Header Ads Widget

Responsive Advertisement

ಹಕ್ಕು ಕಸಿದುಕೊಳ್ಳುವ ಯಾವುದೇ ದುರುದ್ದೇಶವಿಲ್ಲ- ಕೆ.ಎಂ.ಎ. ಸ್ಪಷ್ಟನೆ

ಹಕ್ಕು ಕಸಿದುಕೊಳ್ಳುವ ಯಾವುದೇ ದುರುದ್ದೇಶವಿಲ್ಲ- ಕೆ.ಎಂ.ಎ. ಸ್ಪಷ್ಟನೆ

ಹಕ್ಕು ಪ್ರತಿಪಾದನೆ ಸಾಂವಿಧಾನಿಕ ಅಧಿಕಾರ: ಕೊಡವ ಮುಸ್ಲಿಂ ಅಸೋಸಿಯೇಷನ್ ನಿಲುವು ಪ್ರಕಟ


ಪೊನ್ನಂಪೇಟೆ, ಫೆ.07: ಹಕ್ಕುಗಳನ್ನು ಪ್ರತಿಪಾದಿಸುವುದು ಸಂವಿಧಾನ ನೀಡಿದ ಅಧಿಕಾರವಾಗಿರುತ್ತದೆ. ಇದನ್ನು ಟೀಕಿಸುವುದು ಸಂವಿಧಾನ ವಿರೋಧಿ ಧೋರಣೆ  ಎಂದು ಹೇಳಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.) ಹಕ್ಕನ್ನು ಪ್ರತಿಪಾದಿಸಿದರೆ ಅದು ಮತ್ತೊಬ್ಬರ ಹಕ್ಕನ್ನು ಕಸಿದಂತೆ ಆಗುವುದಿಲ್ಲ. ಪಾರಂಪರಿಕವಾಗಿ ಬಂದಿರುವ ಯಾವುದೇ ಹಕ್ಕುಗಳನ್ನು ಕಸಿದುಕೊಳ್ಳುವ ದುರುದ್ದೇಶ ಸಂಸ್ಥೆಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ. ಎಂ. ಎ. ಪದಾಧಿಕಾರಿಗಳು, ಕೋವಿ ಹಕ್ಕಿನ ಕುರಿತಂತೆ ಇದೀಗ ಜನಾಂಗವೊಂದರ ಹಕ್ಕನ್ನೇ ಕಿತ್ತುಕೊಳ್ಳುವ ಪ್ರಯತ್ನ ನಡೆಸುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು. ಹಕ್ಕು ಕಿತ್ತುಕೊಳ್ಳುವ ಯಾವುದೇ ಪ್ರಯತ್ನ ನಡೆಸಿಲ್ಲ. ಅದರ ಅಗತ್ಯವೂ ಇಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಅಷ್ಟೇ. ಈ ವಾಸ್ತವ ತಿಳಿದಿದ್ದರೂ ಕೋವಿ ಹಕ್ಕಿನ ಕುರಿತು ವಿವಾದ ಸೃಷ್ಟಿಸುತ್ತಿರುವುದು ಯಾರಿಗೂ ಶೋಭೆಯಲ್ಲ ಎಂದಿದ್ದಾರೆ.

ಕೊಡಗಿನ ಬಂದೂಕು ವಿನಾಯಿತಿ ಕುರಿತಂತೆ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.)ಗೆ  ಸ್ಪಷ್ಟವಾದ ನಿಲುವಿದೆ. ಸಂಸ್ಥೆಯ ವತಿಯಿಂದ ಇದನ್ನು ಕಳೆದ ಹಲವು ವರ್ಷಗಳಿಂದ ಪ್ರತಿಪಾದಿಸಲಾಗುತ್ತಿದೆ. ಇತ್ತೀಚಿಗೆ ಅಸ್ತಿತ್ವಕ್ಕೆ ಬಂದಿರುವ ಕೊಡಗು ಮೂಲನಿವಾಸಿಗಳ ಸಾವಿಧಾನಿಕ ಹಕ್ಕು ಸಂರಕ್ಷಣಾ ಒಕ್ಕೂಟದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್  ಭಾಗವಾಗಿದ್ದು, ಕೊಡಗಿನ ಮೂಲ ನಿವಾಸಿಗಳ ಹಕ್ಕಿನ ಹೋರಾಟ ಮತ್ತು ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಕೊಡಗಿನ ಯಾವುದೇ ಮೂಲನಿವಾಸಿಗಳು ಸಂಘಟಿಸುವ ಹೋರಾಟಗಳಿಗೆ  ಕೆ. ಎಂ. ಎ. ಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿರುವ ಪದಾಧಿಕಾರಿಗಳು, ಇಂದು ಕೊಡಗಿನಲ್ಲಿ ಜನಾಂಗೀಯ ಸಾಮರಸ್ಯ ಮತ್ತಷ್ಟು ಗಟ್ಟಿಗೊಳ್ಳಬೇಕಾದ ಅನಿವಾರ್ಯತೆಯಿದೆ. ಕೆ. ಎಂ. ಎ. ಸಂಸ್ಥೆಯು ಕೂಡ ಇದಕ್ಕೆ ಮೊದಲ ಆದ್ಯತೆ ನೀಡುತ್ತಿದೆ. ಆದರೆ ಸ್ವಾಭಿಮಾನವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಒತ್ತಿ  ಹೇಳಿದ್ದಾರೆ.

ಕೊಡಗಿನ ಜಮ್ಮ ಹಿಡುವಳಿದಾರರ ಮುಂದಿನ ಪೀಳಿಗೆಗೆ ಬಂದೂಕು ವಿನಾಯಿತಿ ಪತ್ರ ಪಡೆಯುವುದು ಬಹುದೊಡ್ಡ ಕಷ್ಟದ ಕೆಲಸವಾಗಿದೆ. ಹಿಂದೆ ಇದ್ದ ಜಮಾಬಂದಿ ವ್ಯವಸ್ಥೆಯಲ್ಲಿ 18 ವರ್ಷ ಪ್ರಾಯ ಪೂರ್ತಿಯಾದ ಜಮ್ಮಾ ಹಿಡುವಳಿದಾರರ ಮಕ್ಕಳು ತಮ್ಮ ಕುಟುಂಬ ಸದಸ್ಯರ ಒಪ್ಪಿಗೆ ಪತ್ರದೊಂದಿಗೆ ಸಂಬಂಧಿಸಿದವರಿಗೆ ಅರ್ಜಿ ಸಲ್ಲಿಸಿದರೆ ಗರಿಷ್ಠ 45 ದಿನದೊಳಗಾಗಿ ಅವರ ಹೆಸರು 6ನೇ ಕಲಂಗೆ ಸೇರುತ್ತಿತ್ತು. ಇದರ ಆಧಾರದಲ್ಲಿ ಬಂದೂಕು ವಿನಾಯಿತಿ ಪತ್ರ ದೊರೆಯುತ್ತಿತ್ತು. ಆದರೆ ಇದೀಗ ಜಮಾಬಂದಿ ವ್ಯವಸ್ಥೆ ರದ್ದಾಗಿ ಆರ್.ಟಿ.ಸಿ. ಜಾರಿಗೆ ಬಂದ ನಂತರ ಭೂಮಿ ಮತ್ತು ಜಾಗದ ಹಕ್ಕುದಾರರರಾಗಲು 9ನೇ ಕಲಂಗೆ ಸೇರುವುದು ಅನಿವಾರ್ಯವಾಗಿದೆ. ಹೀಗೆ ಸೇರಲು ತಂದೆಯ ಜಮ್ಮಾ ಆಸ್ತಿ ಮಕ್ಕಳಿಗೆ ಪರಭಾರೆಯಾಗಿ ನೋಂದಾವಣಿಯಾದರೆ ಮಾತ್ರ ಸಾಧ್ಯ. ಇದರಿಂದ ಜಮ್ಮಾ ಹಿಡುವಳಿದಾರರ ಮುಂದಿನ ತಲೆಮಾರು ಬಂದೂಕು ವಿನಾಯಿತಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ವಿವರ ನೀಡಿರುವ  ಕೆ.ಎಂ.ಎ. ಸಂಸ್ಥೆ, ಮೂಲನಿವಾಸಿ ಜನಾಂಗ ಎಂಬ ದೃಢೀಕರಣ ಪತ್ರದ ಆಧಾರದಲ್ಲಿ ಬಂದೂಕು ವಿನಾಯಿತಿ ಪತ್ರ ಪಡೆಯಲು ಕೊಡಗಿನ ಎಲ್ಲಾ ಅಧಿಕೃತ ಮೂಲನಿವಾಸಿಗಳಿಗೆ ಅವಕಾಶ ದೊರೆಯಬೇಕು ಎಂದು ಒತ್ತಾಯಿಸಿದ್ದಾರೆ.

ಕೊಡಗಿನ ಎಲ್ಲಾ ಮೂಲನಿವಾಸಿ ಜನಾಂಗಕ್ಕೆ ತಮ್ಮ ಜಾತಿಯ ಆಧಾರದಲ್ಲಿ ಬಂದೂಕು ವಿನಾಯತಿ ಹಕ್ಕು ದೊರೆತರೆ ಅದರಿಂದ ಯಾರಿಗೂ ನಷ್ಟವಾಗುವುದಿಲ್ಲ. ಅಲ್ಲದೆ, ಕೊಡಗಿನ ಯಾವುದೇ ಯಾವುದೇ ಜನಾಂಗ ಏನನ್ನೂ ಕಳೆದುಕೊಳ್ಳುವುದಿಲ್ಲ. ಈ ಕುರಿತು ಯಾವುದೇ ವಿವಾದದ ಅಗತ್ಯವಿಲ್ಲ. ಈ ಬೇಡಿಕೆಯನ್ನು  ಬೇರೆ-ಬೇರೆ ರೀತಿಯಾಗಿ ವ್ಯಾಖ್ಯಾನಿಸುವುದು ಕೂಡ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಕೆ. ಎಂ. ಎ. ಪದಾಧಿಕಾರಿಗಳು, ಈ ಎಲ್ಲಾ  ಹಕ್ಕುಗಳನ್ನು ಕಾನೂನಾತ್ಮಕವಾಗಿಯೇ ಕೇಳಲಾಗುತ್ತಿದೆ.ಆದರೆ  ಇದನ್ನೇ ನೆಪವಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕ ಮತ್ತು ಜನಾಂಗೀಯ ನಿಂದನೆಗಳು ವ್ಯಾಪಕವಾಗುತ್ತಿದೆ. ಇದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂದು  ಆಗ್ರಹಿಸಿದರಲ್ಲದೆ, ಕೊಡಗಿನ ಸಾಮರಸ್ಯ ಬದುಕಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಗೋಷ್ಠಿಯಲ್ಲಿ ಕೆ. ಎಂ. ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಹಿರಿಯ ಉಪಾಧ್ಯಕ್ಷರಾದ ಆಲೀರ ಎ.ಅಹಮದ್ ಹಾಜಿ,  ಉಪಾಧ್ಯಕ್ಷರಾದ ಡಾ. ಜೋಯಿಪೇರ ಎ. ಕುಜ್ಹಬ್ದುಲ್ಲಾ, ಪದಾಧಿಕಾರಿಗಳಾದ ಅಕ್ಕಳತಂಡ ಎಸ್. ಮೊಯ್ದು, ಮೀತಲತಂಡ ಎಂ. ಇಸ್ಮಾಯಿಲ್, ಮಂಡೇಡ ಎ.ಮೊಯ್ದು ಮೊದಲಾದವರು ಉಪಸ್ಥಿತರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,