ಕೋವಿ ವಿಷಯವಾಗಿ ಗೊಂದಲ ಸರಿಯಲ್ಲ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಜಿಲ್ಲಾಧಿಕಾರಿಗಳ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಕೊಡಗಿನ ಮೂಲನಿವಾಸಿಗಳ ವೀರ ಶೌರ್ಯ ಸೇರಿದಂತೆ ಪದ್ದತಿ ಪರಂಪರೆಯ ಪ್ರತೀಕವಾದ ಕೋವಿ ವಿಷಯದಲ್ಲಿ ಕೇಂದ್ರ ಸರಕಾರ 2009/2010 ಹಾಗೂ 2019ರಲ್ಲಿ ಕೋವಿ ಹಕ್ಕಿನ ಕುರಿತಾಗಿ ಹೊರಡಿಸಿರುವ ಸುತ್ತೋಲೆಗೆ ಬೆಲೆ ಇಲ್ಲವೇ ಎಂದ ಅವರು ಮಾನ್ಯ ಜಿಲ್ಲಾಧಿಕಾರಿಗಳು ಕೂರ್ಗ್ ಬೈ ರೇಸ್ ಎಂದರೆ ಯಾರು ಹಾಗೂ ಜಮ್ಮ ಹಿಡುವಳಿ ಎಂದರೆ ಏನೂ ಎಂಬ ಬಗ್ಗೆ ಮೊದಲು ತಿಳಿದುಕೊಳ್ಳಬೇಕಾದ ಅಗತ್ಯವಿದೆ.
ಇದ್ಯಾವುದನ್ನು ತಿಳಿದುಕೊಳ್ಳದೆ ಹಾಗೂ ಈ ಹಿಂದಿನ ಗಜೆಟ್ ನೋಟಿಫಿಕೇಷನ್ ಆಗಲಿ ಅಥವಾ ಕೋವಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸದ ಏಕಾಏಕಿ ಸರಕಾರದ ಅಂಗಳಕ್ಕೆ ಚೆಂಡನ್ನು ಎಸೆದು ಜಿಲ್ಲಾಧಿಕಾರಿಯವರು ಕೈ ತೊಳೆದುಕೊಂಡಿರುವುದು ಎಷ್ಟು ಸರಿ. ಇವರಿಗೆ ಕೊಡಗಿನ ಜಮ್ಮ ಹಾಗೂ ಇಲ್ಲಿನ ಜನಾಂಗದ ಬಗ್ಗೆ ಮಾಹಿತಿಯ ಕೊರತೆ ಇದ್ದರೆ ಬ್ರಿಟಿಷರ ಕಾಲದಲ್ಲಿ ಅಂದರೆ 1870ರಲ್ಲಿ ಖ್ಯಾತ ಲೇಖಕ ಜಿ. ರಿಚ್ಟರ್ ಬರೆದಿರುವ "ಗಜೇಟಿಯರ್ ಆಫ್ ಕೂರ್ಗ್" ಅಥವಾ 1878ರಲ್ಲಿ ಲೇಖಕ ಲೂಯಿಸ್ ರೈಸ್ ಬರೆದ ಗಜೇಟಿಯರ್ ಓದಬೇಕಿದೆ ಈ ಮೂಲಕ ಕೊಡಗಿನ ಜಮ್ಮ ಹಾಗೂ ಇಲ್ಲಿನ ಜನಾಂಗದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಸರಕಾರಕ್ಕೆ ವರದಿ ಒಪ್ಪಿಸುವುದು ಬಿಟ್ಟು ಗೊಂದಲ ಸೃಷ್ಟಿಸಿ ಅಡ್ಡಗೋಡೆಯಮೇಲೆ ದೀಪ ಇಟ್ಟಿರುವುದು ಸರಿಯಲ್ಲ.
ಈ ಹಿಂದೆ ಕೂಡ ಇದೇ ರೀತಿ 2009 ಹಾಗೂ 2010ನೇ ಸಾಲಿನಲ್ಲಿ "ಕೂರ್ಗ್ ಬೈ ರೇಸ್" ವಿಸ್ತರಿಸಲು ಮನವಿಯನ್ನು ಮಾಡಿದ್ದರು. ಅಂದು ಕೂಡ ಒಳಗೊಳಗೆ ಕುತಂತ್ರ ನಡೆದಿತ್ತು. ಇದರ ಸೂಕ್ಷ್ಮವನ್ನು ಅರಿತ ಅಖಿಲ ಕೊಡವ ಸಮಾಜ ಜಿಲ್ಲಾಧಿಕಾರಿಗೆ ಸಂಪೂರ್ಣ ದಾಖಲೆಗಳನ್ನು ನೀಡುವ ಮೂಲಕ ಕೊಡವ ಬೈ ರೇಸ್ ತೊಂದರೆಯಾದರೆ ಕಾನೂನು ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿತ್ತು. ಆದರೆ ಅಂದಿನ ಜಿಲ್ಲಾಧಿಕಾರಿ ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ "ಕೂರ್ಗ್ ಬೈ ರೇಸ್" ಮನವಿಯನ್ನು ತಿರಸ್ಕರಿಸಿ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆದು ಕೇಂದ್ರ ಸರಕಾರದ 13/07/1962ರ ಅಧಿಸೂಚನೆಯನ್ನು ಎತ್ತಿ ಹಿಡಿದು ಕೂರ್ಗ್ ಬೈ ರೇಸ್ ಎಂಬ ಪರಿಭಾಷೆಗೆ ಇತರ ಜನಾಂಗಗಳು ಸೇರುವುದಿಲ್ಲ, ಕೇವಲ ಕೊಡವರು ಮಾತ್ರ ಎಂದು 5/02/2010ರಂದು ಬಂದ ಪತ್ರಕ್ಕೆ ಸರಕಾರಕ್ಕೆ ಸಮಜಾಯಿಷಿ ನೀಡಿದ್ದರು. ಕೇಂದ್ರ ಸರಕಾರವೇ ಆ ಸಮಯದಲ್ಲಿ ಕೋವಿ ಹಕ್ಕಿನ ಕುರಿತಾದ ಸುತ್ತೋಲೆಯನ್ನು ಹೊರಡಿಸಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿತ್ತು. ಆದರೆ ಇದೀಗ ಜಿಲ್ಲಾಧಿಕಾರಿ ಇದನೆಲ್ಲಾ ಪರಿಶೀಲಿಸದೆ ಏಕಾಏಕಿ ಗೊಂದಲ ಸೃಷ್ಟಿಸಿ ಸರಕಾರದ ಅಂಗಳಕ್ಕೆ ಚೆಂಡನ್ನು ಎಸೆದಿರುವುದು ಸರಿಯಲ್ಲ.
ಬ್ರಿಟಿಷರ ಕಾಲದಲ್ಲಿ ಕೊಡವರನ್ನು ಕೂರ್ಗ್ಸ್ ಎಂದು ಕರೆಯಲಾಗುತ್ತಿತ್ತು ಹೊರತು ಬೇರೆ ಯಾರನ್ನು ಅಲ್ಲಾ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಹಾಗೇ ಕೋವಿ ಹಕ್ಕಿನ ಬಗ್ಗೆ ಈಗಾಗಲೇ ಗಜೇಟಿಯರ್ ನೊಟಿಫಿಕೆಷನ್ ಅಲ್ಲಿ ಕೂಡ ಸ್ಪಷ್ಟವಾಗಿ ಉಲ್ಲೇಖಸಿದೆ "Every person of coorg by race and jamma tennure older in coorg" ಎಂದು, ಇದರಲ್ಲಿಯೇ ನಿಮಗೆ ಉತ್ತರ ಸಿಗುತ್ತದೆ ಆದರೆ ಹುಡುಕುವ ಕೆಲಸ ಮಾಡದಿರುವುದು ದುರಂತ. ನೀವು ಸರಿಯಾಗಿ ದಾಖಲೆಗಳನ್ನು ಪರಿಶೀಲಿಸಿದರೆ ಇಲ್ಲಿ "ಕೊಡವ ಜನಾಂಗ ಮತ್ತು ಜಮ್ಮ ಜಮೀನು ಹಿಡುವಳಿದಾರರು" ಎನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತಿತ್ತು. ಹಾಗೇ ಕೇಂದ್ರ ಸರಕಾರದ ಸಶಸ್ತ್ರ ಕಾಯಿದೆಯನ್ನು ಎತ್ತಿ ಹಿಡಿಯಬೇಕಾದ ಜಿಲ್ಲಾಧಿಕಾರಿಗಳ ಹತ್ತಿರವೇ ಎಲ್ಲಾ ದಾಖಲಾತಿಗಳು ಇರುವಾಗ ಈ ಬಗ್ಗೆ ಪುನಃ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯುವುದು ಎಷ್ಟು ಸರಿ.? ಇದು ಕೇಂದ್ರ ಸರಕಾರದ ಅಧಿಸೂಚನೆ ಹಾಗೂ ಸುತ್ತೋಲೆಯನ್ನು ತಿರಸ್ಕರಿಸಿದಂತಾಗಲಿಲ್ಲವೇ ಎಂದು ಚಿಂತಿಸಬೇಕಿದೆ.
ಕೊಡವರಂತು ಎಲ್ಲಿಯೂ ಇತರರಿಗೆ ಯಾವುದೇ ಹಕ್ಕನ್ನು ನೀಡಬೇಡಿ ಎಂದು ಹೇಳಿಲ್ಲ. ಆದರೆ "ಕೂರ್ಗ್ ಬೈ ರೇಸ್"ನಡಿಯಲ್ಲಿ ಕೊಡವರು ಮಾತ್ರ ಆರ್ಹರು ಎಂದು ಪ್ರತಿಪಾದಿಸುತ್ತಿದ್ದೇವೆ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ ಹೊರತು ಇನ್ನೊಬ್ಬರ ಹಕ್ಕನ್ನು ನಾವು ಕಸಿದುಕೊಳ್ಳುವುದಿಲ್ಲ. ಹಾಗೇ ಇತರರಿಗೆ ಜಮ್ಮ ಹಿಡುವಳಿಯಲ್ಲಿ ಕೋವಿ ನೀಡುತಿರುವುದಕ್ಕೆ ನಮ್ಮದು ಯಾವುದೇ ಅಭ್ಯಂತರವಿಲ್ಲ. ಕೋವಿ ವಿಷಯದಲ್ಲಿ ಪದೇಪದೇ ಈ ರೀತಿ ಗೊಂದಲ ಸೃಷ್ಟಿಸುವ ಬದಲು ಕೇಂದ್ರ ಸರಕಾರದ ಸುತ್ತೋಲೆಯನ್ನು ಎತ್ತಿ ಹಿಡಿಯಬೇಕಿದೆ. ಪದೇಪದೇ ಈ ರೀತಿಯ ಗೊಂದಲ ಸರಿಯಲ್ಲ, ಕೂಡಲೇ ಗೊಂದಲಕ್ಕೆ ತೆರೆ ಎಳೆಯಬೇಕಿದೆ. ನಮ್ಮ ಜನಾಂಗದ ಸಂಸ್ಕೃತಿಯ ಪ್ರತೀಕವಾಗಿರುವ ಕೂರ್ಗ್ ಬೈ ರೇಸ್ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದದ್ದು ತಮ್ಮ ಕರ್ತವ್ಯ ಕೂಡ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network