Header Ads Widget

Responsive Advertisement

ಮೊಗೇರರ ದುಡಿಕುಣಿತ ಜನಾಂಗದ ಅವಿಭಾಜ್ಯ ಅಂಗ; ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ.ರವಿ

ಮೊಗೇರರ ದುಡಿಕುಣಿತ ಜನಾಂಗದ ಅವಿಭಾಜ್ಯ ಅಂಗ; ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ.ರವಿ


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಜಿಲ್ಲಾ ಮೊಗೇರ ಸಮಾಜದ ವತಿಯಿಂದ “ಮೊಗೇರರ ದುಡಿ ಕುಣಿತ” ತರಬೇತಿ ಶಿಬಿರ ನಡೆಯಿತು.

ನಗರದ ಕೋಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ.ರವಿ ಮಾತನಾಡಿ ಮೊಗೇರ ಜನಾಂಗದ ಪ್ರಾಚೀನ ಜನಪದ ಕಲೆಯಾಗಿರುವ ಮೊಗೇರರ ದುಡಿಕುಣಿತ ಜನಾಂಗದ ಅವಿಭಾಜ್ಯ ಅಂಗವಾಗಿದೆ. ತುಳುಭಾಷೆಗೆ ಮತ್ತು ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಕಲೆಯಾಗಿದ್ದು, ಮೊಗೇರ ಜನಾಂಗದ ಕುಲಲಾಂಛನವಾಗಿದೆ ಎಂದರು.

ಮೊಗೇರ ಜನಾಂಗದ ವಿವಾಹ, ನೇಮೋತ್ಸವ ಸೇರಿದಂತೆ ಶುಭ ಕಾರ್ಯಕ್ರಮಗಳಲ್ಲಿ ದುಡಿ ಕುಣಿತವನ್ನು ಮತ್ತು ದುಡಿಯನ್ನು ಹೆಚ್ಚು ಬಳಸಲಾಗುತ್ತದೆ. ಮುಂದಿನ ದಿನಗಳಲ್ಲಿ ಜನಾಂಗದ ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಮೊಗೇರ ಸಮುದಾಯದವರು ಹೆಚ್ಚಿನ ಶ್ರಮ ಪಡೆಯಬೇಕೆಂದು ಕರೆ ನೀಡಿದರು.

ವಿವಾಹ ಕಾರ್ಯಕ್ರಮಕ್ಕೆ ದುಡಿಯನ್ನು ಕಡ್ಡಾಯವಾಗಿ ಬಳಸಬೇಕೆಂದು ತಿಳಿಸಿದ ಅವರು, ಜನಾಂಗವು ಆರ್ಥಿಕವಾಗಿ ಹಿಂದೆ ಉಳಿದಿದ್ದರೂ ಸಂಸ್ಕೃತಿ ಶ್ರೀಮಂತವಾಗಿದೆ ಎಂದರು.

ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿ, ಮೊಗೇರ ಜನಾಂಗದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಲು ಈ ರೀತಿಯ ತರಬೇತಿ ಶಿಬಿರಗಳು ನಡೆಯುತ್ತಿರಬೇಕು. ಸಮಾಜದ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು, ದುಡಿ ಕಲೆಗೆ ಇರುವ ಮಹತ್ವವನ್ನು ತಿಳಿದುಕೊಳ್ಳಬೇಕು. ಅಕಾಡೆಮಿ ಸಹಕಾರದೊಂದಿಗೆ ಈ ಶಿಬಿರ ನಡೆಯುತ್ತಿರುವುದು ಹರ್ಷದಾಯಕವೆಂದು ತಿಳಿಸಿದರು.

ಜಿ.ಪಂ ಮಾಜಿ ಅಧ್ಯಕ್ಷ ಬಿ.ಶಿವಪ್ಪ ಮಾತನಾಡಿ, ಮೊಗೇರರ ದುಡಿಕುಣಿತಕ್ಕೆ ತನ್ನದೇ ಆದ ಇತಿಹಾಸವಿದ್ದು, ದುಡಿಕುಣಿತ ತರಬೇತಿ ಶಿಬಿರ ಆಯೋಜನೆ ಮಾಡಲು ಸಹಕಾರ ನೀಡಿದ ತುಳು ಸಾಹಿತ್ಯ ಅಕಾಡೆಮಿಗೆ ಧನ್ಯವಾದ ಸಲ್ಲಿಸಿದರು.

ಸೋಮವಾರಪೇಟೆ ತಾಲ್ಲೂಕು ಮೊಗೇರ ಸಮಾಜದ ಅಧ್ಯಕ್ಷ ಬಿ.ಎಂ.ದಾಮೋದರ ಮಾತನಾಡಿ, ಸಂಸ್ಕೃತಿಯ ಅಮೂಲ್ಯ ಭಾಗವಾಗಿರುವ ದುಡಿಕುಣಿತ ಮೊಗೇರ ಸಮುದಾಯದ ಹೆಮ್ಮೆಯ ಸಂಕೇತವಾಗಿದೆ. ಚೋಮನ ದುಡಿ ಕಾದಂಬರಿ ಸೇರಿದಂತೆ ತುಳು ಸಂಸ್ಕೃತಿಯ ಅಧ್ಯಯನದಲ್ಲಿ ಮೊಗೇರರ ದುಡಿಯ ಮಹತ್ವ ತಿಳಿಸಿದ್ದು, ಶಿಬಿರ ಸದುಪಯೋಗವಾಗಬೇಕು ಎಂದರು.

ವಿರಾಜಪೇಟೆ ತಾಲ್ಲೂಕು ಗೌರವಾಧ್ಯಕ್ಷ ಮೋಹನ್ ಜಿ., ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪಿ.ಬಿ.ಸುರೇಶ್, ಸದಸ್ಯರಾದ ಸೋಮಯ್ಯ, ನಾರಾಯಣ, ವಿಶ್ವನಾಥ್, ಪಿ.ಸಿ.ರಘು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಪಿ.ಬಿ.ಜನಾರ್ಧನ ಸ್ವಾಗತಿಸಿ, ನಿರೂಪಿಸಿದರು. ಕೆ.ಜಿ.ರಮ್ಯ ಪ್ರಾರ್ಥಿಸಿ, ಪಿ.ಸಿ.ರಮೇಶ್ ವಂದಿಸಿದರು. ಕೆ. ಮನ್ಸ ಮೊಗೇರ, ಮಾದವ, ಚಂದ್ರಶೇಖರ ಅವರು ದುಡಿಕುಣಿತದ ತರಬೇತಿಯನ್ನು ನೀಡಿದರು. ತರಬೇತಿ ಶಿಬಿರ ಶುಕ್ರವಾರ ಕೂಡ ನಡೆಯಲಿದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,