Ad Code

Responsive Advertisement

ಸ್ವಾತಂತ್ರ್ಯದ ಅಮರ ಪ್ರೇಮಿಯಾಗಿ ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ನೇತಾಜಿ

(ಜನವರಿ 23 ನೇತಾಜಿ ಸುಭಾಷ್‌ಚಂದ್ರ ಬೋಸ್ ಜನ್ಮದಿನ 'ಪರಾಕ್ರಮ ದಿನ'ದ ವಿಶೇಷ ಲೇಖನ)

ಸ್ವಾತಂತ್ರ್ಯದ ಅಮರ ಪ್ರೇಮಿಯಾಗಿ ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ನೇತಾಜಿ“ನೀವು ನನಗೆ ರಕ್ತ ಕೊಡಿ… ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ”
ಎಂದು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಕರೆ ನೀಡುವ ಮೂಲಕ ಅದೆಷ್ಟೋ ಯುವಕರಿಗೆ ಸ್ಫೂರ್ತಿ ತುಂಬಿದಲ್ಲದೆ, ತಮ್ಮ ಈ ರೀತಿಯ ಸಿಡಿಲಬ್ಬರದ ಮಾತುಗಳಿಂದ ದೇಶದ ಪ್ರತಿಯೊಬ್ಬ ನಾಗರೀಕರಲ್ಲೂ ದೇಶ ಪ್ರೇಮದ ಕಿಚ್ಚು ಜಾಗೃತಗೊಳಿಸಿದ ಕೆಚ್ಚೆದೆಯ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್.

ಸುಭಾಷ್ ಚಂದ್ರ ಬೋಸ್ ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ಅವರು ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಬಹಳ ಶ್ರಮಿಸಿದರು. ಒರಿಸ್ಸಾದ ಕಟಕ್‌ನ ಬಂಗಾಳಿ ಕುಟುಂಬದಲ್ಲಿ ಜನಿಸಿದ ಸುಭಾಷ್ ಚಂದ್ರ ಬೋಸ್ ಶ್ರೀಮಂತ ಕುಟುಂಬದಿಂದ ಬಂದವರು, ಆದರೆ ಅವರು ತಮ್ಮ ದೇಶವನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಸಮರ್ಪಿಸಿದರು.

ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಅಗ್ರಗಣ್ಯ ಮಾಹಾನ್ ನಾಯಕ ಸುಭಾಷ್ ಚಂದ್ರಬೋಸ್‌ರವರು ಸ್ವಾಮಿ ವಿವೇಕಾನಂದರ ಆದರ್ಶ, ಜೀವನದ ವಿಚಾರಗಳಿಂದ ಪ್ರಭಾವಿತರಾಗಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿದ ಸ್ವಾತಂತ್ರ್ಯ ಅಮರ ಪ್ರೇಮಿಯಾಗಿ ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದರು.

1897 ಜನವರಿ 23ರಂದು ಒಡಿಶಾದ ಕಟಕ್‌ ನಗರದಲ್ಲಿ ಜಾನಕಿನಾಥ್‌ ಬೋಸ್‌ ಮತ್ತು ಪ್ರಭಾವತಿ ದೇವಿ ದಂಪತಿ ಪುತ್ರನಾಗಿ ಜನಿಸಿ. ಬಾಲ್ಯದಲ್ಲಿಯೇ ಸ್ವಾಮೀ ವಿವೇಕಾನಂದರ ಆದರ್ಶಗಳಿಗೆ ಮನಸೋತು ತಮ್ಮ ಪದವಿಯ ನಂತರ ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣಿಸಿ, ನಾಲ್ಕನೆ ಸ್ಥಾನಿಗರಾಗಿ ಐ.ಸಿ.ಎಸ್ ಪದವಿಯನ್ನು ಗಳಿಸಿದರು. ವಿದೇಸಿ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು ದಿಕ್ಕರಿಸಿ ಮಹಾತ್ಮಾ ಗಾಂಧಿಯವರನ್ನು ಭೇಟಿ ಮಾಡಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಲ್ಲದೆ, ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದ್ದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸಿದ ಇವರು, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ತತ್ವಗಳನ್ನು ಒಪ್ಪದೆ ಪಕ್ಷದಿಂದ ಹೊರಬಂದರು. ಕಾಂಗ್ರೆಸ್‍ನ ಡೋಲಾಯಮಾನ ನೀತಿಗಳಿಗೆ ತೀಲಾಂಜಲಿ ಹಾಡಿ ಸ್ವರಾಜ್ಯಪಕ್ಷ ಸ್ಥಾಪನೆ ಮಾಡುವ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಐತಿಹಾಸಿಕ ರಣಕಹಳೆ ಊದಿದರು. ಕ್ರಾಂತಿಕಾರಿ ಹೋರಾಟಗಳಿಂದ ಹಲವು ಬಾರಿ ಬೋಸ್‍ರ ಬಂಧನ, ಬಿಡುಗಡೆಯಾಯಿತು.

ವಿಶ್ವದ ಎರಡನೇ ಮಹಾಯುದ್ಧದ ಸಮಯದಲ್ಲಿ ಆಜಾದ್ ಹಿಂದ್ ಫೌಜ್ ನಾಯಕತ್ವ ಸ್ವತಃ ನೇತಾಜಿ ಸುಭಾಷ್ ಚಂದ್ರ ಬೋಸ್ ವಹಿಸಿಕೊಡಿದ್ದರು. ಅಲ್ಲದೇ ಸ್ವತಂತ್ರ ಭಾರತದ ಮೊದಲ ಸರ್ಕಾರವು ಅವರ ನಾಯಕತ್ವದಲ್ಲಿ ರಚನೆಯಾಗಿತ್ತು. ಆದರೆ ಇದರ ಜೊತೆಗೆ ಆಜಾದ್ ಹಿಂದ್ ಫೌಜ್ ಈಶಾನ್ಯ ಭಾರತದ ಕೆಲವು ಭಾಗಗಳನ್ನು ಬ್ರೀಟೀಶರಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ನೇತಾಜಿಯವರು ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ಎಂದೂ ಒಳ ಒಪ್ಪಂದ ಮಾಡಿಕೊಂಡವರಲ್ಲ. ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ಬಲತುಂಬಿದವರು ಸುಭಾಷರು.

"ರಾಷ್ಟ್ರಕ್ಕೆ ನೇತಾಜಿಯ ಅದಮ್ಯ ಮನೋಭಾವ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಮತ್ತು ನೆನಪಿಸುವ ಸಲುವಾಗಿ, ವಿಶೇಷವಾಗಿ ಯುವಕರಿಗೆ ಸ್ಫೂರ್ತಿ ನೀಡುವ ಸಲುವಾಗಿ 2021ರ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯಿಂದ ಪ್ರತಿ ವರ್ಷ ಜನವರಿ 23 ರಂದು "ಪರಾಕ್ರಮ ದಿನ" ಎಂದು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ನೇತಾಜಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಧೈರ್ಯದಿಂದ ವರ್ತಿಸಿದ್ದು ಅವರ ಮಾದರಿಯಲ್ಲೇ ದೇಶಭಕ್ತಿಯ ಉತ್ಸಾಹವನ್ನು ತುಂಬುವ ಉದ್ದೇಶ ಇದರ ಹಿಂದಿದೆ"

ಭಾರತದ ನಿಜ ಸಾಮರ್ಥ್ಯವನ್ನು ಎಚ್ಚರಿಸಿ ಶತ್ರುವಿಗೆ ಅವರ ರೀತಿಯಲ್ಲೇ ಉತ್ತರಿಸಲು ದೇಶದೊಳಗೆ ‘ತಮ್ಮವರದೇ’ ವಿರೋಧವನ್ನು ಎದುರಿಸಿ ಶ್ರಮಿಸಿದ ಸುಭಾಷರ ಪ್ರಯತ್ನಗಳು ನೈಜ ದೇಶಭಕ್ತರಿಗೆ ಅತ್ಯದ್ಭುತವಾಗಿ ಕಂಡುಬರುವುದು ಸಹಜ. ಆದರೆ ಪರಿಸ್ಥಿತಿಗಳು ತಮ್ಮ ಶೌರ್ಯ-ಪರಾಕ್ರಮಕ್ಕೆ ಸಹಕಾರಿಯಾಗಿಲ್ಲವೆಂದರಿತು ವೀರ ಸಾವರ್ಕರ್ ರ ಸಲಹೆಯಂತೆ ಬ್ರಿಟಿಷರ ಕಣ್ತಪ್ಪಿಸಿ, ಅವರ ತಂತ್ರಕ್ಕೆ ಚಳ್ಳೆಹಣ್ಣು ತಿನ್ನಿಸಿ, ರೋಚಕವಾಗಿ ಪಲಾಯನ ಮಾಡಿದ ಸುಭಾಷರ ಶೌರ್ಯಗಾಥೆ. ಯುವಜನಾಂಗಕ್ಕೆ ರೋಮಾಂಚನ ಉಂಟುಮಾಡುವುದು ನಿಶ್ಚಿತ. 

ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ. ಭಾರತವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿಲ್ಲ. ಶೀಘ್ರದಲ್ಲೇ ಭಾರತ ಸ್ವತಂತ್ರವಾಗಲಿದೆ. ಅನ್ಯಾಯ ಸಹಿಸಿಕೊಳ್ಳುವುದು ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಬಹುದೊಡ್ಡ ಅಪರಾಧ ಎಂದು ಸುಭಾಷ್ ಚಂದ್ರ ಬೋಸ್ ಹೇಳುತ್ತಿದ್ದರು. ಈ ಮಾತುಗಳನ್ನು ದೇಶವಾಸಿಗಳು ಇಂದಿನ ದಿನಗಳಲ್ಲಿ ನೆನಪಿಡುವುದು ಅವಶ್ಯಕತೆ ಇದೆ. ಹಾಗೆ ಇದನ್ನು ನಾವೆಲ್ಲರೂ ಮನಗಂಡು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗುವ ಕೆಲಸ ಮಾಡೋಣ.

ಮಾತೃಭೂಮಿಗಾಗಿ ಬಲಿದಾನ ಗೈದ ವೀರರನ್ನು ದೇಶ ಸದಾ ನೆನಪಿಸಿಕೊಳ್ಳಬೇಕು, ಅದು ನಮ್ಮ ಕರ್ತವ್ಯವೇ ಆಗಿದೆ. ಸ್ವಾತಂತ್ರ್ಯ ಗಳಿಕೆಯ ಹೋರಾಟದ ಶ್ರೇಯಸ್ಸನ್ನು ಕೆಲವೇ ವ್ಯಕ್ತಿ, ಕುಟುಂಬದ ಕೈಗೊಪ್ಪಿಸುವ ಇಲ್ಲಿಯವರೆಗಿನ ಪ್ರಯತ್ನವು ನೈಜ ಹಾಗೂ ಸ್ವಾಭಿಮಾನದ ಇತಿಹಾಸವನ್ನು ನಮ್ಮಿಂದ ಮರೆಮಾಡಿತ್ತು. ಆ ಮರೆವಿನ ತೆರೆಯನ್ನು ಸರಿಸುವಲ್ಲಿ ‘ಪರಾಕ್ರಮ ದಿನ’ದಂತಹ ಆಚರಣೆಗಳು ಪ್ರಮುಖವೆನಿಸುತ್ತವೆ.

ಲೇಖಕರು: ✍️.... ಕಾನತ್ತಿಲ್‌ ರಾಣಿಅರುಣ್

                     (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,