ಕೊಡಗಿನ ಮುಗಿದು ಹೋಗುವ ನಿಕ್ಷೇಪಗಳ ಬಗ್ಗೆ ಹೋರಾಟ ತಂಡ ರಚನೆಯಾಗಬೇಕಾಗಿದೆ?
ನ್ಯಾಯಾಲಯ ಅಕ್ರಮ ಒತ್ತುವರಿದಾರರಿಗೆ ನೋಟೀಸು ನೀಡಲು ಹಾಗೂ ಸ್ವಯಂಪ್ರೇರಿತ ತೆರವು ಮಾಡಲು ತಿಂಗಳ ಕಾಲಾವಕಾಶ ನೀಡಿದ್ದು, ಆ ಅವಧಿ ಈಗ ಮುಕ್ತಾಯವಾಗಿದೆ. ಕಾರ್ಯಾಚರಣೆ ಯಾವಾಗ ಮತ್ತೆ ಆರಂಭ ಎಂಬ ಬಗ್ಗೆ ಜನರಲ್ಲಿ ಗುಸು ಗುಸು ಆರಂಭವಾಗಿದೆ.
ಪೊನ್ನಂಪೇಟೆಗೆ ನೂತನ ತಹಶೀಲ್ಧಾರ್ ಪ್ರಶಾಂತ್ ಬಂದ ನಂತರ ಈ ಹಿಂದಿನ ಪ್ರಭಾರ ತಹಶೀಲ್ಧಾರ್ ಯೋಗಾನಂದ ಅವರು ತಾವು ವಹಿಸಿದ್ದ ಕೀರೆಹೊಳೆ, ತೋಡು ತೆರವು ಜವಾಬ್ದಾರಿಯನ್ನು ನೂತನ ತಹಶೀಲ್ಧಾರ್ ರವರಿಗೆ ಹಸ್ತಾಂತರಿಸುವ ಕಾರ್ಯ ಇಂದು ನಾಳೆ ನಡೆಯಬಹುದು. ಈಗಾಗಲೇ ನಮ್ಮ ಗೌರವ ಸಲಹೆಗಾರರಾದ ಕೆ.ಬಿ.ಗಿರೀಶ್ ಗಣಪತಿ ಅವರು ಪ್ರಶಾಂತ್ ಅವರನ್ನು ಭೇಟಿಯಾಗಿ ಕಾರ್ಯಾಚರಣೆ ತೆರವು ಬೇಗ ಆರಂಭಿಸುವಂತೆ ಮಾತೂಕತೆ ನಡೆಸಿದ್ದರು. ಬಹುಶಃ ಮುಂದಿನವಾರ ಸ್ಥಗಿತವಾಗಿದ್ದ ಕಾರ್ಯಾಚರಣೆ ಆರಂಭವಾಗಲಿದೆ. ಕಾವೇರಿ ಜಲಮೂಲದ ವಿಚಾರವಾಗಿ, ನದಿಪಾತ್ರದ ಗಡಿಯನ್ನು ಅತಿಕ್ರಮಣ ಮಾಡಿದವರು ಇಂದಲ್ಲ, ನಾಳೆ ತೆರವು ಮಾಡಲೇ ಬೇಕಾಗಿದೆ.
ಗೋಣಿಕೊಪ್ಪಲು ಜನ ಈ ಹಿಂದಿನಂತಿಲ್ಲ. ಇಲ್ಲಿನ ಜಲಮೂಲ ಮತ್ತೆ ತನ್ನ ಮೂಲ ಸ್ವರೂಪಕ್ಕೆ(ಪರಿಶುದ್ಧವಾಗಿ) ಮರಳುವ ಬಗ್ಗೆ ಉತ್ಸುಕರಾಗಿದ್ದಾರೆ. ಸಹಜವಾಗಿಯೇ ತಹಶೀಲ್ಧಾರ್ ಯೋಗಾನಂದ ಅವರ ದಿಟ್ಟ ಕಾರ್ಯಾಚರಣೆಯನ್ನು ನಾವೆಲ್ಲಾ ಮೆಚ್ಚಿದ್ದೇವೆ. ಆದರೆ, ಇದೀಗ ಅಧಿಕಾರ ಹಸ್ತಾಂತರದ ವಿಚಾರದಿಂದಾಗಿ ಕಾರ್ಯಾಚರಣೆ ವಾರ ಕಾಲ ಮುಂದೆ ಹೋಗಬಹುದು. ಈ ನಡುವೆ ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷರು, ಗೌರವಾಧ್ಯಕ್ಷರು, ಪದಾಧಿಕಾರಿಗಳು ಪೊನ್ನಂಪೇಟೆ ತಹಶೀಲ್ಧಾರ್ ಅವರನ್ನು ಭೇಟಿ ಮಾಡಿ ಮಾತೂಕತೆ ನಡೆಸಲಿದ್ದಾರೆ.
ಗೋಣಿಕೊಪ್ಪಲಿನ ಜಲಮೂಲ ಅತಿಕ್ರಮಣ ತೆರವು ಬಗ್ಗೆ ಜಿಲ್ಲೆಯ ಜನತೆಯಲ್ಲದೆ, ಮಹಾನಗರದಲ್ಲಿ ನೆಲೆಸಿರುವ ನಮ್ಮ ನಗರದ ಅಭಿಮಾನಿಗಳು ಸಹಜವಾಗಿಯೇ ಉತ್ಸುಕರಾಗಿದ್ದಾರೆ. ಮಳೆಗಾಲಕ್ಕೂ ಮುನ್ನ ಅತಿಕ್ರಮಿಗಳು ತಾಲ್ಲೂಕು ಆಡಳಿತದೊಂದಿಗೆ ಸಹಕರಿಸುವದು ಅನಿವಾರ್ಯ. ಇಲ್ಲವೇ ಮುಂದಿನ ಮಳೆಗಾಲದಲ್ಲಿ ಗೋಣಿಕೊಪ್ಪಲಿನಲ್ಲಿ ಕೆಲವು ಕಟ್ಟಡಗಳು ಉದುರಲೂಬಹುದು.
ನಮ್ಮದು ಸುಶಿಕ್ಷಿತ, ವಿದ್ಯಾವಂತ ಸಮಾಜ. ಇದನ್ನು ಅತಿಕ್ರಮಿಗಳು ಪ್ರತಿಷ್ಠೆ ಎಂದು ಭಾವಿಸದೆ ಸಮಾಜ ಸ್ವಾಸ್ಥ್ಯ ಕಾಪಾಡಲು ಮುಕ್ತವಾಗಿ ಅಧಿಕಾರಿಗಳಿಗೆ ಸಹಕಾರ ನೀಡಬೇಕಾಗಿದೆ. ಇಲ್ಲಿ ಯಾರಿಗೆ ಯಾರೂ ವೈರಿಗಳಿಲ್ಲ. ಏನೋ ಸಣ್ಣ ಪುಟ್ಟ ತಪ್ಪುಗಳು ಆಗಿರಬಹುದು. ಅದನ್ನು ಸರಿಪಡಿಸಲು ವೇದಿಕೆ ಸಿದ್ಧವಾಗಿದೆ. ಮುಂದಿನ ಕಾನೂನಿನ ಛಾಟಿ ಏಟಿಗೆ ಸಿಲುಕಿದರೆ ಜಲಮೂಲವನ್ನು ಅತಿಕ್ರಮಿಸಿಕೊಂಡಿರುವವರು ಮುಂದೆ ಭಾರೀ ನಷ್ಟ ಹಾಗೂ ಅವಮಾನವನ್ನು ಎದುರಿಸಬೇಕಾಗಬಹುದು!? ಪ್ರತಿಷ್ಠೆ ಕೈ ಬಿಡೋಣ. ಉತ್ತಮ ಸ್ವಚ್ಛ ನಾಗರಿಕ ಸಮಾಜ ನಿರ್ಮಾಣಕ್ಕೆ ಮುಂದಾಗಿ ಗೋಣಿಕೊಪ್ಪಲು ಪರಿಸರ ಕಾಪಾಡೋಣ. ಇದು ನಮ್ಮೆಲ್ಲರ ಧ್ಯೇಯವಾಗಲಿ.
ಬೆರಳೆಣಿಕೆಯಷ್ಟು ಮಂದಿ ಮಾತ್ರಾ ಜಲಮೂಲ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇವರಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಗಲಾರದು. ಆದರೆ, ಇತ್ತೀಚೆಗೆ ತಡೆಯಾಜ್ಞೆ ಸಿಕ್ಕಿರುವದಾಗಿ ಕೆಲವು ಅತಿಕ್ರಮಿಗಳು ಹೇಳಿಕೊಂಡಿದ್ದರು. ಇಂತಹಾ ವಾದ ವಿವಾದಗಳಿಂದ ಮುಕ್ತವಾಗಿ ನಾವು ಯೋಚಿಸಬೇಕಾಗಿದೆ.
ಕೋರ್ಟ್ ಆದೇಶದ ಮೇರೆ ಮಹಾನಗರಗಳಲ್ಲಿ ದೇವಸ್ಥಾನ, ಮಸೀದಿ, ಮಂದಿರಗಳನ್ನೇ ರಸ್ತೆಯ ಅಂಚಿನಿಂದ ತೆರವು ಮಾಡಲಾಗುತ್ತಿದೆ. ಹೀಗಿದ್ದಾಗ ಗೋಣಿಕೊಪ್ಪಲು ಅತಿಕ್ರಮ ತೆರವು ತಹಶೀಲ್ಧಾರ್ ಗೆ ಕಷ್ಟವಲ್ಲ!? ನೂತನ ತಹಶೀಲ್ಧಾರ್ ರನ್ನು ಕೆಲವರು ಅತಿಕ್ರಮಿಗಳು ಭೇಟಿ ಮಾಡಿದ್ದಾರೆ. ಬೇಗ ಕಾರ್ಯಾಚರಣೆ ನಡೆಸಲು ಒತ್ತಡ ಹಾಕುವವರೂ ಇದ್ದಾರೆ. ಕೀರೆಹೊಳೆಯ ಉಗಮ ಸ್ಥಾನದಿಂದ ಲಕ್ಷ್ಮಣ ತೀರ್ಥ ನದಿ ಸೇರುವವರೆಗೂ ಅತಿಕ್ರಮ ತೆರವು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ. ಈ ಬಗ್ಗೆ ನಿರಂತರ ಕಾರ್ಯಯೋಜನೆ ಅಗತ್ಯ.
ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪನವರಿಗೂ ಗೋಣಿಕೊಪ್ಪಲಿನ ಜಲಮೂಲದ ಅನಿಷ್ಟ ವಿಚಾರದ ಬಗ್ಗೆ ಫೋನ್ ಮೂಲಕ ವಿವರಿಸಲಾಗಿದೆ. ಶಾಸಕ ಬೋಪಯ್ಯ ಅವರಿಗೂ ಕೀರೆಹೊಳೆ, ತೋಡು ಅತಿಕ್ರಮ ತೆರವು ಹಾಗೂ ಇಲ್ಲಿನ ಸಂಪೂರ್ಣ ಕಸ, ತ್ಯಾಜ್ಯ ನಿವಾರಣೆ ಹಾಗೂ ವೈಜ್ಞಾನಿಕ ನಿರ್ವಹಣೆ ಬಗ್ಗೆ ಉತ್ಸಾಹವಿದೆ.
ಗೋಣಿಕೊಪ್ಪಲು ಜಲಮೂಲ ಸಂರಕ್ಷಣೆ ಬಗ್ಗೆ ದೂರದ ನಾಪೋಕ್ಲು, ಕುಟ್ಟ, ಕುಶಾಲನಗರ, ಸುಂಟಿಕೊಪ್ಪ, ಮೈಸೂರು, ಬೆಂಗಳೂರು ಕೊಡವ ಸಮಾಜಗಳು, ಕೊಡಗಿನ ಮೂಲದ ಅನಿವಾಸಿ ಭಾರತೀಯರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಲವಷ್ಟು ಮಂದಿ ಹೋರಾಟಕ್ಕೆ ಬೇಕಾದ ಖರ್ಚು ವೆಚ್ಚಗಳನ್ನೂ ನೀಡಲು ಮುಂದೆ ಬಂದಿದ್ದಾರೆ. ಮುಂದಿನ ಸ್ವಚ್ಛತಾ ಆಂದೋಲನಕ್ಕೂ ವಿವಿಧ ಅನುದಾನ ತರುವ ಬಗ್ಗೆ ಆಶಾದಾಯಕ ಚರ್ಚೆ ಬುದ್ದಿಜೀವಿಗಳ ನಡುವೆ ನಡೆದಿದೆ. ಕನಿಷ್ಟ ಏಪ್ರೀಲ್ ಅಂತ್ಯಕ್ಕೂ ಮುನ್ನ ಗೋಣಿಕೊಪ್ಪಲು ಕೀರೆಹೊಳೆ, ತೋಡು ಒತ್ತುವರಿ ತೆರವು ಪೂರ್ಣಗೊಂಡಲ್ಲಿ ಹೊಳೆ ದಡದಲ್ಲಿ ಕಟ್ಟಡ ಕಟ್ಟಿರುವವರಿಗೆ ಮೇ ತಿಂಗಳಿನಲ್ಲಿ ಸ್ವಂತ ಖರ್ಚಿನಿಂದ ತಡೆಗೋಡೆ ನಿರ್ಮಾಣಕ್ಕೆ ಗ್ರಾ.ಪಂ. ಮೂಲಕ ಎನ್.ಓ.ಸಿ. ಸಿಗಲು ಸಾಧ್ಯವಾಗಬಹುದು. ಇಲ್ಲವೇ ಮತ್ತಷ್ಟು ಸಂಘರ್ಷಕ್ಕೂ ಇದು ದಾರಿಯಾಗಬಹುದು.
ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆ ಸದ್ಯಕ್ಕೆ ಅತಿಕ್ರಮಿಗಳು ಹಾಗೂ ತೆರವು ಕಾರ್ಯ ಮಾಡುವ ಅಧಿಕಾರಿಗಳ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ದುಡುಕಿ ನಿರ್ಧಾರ ಕೈಗೊಳ್ಳುವದಿಲ್ಲ ಎಂದಿದೆ. ಈಗಾಗಲೇ ಶೇ.30 ಅತಿಕ್ರಮ ತೆರವು ನಡೆದಿರುವ ಸಾಧ್ಯತೆ ಇದ್ದು ಇನ್ನೂ ಶೇ.70 ತೆರವು ಕಾರ್ಯ ಬಾಕಿ ಇದೆ. ತೆರವು ಕಾರ್ಯಕ್ಕೆ ಬಳಸುವ ಜೆಸಿಬಿ, ಟಿಪ್ಪರ್ ಬಾಡಿಗೆ, ಸಿಬ್ಬಂದಿ, ಕಾರ್ಮಿಕರ ವೇತನವನ್ನು ತಾಲ್ಲೂಕು ಆಡಳಿತವೇ ಭರಿಸುತ್ತದೆ.
ಇಲ್ಲಿ ಗ್ರಾ.ಪಂ. ಕೀರೆಹೊಳೆ, ತೋಡಿನೊಳಗೆ ಕಟ್ಟಿರುವ ತಡೆಗೋಡೆಯನ್ನು ತಹಶೀಲ್ಧಾರ್ ಯೋಗಾನಂದ್ ಅವರು ಮುಲಾಜಿಲ್ಲದೆ ತೆರವು ಮಾಡಿರುವದೂ ಶ್ಲಾಘನೀಯ ಕಾರ್ಯ. ಹಿಂದಿನ ಪಂಚಾಯಿತಿ ಆಡಳಿತ ವೈಫಲ್ಯ ಹಾಗೂ ಹೊಳೆ, ತೋಡು ಗಡಿ ತಿಳಿಯದೆ ಕಟ್ಟಲಾದ ತಡೆಗೋಡೆಗೆ ಈಗಿನ ನೂತನ ಗ್ರಾ.ಪಂ. ಸಾಕಷ್ಟು ಬೆಲೆ ತೆರುವಂತಾಗಿದೆ. ಅನುದಾನ ಹೊಂದಾಣಿಕೆ ಮಾಡಲು ಶಾಸಕರತ್ತ ಮುಖ ಮಾಡಿದೆ.
ನಮ್ಮ ವೇದಿಕೆಯ ಕಾರ್ಯ ಯೋಜನೆ ಬಹುವಾರ್ಷಿಕ ಯೋಜನೆಯಾಗಿದ್ದು ಒಂದೆರಡು ವರ್ಷದಲ್ಲಿಯೇ ಗೋಣಿಕೊಪ್ಪಲನ್ನು ಸರ್ವಾಂಗೀಣ ಸುಂದರ ಮಾಡುತ್ತೀವೆಂದು ಎಲ್ಲಿಯೂ ಹೇಳುತ್ತಿಲ್ಲ. 5 ರಿಂದ 10 ವರ್ಷವಾದರೂ ಸ್ವಚ್ಛತಾ ಕಾರ್ಯ, ಜಾಗ್ರತಿ ನಿತ್ಯ ನಿರಂತರವಾಗಲಿದೆ.
ಹ್ಞಾಂ.. ಮತ್ತೊಂದು ಪ್ರಮುಖ ವಿಚಾರ... ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ, ಮರಳುಗಾರಿಕೆ ,ಅಕ್ರಮ ಕೂಟದ ಕೈವಾಡ ಮೇರೆ ಮೀರಿದೆ. ಇದು ಮುಗಿದು ಹೋಗುವ ನಿಕ್ಷೇಪ. ಕೊಡಗಿನ ಮರಳು, ಕಲ್ಲು ಹೊರ ಜಿಲ್ಲೆಗೆ ಸಾಗಾಟವಾಗದಂತೆ ಎಚ್ಚರ ವಹಿಸಬೇಕಾಗಿದೆ. ಪರವಾನಗಿ ಇಲ್ಲದ ಎಷ್ಟೋ ಅಕ್ರಮ ಗಣಿಗಾರಿಕೆ ಜಿಲ್ಲೆಯಲ್ಲಿ ಜೀವಂತವಾಗಿದೆ. ಇದನ್ನು ಮಟ್ಟ ಹಾಕಲು ಜಿಲ್ಲೆಯಲ್ಲಿ ನಿಷ್ಪಕ್ಷಪಾತ ಹೋರಾಟದ ತಂಡ ರೂಪುಗೊಳ್ಳಬೇಕಾಗಿದೆ. ಕೊಡಗು ಜಿಲ್ಲೆಯ ಶ್ರೀ ಸಾಮಾನ್ಯನಿಗೂ ತಲೆಯ ಮೇಲೆ ಸೂರು ನಿರ್ಮಾಣಕ್ಕೆ ಕಡಿಮೆ ದರದಲ್ಲಿ ಮರಳು, ಕಲ್ಲು ದೊರೆಯುವಂತಾಗಬೇಕು.
ಇಂತಹಾ ನಿಕ್ಷೇಪಗಳ ದಂಧೆಗೆ ಕಡಿವಾಣ ಅಗತ್ಯ. ಮರಳು ಹಾಗೂ ಕಲ್ಲು ಕೊಡಗು ಜಿಲ್ಲೆಯಿಂದ ದುಬಾರಿ ಲಾಭಕ್ಕೆ ಹೊರ ಹೋಗದಂತೆ ನೋಡಿಕೊಳ್ಳಬೇಕು. ಕೊಡಗಿನ ಜನತೆಗೆ ಕಡಿಮೆ ದರದಲ್ಲಿ ಇದರ ಲಭ್ಯತೆ ಆಗುವಂತೆ ಪ್ರತ್ಯೇಕ ಕಾನೂನು ರೂಪಿಸುವದು ಅಗತ್ಯ. ಈ ನಿಟ್ಟಿನಲ್ಲಿ ಕಾವೇರಿ ಜಾಗ್ರತಿ ಹೋರಾಟದಂತೆ ಕೊಡಗಿನ ಮುಗಿದು ಹೋಗಬಹುದಾದ ನಿಕ್ಷೇಪಗಳ ಸಂರಕ್ಷಣೆ ಹಾಗೂ ಸುಸ್ಥಿರ ವಿತರಣೆಯತ್ತ ಹೋರಾಟ ತಂಡವೊಂದು ರಚನೆಯಾಗಬೇಕಾಗಿದೆ.
ಕೊಡಗಿನಲ್ಲಿಯೂ ರಸ್ತೆ, ಚರಂಡಿ, ಕಾಂಕ್ರೀಟ್ ರಸ್ತೆ, ಕಟ್ಟಡ ಕಾಮಗಾರಿ ಇತ್ಯಾದಿಗಳಲ್ಲಿ Pwd ಹಾಗೂ ಜಿ.ಪಂ., ತಾ.ಪಂ., ಗ್ರಾ.ಪಂ. ಕಾಮಗಾರಿಗಳಲ್ಲಿ ಶೇ25 ಕ್ಕೂ ಅಧಿಕ ಅನುದಾನ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ಸಂದಾಯವಾಗುತ್ತಿರುವದು ಗುಟ್ಟಾಗೇನೂ ಉಳಿದಿಲ್ಲ. ಈ ಕಾರಣದಿಂದಾಗಿಯೇ ಪ್ರತೀ ಮಳೆಗಾಲದ ನಂತರ ಕಳಪೆ ಕಾಮಗಾರಿಯನ್ನು ನಾವೆಲ್ಲಾ ನೋಡಬೇಕಾಗಿರುವದು.. ಗಣಿಗಾರಿಕೆ, ಮರಳುಗಾರಿಕೆಯಲ್ಲಿಯೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನುಂಗಣ್ಣ ಅಧಿಕಾರಿಗಳು ಒಕ್ಕರಿಸಿರುವದರಿಂದ ಇವರಿಗೆ ಪಾಠ ಕಲಿಸುವ ಧೈರ್ಯವಂತರ ಹೋರಾಟ ಪಡೆ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬರಬೇಕಾದ ಅಗತ್ಯವಿದೆ. ಮುಂದೆ ಮತ್ತಷ್ಟು ಹೂರಣ ನಿಮ್ಮ ಮುಂದೆ ಇಡಲಿದ್ದೇನೆ.....
✍️....ಟಿ.ಎಲ್.ಶ್ರೀನಿವಾಸ್,
ಮಾಧ್ಯಮ ವಕ್ತಾರ,
ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆ.
ಕೊಡಗು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network