Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಗೌಡ ಸಮಾಜಗಳ ಒಕ್ಕೂಟದಿಂದ ಕೊಡಗು ಬೈ ರೇಸ್ ಪ್ರಸ್ತಾಪಕ್ಕೆ ಆಕ್ಷೇಪ

ಕೊಡಗು ಗೌಡ ಸಮಾಜಗಳ ಒಕ್ಕೂಟದಿಂದ ಕೊಡಗು ಬೈ ರೇಸ್ ಪ್ರಸ್ತಾಪಕ್ಕೆ ಆಕ್ಷೇಪ

( ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ )

ಮಡಿಕೇರಿ ಜ.26 : ಕೊಡಗು ಬೈ ರೇಸ್ ಗೆ ಸಂಬoಧಿಸಿದoತೆ ಇತ್ತೀಚಿನ ವಿದ್ಯಾಮಾನಗಳ ಬಗ್ಗೆ ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಜಿಲ್ಲೆಯ ಅತೀ ದೊಡ್ಡ ಸಮುದಾಯವಾದ ಗೌಡರ ಮತ್ತು ಸಣ್ಣ ಸಂಖೆಯಲ್ಲಿದ್ದರೂ ಜಿಲ್ಲೆಯ ಅನೇಕ ಮೂಲನಿವಾಸಿ ಜನಾಂಗಗಳಾದ ಐರಿ, ಅಮ್ಮಕೊಡವ, ಹೆಗ್ಗಡೆ, ಜಮ್ಮಾ ಮುಸ್ಲಿಂ ಮುಂತಾದ ಜನಾಂಗದವರು ತಮಗೆ ನ್ಯಾಯಯುತವಾಗಿ ಸಲ್ಲಲೇಬೇಕಾದ ಕೋವಿ ಹಕ್ಕಿಗಾಗಿ ನಡೆಸುತ್ತಿರುವ ಕೊಡಗು ಬೈ ರೇಸ್ ಹೋರಾಟದ ವಿಷಯದಲ್ಲಿ ಜಿಲ್ಲೆಯ ಪ್ರಬಲ ಕೋಮಿಗೆ ಸೇರಿದ ಜನಪ್ರತಿನಿಧಿಗಳು ಹಾಗೂ ಪ್ರಮುಖ ಪಕ್ಷಗಳ ನಾಯಕರು ವಹಿಸಿರುವ ಮೌನವನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೌಡ ಸಮಾಜಗಳ ಒಕ್ಕೂಟವೇ ಇರಬಹುದು ಅಥವಾ ಇತರೆ ಮೂಲ ನಿವಾಸಿ ಜನಾಂಗಗಳ ಪ್ರತಿನಿಧಿಗಳೇ ಇರಬಹುದು, ಬಂದೂಕು ಕಾನೂನಿನ ವಿನಾಯಿತಿ ಪತ್ರದ ಸಮಾನತೆಯ ಹಕ್ಕನ್ನು ಕಸಿಯುವ ಅಥವಾ ಕುಂಠಿತಗೊಳಿಸುವ ಪ್ರಯತ್ನ ಮಾಡದೆ ಇದ್ದರೂ ವೈಷಮ್ಯಕ್ಕೆ ಎಡೆಮಾಡಿಕೊಡುವ ಹೇಳಿಕೆಗಳನ್ನು ಕೊಟ್ಟು ಜಿಲ್ಲಾಧಿಕಾರಿಗಳ ನ್ಯಾಯಯುತ ನಡೆಯನ್ನು ಪ್ರಶ್ನಿಸುವ ನಡೆಯನ್ನು ನಾವು ಖಂಡಿಸುತ್ತೇವೆ.

ನಾವು ನಡೆಸುತ್ತಿರುವ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದ ನಮಗೆ ಹಿನ್ನಡೆಯಾದಲ್ಲಿ ಮಡಿಕೇರಿ ಕ್ಷೇತ್ರದ ಜನಪ್ರತಿನಿಧಿ ಯಾರಾಗಬೇಕು ಎಂಬುವುದನ್ನು ನಿರ್ಧರಿಸುವಷ್ಟು ಸಂಖ್ಯಾಬಲವನ್ನು ಗೌಡರು ಹೊಂದಿದ್ದಾರೆ. ಗೌಡರು ಹಾಗೂ ಇತರ ಮೂಲನಿವಾಸಿಗಳಿಗೆ ವಿರಾಜಪೇಟೆ ಕ್ಷೇತ್ರದಿಂದ ಯಾರು ಜನಪ್ರತಿನಿಧಿಯಾಗಬಾರದು ಎಂದು ನಿರ್ಧರಿಸುವಷ್ಟು ಜನಸಂಖ್ಯೆಯಿದೆ ಎಂಬುವುದು ನಮ್ಮ ಅನಿಸಿಕೆಯಾಗಿದೆ.

ಜಿಲ್ಲೆಯ ನಾಲ್ಕು ಜನಪ್ರತಿನಿಧಿಗಳಲ್ಲಿ ನಮ್ಮ ಸಮುದಾಯಗಳಿಗೆ ಸೇರದ ನಾವೇ ಜಾತಿಯ ಮುಖ ನೋಡದೆ ಗೆಲ್ಲಿಸಿದ ಮೂರು ಜನಪ್ರತಿನಿಧಿಗಳು ನಮ್ಮ ಜನಾಂಗದ ನ್ಯಾಯಯುತ ಬೇಡಿಕೆಗಳನ್ನು ಪೂರೈಸಲು ಕಷ್ಟಪಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ವಿರಾಜಪೇಟೆ ಕ್ಷೇತ್ರದಲ್ಲಿ ಎಲ್ಲಾ ಜನಾಂಗದ ಅಭಿವೃದ್ಧಿಗೆ ಜಾತ್ಯಾತೀತವಾಗಿ ಕೆಲಸ ಮಾಡಿರುವ, ಸ್ವಂತ ಜನಾಂಗದ ಕೆಲಸಕ್ಕಿಂತ ಜಾಸ್ತಿ ಬೇರೆ ಜನಾಂಗದವರ ಕೆಲಸ ಮಾಡಿರುವ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಗೌಡರೆಂಬ ಕಾರಣಕ್ಕೆ ಎಲ್ಲಾ ವಿವಾದಗಳಲ್ಲಿ ಎಳೆದು ತಂದು ಜಾತಿನಿಂದನೆ ಮಾಡುವುದನ್ನು, ಹೀಯಾಳಿಸುವುದನ್ನು ನಾವು ತೀವ್ರ ನೋವಿನಿಂದ ಗಮನಿಸುತಿದ್ದೇವೆ.

ಮುಂದಿನ ಚುನಾವಣೆಯಲ್ಲಿ ನಾವೇ ನಿರ್ಣಾಯಕ ಸ್ಥಾನದಲ್ಲಿರುವ ಪುತ್ತೂರು, ಸುಳ್ಯ, ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ಗೌಡ ಮತ್ತು ಇತರ ಜನಾಂಗಗಳ ಹಿತ ಕಾಯುವ ನಮ್ಮ ಜನಾಂಗದ ಅಭ್ಯರ್ಥಿಯನ್ನು ಯಾವುದೇ ಪಕ್ಷದಲ್ಲಿದ್ದರೂ ಗೆಲ್ಲಿಸಬೇಕಾದ ಅನಿವಾರ್ಯತೆಯನ್ನು ನಾವು ಮನಗಾಣುತ್ತಿದ್ದೇವೆ.

ಮುಂದಿನ ಚುನಾವಣೆಯಲ್ಲಿ ಯಾರ ಶಕ್ತಿ ಎಷ್ಟಿದೆ ಎಂಬ ಎಲ್ಲರ ಅನುಮಾನಗಳನ್ನು ಪರಿಹರಿಸುವ ಕ್ರಮವನ್ನು ಕೈಗೊಳ್ಳಲಾಗುವುದು. ಕೊಡಗು ಬೈ ರೇಸ್ ಗೆ ಸಂಬoಧಿಸಿದoತೆ ಬೇರೆ ಜನಾಂಗದವರ ಹಕ್ಕುಗಳನ್ನು ಕಿತ್ತುಕೊಳ್ಳದೆ ಗೌಡರ ಮತ್ತು ಕೊಡಗಿನ ಇತರ ಮೂಲನಿವಾಸಿಗಳಿಗೆ ಸಿಗಬೇಕಾದ ನ್ಯಾಯಯುವಾದ ಹಕ್ಕುಗಳನ್ನು ಪಡೆಕೊಳ್ಳಲು ಕೊಡಗು ಗೌಡ ಸಮಾಜಗಳ ಒಕ್ಕೂಟ ಯಾವುದೇ ಬೆಲೆ ತೆತ್ತದಾರೂ ಹೋರಾಡುತ್ತದೆ ಎಂದು ಸೂರ್ತಲೆ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,