Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಾಯಮುಡಿಯಲ್ಲಿ ಮಾ.17 ರಿಂದ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ಮಾಯಮುಡಿಯಲ್ಲಿ ಮಾ.17 ರಿಂದ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ


ದಿ.ಪುನೀತ್ ರಾಜಕುಮಾರ್ ಸ್ಮರಣಾರ್ಥ ಆಯೋಜನೆ- ಚಾಂಪಿಯನ್ ತಂಡಕ್ಕೆ ರೂ.50 ಸಾವಿರ ನಗದು ಬಹುಮಾನ

ಪೊನ್ನಂಪೇಟೆ, ಫೆ.19: ಮಾಯಮುಡಿಯ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಮುಂದಿನ ಮಾರ್ಚ್ ತಿಂಗಳ 17ರಿಂದ 20ರವರೆಗೆ ಮೊದಲ ವರ್ಷದ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಎ.ಜೆ. ಶಿವಮೂರ್ತಿ ತಿಳಿಸಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡನಾಡಿನ ಭವ್ಯ ಪರಂಪರೆಯ ಪ್ರತೀಕವಾಗಿದ್ದ ಕನ್ನಡ ಚಿತ್ರರಂಗದ ಮೇರುನಟ ದಿ. ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ 4 ದಿನಗಳ ಕಾಲ ಆಯೋಜಿಸಲಾಗಿರುವ ಈ ಕ್ರಿಕೆಟ್ ಪಂದ್ಯಾವಳಿಯು ಮಾಯಮುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ  ಜರುಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಆಸಕ್ತ ತಂಡಗಳು ಈ ಪಂದ್ಯಾವಳಿಯಲ್ಲಿ ಮುಕ್ತವಾಗಿ ಭಾಗವಹಿಸಬಹುದು. ವಿನ್ನರ್ಸ್  ತಂಡಕ್ಕೆ ರೂ. 50 ಸಾವಿರ ಪ್ರಥಮ ಬಹುಮಾನ ಸೇರಿದಂತೆ ಆಕರ್ಷಕ ಟ್ರೋಪಿ ಮತ್ತು ರನ್ನರ್ಸ್ ತಂಡಕ್ಕೆ ರೂ. 30 ಸಾವಿರ ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು. ಅಲ್ಲದೆ  ಸಮಿಫೈನಲ್ ಗಳಲ್ಲಿ ಪರಾಭವಗೊಳ್ಳುವ ಎರಡೂ ತಂಡಗಳಿಗೆ ತಲಾ ರೂ.10 ಸಾವಿರ ನಗದು ಬಹುಮಾನ ಮತ್ತು ಟ್ರೋಫಿಯನ್ನು ವಿತರಿಸಲಾಗುವುದು ಎಂದು  ಶಿವಮೂರ್ತಿ ಅವರು ವಿವರಿಸಿದ್ದಾರೆ.

ಪಂದ್ಯಾವಳಿ ನಡೆಯುವ 4 ದಿನಗಳ ಕಾಲ ಕ್ರೀಡಾಪಟುಗಳಿಗೆ ಮತ್ತು ಆಗಮಿಸುವ ಎಲ್ಲಾ ಕ್ರೀಡಾಭಿಮಾನಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಗೊಳಿಸಲಾಗಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಸಕ್ತ ತಂಡಗಳಿಗೆ ರೂ. 5000 ಮೊತ್ತವನ್ನು ಪ್ರವೇಶ ಶುಲ್ಕವನ್ನಾಗಿ ನಿಗದಿಪಡಿಸಲಾಗಿದೆ. ಈ ಪೈಕಿ ರೂ. 2000 ಹಣವನ್ನು ಮುಂಗಡವಾಗಿ ಪಾವತಿಸಿ ತಮ್ಮ ತಂಡಗಳ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಉಳಿದ ಹಣವನ್ನು ಪಂದ್ಯಾವಳಿಗೆ ಆಗಮಿಸುವ ಸಂದರ್ಭದಲ್ಲಿ ಪಾವತಿಸಬೇಕು ಎಂದು ವಿವರಿಸಿರುವ  ಶಿವಮೂರ್ತಿ ಅವರು, ಈ ಕುರಿತು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ಗಳಾದ 8197526764,  7624939309 ಅಥವಾ 990225 4713 ಅನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರಾಗಿ ಕರ್ನಾಟಕದ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದು ಅಕಾಲಿಕವಾಗಿ ನಿಧನರಾದ ಪುನೀತ್ ರಾಜಕುಮಾರ್ ಅವರದ್ದು ನಿಜಕ್ಕೂ ಆದರ್ಶ ವ್ಯಕ್ತಿತ್ವ. ಅವರು ಭೌತಿಕವಾಗಿ ಜನರಿದ್ದ ದೂರವಾಗಿದ್ದರೂ ಅವರ ಸಮಾಜಸೇವೆ ಯುವ ಜನಾಂಗಕ್ಕೆ ಹೆಚ್ಚು ಸ್ಪೂರ್ತಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಅವರ ಸ್ಮರಣೆಗೋಸ್ಕರ  ಮಾಯಮುಡಿಯ ಸಮಾನ ಮನಸ್ಕ ಯುವಕರು ಸೇರಿ ಪುನೀತ್ ರಾಜ್ ಕುಮಾರ್  ಅಭಿಮಾನಿ ಬಳಗವನ್ನು ಇತ್ತೀಚಿಗೆ ಅಸ್ತಿತ್ವಕ್ಕೆ ತರಲಾಗಿದೆ. ಇದರ ಪ್ರಥಮ ಕಾರ್ಯಕ್ರಮವಾಗಿ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದಾಗಿ ಶಿವಮೂರ್ತಿ ಅವರು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಬಳಗದ ಉಪಾಧ್ಯಕ್ಷರಾದ ಎ.ಎಂ. ಮಮ್ಮದಾಲಿ, ಪದಾಧಿಕಾರಿಗಳಾದ ಸಿ. ಎಸ್. ಅನೀಶ್, ಎಸ್.ಎಂ. ಮಲ್ಲಿಕಾರ್ಜುನ, ಎನ್. ಆರ್. ಪ್ರವೀಣ, ಕೆ.ಎಸ್. ಅನೀಶ್,  ಟಿ. ವೈ. ಉಮ್ಮರ್ ಮತ್ತು ಕೆ.ಪಿ. ಪ್ರವೀಣ್ ಉಪಸ್ಥಿತರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,