಧೂಳೊರೆಸಿ ಸಂಗ್ರಹಿಸಿದ ಇತಿಹಾಸದ ಹೊಸ ಅಕ್ಷರಗಳೆಂದರೆ ತಪ್ಪಾಗಲಿಕ್ಕಿಲ್ಲ.

ಅಮರಸುಳ್ಯ ೧೮೩೭” ಪುಸ್ತಕ ಮತ್ತೂ ಒಂದು ಮಾತನ್ನು ಹೇಳುತ್ತದೆ. ಅದು “ಕೆಳಕೊಡಗು ಹಾಗೂ ಮೇಲಿನ ಕೊಡಗು”, ಹಾಗಿದ್ದಾಗ “ಬಯಲು ಕೊಡಗು” ಯಾಕಿಲ್ಲ ಎಂಬ ಪ್ರಶ್ನೆ ಮನಸ್ಸಿನೊಳಗೆ ಹಾದು ಹೋಗುವುದು ಸಹಜ. ಯಾಕೆಂದರೆ ಪಿರಿಯಾಪಟ್ಟಣದವರೆಗೆ ಹಳೇ ಕೊಡಗಿನ ಗಡಿ ಇತ್ತು ಎಂಬುದು ಇತಿಹಾಸದ ಪುಟಗಳ ಮಾತು ಹಾಗಾಗಿ. ಕೊಡಗಿನಲ್ಲಿ ಟಿಪ್ಪು ಆಡಳಿತದಲ್ಲಿ ಭೂಕಂದಾಯ ಆಗಿನ ರೈತರನ್ನು ಕೆರಳಿಸಿದರೆ, ೧೮೩೭ ಬ್ರಿಟಿಷರ ವಿರುದ್ಧ ಅಂದರೆ ವಸಾಹತುಶಾಹಿಗಳ ವಿರುದ್ಧದ ಹೋರಾಟ.

ವಿದ್ಯಾಧರರು ವಿಶೇಷವಾಗಿ ಕೆಳಕೊಡಗಿನ ಕೆಲ ಭಾಗಗಳನ್ನು ಬ್ರಿಟಿಷರು ದಕ್ಷಿಣ ಕನ್ನಡ ಜಿಲ್ಲೆಗೆ (ಅಂದಿನ ಕೆನರಾ ಜಿಲ್ಲೆ) ಸೇರ್ಪಡಿಸಿದಲ್ಲದೆ ಅವರ ರೈತವಿರೋಧಿ ಪ್ರಜಾವಿರೋಧಿ ರೀತಿನೀತಿಗಳಿಂದ ಸಿಡಿದೆದ್ದ ನಾಗರಿಕ ದಂಗೆಯೇ ಬ್ರಿಟಿಶ್ ವಸಾಹತುಶಾಹಿ ವಿರುದ್ದದ ಸಶಸ್ತ್ರ ಹೋರಾಟ ಎಂಬುದನ್ನು ಬಹಳಷ್ಟು ಅಧ್ಯಯನಗಳ ಮೂಲಕ ಅಕ್ಷರಗಳಲ್ಲಿ ದಾಖಲಿಸಿ ಪ್ರಬುದ್ಧ ಓದುಗರು, ಚರಿತ್ರಾ ಆಸಕ್ತರುಗಳ ಬೌದ್ದಿಕತೆಗೆ ಅಕ್ಷರ ಆಹಾರ ಒದಗಿಸುವ ಪ್ರಯತ್ನ ಮಾಡಿದ್ದಾರೆ.

೧೮೩೭ ಅಮರ ಸುಳ್ಯ ದಂಗೆಯ ಬಗ್ಗೆ ಇದುವರೆಗೆ ಪ್ರಕಟವಾದ ಬಹುತೇಕ ಎಲ್ಲಾ ದಾಖಲಾ ಬರಹಗಳನ್ನು ಒರೆಗೆ ಹಚ್ಚಿ ಅದರ ಸಾಕ್ಷ್ಯಗಳನ್ನು ಸದರಿ ಪುಸ್ತಕದಲ್ಲಿ ಒದಗಿಸುವುದರೊಂದಿಗೆ ೧೮೩೭ ರ ಹೋರಾಟವನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ಹೊಸ ತೆರೆದ ಕಣ್ಣುಗಳಿಂದ ತಾವು ನೋಡಿದಲ್ಲದೇ, ನವ ಇತಿಹಾಸಕಾರರಿಗೆ ೧೮೩೭ ರ ಹೋರಾಟದ ಬಗ್ಗೆ ಮತ್ತಷ್ಟು ಬಗೆದು ತೆಗೆದು ಸಂಶೋಧನೆಗೆ ಅಕ್ಷರ ಬೆಳಕನ್ನು ಇದರಲ್ಲಿ ನೀಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಅಮರ ಸುಳ್ಯ ದಂಗೆ ದರೋಡೆ ಎಂದೇ ಇಂದಿಗೂ ೧೮೩೭ ಜನವಲಯದ ಜನಪದ ಚರಿತ್ರೆಯಲ್ಲಿ ಹೊರಳು ನಾಲಿಗೆಗಳು ಬಹಳಷ್ಟು ಮಾತಾಡಿರುವುದೂ ನಿಜ. ದಂಗೆಯ ಸೂತ್ರದಾರನಾಗಿ ಗುಡ್ಡೆಮನೆ ಅಪ್ಪಯ್ಯಗೌಡ ಮಾತ್ರ ಜನಪದ ಚರಿತ್ರೆಯಲ್ಲಿ ಗುರುತಿಸಲ್ಪಟ್ಟಿರುವುದು ಆತನನ್ನು ಮಡಿಕೇರಿ ಕೋಟೆಯಲ್ಲಿ ನೇಣುಗಂಬ ಏರಿಸಿದ್ದರಿಂದ. ಇದು ಅಪ್ಪಯ್ಯಗೌಡ ಇವರ ವಾಸ್ತವ್ಯ ಕೊಡಗಿನ ಬಲಮುರಿಯಾದ ಕಾರಣ ಮೇಲೆ ಕೊಡಗಿನವನಾದುದರಿಂದ ಇಲ್ಲಿ ನೇಣಿಗೇರಿಸಲಾಯಿತು ಎಂದು ಇವರ ಬರಹಗಳಿಂದ ನಾವು ತಿಳಿಯಬಹುದಾದ ಅವಕಾಶವನ್ನು ವಿದ್ಯಾಧರ ಬಿಡಿಸಿಕೊಟ್ಟಿರುವುದು ಕೂಡ ಚರಿತ್ರಾ ಬರವಣಿಗೆಯ ಒಳ್ಳೆ ಬೆಳವಣಿಗೆ.

೧೮೩೭ ರ ವಸಾಹತುಶಾಹಿ ವಿರುದ್ಧದ ಹೋರಾಟವನ್ನು ಹಲವರು “ಕಾಟಕಾಯಿ\ದರೋಡೆ” ಎಂಬುದಾಗಿ ಬಿಂಬಿಸಿದರ ಬಗ್ಗೆ ವಿದ್ಯಾಧರರು ಬಹಳ ಗಂಭೀರವಾಗಿ ಇಲ್ಲಿ ಚರ್ಚಿಸಿದ್ದಾರೆ. ಹಾಗೇ ಒಂದು ತೆರವಾಗಿ ಕೆಲವರ ಮುಖವಾಡಗಳನ್ನು ಕಳಚಿಡುವ ಪ್ರಯತ್ನವನ್ನೂ ತರ್ಕಬದ್ಧವಾಗಿ, ಪ್ರಾಮಾಣಿಕವಾಗಿ ಮಾಡಿರುವುದನ್ನೂ ಅವರ ಅಕ್ಷರಗಳಲ್ಲಿ ಕಾಣಬಹುದಾಗಿದೆ.

ನಡಿಕೇರಿಯಂಡ ಚಿಣ್ಣಪ್ಪ “ಪಟ್ಟೋಳೆ ಪಳಮೆ”ಯಲ್ಲಿ ಹಾಗೂ ಡಿ.ಎನ್. ಕೃಷ್ಣಯ್ಯ “ಕೊಡಗಿನ ಇತಿಹಾಸ” ದಲ್ಲಿ ಚಿಕ್ಕವೀರರಾಜ ಹೆಂಗಳೆಯರ ಮೊಲೆ ಹಾಲು ಕುಡಿಯುತ್ತಿದ್ದ ಎಂಬ ಊಹಾಪೋಹದ ಮಾತುಗಳಿಗೆ ಯಾವುದೇ ಐತಿಹಾಸಿಕ ದಾಖಲೆ ಇಲ್ಲ ಎಂದು ಸ್ಪಷ್ಟವಾಗಿ ದೃಢವಾಗಿ ಹೇಳಿರುವುದೂ ಕೂಡ ಅವರ ಅಧ್ಯಯನದ ನಿಖರತೆಗೆ ಸಾಕ್ಷಿಯಾಗುತ್ತದೆ.

ಅಮರಸುಳ್ಯ ೧೮೩೭ರ ಅಧ್ಯಯನ ಬರಹದಲ್ಲಿ ಕೊಡವರು ಬ್ರಿಟಿಷ್ ಬೆಂಬಲಿಗರು ಎಂಬುದಾದ ಕಪೋಕಲ್ಪಿತ ವಿಚಾರವನ್ನು ಹರಿಯಬಿಟ್ಟವರಿಗೆ ವಿದ್ಯಾಧರರು ಉಲ್ಲೇಖಿಸಿರುವ ದಿವಾನ ಬೋಪಣ್ಣ ದಿವಾನ್ ಪೊನ್ನಪ್ಪ, ದೇವಮ್ಮಾಜಿ ಕುಟುಂಬ ಹಾಗೂ ಚಿಕ್ಕವೀರರಾಜೇಂದ್ರರ ರಾಜಕೀಯ ನಡೆಗಳ ವಿವರಗಳಲ್ಲಿ ಉತ್ತರಿಸಿರುವುದಂತೂ ಸುಳ್ಳುಗಾರರಿಗೆ ಅರಗಿಸಿಕೊಳ್ಳಲಾಗದ ಅಕ್ಷರಗಳಾಗಿವೆ. ಅಮರಸುಳ್ಯ ಹೋರಾಟ ಅದೊಂದು ಸಶಸ್ತ್ರ ರೈತ ಹೋರಾಟವೆಂಬುದು ಇವರ ಬರಹದಿಂದ ಅರಿವಾಗುವುದು. ಹಾಗೆಯೇ ಈ ಹೋರಾಟದಲ್ಲಿ ಕೊಡಗಿನ ಜನಮನದಲ್ಲಿ ಗುಡ್ಡೆಮನೆ ಅಪ್ಪಯ್ಯಗೌಡ ಒಬ್ಬನೇ ದಾಖಲಾಗಿ ಉಳಿದುಹೋದದ್ದು ವಿಪರ್ಯಾಸವೆಂದೇ “ಅಮರ ಸುಳ್ಯ ೧೮೩೭” ಪುಸ್ತಕ ನಮಗೆ ತಿವಿದು ತಿವಿದು ಹೇಳುತ್ತದೆ.

ಈ ಹೋರಾಟದ ಸೂತ್ರದಾರಿ ಮಹಾನ್ ಸಂಘಟಕ ತನ್ನದೆಲ್ಲವನ್ನೂ ತನ್ನ ತನುಮನಧನ ಮಾತ್ರವಲ್ಲದೆ ಉಸಿರನ್ನೂ ನೀಡಿದ ಮಹಾನ್ ತ್ಯಾಗಿ ಕೆದಂಬಾಡಿ ರಾಮಯ್ಯಗೌಡ, ಶನಿವಾರಸಂತೆ ಹೆಮ್ಮಮನೆಯ ಪುಟ್ಟಬಸಪ್ಪ, ಗುಡ್ಡೆಮನೆ ತಮ್ಮಯ್ಯಗೌಡ, ನೆರಪಂಡ ಮಾದಯ್ಯ, ಕೊಲ್ಲಿರ ಅಚ್ಚಯ್ಯ ಇನ್ನೂ ದಾಖಲೆಗೆ ಸಿಗದಿರುವ ಅನೇಕರನ್ನು ನಾವುಗಳು ಹೇಗೆ ಯಾತಕ್ಕಾಗಿ ಮರೆತೆವು ಎಂಬ ಪ್ರಶ್ನೆ ಈ ಪುಸ್ತಕದ ಕೊನೆಯ ಪುಟಗಳನ್ನು ತಿರುವುತಿದ್ದಂತೆ ಉದ್ಭವಿಸದೆ ಇರಲಾರದು. ಅಳಿಸಲಾಗದ ಅಕ್ಷರಗಳನ್ನು ಬರೆಯಬಾರದು ಎಂಬ ಮಾತಿದೆ. ಕೊಡಗಿನ ಇತಿಹಾಸದಲ್ಲೂ ಕಪೋಕಲ್ಪಿತ ಅಕ್ಷರ ದಾಖಲಿಸಿದವರನ್ನು ವಿದ್ಯಾಧರರ “ಅಮರಸುಳ್ಯ ೧೮೩೭” ಪ್ರಶ್ನಿಸಿದೆ.

ಸಿಟಿಜನ್ ಟಿಪ್ಪುಸುಲ್ತಾನನ ನೆನಪಿಗೆ ಅರ್ಪಿಸಿರುವ “ಅಮರ ಸುಳ್ಯ ೧೮೩೭”ಪ್ರಬುದ್ಧರಿಗೂ ಹಾಗಂದುಕೊಂಡವರ ಬೌದ್ಧಿಕತೆಗೆ ಸಾಣೆ ಹಿಡಿಸುವಂತಿದೆ. ಪುಸ್ತಕಕ್ಕಾಗಿ ೯೪೪೮೬೪೮೩೬೬ ನ್ನು ಸಂಪರ್ಕಿಸಿ.

ಲೇಖಕರು: ಅಲ್ಲಾರಂಡ ವಿಠಲ ನಂಜಪ್ಪ

9448312310

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,