Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೋವಿ ಹಕ್ಕು ಗೊಂದಲ ವಿಷಯದಲ್ಲಿ ಕೊಡವರ ಮಾತೃ ಸಂಸ್ಥೆ ಅಖಿಲ ಕೊಡವ ಸಮಾಜ ಹಾಗೂ ಜಿಲ್ಲೆಯ ವಿವಿಧ ಕೊಡವ ಸಮಾಜಗಳು ಜಿಲ್ಲಾಧಿಕಾರಿಗೆ ಮನವಿ

ಕೋವಿ ಹಕ್ಕು ಗೊಂದಲ ವಿಷಯದಲ್ಲಿ ಕೊಡವರ ಮಾತೃ ಸಂಸ್ಥೆ ಅಖಿಲ ಕೊಡವ ಸಮಾಜ ಹಾಗೂ ಜಿಲ್ಲೆಯ ವಿವಿಧ ಕೊಡವ ಸಮಾಜಗಳು ಜಿಲ್ಲಾಧಿಕಾರಿಗೆ ಮನವಿ


ಕೋವಿ ಹಕ್ಕಿನ ವಿಷಯವಾಗಿ ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಯನ್ನು ಬೇಟಿ ಮಾಡಿ ಮನವಿ ನೀಡುವ ಮೂಲಕ ಸುಮಾರು ಒಂದು ಗಂಟೆಗಳ ಕಾಲ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕೊಡವರು ಹಾಗೂ ಕೋವಿಯ ನಡುವಿನ ಬಾಂಧವ್ಯ ಮತ್ತು ಕೂರ್ಗ್ ಬೈ ರೇಸ್ ಎಂದರೆ ಯಾರು ಮತ್ತು ಹೇಗೆ ಎಂಬ ಬಗ್ಗೆ ಮನದಟ್ಟು ಮಾಡಲಾಯಿತು.

ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೆರಿಗೆ ತೆರಳಿದ ಜಿಲ್ಲೆಯ ವಿವಿಧ ಕೊಡವ ಸಮಾಜಗಳ ಪ್ರತಿನಿಧಿಗಳನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ಜಿಲ್ಲಾಧಿಕಾರಿಗಳು ಹತ್ತಿರದ ಸಭಾಂಗಣದಲ್ಲಿ ಸಭೆ ಏರ್ಪಡಿಸಿದ್ದರು. ಮೊದಲಿಗೆ ಮಾತನಾಡಿದ  ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ನಾವು ಇಡೀ ಕೊಡವ ಜನಾಂಗದ ಪ್ರತಿನಿಧಿಯಾಗಿ ಬಂದಿರುವುದಾಗಿ ಮಾಹಿತಿ ನೀಡಿ ಜಿಲ್ಲಾಧಿಕಾರಿಗಳಿಗೆ ವಿವಿಧ ಕೊಡವ ಸಮಾಜ ಅಧ್ಯಕ್ಷರುನ್ನು ಪರಿಚಯಿಸಿದ್ದರು. ಬಳಿಕ ಮಾತನಾಡಿದ ಅವರು ಕೋವಿಯೊಂದಿಗಿರುವ ಕೊಡವರ ಸಂಬಂಧ ಹಾಗೂ ಕೂರ್ಗ್ ಬೈ ರೇಸ್ ಎಂದರೇನು ಮತ್ತು ಜಮ್ಮ ಹಿಡುವಳಿ ಎಂದರೇನು ಎಂಬ ಬಗ್ಗೆ ಮಾಹಿತಿ ನೀಡಿ, ಕೋವಿ ವಿಷಯದಲ್ಲಿ ಹಳೆಯ ದಾಖಲೆಗಳು ಹಾಗೂ ಸರಕಾರದ ಈ ಹಿಂದಿನ ಸುತ್ತೋಲೆ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿ ಜಿಲ್ಲಾಧಿಕಾರಿಗಳಿಗೆ ಮನದಟ್ಟು ಮಾಡಿಕೊಡಲಾಯಿತು. 

ಹಾಗೇ ಇದನೆಲ್ಲಾ ಪರಿಶೀಲಿಸದೆ ತಾವು ಏಕಾಏಕಿ ಸರಕಾರದ ಅಂಗಳಕ್ಕೆ ಚೆಂಡನ್ನು ಎಸೆದಿರುವುದು ಸರಿಯಲ್ಲ, ಕೂಡಲೇ ಇದನ್ನು ಪುನರ್'ಪರಿಶೀಲನೆ ಮಾಡಬೇಕಿದೆ ಎಂದು ಹೇಳಿದ್ದರು. ಈ ಸಮಯ ವಿವಿಧ ಕೊಡವ ಸಮಾಜ ಪ್ರತಿನಿಧಿಗಳು ಕೂಡ ಧ್ವನಿಗೂಡಿಸಿ ವಿವರಿಸಿದ್ದರು. ಜೊತೆಗೆ ಕೊಡಗಿನ ಒಂದಷ್ಟು ಜ್ವಲಂತ ಸಮಸ್ಯೆಗಳ ಬಗ್ಗೆ ಕೂಡ ಗಮನ ಸೆಳೆಯಲಾಯಿತು. 

ಬಳಿಕ ಸಭೆಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು ಸರಕಾರದ ಮುಖ್ಯ ಕಾರ್ಯದರ್ಶಿಗಳು ತಮಗೆ ಪತ್ರ ಬರೆದು ಕೇಳಿದ ಪ್ರಶ್ನೆಗೆ ಹಳೆಯ ದಾಖಲೆಗಳನ್ನು ಹಾಗೂ ಒಂದಷ್ಟು ಮಾಹಿತಿ ನೀಡಲಾಗಿದೆಯೇ ಹೊರತು ಎಲ್ಲಿಯೂ ಸಂಪೂರ್ಣ ವರದಿಯನ್ನು ಸಲ್ಲಿಸಲಾಗಿಲ್ಲ, ನಾನೂ ಜಿಲ್ಲೆಗೆ ಹೊಸದಾಗಿ ಬಂದಿರುವ ಕಾರಣ ಹಾಗೂ ನನಗೆ ಕೊಡಗಿನ ಹಲವಾರು ಸಮಸ್ಯೆಗಳ ಬಗ್ಗೆ ಹಾಗೂ ಕೋವಿ ವಿಷಯವಾಗಿ ಸಂಪೂರ್ಣ ಮಾಹಿತಿ ಇಲ್ಲದಿರುವ ಕಾರಣ ಮುಂದಿನ ದಿನಗಳಲ್ಲಿ ಹಲವಾರು ಸಭೆ ನಡೆಸಿ ಸಾಧಕ ಬಾಧಕಗಳನ್ನು ಚರ್ಚಿಸಿ ದಾಖಲೆಗಳನ್ನು ಪರಿಶೀಲಿಸಿ ಸಂಪೂರ್ಣ ವರದಿ ನೀಡಲಾಗುತ್ತದೆ ಹೊರತು ಏಕಾಏಕಿ ಯಾವ ನಿರ್ಧಾರವನ್ನು ಕೈಗೊಳ್ಳಲಾಗುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದ್ದರು. 

ಸುದೀರ್ಘ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ ಕೊನೆಗೆ ಅಖಿಲ ಕೊಡವ ಸಮಾಜ ವತಿಯಿಂದ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ವಾಟೇರಿರ ಶಂಕರಿ  ಪೂವಯ್ಯ ಸೇರಿದಂತೆ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಅಖಿಲ ಕೊಡವ ಸಮಾಜ ಪ್ರಧಾನ ಕಾರ್ಯದರ್ಶಿ ಅಮ್ಮುಣಿಚಂಡ ರಾಜ ನಂಜಪ್ಪ, ಅಖಿಲ ಕೊಡವ ಸಮಾಜ ಸದಸ್ಯ ತೇಲಪಂಡ ಪ್ರಮೋದ್ ಸೋಮಯ್ಯ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ವಾಂಚೀರ ನಾಣಯ್ಯ, ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಅಮ್ಮತಿ ಕೊಡವ ಸಮಾಜ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಬೆಂಗಳೂರ್ ಕೊಡವ ಸಮಾಜ ಯೂತ್ ಕೌನ್ಸಿಲ್ ಅಧ್ಯಕ್ಷ ಚೋಕಂಡ ಸೂರಜ್ ಸೋಮಯ್ಯ, ಮಡಿಕೇರಿ ಕೊಡವ ಸಮಾಜದ ಆಡಳಿತ ಮಂಡಳಿ ಸದಸ್ಯರಾದ ನಂದೇಟೀರ ರಾಜ ಮಾದಪ್ಪ ಹಾಗೂ ಪುಟ್ಟಿಚಂಡ ಡಾನ್ ದೇವಯ್ಯ, ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಸಂಚಾಲಕ ಉಳ್ಳಿಯಡ ಎಂ ಪೂವಯ್ಯ, ಐನಂಡ ಕುಟ್ಟಪ್ಪ ಮೊದಲಾದವರು ಉಪಸ್ಥಿತರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,