Header Ads Widget

Responsive Advertisement

ಕೆಲವು ಚಿತ್ರಗಳು ನಾಯಕನಿಂದಲ್ಲ.. ಕಥೆ ಮತ್ತು ನಿದೇ೯ಶಕನಿಂದ ಗೆಲ್ಲುತ್ತದೆ.

ಕೆಲವು ಚಿತ್ರಗಳು ನಾಯಕನಿಂದಲ್ಲ.. ಕಥೆ ಮತ್ತು ನಿದೇ೯ಶಕನಿಂದ ಗೆಲ್ಲುತ್ತದೆ. 


(ಉದಾ.. ಕಾಶ್ಮೀರಿ ಫೈಲ್ಸ್ ) 

ಸಿನಿಮಾದಲ್ಲಿ ನಟಿಸಿದ ಹಿರೋ, ಹಿರೋಯಿನ್ ಯಾರು ಎಂಬುದಕ್ಕಿಂತ ನನ್ನಂಥ ಅನೇಕರಿಗೆ ಈ ಸಿನಿಮಾ ನಿದೇ೯ಶಕ ಯಾರು ಎಂಬುದು ಮೂಲ ಪ್ರಶ್ನೆಯಾಗಿರುತ್ತದೆ.

ಯಾಕೆಂದರೆ, ಚಿತ್ರಗಳು, ಮತ್ತು ಚಿತ್ರಕಥೆಗಳು ನಾಯಕ, ನಾಯಕಿಗಾಗಿ ಹೆಣೆದಂತಿರಬಾರದು. ನಿದೇ೯ಶಕ ಎಂಬ ಸಿನಿಮಾದ ಸಾರಥಿಯ ಕಲ್ಪನೆಗೆ ತಕ್ಕಂತೆ ಚಿತ್ರ ಮೂಡಿಬಂದಿರಬೇಕು. ನಾಯಕನ ಇಮೇಜ್ ಗಾಗಿ ತಯಾರಿಸಿದ ಸಿನಿಮಾಗಳು ಕೇವಲ ಆತನ ವೈಭವೀಕರಣಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಹೀಗಾಗಿಯೇ ಅನೇಕ ಚಿತ್ರಗಳು ಹಿರೋ ಹಿರೋಯಿನ್ ಆಧಾರದ ಮೇಲೆ ಪ್ರೇಕ್ಷಕರನ್ನು ಆಕಷಿ೯ಸುವುದಕ್ಕಿಂತ ನಿದೇ೯ಶಕನ ಹೆಸರಿನ ಮೇಲೆ ಸಿನಿಮಾಮಂದಿರಕ್ಕೆ ಸೆಳೆಯುತ್ತದೆ.

ಸತ್ಯಜಿತ್ ರೇ, ರಾಜ್ ಕಪೂರ್, ಸುಭಾಷ್ ಘಾಯ್, ರಾಮ್ ಗೋಪಾಲ್ ವಮಾ೯,  ಸೂರಜ್ ಭಜಾ೯ತಿಯ, ಕರಣ್ ಜೋಹರ್,   ಮಣಿರತ್ನಂ, ಭಾಗ್ಯರಾಜ್, ಕೆ.ಬಾಲಚಂದರ್,  ಕನ್ನಡದಲ್ಲಿ ಪುಟ್ಟಣ್ಣ ಕಣಗಾಲ್, ದೊರೆಭಗವಾನ್, ದಿನೇಶ್ ಬಾಬು, ರಾಜೇಂದ್ರಸಿಂಗ್ ಬಾಬು, ಡಿ.ರಾಜೇಂದ್ರಬಾಬು, ಇಂಥ ಕೆಲವು ಹೆಸರುಗಳು ಡೈರೆಕ್ಟರ್ಸ್ ಸ್ಪೆಷಲ್ ಆಗಿ ಕಂಗೊಳಿಸುತ್ತದೆ.

ಮಣಿರತ್ನಂ ಎಂಬ ಹೆಸರೇ ಸಿನಿಮಾ ಪ್ರೇಮಿಗಳನ್ನು ಚುಂಬಕದಂತೆ ಸೆಳೆಯುತ್ತಿತ್ತು. ಮಣಿರತ್ನಂ ಚಿತ್ರದಲ್ಲಿ ನಟಿಸಿದ್ದು ಯಾರು ಎಂಬುದು ಮುಖ್ಯವಾಗುತ್ತಲೇ ಇರಲಿಲ್ಲ. ಮಣಿರತ್ನಂ ಸಿನಿಮಾ ಎಂದರೆ ಸಾಕು ಯುವಕರು, ಯುವತಿಯರು, ದೊಡ್ಡವರು ಸಾಲುಗಟ್ಟಿ ನಿಲ್ಲುತ್ತಿದ್ದ ದಿನಗಳಿದ್ದವು. ಮಣಿರತ್ನಂ ಸಿನಿಮಾದಲ್ಲಿ ವಿಶೇಷವಿರುತ್ತದೆ. ಕಥೆಯೇ ವಿಭಿನ್ನವಾಗಿರುತ್ತದೆ. ಹಿರೋ ಹಿರೋಯಿನ್ ವೈಭವೀಕರಣ ಇರೋದಿಲ್ಲ ಎಂಬ ನಂಬಿಕೆ ಎಂದಿಗೂ ಹುಸಿಯಾಗುತ್ತಿರಲಿಲ್ಲ. 

ಇಂಥ ನಿದೇ೯ಶಕರ ಸಾಲಿಗೆ ಸೇರಿದ ಇತ್ತೀಚಿನ ಯುವಕನೇ ವಿವೇಕ್ ರಂಜನ್  ಅಗ್ನಿಹೋತ್ರಿ. 

ಭಾರತೀಯ ಚಿತ್ರರಂಗದಲ್ಲಿ ಅಷ್ಟೇನೂ ಖ್ಯಾತನಾಮನಲ್ಲದ ವಿವೇಕ್ ಮಾಚ್೯ 12 ರಿಂದ ದೇಶದ ಎಲ್ಲಾ ಕಡೆ ಫೇಮಸ್ ಆಗಿಬಿಟ್ಟಿದ್ದಾರೆ. ವಿವೇಕ್ ಅವರಿಗೆ ಅಭಿಮಾನಿಗಳಷ್ಟೇ ಶತ್ರುಗಳೂ ಸೖಷ್ಟಿಯಾಗಿದ್ದಾರೆ. ಮಣಿರತ್ನಂ ಕೂಡ ರೋಜಾ, ಬಾಂಬೆ, ನಾಯಕನ್ ಚಿತ್ರ ನಿದೇ೯ಶಿಸಿದಾಗ ಇದೇ ರೀತಿಯ ಸವಾಲನ್ನು ಎದುರಿಸಿದ್ದು ನೆನಪಿಗೆ ಬರುತ್ತಿದೆ.  ವಿವೇಕ್ ತಮಗೇ ಅರಿವಿಲ್ಲದ ಹಾಗೆ ದೇಶದ ಮನೆಮಾತಾಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣವಾದದ್ದು ಕಾಶ್ಮೀರಿ ಫೈಲ್ಸ್ ಎಂಬ ಚಿತ್ರ. ಹಿರೋ ಹಿರೋಯಿನ್ ಕೈಕೈಹಿಡಿದು ಮುಕುಲುಕಿಸುತ್ತಾ ಡಾನ್ಸ್ ಮಾಡುವ ದೖಶ್ಯಗಳಿಲ್ಲ ಕಾಶ್ಮೀರಿ ಫೈಲ್ಸ್ ಎಂಬ ಸಾಕ್ಷ್ಯಚಿತ್ರ ಮಾದರಿಯ ಚಿತ್ರವನ್ನು ವಿವೇಕ್ ನಿದೇ೯ಶನ ಮಾಡಿ ಭಾರತದಲ್ಲಿ ತೆರೆಗೆ ತಂದದ್ದೇ ತಡ ಕಾಶ್ಮೀರಿ ಫೈಲ್ಸ್ ಜತೆಜತೆಯೇ ವಿವೇಕ್ ಕೂಡ ಹೆಸರುವಾಸಿಯಾಗಿಬಿಟ್ಟಿದ್ದಾರೆ. ಚಿತ್ರ ಯಶಸ್ವಿಯಾಗುವುದರ ಜತೆಗೇ ನಿದೇ೯ಶಕ ವಿವೇಕ್ ಕೂಡ ಹೆಸರುವಾಸಿಯಾಗಿಬಿಟ್ಟಿದ್ದಾರೆ. 

ವಿವೇಕ್ ನಿದೇ೯ಶನಕ್ಕೆ ಬಹುಪರಾಕ್ ಸಂದಿದೆ. ಚಪ್ಪಾಳೆಯ ಸುರಿಮಳೆಯೊಂದಿಗೆ ಕಾಶ್ಮೀರಿ ಪಂಡಿತ ಕುಟುಂಬಗಳ ಅಪ್ಪುಗೆಯ ಭಾವುಕತೆಯ ಧನ್ಯವಾದವೂ ದೊರಕಿದೆ. ಅಬ್ಬಾ ಕಣ್ಣೀರು ಹಾಕದೇ ಚಿತ್ರ ನೋಡುವಂತೆಯೇ ಇಲ್ಲ ಎಂಬ ಅಭಿಮಾನದ ಪ್ರಶಂಸೆಯೂ ವಿವೇಕ್ ಪಾಲಾಗಿದೆ. ಜತೆಗೇ ನಿನ್ನ ಮುಗಿಸದೇ ಬಿಡೆವು ಎಂಬ ಬೆದರಿಕೆಯ ಅಬ್ಬರವೂ ವಿವೇಕ್ ಗೆ ಕೇಳಿಬಂದಿದೆ. ಸಕಾ೯ರದಿಂದ ನಿದೇ೯ಶಕ ವಿವೇಕ್ ಗೆ ವೈ ಕೆಟಗರಿ ಭದ್ರತೆಯೂ ದೊರಕಿದೆ. ಇತ್ಚೀಚಿನ ವಷ೯ಗಳಲ್ಲಿ ಇಷ್ಟೊಂದು ಪ್ರಖ್ಯಾತಿ, ಇಷ್ಟೊಂದು ವಿವಾದ ಮತ್ತು ಬೆದರಿಕೆ ಹಿನ್ನಲೆಯಲ್ಲಿ ಸಕಾ೯ರದ ಬಿಗಿ ಭದ್ರತೆ ದೊರಕಿದ ಉದಾಹರಣೆಗೆ ಕಾಶ್ಮೀರಿ ಪೈಲ್ಸ್ ಹಾಗೂ ವಿವೇಕ್ ಪಾತ್ರರಾಗಿದ್ದಾರೆ. 

ವಿವೇಕ್ ಅಗ್ನಿಹೋತ್ರಿ ( 49)  ಗ್ಲಾಲಿಯರ್ ನವರು. ತಂದೆ ಪ್ರಭು ದಯಾಳ್  ಅಗ್ನಿಹೋತ್ರಿ ಸ್ವಾತಂತ್ರ್ಯ ಹೋರಾಟಗಾರರು, ತಾಯಿ ಶಾರದೆ ಶಿಕ್ಷಕಿ..  ಬ್ರಾಹ್ಮಣ ಕುಟುಂಬ. ದಲ್ಲಿ   ಬಾಲ್ಯದಿಂದಲೇ ರಾಷ್ಟ್ರೀಯವಾದಿ. ದೇಶ ಎಂದರೆ ಮೊದಲ ಆದ್ಯತೆ.  ಚಿಂತಕನಾಗಿ, ಬರಹಗಾರನಾಗಿ ಗುರುತಿಸಿಕೊಂಡ ವಿವೇಕ್ ಶಿಕ್ಷಣ ಮುಗಿಸಿ ಜಾಹೀರಾತು ಮಾಧ್ಯಮಕ್ಕೆ ಜೋತುಬಿದ್ದರು, ಕೋಕೋಕೋಲಾ, ಜಿಲೆಟ್ ಕಂಪೆನಿಯ ಜಾಹೀರಾತು ನಿದೇ೯ಶನ ಮಾಡಿದರು. ಜಾಹೀರಾತು ಮಾಧ್ಯಮ ತನ್ನ ಅಭಿವ್ಯಕ್ತಿಗೆ ಸೂಕ್ತ ಎನಿಸದೇ ಇದ್ದಾಗ  ಕಿರುಚಿತ್ರಗಳ ನಿದೇ೯ಶನಕ್ಕೆ ಮುಂದಾದರು.

ಮುಹಮ್ಮದ್ ಅಂಡ್ ಉಮಿ೯ಳೆ ಎಂಬ ಕಿರುಚಿತ್ರ ನಿದೇ೯ಶನ ಮಾಡಿದ್ದೇ ವಿವಾದಗಳು ಬೆನ್ನತ್ತಿ ಬಂದವು. ಕೆಲವು ಕೇಸ್ ಗಳು ದಾಖಲಾದವು. ವಿವೇಕ್ ಈಗ ಬರಹಗಾರರಾದರು.  ದಿ ಮೇಕಿಂಗ್ ಆಫ್ ಬುದ್ದ ಇನ್ ಟ್ರಾಫಿಕ್ ಜ್ಯಾಮ್ ಎಂಬ ಕೖತಿ ಬರೆದರು.. ಇದು ಸಾಕಷ್ಟು ವಿಮಶೆ೯ಗೆ ಕಾರಣವಾಯಿತು. 

ಮತ್ತೆ ಸಿನಿಮಾ ಲೋಕ ಸೆಳೆಯಿತು. 2005 ರಲ್ಲಿ ಚಾಕೋಲೇಟ್ ಎಂಬ ಹಿಂದಿ ಚಿತ್ರ ನಿದೇ೯ಶನಕ್ಕೆ ಮುಂದಾದರು. ಚಿತ್ರದ ಹಿರೋಯಿನ್ ತನುಶ್ರೀದತ್ತಾ ಜತೆ ಕಿತ್ತಾಟವಾಯಿತು.. ತನುಶ್ರೀ ಪೊಲೀಸ್ ಪುಕಾರು ನೀಡಿದರು. ವಿವೇಕ್ ಏಕಾಏಕಿ ವಿಲನ್ ನಂತಾದರು. 2012 ರಲ್ಲಿ ಹೇಟ್ ಸ್ಟೋರಿ ಎಂಬ ವಿಭಿನ್ನ ಕಥಾ ಚಿತ್ರ ನಿದೇ೯ಶಿಸಿದರು. ಯಶಸ್ಸು ಕಾಣದಾಯಿತು. 2014 ರಲ್ಲಿ ಜಿದ್ದಿ ಎಂಬ ಡಬ್ಬಾ ಸಿನಿಮಾ ನಿದೇ೯ಶನ ಮಾಡಿದ್ದಾಯಿತು. ಕೇಳುವವರೇ ಇಲ್ಲದಾಯಿತು. 

ಇದೇ ವೇಳೆ ವಿವೇಕ್ ಬರೆದ ದಿ ಅಬ೯ನ್ ನಕ್ಸಲ್ ಎಂಬ ವಿಭಿನ್ನ ಲೇಖನಗಳ ಕೖತಿ ಸಾಕಷ್ಟು ಸದ್ದು ಮಾಡಿತು. ನಕ್ಸಲಿಸಂನ ಹೊಸ ರೂಪ ನಗರದಲ್ಲಿನ ಬುದ್ದಿಜೀವಿಗಳು ಎಂಬಥ೯ದಲ್ಲಿ ವಿವೇಕ್ ಅಬ೯ನ್ ನಕ್ಸಲ್ ಕೖತಿ ಬರೆದರು. ದೇಶವ್ಯಾಪಿ ಈ ಬಗ್ಗೆ ಪರ - ವಿರೋಧ ಚಚೆ೯ಗಳಾದವು. ವಿವೇಕ್ ಅಗ್ನಿಹೋತ್ರಿಯ ಒಳಗಡೆ ಕುದಿಯುತ್ತಿರುವ ಲಾವರಸವಿದೆ ಎಂಬುದು ಹಲವರಿಗೆ ಅಥ೯ವಾಯಿತು.

2019 - ಈ ಕುದಿಯುವ ಲಾವಾರಸ ಹೊರಬಂತು. ಚಿತ್ರದ ಹೆಸರು ತಾಷ್ಟಿಂಟ್ ಪೈಲ್ಸ್.. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ ಸಾವಿಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗೆಗಿನ ಕಥಾ ಚಿತ್ರ ಇದಾಗತ್ತು. ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಕಥೆಗಾಗಿ ವಿವೇಕ್ ರಾಷ್ಟ್ರೀಯ ಪ್ರಶಸ್ತಿಯನ್ನು ತಾಷ್ಟಿಂಟ್  ಫೈಲ್ಸ್ ಗಾಗಿ ಪಡೆದರು.

ಹೀಗಿದ್ದರೂ, ಮನದೊಳಗಿದ್ದ ಭುಗಿಲು ಕಡಮೆಯಾಗಿರಲಿಲ್ಲ. ಕಾಶ್ಮೀರ ಗಮನ ಸೆಳೆಯಿತು. ಕಾಶ್ಮೀರದಲ್ಲಿನ ಪಂಡಿತರು ಯೋಚನೆಯಾದರು. ನಾಲ್ಕು ವಷ೯ ತನ್ನ ಗೆಳೆಯರ ತಂಡದೊಂದಿಗೆ ವಿವೇಕ್ ಕಾಶ್ಮೀರ ಮತ್ತು ಪಂಡಿತರು ನಿರಾಶ್ರಿತರಾಗಿದ್ದ ದೇಶದ ಹಲವೆಡೆ ಸಂಚರಿಸಿ ಸಂಶೋಧನೆ ಕೈಗೊಂಡರು. ಹಲವು ಕುಟುಂಬಗಳನ್ನು ಮಾತನಾಡಿಸಿದರು. 

ಅದ್ಬುತ ಸಂಶೋಧನೆ ಸಿದ್ದವಾಯಿತು. ತಾನು ಕಂಡದ್ದು, ಕೇಳಿದ್ದನ್ನೆಲ್ಲಾ ಹೇಳಲು ಒಂದು ಸಿನಿಮಾ ಸಾಕಾಗಲಿಕ್ಕಿಲ್ಲ ಎಂಬುದು ವಿವೇಕ್ ಅಗ್ನಿಹೋತ್ರಿಗೆ ಅರಿವಾಗಿಬಿಟ್ಟಿತ್ತು. ಆದದ್ದಾಗಲಿ ಎಂದು ಕಾಶ್ಮೀರಿ ಫೈಲ್ಸ್ ಹೆಸರಿನಲ್ಲಿ ಸಿನಿಮಾ ನಿದೇ೯ಶನಕ್ಕೆ ಮುಂದಾದರು. ಜೀ ಟಿವಿ ಸಂಸ್ಥೆ ಆಥಿ೯ಕ ನೆರವಿಗೆ ಮುಂದಾಯಿತು.

ಎರಡೂವರೇ ವಷ೯ ಕಾಶ್ಮೀರದ ಪಂಡಿತರ ಕುಟುಂಬಗಳಿಗೆ ಆದ ಘೋರ ಅನ್ಯಾಯದ ಬಗ್ಗೆ ವಿವೇಕ್ ಚಿತ್ರೀಕರಣ ಮಾಡಿದರು. ಸಾಕಷ್ಟು ಸವಾಲುಗಳು ಎದುರಾದವು. ಚಿತ್ರೀಕರಣಕ್ಕೂ ಸಮಸ್ಯೆಯಾಯಿತು. ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ತಯಾರಾದ ಕಾಶ್ಮೀರಿ ಫೈಲ್ಸ್ ಗೆ 15 ಕೋಟಿ ರುಪಾಯಿ ವೆಚ್ಚವಾಯಿತು.

ಮಾಚ್೯ 11 ರಂದು ಕಾಶ್ಮೀರಿ ಫೈಲ್ಸ್ ತೆರೆಕಂಡ ಮೊದಲ ದಿನ ದೇಶದ 360 ಸಿನಿಮಾ ಮಂದಿರಗಳು ಬಿಕೋ ಎನ್ನತೊಡಗಿದವು. ತನ್ನ ಪ್ರಯತ್ನ ವಿಫಲವಾಯಿತು ಎಂದು ವಿವೇಕ್ ನಿರಾಶಾ ಭಾವನೆ ತಳೆಯುತ್ತಿರುವಂತೆಯೇ ಮಾಚ್೯ 12 ರಂದು ದೇಶವ್ಯಾಪಿ ಸಂಚಲನ ಪ್ರಾರಂಭವಾಯಿತು. ದೇಶಪ್ರೇಮಿಗಳು ಬಾಯಿ ಮಾತಿನ ಪ್ರಚಾರ ಪ್ರಾರಂಭಿಸಿದರು. ಶನಿವಾರ ರಾತ್ರಿಯ ದೇಶವ್ಯಾಪಿಯ ಎಲ್ಲಾ ಚಿತ್ರಮಂದಿರಗಳಲ್ಲಿ ಕಾಶ್ಮೀರಿ ಫೈಲ್ಸ್ ಹೌಸ್ ಫುಲ್..

ಭಾನುವಾರ ದೇಶದ 2200 ಚಿತ್ರಮಂದಿರಗಳಲ್ಲಿ ಬೇರೆಲ್ಲಾ ಸಿನಿಮಾ ರದ್ದುಗೊಳಿಸಿ ಕಾಶ್ಮೀರಿ ಫೈಲ್ಸ್ ಪ್ರದಶ೯ನ ಪ್ರಾರಂಭಿಸಿತು. 1 ವಾರದಲ್ಲಿಯೇ 100 ಕೋಟಿ ದಾಖಲೆಯ ಹಣ ಸಂಗ್ರಹಿಸಿತು. 15 ಕೋಟಿ ರು ವೆಚ್ಚದಲ್ಲಿ ನಿಮಾ೯ಣವಾದ ಚಿತ್ರಕ್ಕೆ 7 ದಿನಗಳಲ್ಲಿ 100 ಕೋಟಿ ರು. ಸಂಪಾದನೆ.

ಯಾರು ಹಿರೋ.. ಯಾರು ಹಿರೋಯಿನ್, ಸನ್ಮಾನ್ ಖಾನ್, ಶಾರೂಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಅಮಿತಾಭ್ ಬಚ್ಚನ್.. ಮಾಧುರಿ ದೀಕ್ಷಿತ್, ದೀಪಿಕಾ ಪಡುಕೋಣ್, ಆಲಿಯಾಭಟ್.. ಉಹುಂ ಯಾರೆಂದರೆ ಯಾರೂ ಇಲ್ಲದೇ ಮಿಥುನ್ ಚಕ್ರವತಿ೯, ಅನುಪಮ್ ಖೇರ್ ರಂತ ಪ್ರಬುದ್ದ ಕಲಾವಿದರನ್ನೇ ಬಳಸಿಕೊಂಡು ತಯಾರಿಸಿದ ಚಿತ್ರ ಅದ್ಬುತ ಯಶಸ್ಸು ಕಂಡಿತ್ತು

ಹಿಂದಿ ಚಿತ್ರರಂಗ ಬೆಕ್ಕಸ ಬೆರಗಾಯಿತು. ಪ್ರಸಿದ್ದ ಹಿರೋ ಹಿರೋಯಿನ್ ಇಲ್ಲದೆಯೂ ಭಾರತದ ಇತಿಹಾಸದ ಕರಾಳ ಸತ್ಯ ಸಾರುವ ಕಥೆಯ ಚಿತ್ರ ಮಾಡಿದರೆ ಖಂಡಿತಾ ಜನ ಚಿತ್ರಮಂದಿರಕ್ಕೆ ಸಾಲುಗಟ್ಟಿ ಬರುತ್ತಾರೆ ಎಂಬ ಸತ್ಯ ಬಾಲಿವುಡ್ ಸೇರಿದಂತೆ ದೇಶದ ಚಿತ್ರಜಗತ್ತಿಗೆ ಅಥ೯ವಾಗಿಬಿಟ್ಟಿತ್ತು.

ಕಾಶ್ಮೀರಿ ಪಂಡಿತರೇ ಚಿತ್ರದ ನಾಯಕರು. ಅವರೇ ಕಥಾ ವಸ್ತು. ಅವರದ್ದೇ ಕಥೆ.. ಭಾರತೀಯರು ಪಂಡಿತರ ನೋವಿನ ಕಥೆ ವೀಕ್ಷಿಸಿ ಕಣ್ಣೀರುಗರೆದರು. 1990ರಲ್ಲಿ ಸಂಭವಿಸಿದ ಘೋರದುರಂತಕ್ಕೆ ನಾವು ಈವರೆಗೆ ಯಾಕೆ ಸ್ಪಂದಿಸಲಿಲ್ಲ ಎಂಬ ನೋವು ಕೂಡ ವೀಕ್ಷಕರಲ್ಲಿ ಮಡುಗಟ್ಟಿತ್ತು. 

ಅಷ್ಟರ ಮಟ್ಟಿಗೆ ಕಾಶ್ಮೀರಿ ಪೈಲ್ಸ್ ಗೆದ್ದಿತ್ತು. ಸಿನಿಮಾ ಮಾಧ್ಯಮದ ಗೆಲವು ಅದಾಗಿತ್ತು. ವಿವೇಕ್ ಅಗ್ನಿಹೋತ್ರಿ ಎಂಬ ನಿದೇ೯ಶಕ ಭಾರತೀಯ ಸಿನಿಮಾ ರಂಗದ   ವಿರಾಟ್ ಶಕ್ತಿಯನ್ನು ಜಗತ್ತಿಗೇ ತೋರಿಸಿಕೊಟ್ಟರು. 

ವಿವೇಕ್ ಬೇಕಿದ್ದರೆ ಈ ಚಿತ್ರಕ್ಕೆ ಹೆಸರಾಂತ ಕಲಾವಿದರನ್ನು ಬಳಸಬಹುದಿತ್ತು.  ಮಿಷನ್ ಕಾಶ್ಮೀರದಂತೆ, ಫಿದಾ ಚಿತ್ರದಂತೆ ಹಿರೋಯಿನ್ ಹಾಕಿಕೊಂಡು ಹಾಡು ಹೊಸೆದು ಕಾಶ್ನೀರದ ಮಂಜಿನಲ್ಲಿ ಕುಣಿಸಿ ಗ್ಲಾಮರ್ ತುಂಬಿ ಮತ್ತಷ್ಟು ಕೋಟಿ ರುಪಾಯಿ ಸಂಪಾದಿಸಬಹುದಿತ್ತು. ಆದರೆ ಚಿತ್ರವನ್ನು ಈ ರೂಪದಲ್ಲಿ ಬಳಸದೇ ಕಾಶ್ಮೀರದ ಸೌಂದಯ೯ದೊಳಗೆ ಅವಿತಿರುವ ಗಾಡವಾದ ಆತಂಕ, ತಲ್ಲಣಗಳನ್ನು, ಪಂಡಿತರ ನೋವಿನ ಮನದಾಳವನ್ನು ಮಂಜು ಮುಸುಕಿನ ಕಾಶ್ಮೀರದ ಸರೋವರದಲ್ಲಿ ಹೆಪ್ಪುಗಟ್ಟಿದ ಮಂಜಿನಂತೆ ತೋರಿಸುವ ಜಾಣ್ಮೆಯನ್ನು ವಿವೇಕ್ ಮೆರೆದಿದ್ದಾರೆ. ಕಾಶ್ಮೀರಿ ಫೈಲ್ಸ್ ನ ಕ್ಲೆಮ್ಯಾಕ್ ನಿಜಕ್ಕೂ ಚೆನ್ನಾಗಿದೆ. ಇನ್ನೂ ಬೇಕಾಗಿತ್ತು ಅಥವಾ ಕೊನೆಗೆ ಇದು ಏನಾಗಿ ಹೋಯಿತು ಎಂದು ಮನಸ್ಸಿನಲ್ಲಿ ಪ್ರಶ್ನೆಗಳು ಏಳುವಂತೆಯೇ ಕುಳಿತ ಸೀಟ್ ನಿಂದ ಎದ್ದು ಬರುವಂತೆ, ಹೊರಕ್ಕೆ ಬರುವಾಗ ಹಲವಾರು ಪ್ರಶ್ನೆಗಳನ್ನು ಹೊತ್ತು ಬರುವಂತೆ ವಿವೇಕ್ ಮಾಡಿದ್ದೆದೆಯಲ್ಲ.. ಅದುವೇ ಈ ಚಿತ್ರದ ನಿಜವಾದ ಯಶಸ್ಸು. 

ಶ್ವೇತವಾದ ಮಂಜು ಹೊದ್ದ ಕಾಶ್ಮೀರದ ರಕ್ತಸಿಕ್ತ ಕರಾಳತೆಯನ್ನು ಹೆಚ್ಚಿನ ಬೆಳಕು ಬಳಸದೇ ಕ್ಯಾಮರವೇ ತೇಲಾಡುತ್ತಿರುವಂತೆ ದೖಶ್ಯಗಳು ನಮ್ಮ ಮುಂದೆಯೇ ಈಗ ನಡೆಯುತ್ತಿದೆಯೇನೋ ಎಂಬಂತೆ ವಿವೇಕ್ ಚಿತ್ರಿಸಿದ್ದಾರೆ. ಹೀಗಾಗಿ ಚಿತ್ರ 2.45 ಗಂಟೆಗಳ ಸುದೀಘ೯ ಅವದಿಯದ್ದಾಗಿದ್ದರೂ ಎಲ್ಲಿಯೂ ಬೇಸರ ಮೂಡಿಸುವುದಿಲ್ಲ. ಹಾಡು ಹಿನ್ನಲೆಯಲ್ಲಿ ಕೇಳಿಬರುತ್ತಿದ್ದರೂ ಅದು ಸುಪ್ತ ಪ್ರಜ್ಞೆಯನ್ನು ಎಚ್ಚರಿಸುವಂತಿದೆಯೇ ವಿನಾ  ಬೇರೆ ಚಿತ್ರಗಳಂತೆ ತಾಳಹಾಕಬೇಕೆಂದು ಅನ್ನಿಸುವುದಿಲ್ಲ.  ಸಂಭಾಷಣೆಗಳು ಕೖತಕವಾಗದೇ ಮುಖಕ್ಕೆ ನೇರನೇರ ಹೊಡೆದು ಹೇಳಿದಂತಿದೆ. ಪಾತ್ರಗಳು ಚಿತ್ರದಲ್ಲಿ ನಟಿಸಿಲ್ಲ. ಖಂಡಿತಾ ನಟಿಸಿಲ್ಲ. ಪಾತ್ರಗಳೇ ಚಿತ್ರದಲ್ಲಿ ಜೀವಂತವಾಗಿಬಿಟ್ಟಿದೆ. ನಿದೇ೯ಶಕ ಎಂಬ ಚಿತ್ರದ ಸಾರಥಿಯ ಪ್ರಾಮುಖ್ಯತೆ ಪ್ರತೀ ದೖಶ್ಯದಲ್ಲಿಯೂ ಹಾಸುಹೊಕ್ಕಾಗಿದೆ. 

ವಿವೇಕ್ ಬಿಜೆಪಿಯವನು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ವಿವೇಕ್ ಚಿತ್ರ ನಿದೇ೯ಶನ ಮಾಡಿದ್ದಾರೆ ಎಂಬ ಗುಲ್ಲು ಎದ್ದಿದೆ. 

ಹಾಗೊಂದು ವೇಳೆ ಬಿಜೆಪಿ ಈ ಚಿತ್ರದ ನಿಮಾ೯ಣ ಮಾಡಲು ಮುಂದಾಗಿದ್ದರೆ ಖಂಡಿತಾ ವಿವೇಕ್ ನಿದೇ೯ಶಕನ ಆಯ್ಕೆಯಾಗುತ್ತಲೇ ಇರಲಿಲ್ಲ. ಹೆಸರೇ ಕೇಳದಿದ್ದ ನಿದೇ೯ಶಕನನ್ನು ನಂಬಿ ಯಾರು ಯಾಕಾಗಿ ಹಣ ಹಾಕುತ್ತಾರೆ. ಯಾವ ನಂಬಿಕೆಯ ಮೇಲೆ ಇಂಥ ಚಿತ್ರವನ್ನು ಈತನ ಕೈಗಿಡುತ್ತಾರೆ.

ಇಷ್ಟಕ್ಕೂ ವಿವೇಕ್ ಬಿಜೆಪಿಯವನಾ? 

ಪ್ರಧಾನಿಯಾಗಿ ಮೋದಿಯವರ ಅಪ್ಪಟ ಅಭಿಮಾನಿ ನಾನು. ಆದರೆ ನಾನು ಖಂಡಿತಾ ಬಿಜೆಪಿಯ ಬೆಂಬಲಿಗ ಅಲ್ಲವೇ ಅಲ್ಲ. ನಾನೋವ೯ ಭಾರತೀಯ, ಭಾರತವನ್ನು ಪ್ರೇಮಿಸುವವನು ಎಂಬುದು ವಿವೇಕ್ ಸ್ಪಷ್ಟ ನಿಲುವು,

ಕಾಶ್ಮೀರಿ ಫೈಲ್ಸ್ ಮುಂದಿನ ಭಾಗಕ್ಕೆ ಸಿದ್ದತೆ ನಡೆಯುತ್ತಿದೆ. ವಿವೇಕ್ ಬಳಿ ಹೇಳುವ ಮತ್ತು ಹೇಳಲೇಬೇಕಾದ ಕಥೆಗಳು ಮತ್ತಷ್ಟೂ ಇವೆ. ಭಾರತೀಯರು ಮುಂದಿನ ಪೈಲ್ಸ್ ಗಾಗಿ ಕಾತುರರಾಗಿದ್ದಾರೆ.

ಸಿನಿಮಾವನ್ನೇ ನೋಡದವರೂ ಕಾಶ್ಮೀರಿ ಫೈಲ್ಸ್ ನೋಡಿ .. ಮುಂದಿನ ಭಾಗ ಯಾವಾಗ ಎಂದು ಪ್ರಶ್ನಿಸುವಂತಾಗಿದೆ.  

ನಾನು ಸಿನಿಮಾಕ್ಕಾಗಿ ಖಂಡಿತಾ ಕಥೆ ಮಾಡುವವನಲ್ಲ.. ನನ್ನೊಳಗಿರುವ ಕಥೆಗಾಗಿ ಸಿನಿಮಾ ಮಾಡುವವನು  ನಾನು..ಎಂದು ಸಂದಶ೯ನದಲ್ಲಿ ವಿವೇಕ್ ಹೇಳಿದ್ದು ಈತನ ಬದ್ದತೆಗೆ ನಿದಶ೯ನದಂತಿದೆ. 

ವಿವೇಕ್ ಗೆದ್ದಿದ್ದಾರೆ... ರಾಷ್ಟ್ರಪ್ರೇಮವನ್ನು ಯಶಸ್ವಿಯಾಗಿ ಜಾಗ್ರತಗೊಳಿಸಿದ್ದಾರೆ. ಸಮೂಹಸನ್ನಿಯಂತೆ ಜನ ಸಿನಿಮಾ ನೋಡಲು ಥಿಯೇಟರ್ ಗಳಿಗೆ ತೆರಳುವ ದೖಶ್ಯ ನೋಡಿದರೆ.... ಪಂಡಿತರ ಭಾವನೆಗಳಿಗೆ ಸ್ಪಂದನ ಸಿಕ್ಕಿದೆ. ಪಂಡಿತರು ಮರಳಿ ಕಾಶ್ಮೀರಕ್ಕೆ ತೆರಳುವ ದಿನಗಳು ಸನಿಹದಲ್ಲಿದೆ.

ಅಂದಂತೆ, 

ಜೆಎನ್ ಯು ವಿವಿಯ ಪ್ರೊಫೆಸರ್  ರಾಧಿಕಾ ಪಾತ್ರಧಾರಿಯಾಗಿ  ಸಾಕಷ್ಟು ಜನರನ್ನು ಕ್ರಾಂತಿಕಾರಿ ಭಾಷಣದಿಂದ ಸೆಳೆದ ಅದ್ಬುತ ನಟಿ ಪಲ್ಲವಿಜೋಷಿ ಎಂಬ ರಂಗಭೂಮಿ ಪ್ರತಿಭೆ ಎಲ್ಲರಿಗೂ ಇಷ್ಟವಾದ ಕಲಾವಿದೆಯಲ್ಲವೇ..?

ಕಲಾವಿದೆಯಾಗಿ ಎಲ್ಲಾ ರೀತಿಯ ಪ್ರೋತ್ಸಾಹವನ್ನು ಪಲ್ಲವಿಜೋಷಿಗೆ  ನೀಡುತ್ತಿರುವ ಆಕೆಯ ಗಂಡನ ಹೆಸರು ವಿವೇಕ್ ಅಗ್ನಿಹೋತ್ರಿ. ಪಲ್ಲವಿ ಜೋಷಿ ನಟಿಸಿದ ಇತ್ತೀಚಿನ ಯಶಸ್ವಿ ಚಿತ್ರ ಕಾಶ್ಮೀರಿ ಫೈಲ್ಸ್ ನ ನಿದೇ೯ಶಕನೇ ಈ ವಿವೇಕ್..!!!

ದಂಪತಿಗೆ ಶುಭವಾಗಲಿ!!!

ಬರಹ: ✍️.... ಅನಿಲ್ ಎಚ್.ಟಿ. 

( ಪತ್ರಕರ್ತರು )

( ಅನಿಲ್ ಎಚ್.ಟಿ. )
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,