ದ. ಭಾರತ ವಲಯ ಕರಾಟೆ ಮಂಡಳಿ ಅಸ್ತಿತ್ವಕ್ಕೆ; ಸಂಸ್ಥಾಪಕ ಅಧ್ಯಕ್ಷರಾಗಿ ಕೊಡಗಿನ ಅರುಣ್ ಮಾಚಯ್ಯ ಆಯ್ಕೆ
ಜೊತೆಗೆ 8ನೇ ಬ್ಲಾಕ್ ಬೆಲ್ಟ್ ಪಡೆದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರ
ಜೊತೆಗೆ ಇದೀಗ ಅವರು ವಿಶ್ವ ಕರಾಟೆ ಮಂಡಳಿ ಯಿಂದ 8ನೇ ಬ್ಲಾಕ್ ಬೆಲ್ಟ್ ಪಡೆದಿರುವ ಅರುಣ್ ಮಾಚಯ್ಯ ಅವರು ಈ ಸಾಧನೆಗೈದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಕ್ರೀಡಾ ತವರಾದ ಕೊಡಗಿನ ಖ್ಯಾತಿಗೆ ಮತ್ತೊಂದು ಗರಿ ಮೂಡಿಸಿದ್ದಾರೆ.
ವಿಶ್ವ ಕರಾಟೆ ಮಂಡಳಿ, ಏಷ್ಯನ್ ಕರಾಟೆ ಮಂಡಳಿ, ಆಗ್ನೇಯ ಏಷ್ಯಾ ಕರಾಟೆ ಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ ನಿಂದ ಮಾನ್ಯತೆ ಪಡೆದಿರುವ ಭಾರತದ ಏಕೈಕ ಕರಾಟೆ ಸಂಸ್ಥೆಯಾಗಿರುವ ರಾಷ್ಟ್ರೀಯ ಕರಾಟೆ ಮಂಡಳಿಯು ನೂತನವಾಗಿ ತನ್ನ ಸಂಸ್ಥೆಯನ್ನು ದೇಶದಲ್ಲಿ 5 ವಿಭಾಗಗಳನ್ನಾಗಿ ವಿಂಗಡಿಸಿದೆ.ದಕ್ಷಿಣ ಭಾರತ, ಉತ್ತರ ಭಾರತ, ಈಶಾನ್ಯ ಭಾರತ, ವಾಯುವ್ಯ ಭಾರತ ಹಾಗೂ ಮಧ್ಯಭಾರತ ವಲಯವನ್ನಾಗಿ ವಿಂಗಡಿಸಿದ್ದು, ದಕ್ಷಿಣ ಭಾರತ ಕರಾಟೆ ವಲಯಕ್ಕೆ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳು ಒಳಪಡಲಿವೆ.
ನೂತನ ದಕ್ಷಿಣ ಭಾರತ ವಲಯ ಕರಾಟೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಹೆಸರುಗಳು ಕೇಳಿಬಂದಿದ್ದರೂ, ಅಂತಿಮವಾಗಿ ಜೇಷ್ಠತೆಯ ಆಧಾರದಲ್ಲಿ ಕಳೆದ 12 ವರ್ಷಗಳಿಂದ ರಾಷ್ಟ್ರೀಯ ಕರಾಟೆ ಮಂಡಳಿಯ ಹಿರಿಯ ಉಪಾಧ್ಯಕ್ಷರಾಗಿ, ಅಖಿಲ ಭಾರತ ಶಿಟೋರಿಯೋ ಕರಾಟೆ ಮಂಡಳಿಯ ಮತ್ತು ಕಳೆದ 2009ರಿಂದ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ಎಸ್. ಅರುಣ್ ಮಾಚಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚಿಗೆ ಹೈದರಾಬಾದಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಕರಾಟೆ ಮಂಡಳಿಯ ತಾಂತ್ರಿಕ ಆಯೋಗದ ಸದಸ್ಯರಾದ ಭರತ್ ಶರ್ಮ, ರಾಷ್ಟ್ರೀಯ ಕರಾಟೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ ಜಾಗ್ರ ಹಾಗೂ ರಾಷ್ಟ್ರೀಯ ಕರಾಟೆ ಮಂಡಳಿಯ ತಾಂತ್ರಿಕ ನಿರ್ದೇಶಕರಾದ ಜೇಕಬ್ ದೇವ್ ಕುಮಾರ್ ಈ ಕುರಿತ ಪ್ರಮಾಣಪತ್ರವನ್ನು ಅರುಣ್ ಮಾಚಯ್ಯ ಅವರಿಗೆ ಹಸ್ತಾಂತರಿಸಿದರು.
ಕೊಡಗಿನ ಪೊನ್ನಂಪೇಟೆ ತಾಲೂಕಿನ ಧನುಗಾಲ ಗ್ರಾಮದ ದಿ. ಚೆಪ್ಪುಡಿರ ಸೋಮಯ್ಯ ಮತ್ತು ದೇವಕ್ಕಿ ದಂಪತಿಯ ಪುತ್ರರಾಗಿರುವ ಸಿ.ಎಸ್. ಅರುಣ್ ಮಾಚಯ್ಯ ಅವರು 1976ರಿಂದಲೇ ಕರಾಟೆಯತ್ತ ಒಲವು ತೋರಿಸಿ ನಿರಂತರವಾಗಿ ಈ ಸಮರ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 1980 ರಲ್ಲಿ ಸಿಂಗಾಪುರದಿಂದ ಮಾರ್ಷಲ್ ಆರ್ಟ್ಸ್ ನಲ್ಲಿ ಡಿಪ್ಲೊಮೋ ಪದವಿ ಪಡೆದ ಅರುಣ್ ಮಾಚಯ್ಯ ಅವರು, ಕಳೆದ 46 ವರ್ಷಗಳಿಂದ ಕರಾಟೆಯನ್ನು ತಮ್ಮ ಉಸಿರಾಗಿಸಿಕೊಂಡಿದ್ದಾರೆ.ಇದ ರೊಂದಿಗೆ ಅಂತರರಾಷ್ಟ್ರೀಯ ಕರಾಟೆಯ ಭೂಪಟದಲ್ಲಿ ಕೊಡಗಿನ ಕೀರ್ತಿಯನ್ನು ಪಸರಿಸಿದ್ದಾರೆ.
1977 ರಲ್ಲಿ ಪ್ರಥಮ ಬಾರಿಗೆ ಕರಾಟೆಯಲ್ಲಿ ರಾಷ್ಟ್ರೀಯ ಚಾಂಪಿಯನ್ಶಿಪ್ ಆದ ಇವರು 1980 ರಲ್ಲಿ ಇಂಡೋನೇಷಿಯಾದಲ್ಲಿ,1987ರಲ್ಲಿ ಸಿಂಗಾಪುರದಲ್ಲಿ, 1993ರಲ್ಲಿ ನೇಪಾಳದಲ್ಲಿ ನಡೆದ ಏಷಿಯನ್ ಕರಾಟೆ ಚಾಂಪಿಯನ್ ಶಿಪ್ ಗಳಲ್ಲಿ, 1996ರಲ್ಲಿ ಮೆಕ್ಸಿಕೋದಲ್ಲಿ ನಡೆದ ವಿಶ್ವ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅರುಣ್ ಮಾಚಯ್ಯ ಅವರು, 1998ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ನಡೆದ ಏಷ್ಯನ್ ಫೆಸಿಫಿಕ್ ಕರಾಟೆ ಚಾಂಪಿಯನ್ಶಿಪ್ ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದರು.
2000ದಲ್ಲಿ ಜಪಾನಿನ ಟೋಕಿಯೋದಲ್ಲಿ ಮತ್ತು 2009ರಲ್ಲಿ ಚೀನಾದ ಬೀಜಿಂಗ್ ನಲ್ಲಿ ನಡೆದ ವಿಶ್ವ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಇವರು, 1989 ರಲ್ಲಿ ಸಿಂಗಾಪುರದಲ್ಲಿ ನಡೆದ ಏಶಿಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಪಡೆದಿದ್ದರು.1993 ರಲ್ಲಿ ಮಲೇಷಿಯಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ 'ಅತ್ಯುತ್ತಮ ಫೈಟರ್' ಪ್ರಶಸ್ತಿ ಪಡೆದಿರುವ ಅರುಣ್ ಮಾಚಯ್ಯ, 1996 ರಿಂದ 2003ರವರೆಗೆ ವಿಶ್ವ ಶಿಟೋರಿಯೊ ಕರಾಟೆ ಮಂಡಳಿಯ ನಿರ್ದೇಶಕರಾಗಿದ್ದರು.
2005ರಲ್ಲಿ ಗ್ರಾಮೀಣ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಯುನಿಸೆಫ್ ನಿಂದ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಮತ್ತು 1992 ರಲ್ಲಿ ಹಾಗೂ 1997 ರಲ್ಲಿ ಕರ್ನಾಟಕ ರಾಜ್ಯ ಕ್ರೀಡಾ ಪ್ರಶಸ್ತಿಯನ್ನು ಪಡೆದಿರುವ ಅರುಣ್ ಮಾಚಯ್ಯ ಅವರು, 2011ರಿಂದ ಏಶಿಯನ್ ಕರಾಟೆ ಮತ್ತು ರಾಷ್ಟ್ರೀಯ ಕರಾಟೆಯ ತೀರ್ಪುಗಾರರಾಗಿ ಮತ್ತು ತಾಂತ್ರಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2012ರಲ್ಲಿ ಹಾಂಕಾಂಗ್ ನಲ್ಲಿ ನಡೆದ ಏಷ್ಯನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿ ಒಟ್ಟು 6 ಪದಕಗಳನ್ನು ಮತ್ತು 2014ರಲ್ಲಿ ಸಿಂಗಾಪುರದಲ್ಲಿ ನಡೆದ ಏಷ್ಯನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ವಹಿಸಿಕೊಟ್ಟು 12 ಪದಕಗಳನ್ನು ಭಾರತ ತಂಡ ಪಡೆಯುವಲ್ಲಿ ಕಾರಣಕರ್ತರಾಗಿದ್ದರು.
2015ರಲ್ಲಿ ಕಾಮನ್ವೆಲ್ತ್ ಕರಾಟೆ ಫೆಡರೇಶನ್ ವತಿಯಿಂದ ನವದೆಹಲಿಯಲ್ಲಿ ಆಯೋಜಿಸಿದ್ದ ಕಾಮನ್ವೆಲ್ತ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದ ಅರುಣ್ ಮಾಚಯ್ಯ ಅವರು ಇದುವರೆಗೂ ಸಾಕಷ್ಟು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಗಳಿಗೆ ಭಾರತ ತಂಡವನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2019ರಲ್ಲಿ ಟೋಕಿಯೋದಲ್ಲಿ ನಡೆದ ವಿಶ್ವ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡದ ಮುಖ್ಯಸ್ಥರಾಗಿ ಪಾಲ್ಗೊಂಡಿದ್ದ ಅರುಣ್ ಮಾಚಯ್ಯ, ಮುಂದಿನ ನವಂಬರ್ ನಲ್ಲಿ ಇಂಗ್ಲೆಂಡಿನ ಬಕಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ರಾಷ್ಟ್ರಗಳ ಕ್ರೀಡೆಯಲ್ಲಿ ಭಾರತದ ಕರಾಟೆ ತಂಡದ ಮುಖ್ಯಸ್ಥರಾಗಿ ತೆರಳಲು ಆಯ್ಕೆಯಾಗಿದ್ದಾರೆ. ಅಲ್ಲದೆ 2023ರಲ್ಲಿ ಪೋರ್ಚುಗಲ್ನಲ್ಲಿ ನಡೆಯುವ ವಿಶ್ವ ಕರಾಟೆ ಚಾಂಪಿಯನ್ಶಿಪ್ನಲ್ಲಿಯೂ ಭಾರತ ತಂಡದ ಕೋಚ್ ಆಗಿ ಅರುಣ್ ಮಾಚಯ್ಯ ಅವರು ತೆರಳಲಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವದ ಕ್ರೀಡಾ ಯೋಜನೆಯಾದ 'ಖೇಲೋ ಇಂಡಿಯಾ'ದಲ್ಲಿ ಕರಾಟೆ ಕ್ರೀಡೆಯನ್ನು ಇತ್ತೀಚಿಗಷ್ಟೇ ಸೇರಿಸಲಾಗಿದೆ. ಇದನ್ನು ಸೇರಿಸಲು ಅರುಣ್ ಮಾಚಯ್ಯ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅದೇ ರೀತಿ 2014ರಲ್ಲಿ ರಾಜ್ಯ ಸರಕಾರ ಸರ್ವಶಿಕ್ಷಣ ಅಭಿಯಾನದ ಮೂಲಕ 8ರಿಂದ 10ನೇ ತರಗತಿಯ ಹೆಣ್ಣು ಮಕ್ಕಳಿಗಾಗಿ ಕರಾಟೆ ಜಾರಿಗೊಳಿಸುವಲ್ಲಿ ಮತ್ತು ಇದೀಗ ರಾಜ್ಯಾದ್ಯಂತ ವಿವಿಧ ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಹೆಣ್ಣು ಮಕ್ಕಳಿಗೆ ಕಡ್ಡಾಯ ಕರಾಟೆ ಕಲಿಕೆ ಅನುಷ್ಠಾನಗೊಳಿಸುವಲ್ಲಿ ಅರುಣ್ ಮಾಚಯ್ಯ ಅವರ ಪಾತ್ರ ಪ್ರಧಾನವಾಗಿದೆ.
ತಮ್ಮ ಆಯ್ಕೆಯ ಕುರಿತು ಭಾನುವಾರದಂದು ಗೋಣಿಕೊಪ್ಪಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್ ಮಾಚಯ್ಯ ಅವರು, ವಿಶ್ವದಲ್ಲೇ ಪ್ರಬಲ ಕ್ರೀಡೆಯಾಗಿರುವ ಕರಾಟೆ ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಗಟ್ಟಿಯಾಗಿ ಬೆಳೆದಿದೆ. ರಾಷ್ಟ್ರೀಯ ಕರಾಟೆ ಮಂಡಳಿಯ ಬೆಳವಣಿಗೆಯಲ್ಲಿ ದಕ್ಷಿಣ ಭಾರತದ ಕೊಡುಗೆ ಅಪಾರವಾಗಿದೆ. ಈ ಕಾರಣದಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದಕ್ಷಿಣ ಭಾರತ ವಲಯ ಕರಾಟೆ ಮಂಡಳಿಗೆ ತಮ್ಮನ್ನು ಪರಿಗಣಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಭಾರತದಲ್ಲಿ ಇಂದು ಕ್ರಿಕೆಟ್ ಹೊರತುಪಡಿಸಿದರೆ ದಿನನಿತ್ಯ ವಯಸ್ಸಿನ ಮಿತಿಯಿಲ್ಲದೆ ಅತೀ ಹೆಚ್ಚಾಗಿ ಅಭ್ಯಾಸ ಮಾಡುವ ಕ್ರೀಡೆ ಕರಾಟೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕರಾಟೆ ಗಣನೀಯ ಪ್ರಮಾಣದಲ್ಲಿ ಬೆಳೆದಿದೆ ಎಂದು ಅಭಿಪ್ರಾಯಪಟ್ಟರಲ್ಲದೆ, ಖೇಲೋ ಇಂಡಿಯಾದ ಕ್ರೀಡಾ ಆಯೋಜನೆಯ ಉಸ್ತುವಾರಿಯನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ವಹಿಸಿಕೊಂಡಿದೆ. ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಇದರ ಮೊದಲ ಪಂದ್ಯಾವಳಿಯನ್ನು ಪ್ರಧಾನಮಂತ್ರಿಗಳು
ಬೆಂಗಳೂರಿನಲ್ಲಿ ಉದ್ಘಾಟಿಸಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಕರಾಟೆ ಸ್ಪರ್ಧೆ ನಡೆಸುವ ಜವಾಬ್ದಾರಿ ತಮಗೆ ವಹಿಸಿರುವುದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದು ತಿಳಿಸಿದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network